ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಒಮ್ಮೆಯಾದರೂ ನೋಡು
ಆಗ…,
ಆ ಅಳಲು..,
ನಾನು ಹೆತ್ತದ್ದು ನಿನ್ನ ಮಕ್ಕಳನ್ನೇ
ಅನುಮಾನ ಬೇಡ..
ದೊರೆ..,
ಒಮ್ಮೆಯಾದರೂ ಕಣ್ದೆರೆದು ನೋಡು
ತಲೆ ಸವರಿ ಮೈಯೆಲ್ಲ ಸ್ಪರ್ಶಿಸು
ಮೊಗ ಹತ್ತಿರ ತಂದು ಕಂಪ ಆಘ್ರಾಣಿಸು
ಇನಿರವ ಉಸುರು
ಅವು ಮುದಗೊಳ್ಳುತ್ತವೆ
ಜೊತೆಗೆ ನೀನೂ..
ಪರನಂತೆ ನೋಡುವುದನೂ
ನಿರ್ಲಿಪ್ತನಾಗಿ ಪರರಿಂದ
ವಿಚಾರಿಸುವುದನು
ಪರರ ಬಾಯಿಂದ ಕೇಳಿದ ನನಗೆ
ಏನೇನಾಗಬಲ್ಲದು..
ವಿಚಾರ ಮಾಡಿರುವೆಯಾ..
ವಿನಂತಿ ಇದು..
ಒಮ್ಮೆಯಾದರೂ ಕಣ್ದೆರೆದು ನೋಡು
ಎದೆ ಒಡೆಯುವ ಮುನ್ನ
ಇದೋ ನಿನ್ನ ಮಕ್ಕಳನು
ಒಪ್ಪಿಸಿಬಿಡುವೆ….!
ಓ..!.ದೇವರೇ…!!
ಅದಾವ ಸಾಕ್ಷಿ ಕೊಡಲಿ…
ಪರಮ ಪ್ರೇಮದ ಕುರುಹುಗಳು
ನಿನ್ನ ಈ ಮಕ್ಕಳು..
ಇಗೋ..,
ಭಾಷೆ ಕೊಡುವೆ
ವಚನವೀಯುವೆ
ಪ್ರಮಾಣ ಮಾಡುವೆ
ನಿರ್ಧರಿಸಿರುವೆ …,
ಮತ್ತೇ ಮತ್ತೇ ಯಾವ ಅಗ್ನಿದಿವ್ಯಕೆ
ತೆರೆದುಕೊಳ್ಳದಂತೆ..
ಮರೆಯಲ್ಲಿರುವೆ
ಅಂಕದ ತೆರೆಯಲ್ಲಿರುವೆ
ಯಾವುದನ್ನೂ ಪ್ರದರ್ಶಿಸದೇ
ಏನೊಂದನ್ನೂ ಪ್ರಕಟಿಸದೇ
ಅಲ್ಲೇ ಹುದುಗಿಸಿಬಿಡುವೆ
ಮನದ ಮಾತನು ಮೌನದ
ಚೂರಿಯಿಂದ ಇರಿದುಬಿಡುವೆ
ನೀನು ನಿನ್ನ ಮಕ್ಕಳೆಂದು
ಕಣ್ಬಿಟ್ಟು ನೋಡಿದಾಗ
ಬರಸೆಳೆದು ಅಪ್ಪಿದಾಗ
ತುಟಿಯೊತ್ತಿ ಕೈಹಿಡಿದಾಗ
ನಾನದನ್ನು ನೋಡಿ..
ಏನೊಂದನ್ನು ಹೇಳದೇ
ಏನನ್ನೂ ಕೇಳದೇ
ಪೂರ್ವ ಯೋಜಿತದಂತೆ
ಕಣ್ಮರೆಯಾಗುವೆ..!
ಭೂಮಿಜಾತೆ ನಾನೆಂಬಬುದು
ಸರ್ವರ ಬಾಯಲ್ಲಿ ಸಾಬೀತಾಗಲಿ..
ಇಲ್ಲಿ ಉಳಿಗಾಲವಿಲ್ಲ
ತಾಯ ಮಡಿಲಿದೆ ನಿಶ್ಚಿಂತೆಗೆ..!.
ಈಗ..,
ಈ ದಿಗಿಲು…,
ನನ್ನ ಈ ಬರಹಗಳ ನೋಡು
ನಲ್ಲ…,
ಬಹು ಆಸೆ ಇದೆ..
ಬಹು ನಿರೀಕ್ಷೆ ಇದೆ
ಇಲ್ಲಿರುವ ಒಂದೊಂದು ಅಕ್ಕರವೂ
ಒಂದೊಂದು ಪದವೂ
ಲಯವೂ ರಾಗವೂ
ಸಾಕ್ಷಿ
ಕವಿತೆ ಆದುದಕೆ
ಅದನ್ನೆಲ್ಲ ಹಾಳೆಗಿಳಿಸಿ ಹಗುರಾದುದಕ್ಕೆ
ಪ್ರತಿನಿತ್ಯವೂ ಹಲವು
ಅಗ್ನಿದಿವ್ಯವ ಹಾದು ಬಂದುದಕ್ಕೆ..
ಸಾಕ್ಷಿಗೊಂಡಿವೆ ಪದಗಳು
ಆವೀರ್ಭವಿಸಿವೆ ಎದೆಯ ಭಾವಗಳು..!
ವಿನಂತಿ ಇದು..,
ಒಮ್ಮೆಯಾದರೂ ಒಳ ಕಣ್ಣ
ತೆರೆದು ನೋಡು
ತುಟಿಯಿಂದ ಸವರು
ಪಿಸು ಮಾತ ಉಸುರು
ಅಮರವಾಗಲಿ
ಎದೆಯ ಗೀತೆ..!!
ಏಕೆಂದರೆ ನಾನೂ
ಆ
ಭೂಮಿಜಾತೆಯ ಸಂತತಿಯೇ..!!
“ಕವಿತೆಯಾದುದಕೆ ಹಾಳೆಗಿಳಿಸಿ ಹಗುರವಾಗುವುದು”
ಇಂತಹ ರೂಪಕಗಳ ಮಿಡಿತಗಳನು ಬರಹದೊಳಗೆ ಅವಿತಿಟ್ಟುವಕೊಳ್ಳುವ ಧಾವಂತದ ಬದುಕಿಗೆ,ಮನದ ಮೂಲೆಯ ಸಮಂಜಸ ಉತ್ತರವಾಗಬಲ್ಲದು.
ಧನ್ಯವಾದಗಳು.
ಅದ್ಭುತ ಸ್ವಗತ… ಮನಮುಟ್ಟಿತು. ಮೇಡಂ…
ಹಮೀದಾ ಬೇಗಂ.
ಧನ್ಯವಾದಗಳು ಮೇಡಮ್.