ನೆನಪಿನ ಸಂಗಾತಿ
ಮಾನವ್ಯ ಕವಿ
ಡಾ. ಬಿ. ಎ. ಸನದಿ
ಎಲ್. ಎಸ್. ಶಾಸ್ತ್ರಿ
ನನ್ನ ಮತ್ತು ಬಿ. ಎ. ಸನದಿಯವರ ಒಡನಾಟ ೬೦ ವರ್ಷಗಳಷ್ಟು ದೀರ್ಘವಾದದ್ದು , ಅಷ್ಟೇ ಅಲ್ಲ , ಅದು ಅಣ್ಣ- ತಮ್ಮನ ಸಂಬಂಧವಿದ್ದಂತೆ ಇತ್ತು.
ಗೌರೀಶ ಕಾಯ್ಕಿಣಿಯವರಂತಹ ಚಿಂತಕರಿಂದ ” ಮಾನವ್ಯ ಕವಿ” ಎಂದು ಕರೆಯಲ್ಪಟ್ಟಿದ್ದ ಅವರನ್ನು “ಸೂರ್ಯಪಾನದ ಕವಿ ” ಎಂದೂ ಕರೆಯುವದುಂಟು. ಸೂರ್ಯಪಾನ ಅವರ ಸಮಗ್ರ ಕಾವ್ಯ. ಅವರು ಮುಖ್ಯವಾಗಿ ಕವಿ. ಯಾವ ಪಂಥಪ್ರಕಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನವೋದಯದಿಂದ ನವ್ಯ ದಲಿತ ಬಂಡಾಯಗಳನ್ನೂ ವಿವಾದಾತೀತರಾಗಿ ದಾಟಿಬಂದ ಸರ್ವಜನಪ್ರಿಯ ಕವಿ ಅವರು.
*
೧೯೮೦ -೮೧
ನಾನು ಆಗ ಧಾರವಾಡದಲ್ಲಿದ್ದೆ. ಹೊಸಯಲ್ಲಾಪುರ ಎಂಬ ಹಳೆಯ ಭಾಗದಲ್ಲೊಂದು ಹಳೇ ಮನೆಯ ಅಟ್ಟದ ಮೇಲೆ ನನ್ನ ಸಂಸಾರ. ಒಂದು ದಿನ ರಾತ್ರಿ ೧೦ ಗಂಟೆ ಸುಮಾರಿಗೆ ಯಾರೋ ಬಾಗಿಲು ಬಡಿದ ಶಬ್ದ. ತೆರೆದು ನೋಡಿದರೆ ಅಚ್ಚರಿ ಕಾದಿತ್ತು. ಅಲ್ಲಿ ನಿಂತವರು ಬಿ. ಎ. ಸನದಿ. ಅಷ್ಟು ಹೊತ್ತಿಗೆ ನಮ್ಮ ಆ ಮೂಲೆಯ ಮನೆಯನ್ನು ಹುಡುಕಿಕೊಂಡು ಅವರು ಹೇಗೆ ಬಂದರೋ ! ಆಗ ಅವರು ಮುಂಬಯಿ ಆಕಾಶವಾಣಿಯಲ್ಲಿ ಕುಟುಂಬಕಲ್ಯಾಣ ಅಧಿಕಾರಿ. ರಾತ್ರಿ ನಮ್ಮ ಮನೆಯಲ್ಲೇ ಸುದಾಮಾತಿಥ್ಯ ಪಡೆದು ಮರುದಿನ ಹೋದರು. ಆ ದಿನ ಅವರಿಗೆ ಸ್ವಲ್ಪ ಆರಾಮಿರಲಿಲ್ಲ ಎಂದು ನೆನಪು.
ಇದನ್ನಿಲ್ಲಿ ಪ್ರಸ್ತಾಪಿಸಲಿಕ್ಕೆ ಕಾರಣ ಅವರು ಒಬ್ಬ ದೊಡ್ಡ ಅಧಿಕಾರಿಯಾಗಿಯೂ ಎಷ್ಟು ಸರಳವಾಗಿದ್ದರು ಎನ್ನುವದನ್ನು ತೋರಿಸಲು. ಆದ್ದರಿಂದಲೇ ಅವರು ನಾಡಿನಾದ್ಯಂತ ಅಷ್ಟೇ ಅಲ್ಲ ಅವರಿದ್ದಲ್ಲೆಲ್ಲ ಬಹಳ ದೊಡ್ಡ ಸ್ನೇಹಿತರ ಬಳಗ ಹೊಂದಿದ್ದರು.
ನನಗೆ ಅವರ ಪರಿಚಯ ೧೯೬೦ ಕ್ಕಿಂತ ಮೊದಲೇ ಆಗಿದ್ದು. ಅವರ ಪತ್ನಿಯ ತವರುಮನೆ ಹೊನ್ನಾವರವಾದ್ದರಿಂದ ಅವರು ಆಗಾಗ ಬರುತ್ತಿದ್ದರು. ನಾವೂ ಸಾಹಿತ್ಯ – ಪತ್ರಿಕಾ ಬಳಗದವರಾದ್ದರಿಂದ ನಮ್ಮೊಂದಿಗೆ ಒಡನಾಟ ಬೆಳೆದಿತ್ತು.
ಇನ್ನಷ್ಟು ಅಚ್ಚರಿಯ ಒಂದು ಆಕಸ್ಮಿಕ ಸಂಗತಿ ನಡೆದದ್ದು ೧೯೬೬-೬೭ ರಲ್ಲಿ. ನಾನು ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ರ ನವಕಲ್ಯಾಣ ಎಂಬ ವಾರಪತ್ರಿಕೆಯ ಉಪಸಂಪಾದಕನಾಗಿ ಕಲಬುರ್ಗಿಗೆ ಹೋದಾಗ ಅಲ್ಲಿ ಅದಾಗಲೇ ಫೀಲ್ಡ್ ಪಬ್ಲಿಸಿಟಿ ಅಧಿಕಾರಿಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ನಾನು ಹೋದದ್ದು ಅವರಿಗೆ ಬಹಳ ಸಂತೋಷವನ್ನುಂಟು ಮಾಡಿತ್ತು. ನಾವೆಲ್ಲ ಸೇರಿ ಸಾಹಿತ್ಯಿಕ ಚಟುವಟಿಕೆ ನಡೆಸಲು ನೃಪತುಂಗ ಕಲಾ ಮಂಟಪ ಎಂಬ ಸಂಸ್ಥೆ ರೂಪಿಸಿಕೊಂಡೆವು. ಅವರೇ ಅಧ್ಯಕ್ಷರು. ನಾನು ಕಾರ್ಯದರ್ಶಿ. ನಮ್ಮೊಡನೆ ಆಗ ಖ್ಯಾತ ಕತೆಗಾರ ಜಯತೀರ್ಥ ರಾಜಪುರೋಹಿತರು , ಕವಿ ರಾಘವೇಂದ್ರ ಇಟಗಿಯವರು , ಜಿ. ಎಸ್. ಗ್ರಾಮಪುರೋಹಿತರು ಎಲ್ಲ ಇದ್ದರು. ಅನೇಕ ಕಾರ್ಯಕ್ರಮಗಳನ್ನು ಮಾಡಿದೆವು.
ಅಷ್ಟೇ ಏಕೆ, ನನ್ನ ಮೊದಲ ಕವನ ಸಂಕಲನ “ಸ್ಮೃತಿ” ಹೊರಬಂದದ್ದು ಅಲ್ಲಿಯೇ. ಅದೂ ಸನದಿಯವರಿಂದಾಗಿಯೆ. ಹೀಗೆ ಹಲವು ಬಗೆಯಲ್ಲಿ ನಮ್ಮಿಬ್ಬರ ಸ್ನೇಹ ಬಾಂಧವ್ಯ ೨೦೧೯ ರತನಕವೂ ಮುಂದುವರಿದುಕೊಂಡು ಬಂತು. ಬೆಳಗಾವಿಯವರಾದ ಅವರು ನಮ್ಮ ಜಿಲ್ಲೆಯ ಕುಮಟಾಕ್ಕೆ ಹೋಗಿ ನೆಲೆಸಿದರು. ನಾನು ಬೆಳಗಾವಿಗೆ ಬಂದು ನೆಲೆಸಿದೆ. ಇದೊಂದು ರೀತಿ ಸಾಂಸ್ಕೃತಿಕ ಕೊಡಕೊಳ್ಳುವಿಕೆ ಎಂದು ಅವರು ಹೇಳುತ್ತಿದ್ದರು. ಡಾ. ಎಂ. ಅಕಬರ ಅಲಿಯವರೂ ನನ್ನ ಬಗ್ಗೆ ಅದೇ ರೀತಿಯ ಪ್ರೀತಿ ಇಟ್ಟುಕೊಂಡಿದ್ದರು ಮತ್ತು ಅವರೂ ಅದೇ ಮಾತು ಹೇಳಿದ್ದರು.
ಸನದಿಯವರ ಇಡೀ ಕುಟುಂಬವೇ ಒಂದು ಕವಿ ಕುಟುಂಬ. ನಾಲ್ಕೈದು ಸಹೋದರರೆಲ್ಲ ಬರೆಹಗಾರರು. ಎ. ಎ. ಸನದಿ, ಬಿ. ಎ. ಸನದಿ, ರಶೀದ ಸನದಿ, ಅಕಬರ ಸನದಿ, ಈಗ ಅದೇ ಕುಟುಂಬದ ನಯೀಮ ಸನದಿ ಎಲ್ಲರೂ ಬರೆಯುವವರೆ. ಸುಸಂಸ್ಕೃತ ಮನೆತನ.
ಸನದಿಯವರು ೫೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಮಕ್ಕಳ ಸಾಹಿತ್ಯಕ್ಕೂ ಅವರ ಕೊಡುಗೆ ದೊಡ್ಡದೆ. ಅದಕ್ಕೇ ಬೆಳಗಾವಿಯಲ್ಲಿ ಜರುಗಿದ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾದರು. ಪಂಪ ಪ್ರಶಸ್ತಿ , ರಾಜ್ಯೋತ್ಸವ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಕಾರಂತ ಪ್ರಶಸ್ತಿ , ಕವಿವಿ ಗೌರವ ಡಾಕ್ಟರೇಟ್ ಮೊದಲಾದ ಗೌರವ ಮನ್ನಣೆಗಳಿಗೆ ಪಾತ್ರರಾದರು. ಅವರ ತಾಜಮಹಲ್, ಪ್ರತಿಬಿಂಬ, ಧ್ರುವಬಿಂದು, ಮೊದಲಾದ ಸಂಕಲನಗಳು ಬೇರೆ ಬೇರೆ ಬಹುಮಾನ ಪಡೆದಿವೆ. ಗೌರೀಶ ಕಾಯ್ಕಿಣಿ ಇವರ ಬಗ್ಗೆ ” ಮಾನವ್ಯ ಕವಿ ” ಎಂಬ ಪುಸ್ತಕವನ್ನೇ ಬರೆದರು.
ಮುಂಬಯಿಯಲ್ಲಿದ್ದಾಗ ಅಲ್ಲಿ ಸಾಕಷ್ಟು ಕನ್ನಡಪರ ಕೆಲಸ ಮಾಡಿದರು. ಕನ್ನಡಕ್ಕೆ ಮಹತ್ವ ನೀಡಿದರು. ಅಲ್ಲಿಯ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಉತ್ತರ ಕನ್ನಡ ಮತ್ತು ಬೆಳಗಾವಿ ಎರಡೂ ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆಯ ಗೌರವ ಅವರಿಗೆ ದೊರಕಿತು.
೨೦೧೯ ಮಾರ್ಚ ೩೧ ರಂದು ತಮ್ಮ ೮೬ ನೆಯ ವಯಸ್ಸಿನಲ್ಲಿ ಅವರ ನಿಧನವಾಯಿತು. ನನ್ನ ಒಬ್ಬa ಹಿರಿಯ ಹಿತೈಷಿ ಸಹೋದರರನ್ನು ಕಳೆದುಕೊಂಡಂತೆನಿಸಿತು.
ಎಲ್. ಎಸ್. ಶಾಸ್ತ್ರಿ