ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಮಕ್ಕಳ ಬಳಿ ಮಾತನಾಡೋಣ


  ಈಗಿನ ಮಕ್ಕಳಂತೂ ಯಾರಲ್ಲೂ ಮಾತಿಲ್ಲ ಕಥೆಯಿಲ್ಲ. ಪಟ ಪಟ ಮಳೆ ಹನಿ ಉದುರುವ ಹಾಗೆ ಮಾತನಾಡುವ ಮಕ್ಕಳು ಒಂದು ಕಾಲದಲ್ಲಿ ಇದ್ದರೆ ಈಗ ಸೈಲೆಂಟ್ ಆಗಿ ಪಟಪಟ ಮೊಬೈಲ್ ಫೋನ್ ಒತ್ತಿ ನಿಮ್ಮ ಮಾತನ್ನು ರೆಕಾರ್ಡ್ ಮಾಡುವ, ನಿಮ್ಮ ವಿಡಿಯೋ ಮಾಡಿ ಯುಟ್ಯೂಬ್ ಗೆ ಅಪ್ಲೋಡ್ ಮಾಡುವ, ನಿಮ್ಮ ಅಕೌಂಟ್ ನಿಂದ ಹಣ ಎಗರಿಸುವ ಮಕ್ಕಳು ಸಿಗುತ್ತಾರೆ! ಆದರೆ ಸರಿಯಾಗಿ ಹಿರಿಯರಿಗೆ ಮುಖ ಕೊಟ್ಟು ಮಾತನಾಡುವ, ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳುವ ಮಕ್ಕಳು ಸಿಗುವುದಿಲ್ಲ ಅಲ್ಲವೇ?

          ನನಗೇನೋ ಭಯ ಶುರುವಾಗಿದೆ . ಮುಂದಿನ ಪೀಳಿಗೆಯ ಮಕ್ಕಳಲ್ಲಿ ಪದಗಳ ಬಳಸಿ ಮಾತನಾಡುವ ಚಾಕಚಕ್ಯತೆ ಬರುವುದೇ, ಇರುವುದೇ ಎಂದು. ಮುಂದಿನ ದಶಕದಲ್ಲಿ ಮಾತನಾಡುವುದೂ ಕೂಡಾ ಒಂದು ಪ್ರೊಫೆಷನ್ ಆಗಲಿದೆ ಅನ್ನಿಸುತ್ತದೆ. ಉತ್ತಮ ಮಾತುಗಾರರಿಗೆ ಮಾತ್ರ ಈಗ ಸಂಬಳವೊ ಕಾಣಿಕೆಯೋ, ಬಸ್ ಚಾರ್ಜೋ, ಪೆಟ್ರೋಲ್ ರೇಟೋ ಸಿಕ್ತಿದೆ, ಬಿರುದು ಸನ್ಮಾನಗಳು ಸಿಗುತ್ತಿವೆ. ತುಂಬಾ ದೊಡ್ಡ ನಗರಗಳಲ್ಲಿ ಸಂಬಳ ಸಿಗುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉತ್ತಮ ಇನ್ಸ್ಪಿರೇಶನ್ ನೀಡಿದ್ದಕ್ಕೆ! ಮುಂದೆ ಅದೇ ಒಂದು ಕೆಲಸವಾಗಿ ಬಿಡುತ್ತದೆ. ಕಾರಣ ಅದನ್ನೇ ಕಲಿತ ಕೆಲವರಿಗೆ ಮಾತ್ರ ಮಾತನಾಡಲು ಬರುತ್ತದೆ.

         ಉಳಿದವರಿಗೆ? ಅವರು ಏನು ಕಲಿತಿರುವರೋ, ಅದನ್ನು ಹೊರತಾಗಿ ಮತ್ತೆ ಏನೂ ಮಾತನಾಡಲು ಬಾರದು. ಕಾರಣ ಮಗು ಒಂದೇ ಮನೆಯಲ್ಲಿ. ಅಮ್ಮ ಅಪ್ಪ ಅವರವರ ಕೆಲಸದಲ್ಲಿ ಬ್ಯುಸಿ. ಇನ್ನೆಲ್ಲಿ ಮಾತು? ಅಗತ್ಯಕ್ಕೆ ಅಷ್ಟೇ! ಪ್ರೀತಿಯ ಸಮಯದ ಕೊರತೆ ಕೋಪದಲ್ಲಿ ವ್ಯಕ್ತವಾಗುತ್ತದೆ. ಮತ್ತೆ ಟ್ಯೂಷನ್! ಮನಸ್ಸು ಅತ್ತು, ಗಟ್ಟಿಯಾಗಿ ಪೂರ್ತಿ ಉದ್ರೇಕಗೊಂಡು ಊಟ ತಿಂಡಿ ತಿನ್ನುವಾಗಲೂ ಕೋಪ, ಏನೇ ರುಚಿ ಶುಚಿ, ಸಿಹಿ ಕೊಟ್ಟರೂ ಕೋಪ. ಕಾರಣ ಮಗುವಿಗೆ ಬೇಕಾದ ಪ್ರೀತಿ! ಅದು ಸಿಗಲಿಲ್ಲ, ಅದರ ಹಸಿವು ನೀಗುತ್ತಿಲ್ಲ!

       ಮಕ್ಕಳಿಗೆ ಊಟ ತಿಂಡಿಯ ಹಾಗೆ ಪ್ರೀತಿ ಬೇಕು, ಅದನ್ನು ಆನ್ ಲೈನ್, ಮೊಬೈಲ್, ಕಂಪ್ಯೂಟರ್ ಕೊಡದು. ಯಾವಾಗ ಅಮ್ಮ ಅಪ್ಪ ಕೈಗೆ ಸಿಗುವುದಿಲ್ಲವೋ ಆಗ ಅಲ್ಲಿನ ಆಟಗಳಿಗೆ ಅಡಿಕ್ಟ್ ಆಗಿ ಬಿಡುತ್ತಾರೆ. ಎಲ್ಲವನ್ನೂ ಮರೆಯಲು. ಅದರಲ್ಲೇ ಸಮಯ ಕಳೆದು ಮುಂದೆ ಜೀವನವನ್ನು ದುಃಖಕರ ಮಾಡಿಕೊಳ್ಳುತ್ತಾರೆ ಅಲ್ಲವೇ? ಓದುವ ವಯಸ್ಸಿನಲ್ಲಿ ಓದಬೇಕು, ದುಡಿಯುವ ವಯಸ್ಸಿನಲ್ಲಿ ದುಡಿಯಬೇಕು. ಈಗಿನ ಜನ ಮಕ್ಕಳೇನು, ಮೊಮ್ಮಕ್ಕಳ ಕಾಲದವರೆಗೂ ಬೇಕಾಗುವಷ್ಟು ತಾವೇ ದುಡಿದು ಇಟ್ಟಿದ್ದಾರೆ. ಆನ್ ಲೈನ್ ಪೀಳಿಗೆಗೆ ಮಾಡಲು ಕೆಲಸ ಬೇಡ! ಕನಸುಗಳು ಇಲ್ಲ! ಏನಿದ್ದರೂ ಪೋಷಕರು ತಕ್ಷಣವೇ ನಿಜ ಮಾಡಿ ಕೊಡುತ್ತಾರೆ! ಚಾಲೆಂಜ್ ಇಲ್ಲ, ತಮಗೆಲ್ಲಾ ಇದೆ! ಮತ್ತೆ ಗೋಲ್ಸ್…ಅದೂ ಇಲ್ಲ, ಪೋಷಕರು ಸ್ವತಂತ್ರವಾಗಿ ಯೋಚಿಸಲು ಬಿಟ್ಟಿದ್ದರೆ  ತಾನೇ? ಯೋಚನೆಗಳು, ಭಾವನೆಗಳು! ಹೊಟ್ಟೆ ತುಂಬಾ ತಿನ್ನಿಸಿ ಮಲಗಿಸಿದ್ದು, ಯಾರೂ ಅಜ್ಜಿ ಕಥೆ ಹೇಳಿ ಭಾವನೆಗಳ ಅರಲಿಸಲಿಲ್ಲ, ಆಸೆ ಹುಟ್ಟಿಸಲಿಲ್ಲ! ಕಥೆ ಹೇಳುವ ಮಾಡ್ರನ್ ಅಜ್ಜಿಯರಿಲ್ಲ, ಅವರೆಲ್ಲ ಟಿವಿ ಸೀರಿಯಲ್ ಗಳ ಹಿಂದೆ ಬಿದ್ದಿದ್ದಾರೆ!

           ಇನ್ನು ಮಾಡ್ರನ್ ಆನ್ಲೈನ್ ಅಪ್ಪಂದಿರು ಮೊಬೈಲ್ ಗೆ  ಅಡಿಕ್ಟ್ ಆಗಿ ಬಿಟ್ಟಿದ್ದಾರೆ! ಅಮ್ಮಂದಿರು ಮೊಬೈಲ್ ನೋಡಿಯೇ ಅಡುಗೆ ಮಾಡುವುದು! ಮುಂದೆ ಫಸ್ಟ್ ನೈಟ್ ಹೇಗೆ ಮಾಡಿಕೊಳ್ಳುವುದು ಅಂತಾನೂ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಬೇಕಾದ ಕಾಲ ಬರಬಹುದೇನೋ! ಜನ ಸ್ವಂತಿಕೆ, ಸ್ವಂತ ಆಲೋಚನೆ, ಸ್ವಂತ ಪದಗಳ ಬಳಕೆಯನ್ನು ಮರೆತು ಎಲ್ಲಾ ವಿಷಯಗಳನ್ನೂ ಗೂಗಲ್, ಯುಟ್ಯೂಬ್ ಹುಡುಕಿ ಸುಲಭವಾಗಿ ಪಡೆಯುವ ಕಾರ್ಯದಲ್ಲಿ ನಿರತರಾಗಿ ಬಿಟ್ಟಿದ್ದಾರೆ. ಹೊಸ ಹೊಸ ಕಲೆಗಳು ಆನ್ಲೈನ್ ಪೀಳಿಗೆಯಿಂದ ಬರ ಬೇಕಾಗಿದೆ. ಹೊಸ  ಯುಗದ ಡಾಕ್ಟರ್ ಗಳು, ಇಂಜಿನಿಯರ್ ಗಳು, ಲಾಯರ್, ಅಡ್ವೊಕೇಟ್ ಗಳು, ಶಿಕ್ಷಕರು, ಕಂಪ್ಯೂಟರ್ ಇಲ್ಲದೆ ಆನ್ ಲೈನ್ ಇಲ್ಲದೆ ತಮ್ಮ ಕೆಲಸ ಮಾಡಲಾರರು. ಹಿಂದಿನವರ ಹಾಗೆ ಕೈ ಬರಹದ ರೆಕಾರ್ಡ್ ಗಳ ಕಾಲ ಹೋಯಿತು. ಹೆಚ್ಚಿನ  ಉಪನ್ಯಾಸಕ, ಪ್ರಾಧ್ಯಾಪಕರೂ ಕೂಡಾ ಪವರ್ ಪಾಯಿಂಟ್ ನ ಪಾಯಿಂಟ್ ಗಳನ್ನು ಉಪಯೋಗಿಸಿಯೆ ಪಾಠ ಬೋಧಿಸುವುದು! ಇನ್ನು ಮಾತುಗಾರರಿಗೂ ಅದೇ ಬೇಕು! ಮುಂದೆ ಮಾತೆಲ್ಲಿ?

           ಆನ್ಲೈನ್ ಬದುಕಿನಲ್ಲಿ ಓಟ, ದುಡ್ಡು – ಹಣ ಸಂಪಾದನೆ, ಖರ್ಚು, ಶಾಪಿಂಗ್ ಇದೇ ಬದುಕು ಈಗ! ಹಣ ಇದ್ದರೆ ಹೆಣವೂ ಎದ್ದು ಬಂದು ಕುಳಿತು ಕೊಳ್ಳುವ ಕಾಲ ಬಂದಿದೆ. ಆನ್ ಲೈನ್ ಪೀಳಿಗೆಯ ಜನರಿಗೆ ಭಾವನೆಗಳ ಹಿಡಿತ ಇಲ್ಲ, ಖುಷಿ ಬೇಕು, ಕಷ್ಟ ಬೇಡ, ಪರರ ನೋವು ತಿಳಿಯುವುದು ಕಡಿಮೆ. ಶಿಕ್ಷಕರು, ಹಿರಿಯರಿಗೆ ಗೌರವ ಕಡಿಮೆ. ರೋಗಿಯೊಡನೆ ಬಂದ ಎಲ್ಲರೂ ಪೇಶೆಂಟ್ ಗಳು ಡಾಕ್ಟರಿಗೆ! ಯಾಕೆಂದರೆ ಮಾಡರ್ನ್  ಡಾಕ್ಟರ್ ಗಳು ಕೂಡಾ ಮಾತು ಕಡಿಮೆ, ಕಂಪ್ಯೂಟರ್ ಆನ್ ಲೈನ್ ನಲ್ಲೇ ಹೆಚ್ಚು ಕಲಿತವರು. ಒಬ್ಬ ಹಲ್ಲಿನ ಡಾಕ್ಟರ್ ನನ್ನನ್ನು ಮಲಗಿಸಿ, ಅರ್ಡಂಬರ್ಧ ಹಲ್ಲು ಕೊರೆದು ಫೋನ್ ಕಾಲ್ ವಾಟ್ಸ್ ಆ್ಯಪ್ ಅಂತ ಒಂದು ಗಂಟೆ ತಡ ಮಾಡಿ ಬಂದು ಮೊದಲು ಒಳಗೆ ಇಟ್ಟಿದ್ದ ಹತ್ತಿಯನ್ನು ಮರೆತು ಅದರ ಮೇಲೆಯೇ ಬಿಳಿ ಸಿಮೆಂಟ್ ಹಾಕಿ  ಸಿಲ್ವರ್ ಫಿಲ್ಲಿಂಗ್ ಮಾಡಿ ಕ್ಯಾಪ್ ಹಾಕಿ ಬಿಟ್ಟಿದ್ದ! ನನ್ನ ಕೇಳಿದ್ದರೆ ನಾ ಕನ್ನಡಿ ನೋಡಿ ಆದರೂ ಹೇಳುತ್ತಿದ್ದೆ. ಮಾತಿಲ್ಲ ಕಥೆ ಇಲ್ಲ! ಮೊಬೈಲ್ ಒತ್ತುವುದು ಒಂದೇ. ರಜೆಯಲ್ಲಿ ಆದರೂ ಮಕ್ಕಳ ಕೈಗೆ ಮೊಬೈಲ್ ಕೊಡದೆ ಮೈದಾನದಲ್ಲಿ ಆಟ ಆಡಲು ಬಿಟ್ಟರೆ ಒಳ್ಳೆಯದು. ಪಕ್ಕದ ಮನೆಯ ಮಕ್ಕಳ ಜೊತೆ, ಬಂಧುಗಳ ಜೊತೆ ಬೆರೆತು ಮಾತನಾಡುವುದೂ ಒಂದು ಕಲೆ. ಅದಕ್ಕೆ ಮಕ್ಕಳ ಚಿಂತನೆ ಬೆಳೆಯಲು ಬಿಡಬೇಕು. ಮಕ್ಕಳೆಲ್ಲ ಒಳ್ಳೆಯವರೇ. ನಾವು ಅವರನ್ನು ಇತರರ ಜೊತೆ ಬಿಟ್ಟಾಗ ಮಾತ್ರ ಅವರಿಗೆ ಕಷ್ಟ ಸುಖಗಳ ಅರಿವಾಗುತ್ತದೆ. ನಾವು ಎಲ್ಲವನ್ನೂ ಕೊಟ್ಟು ಮೊಬೈಲ್ ಕೊಟ್ಟು ಮನೆ ಒಳಗೆ ಕೂರಲು ಬಯಸಿದರೆ ಪ್ರಾಕ್ಟಿಕಲ್ ನಾಲೆಜ್ ಇಲ್ಲದ ಮಗು ಮುಂದೆ ಸಮಾಜದಲ್ಲಿ ನಮ್ಮ ಹೊರತಾಗಿ ಬದುಕಲು ಆಗದ ಸ್ಥಿತಿ ತಲುಪಬಹುದು. ಮಕ್ಕಳು ಆಲೋಚಿಸಲು, ಮಾತನಾಡಲು ಅವಕಾಶ ಕೊಡೋಣ. ನೀವೇನಂತೀರಿ?
——————————–

ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top