ಡಾ.ಕೆ.ಎಸ್.ಗಂಗಾಧರ ನೀಳ್ಗಥೆ-ಹೆಸರ ಮೂಲದ ಹಿಂದೆ

ಕಥಾ ಸಂಗಾತಿ

ಡಾ.ಕೆ.ಎಸ್.ಗಂಗಾಧರ

ಹೆಸರ ಮೂಲದ ಹಿಂದೆ

                

What’s in a name? That which we call a rose by any other name would smell as sweet.

                                                                                                                              –

      ನ್ಯೂಯಾರ್ಕಿನಿಂದ ಬೆಂಗಳೂರಿಗೆ ಬರುವ ಏರ್ ಇಂಡಿಯಾ ವಿಮಾನ ಫ್ರಾಂಕ್‌ಫರ್ಟ್ ನಿಲ್ದಾಣದಲ್ಲಿ ಇಳಿಯುವ ಸೂಚನೆಯನ್ನು  ಗಗನಸಖಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಉಲಿಯುವಾಗ ಹೇಮಂತ ಪೆನ್ನಂಗಳ ದೀರ್ಘ ನಿದ್ರೆಯಲ್ಲಿ ಇದ್ದ.ಸುತ್ತಮುತ್ತಲಿನ ಗುಜುಗುಜು ಸಪ್ಪಳಕ್ಕೆ ಎಚ್ಚರವಾದಾಗ ಫ್ರಾಂಕ್‌ಫರ್ಟ್ನಲ್ಲಿ ಇಳಿಯುವುದರ ಅರಿವಾಯ್ತು.ಎಂಟು ಗಂಟೆಯ ದೀರ್ಘ ಪ್ರಯಾಣದಿಂದ ಬಳಲಿಕೆಯಾಗಿ ನಿದ್ರೆಗೆ ಜಾರಿದ್ದ. ಪಕ್ಕದ ಪ್ರಯಾಣಿಕನ ಜೊತೆ ಸಂವಹನ ಸಾಧ್ಯವಾಗಿರಲಿಲ್ಲ.ಆತ ಫ್ರಾಂಕ್‌ಫರ್ಟ್ನಲ್ಲಿ ಇಳಿಯುವನಾಗಿದ್ದರಿಂದ ಬೆಂಗಳೂರಿನವರೆಗೆ ಮತ್ತಾರು ಜೊತೆಗೂಡುತ್ತಾರೆಂದು ಯೋಚನೆ ಮಾಡಿದ.

     ಫ್ರಾಂಕ್‌ಫರ್ಟ್ನಲ್ಲಿ ನಾಲ್ಕು ಗಂಟೆಗಳಷ್ಟು ದೀರ್ಘಾವಧಿ ವಿರಾಮವಿತ್ತು.ದೇಶವಿದೇಶಗಳ ಸುದ್ಧಿಗಳೆಲ್ಲ ಹಿಂದಿನ ನಾಲ್ಕೈದು ಗಂಟೆಗಳಲ್ಲಿ ಓದಿದ್ದರಿಂದ ಹಳೆಯವಾಗಿದ್ದವು.ಸಮಯ ಕಳೆಯಲು ಲ್ಯಾಪ್‌ಟಾಪಿನಲ್ಲಿ ಮಾಡಲು ಬೇಕಾದಷ್ಟು  ಬಾಕಿ ಕೆಲಸಗಳಿದ್ದವು. ನಿದ್ರೆಯಿಂದ ಎದ್ದ ಜಡತ್ವದಿಂದಾಗಿ ಮನಸು ಬರಲಿಲ್ಲ.ಏರ್‌ಪೋರ್ಟಿನ ಒಳಗಿದ್ದ ವಿವಿಧ ಬಗೆಯ ಅಂಗಡಿಗಳಲ್ಲಿ ಖರೀದಿ ಮಾಡುವುದು ಏನೂ ಉಳಿದಿರಲಿಲ್ಲ.ಮೆನ್ಸ್ ಲಾಂಜ್ ಪಕ್ಕದಲ್ಲಿದ್ದ ಬಾರಿನಲ್ಲಿ ಕುಳಿತು ಬೀರ್ ಮತ್ತು ಸ್ಯಾಂಡ್‌ವಿಚ್ ಆರ್ಡರ್ ಮಾಡಿದ.ತನ್ನ ಆತ್ಮೀಯ ಸಂಗಾತಿಯಂತಿದ್ದ ಲ್ಯಾಪ್‌ಟಾಪಿನ ಒಳಗೆ ತುಂಬಿರುವ ಯಾವುದಾದರೂ ಕನ್ನಡ ಚಲನಚಿತ್ರ ನೋಡಬೇಕೆಂಬ ಮನಸಾದರೂ ಆಸಕ್ತಿಯೇ ಮೂಡಲಿಲ್ಲ.ತಣ್ಣನೆಯ ಬೀರ್ ಹೀರುತ್ತಾ ಕರ್ನಾಟಕದ ಕುಗ್ರಾಮವೊಂದರಲ್ಲಿ ಜನಿಸಿದ ತಾನು ಎಲ್ಲೋ ಬೆಳೆದು ಏನೇನೋ ಕೆಲಸಗಳನ್ನು ಮಾಡುತ್ತಾ ಅಮೆರಿಕಾದ ಕಂಪನಿಯೊಂದರಲ್ಲಿ ಕೆಲಸ ಮಾಡುವ ಸಂದರ್ಭ ಒದಗಿಬಂದುದರ ಬಗ್ಗೆ ನಿಧಾನಕ್ಕೆ ಯೋಚಿಸ ಹತ್ತಿದ.

                 

    ಮಂಜಾಲದ ಸರ್ಕಾರೀ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೂರು ವರ್ಷದ ಕೆಮಿಕಲ್ ಎಂಜಿನಿಯರ್ ಡಿಪ್ಲೊಮೊ ಮುಗಿಸಿದ ಮೇಲೆ ಮುಂದೇನು ಮಾಡಬೇಕೆಂದು ತಿಳಿದಿರಲಿಲ್ಲ.ಪರೀಕ್ಷೆ ಮುಗಿದ ಮೇಲೆ ಎಲ್ಲವೂ ಖಾಲಿಖಾಲಿ ಅನಿಸತೊಡಗಿತ್ತು. ನಿರಂತರವಾಗಿ ಓದುವುದರಲ್ಲೇ ಮುಳುಗಿದ್ದ ಹೇಮಂತನಿಗೆ ಅಂತಿಮ ಪರೀಕ್ಷೆಯೇ ಮುಗಿದು ಹೋದ ಮೇಲೆ ಇನ್ನು ಓದುವುದಕ್ಕೆ ಏನೂ ಇಲ್ಲ ಎಂದು ತಿಳಿದಾಗ ನಿರ್ವಾತ ಆವರಿಸಿದಂತಾಯ್ತು.ಅಷ್ಟು ದಿನ ಇರುವುದಕ್ಕೆ ಅಂತ ಬಿಸಿಎಮ್ ಹಾಸ್ಟೆಲ್ ಇತ್ತು.ಯಾವುದಕ್ಕೂ ದುಡ್ಡು ಕೊಡುವ ಪ್ರಮೇಯವೇ ಇರಲಿಲ್ಲ. ಪರೀಕ್ಷೆ ಮುಗಿಯುತ್ತಿಂದತೆಯೇ ಎಲ್ಲರಿಗೂ ಖಾಲಿ ಮಾಡುವಂತೆ ವಾರ್ಡನ್ ಹೇಳಿದ್ದರು.ಇವನು ಫಲಿತಾಂಶ ಬರುವವರೆಗೆ ಇರಲು ಅನುಮತಿ ಕೇಳಿದ್ದ. ಇವನ ಒಳ್ಳೆಯತನದ ಅರಿವಿದ್ದ ವಾರ್ಡನ್‌ರವರು ಅನುಮತಿ ನೀಡಿದ್ದರು.

    ಹೇಮಂತನಿಗೆ ಪರೀಕ್ಷೆಯಲ್ಲಿ ಪಾಸಾಗುವುದರ ಬಗ್ಗೆ ಅನುಮಾನವಿರಲಿಲ್ಲ. ಮೊದಲಿನಿಂದಲೂ ಆತ ಎಲ್ಲಾ ಪರೀಕ್ಷೆಗಳಲ್ಲೂ ಉತ್ತಮ ಅಂಕಗಳೊಂದಿಗೆ ಪಾಸಾಗುತ್ತಿದ್ದ.ಆದರೆ ಮುಂದೇನು ಮಾಡುವುದೆಂಬುದೇ ಚಿಂತೆಯಾಗಿತ್ತು. ಅವನಿದ್ದ ಸ್ಥಿತಿಯಲ್ಲಿ ಮುಂದಕ್ಕೆ ಓದುವುದು ಕನಸಿನ ಮಾತಾಗಿತ್ತು. ಅನಾಥವಾಗಿದ್ದ ತನ್ನ ಬದುಕನ್ನು ಮುಂದುವರೆಸಲು ಯಾವುದಾದರೂ ಕೆಲಸವನ್ನು ಹುಡುಕಲೇ ಬೇಕಾಗಿತ್ತು. ಮಂಜಾಲದಲ್ಲಿ ತನಗೆ ತಕ್ಷಣಕ್ಕೆ ಉದ್ಯೋಗ ದೊರಕುವ ಯಾವ ಅವಕಾಶಗಳೂ ಅವನಿಗೆ ಕಾಣಲಿಲ್ಲ. ಆಗ ಅವನ ಸಹಾಯಕ್ಕೆ ಬಂದವರು ಮಾರುತಿ ಸ್ಟೋರ್ಸಿನ ಅನಂತಕೃಷ್ಣ ಅವರು.

    ಹೇಮಂತ ಸೇರಿದ್ದ ಬಿಸಿಎಮ್ ಹಾಸ್ಟೆಲ್ಲಿನಲ್ಲಿ ಎಲ್ಲವೂ ಉಚಿತವಾಗಿತ್ತು. ಆದರೂ ಕೆಲವು ಸಂದರ್ಭಗಳಲ್ಲಿ ಹಣ ಬೇಕಾಗುತ್ತಿತ್ತು. ಇವನನ್ನು ಹಾಸ್ಟೆಲ್ಲಿಗೆ ಸೇರಿಸಿದ್ದ ಪೊನ್ನಪ್ಪ ಮಾಸ್ಟರರು ತಾವು ಇರುವವರೆಗೂ ಆಗಾಗ್ಗೆ ಸ್ವಲ್ಪ ಹಣ ನೀಡುತ್ತಿದ್ದರು. ಆದರೆ ಎಷ್ಟು ದಿನ ಈ ರೀತಿ ಸಹಾಯ ಮಾಡಲಾದೀತು. ಇದನ್ನು ಮನಗಂಡಿದ್ದ ಪೊನ್ನಪ್ಪನವರು ಇವನನ್ನು ಅನಂತಕೃಷ್ಣರ ಬಳಿ ಕರೆದೊಯ್ದಿದ್ದರು. ಪೊನ್ನಪ್ಪನವರಿಗೂ ಅನಂತಕೃಷ್ಣರಿಗೂ ಬಹಳ ವರ್ಷಗಳ ಪರಿಚಯ. ಹೇಮಂತನ ಸ್ಥಿತಿಯೆಲ್ಲವನ್ನೂ ವಿವರಿಸಿ ಬಿಡುವಿನ ಸಮಯದಲ್ಲಿ ಅನಂತಕೃಷ್ಣರ ಮಾರುತಿ ಸ್ಟೋರ್ಸಿನಲ್ಲಿ ಕೆಲಸ ಮಾಡುವಂತೆ ವ್ಯವಸ್ಥೆ ಮಾಡಿದ್ದರು. ಅಂದಿನಿಂದ ಪ್ರತಿದಿನ ಸಂಜೆ ಮರ‍್ನಾಲ್ಕು ಗಂಟೆ ಅಂಗಡಿಯಲ್ಲಿ ಕೆಲಸ ಮಾಡಿ ಸ್ವಲ್ಪ ಹಣ ಸಂಪಾದಿಸುತ್ತಿದ್ದ. ಪರೀಕ್ಷಾ ಸಮಯದಲ್ಲಿ ಸಂಜೆ ಕೆಲಸ ಮಾಡಲಾಗದಿದ್ದರೆ ಅದನ್ನು ಕಾಲೇಜಿನ ರಜಾದಿನಗಳಲ್ಲಿ ಬೆಳಿಗ್ಗೆಯ ವೇಳೆಯಲ್ಲಿ ಕೆಲಸ ಮಾಡಿ ಸರಿದೂಗಿಸುತ್ತಿದ್ದ. ಪೊನ್ನಪ್ಪನವರ ಮೇಲಿನ ಅಭಿಮಾನದಿಂದಲೋ ಅಥವಾ ಇವನಿಗೆ ಸಹಾಯ ಮಾಡುವ ಉದ್ದೇಶದಿಂದಲೋ ಅನಂತಕೃಷ್ಣರವರು ಇವನ ಬಗ್ಗೆ ಮೃದು ಧೋರಣೆಯನ್ನು ಹೊಂದಿದ್ದರು. ಇವನೂ ಸಹ ನಿಷ್ಠೆಯಿಂದ

ಕೆಲಸ ಮಾಡಿ ಅವರ ಮನಸ್ಸನ್ನು ಗೆದ್ದಿದ್ದ. ಆದ್ದರಿಂದ ಹೇಮಂತನಿಗೆ ಅಲ್ಲಿ ಕೆಲಸ ಮಾಡುವುದು ಕಷ್ಟವಾಗಲೇ ಇಲ್ಲ. ಮೂರು ವರ್ಷ ಕಳೆದದ್ದು ಗೊತ್ತಾಗಲೇ ಇಲ್ಲ.

     ಫಲಿತಾಂಶ ಬರುವುದಕ್ಕೆ ಮೊದಲೇ ತನ್ನ ಓದಿಗೆ ಹೊಂದುವಂತಹ ಉದ್ಯೋಗವೊಂದನ್ನು ಹುಡುಕಿ ಬೇರೆ ರೂಮಿನ ವ್ಯವಸ್ಥೆ ಮಾಡಿಕೊಂಡು ಹಾಸ್ಟೆಲ್ಲನ್ನು ಖಾಲಿ ಮಾಡಬೇಕೆಂಬುದರ ಅರಿವಿದ್ದ ಹೇಮಂತ ತನ್ನ ಸಂಕಷ್ಟವನ್ನು ಅಂಗಡಿಯ ಮಾಲೀಕರೆದುರು ನಿವೇದನೆ ಮಾಡಿಕೊಂಡ. ಏನೂ ಇಲ್ಲದ ನಿರ್ಗತಿಕನಾಗಿದ್ದರೂ ಪ್ರತಿ ವರ್ಷ ಉತ್ತಮ ಅಂಕಗಳನ್ನು

                                                                                 ಪಡೆದು ಪಾಸಾಗುತ್ತಿದ್ದ ಹೇಮಂತನ ಬಗ್ಗೆ ಅನಂತಕೃಷ್ಣರಿಗೆ ಹೆಮ್ಮೆಯಿತ್ತು. ಒಂದೆರಡು ದಿನಗಳಲ್ಲಿ ವಿಚಾರಿಸಿ ಹೇಳುತ್ತೇನೆ ಎಂದು ಹೇಳಿದ್ದರಿಂದ ಹೇಮಂತ ಸ್ವಲ್ಪ ನಿರಾಳನಾದ.

   ಸರಿಯಾಗಿ ಎರಡು ದಿನದ ನಂತರ ಹೇಮಂತನನ್ನು ಕರೆದು ಹೇಳಿದರು. “ನನ್ನ ಸ್ನೇಹಿತ ರಾಮೇಗೌಡ ಅಂತ ಬೆಂಗಳೂರಿನಲ್ಲಿದ್ದಾನೆ. ಮರಳು ಸರಬರಾಜು ಮಾಡುವ ಏಜೆಂಟನಾಗಿ ಬೆಂಗಳೂರು ಸೇರಿದವ ಸಣ್ಣ ಮಟ್ಟದಲ್ಲಿ ಇಟ್ಟಿಗೆ ಫ್ಯಾಕ್ಟರಿ ಶುರು ಮಾಡಿ ಕಷ್ಟಪಟ್ಟು ದುಡಿದ. ಈಗ ರಾಜ್ಯಾದ್ಯಂತ ಹೆಸರು ಮಾಡಿರುವ ರಾಮ್ ಟೈಲ್ಸ್ ಕಂಪನಿಯ ಮಾಲೀಕನಾಗಿದ್ದಾನೆ. ಏನೇನೋ ಹೊಸತನ್ನು ಮಾಡುವ ತುಡಿತ ಅವನದು. ಈಗ ಮರಳಿಗೆ ಅಭಾವ ಇರುವುದರಿಂದ ಕೃತಕ ಮರಳಿನ ಘಟಕವೊಂದನ್ನು ಸ್ಥಾಪಿಸುತ್ತಿದ್ದಾನೆ. ಇನ್ನೊಂದೆರಡು ತಿಂಗಳಲ್ಲಿ ಪ್ರಾರಂಭವಾಗಬಹುದು. ಅವನಿಗೆ ನಂಬಿಕಸ್ತ ಟೆಕ್ನಿಕಲ್ ಅಸಿಸ್ಟೆಂಟ್ ಒಬ್ಬ ಬೇಕಂತೆ. ತರಬೇತಿಯನ್ನೆಲ್ಲ ಅವನೇ ಕೊಡಿಸುತ್ತಾನಂತೆ. ಅವನೂ ಕೆಳ ಹಂತದಿಂದ ಮೇಲೆ ಬಂದಿರುವುದರಿಂದ ನಿನ್ನಂತಹ ಹುಡುಗರಿಗೆ ಖಂಡಿತ ಸಹಾಯ ಮಾಡುತ್ತಾನೆ ಎಂಬ ವಿಶ್ವಾಸದಿಂದ ನಿನ್ನ ಬಗ್ಗೆ ಹೇಳಿದೆ. ಅವನು ನಿನಗೆ ಕೆಲಸ ಕೊಡಲು ಒಪ್ಪಿದ್ದಾನೆ.ನಿನ್ನ ಎಲ್ಲಾ ವಿಷಯವನ್ನು ಹೇಳಿ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಮಾಡಲು ತಿಳಿಸಿದ್ದೇನೆ. ಒಳ್ಳೆಯ ಮನುಷ್ಯ. ದುಡ್ಡಿನ ಬಗ್ಗೆ ಹೆಚ್ಚು ನಿರೀಕ್ಷೆ ಮಾಡಬೇಡ. ನಿನಗೆ ಖಾಯಂ ಆಸರೆಯಾಗುತ್ತದೆ ಎಂಬ ನಂಬಿಕೆ ನನಗಿದೆ. ನಿನ್ನ ಫಲಿತಾಂಶ ಬಂದ ಕೂಡಲೇ ಬೆಂಗಳೂರಿಗೆ ಹೊರಡು.”

     ಹೇಮಂತನಿಗೆ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಎಂತಹ ಧಣಿಗಳು. ತನ್ನ ಮುಂದಿನ ದುಸ್ತರ ದಿನಗಳ ಬಗ್ಗೆ ಚಿಂತೆ ಮಾಡುತ್ತಿದ್ದವನಿಗೆ ಇಷ್ಟು ನಿಸೂರಾಗಿ ತನ್ನ ಸಮಸ್ಯೆ ಬಗೆಹರಿಯುತ್ತದೆ ಎಂದುಕೊಂಡಿರಲಿಲ್ಲ. ಅನಂತಕೃಷ್ಣರ ಕಾಲಿಗೆ ನಮಸ್ಕರಿಸಲು ಹೋದ.ಅವರು ಆಸ್ಪದ ಕೊಡಲಿಲ್ಲ. ತಲೆಯ ಮೇಲೆ ಹರಸಿ ಕಳಿಸಿದರು. ಹೇಮಂತನ ಕಣ್ಣಾಲಿಗಳು ತುಂಬಿ ಬಂದವು.

    ಡಿಪ್ಲೊಮೊ ಫಲಿತಾಂಶ ಬಂತು. ನಿರೀಕ್ಷೆಯಂತೆ ಹೇಮಂತ ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿದ್ದ. ಎಲ್ಲರಿಗೂ ವಿದಾಯ ಹೇಳಿ ಹಾಸ್ಟೆಲ್ ಖಾಲಿ ಮಾಡಿ ಅನಂತಕೃಷ್ಣರಿಗೆ ಕೊನೆಯ ಬಾರಿ ಹೇಳಲು ಅವರ ಅಂಗಡಿಗೆ ಹೋದ. ಅವನ ನಡವಳಿಕೆಯ ಬಗ್ಗೆ ಮತ್ತು ಬುದ್ಧಿಶಕ್ತಿಯ ಬಗ್ಗೆ ಎಲ್ಲರೆದುರು ಹೊಗಳಿಕೆಯ ಮಾತನಾಡಿ ಅವನ ಹಿಂದಿನ ತಿಂಗಳ ಸಂಬಳದ ಜೊತೆ ಇನ್ನಷ್ಟು ಸೇರಿಸಿ ಬೆಂಗಳೂರಿನ ಖರ್ಚಿಗೆ ಬೇಕಾಗಬಹುದೆಂದು ಹೇಳಿ ಕೊಟ್ಟರು.

   “ನಿನ್ನಂತಹ ಸಾಧು ಹುಡುಗನನ್ನು ನನ್ನ ಅಂಗಡಿಯಲ್ಲೇ ಇಟ್ಟುಕೊಳ್ಳಬೇಕೆಂಬ ಆಸೆಯಿತ್ತು. ಆದರೆ ನಿನ್ನ ವಿದ್ಯೆಗೆ ಮೋಸ ಮಾಡಬಾರದೆಂದು ನಿನ್ನ ಓದಿಗೆ ತಕ್ಕ ಕೆಲಸಕ್ಕೆ ಸೇರಿಸುವ ವ್ಯವಸ್ಥೆ ಮಾಡಿದ್ದೇನೆ. ದುಡ್ಡಿನ ಬಗ್ಗೆ ಹೆಚ್ಚು ಆಸೆ ಮಾಡಬೇಡ. ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸು ಖಂಡಿತ ಕೈ ಹಿಡಿತ್ತದೆ. ಒಮ್ಮೆ ಯಶಸ್ಸು ಕೈ ಹಿಡಿದರೆ ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.ಒಳ್ಳೆಯ ಮಾಲಿಕರಿಗೆ ಒಳ್ಳೆಯ ಕೆಲಸಗಾರನನ್ನು ಒಪ್ಪಿಸುತ್ತಿದ್ದೇನೆಂಬ ತೃಪ್ತಿ ಇದೆ. ಒಳ್ಳೆಯದಾಗಲಿ. ಹೋಗಿ ಬಾ” ಎಂದು ಹೇಳಿ ಬೀಳ್ಕೊಟ್ಟರು.

    ಮುಂದಿನದೆಲ್ಲ ಕನಸಿನಂತೆ ನಡೆದುಹೋಯ್ತು. ಬೆಂಗಳೂರಿಗೆ ಹೋದ ಮೇಲೆ ಎಲ್ಲವೂ ಸಲೀಸಾಗಿ ನಡೆಯಿತು. ರಾಮೇಗೌಡರು ಹೊಸದಾಗಿ ಮಾರುಕಟ್ಟೆಗೆ ಬಂದಿದ್ದ ಕೃತಕ ಮರಳಿನ ಘಟಕದ ಸ್ಥಾಪನೆಯ ಹುಮ್ಮಸ್ಸಿನಲ್ಲಿ ಇದ್ದರು. ಗುಜರಾತಿನಲ್ಲಿ ಈಗಾಗಲೇ ಆರಂಭವಾಗಿದ್ದ ಕಾರ್ಖಾನೆಗೆ ಮೂರು ತಿಂಗಳ ಅವಧಿಯ ತರಬೇತಿಗೆ ಕಳಿಸಿದರು. ಹೇಮಂತ ಬುದ್ಧಿವಂತನಾಗಿದ್ದರಿಂದ ಎಲ್ಲವನ್ನೂ ಸರಾಗವಾಗಿ ಗ್ರಹಿಸುತ್ತಿದ್ದ. ಇವನು ಎಣಿಸಿದ್ದಕ್ಕಿಂತ ದೊಡ್ಡದಾದ ರಾಮ್ ಸ್ಯಾಂಡ್  ಕಾರ್ಖಾನೆ ಶುರುವಾಗಿ ಮಾರುಕಟ್ಟೆಗೆ ಹೊಸ ಬ್ರಾಂಡಿನ ಕೃತಕ ಮರಳಿನ ಪ್ರವೇಶವಾಯಿತು. ಮೊದಮೊದಲಿಗೆ ಜನ ಇದನ್ನು ಮುಕ್ತವಾಗಿ ಸ್ವೀಕರಿಸಲಿಲ್ಲ. ಮರಳಿಗೆ ಅಭಾವವಿರುವುದನ್ನೇ ಬಂಡವಾಳ ಮಾಡಿಕೊಳ್ಳುವ ಉದ್ದೇಶದಿಂದ ಹತ್ತಾರು ಕೃತಕ ಮರಳಿನ ಕಾರ್ಖಾನೆಗಳು ಪ್ರಾರಂಭವಾಗಿದ್ದವು. ಮಾರುಕಟ್ಟೆಯ ನೀರಸ ಪ್ರತಿಕ್ರಿಯೆಯಿಂದ ಕೆಲವು ಮುಚ್ಚುವ ಹಂತಕ್ಕೆ ಬಂದಿದ್ದವು. ಇನ್ನು ಕೆಲವು ಕುಂಟುತ್ತಾ ಸಾಗುತ್ತಿದ್ದವು. ಆದರೆ ರಾಮ್ ಸ್ಯಾಂಡ್ ನಾಗಾಲೋಟದಲ್ಲಿ ಮುಂದುವರೆಯಿತು. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿದ್ದವು.

   ಮೊದಲನೆಯದಾಗಿ ರಾಮೇಗೌಡರಿಗೆ ಬೃಹತ್ತಾದ ಟೈಲ್ಸ್ ಕಾರ್ಖಾನೆ ಮತ್ತು ಅನೇಕ ಜಲ್ಲಿ ಕ್ರಷರ್ ಘಟಕಗಳಿದ್ದುದರಿಂದ ಕೃತಕ ಮರಳಿನ ಬಹುತೇಕ ಕಚ್ಚಾ ವಸ್ತುಗಳು ಸುಲಭವಾಗಿ ಮತ್ತು ಖರ್ಚಿಲ್ಲದೆ ಸಿಗುತ್ತಿದ್ದವು. ಎರಡನೆಯದಾಗಿ ಹೇಮಂತನ ಸತತ ಅಧ್ಯಯನದ ಪರಿಶ್ರಮ ಮತ್ತು ವಿನೂತನ ಪ್ರಯೋಗಗಳಿಂದ ರಾಮ್ ಸ್ಯಾಂಡ್ ಬಹು ಬೇಗ ಜನಪ್ರಿಯವಾಗುವಂತೆ ಆಯಿತು. ಮರಳಿನಲ್ಲೇ ವಿವಿಧ ಬಣ್ಣಗಳನ್ನು ಮಿಶ್ರಣ ಮಾಡಿ ವರ್ಣರಂಜಿತ ಕೃತಕ ಮರಳನ್ನು ಬಿಡುಗಡೆ ಮಾಡಿದ.  ತಾವು ನಿರ್ಮಿಸುವ ಮನೆಗೆ ಮೊದಲೇ ಬಣ್ಣದ ವಿನ್ಯಾಸಗಳನ್ನು ನಿರ್ಧರಿಸಿ ಈ ಮರಳನ್ನು ಬಳಸಿದರೆ ಕೊನೆಯಲ್ಲಿ ಮನೆಗೆ ಬಳಿಯುವ ಬಣ್ಣದ ಖರ್ಚು ಸಿಕ್ಕಾಪಟ್ಟೆ ಕಡಿಮೆಯಾಗುತ್ತಿತ್ತು. ಈ ವಿನೂತನ ತಂತ್ರಗಾರಿಕೆ ಮಾರುಕಟ್ಟೆಯಲ್ಲಿ ಸೂಪರ್ ಹಿಟ್ ಆಗಿ ರಾಮ್ ಸ್ಯಾಂಡ್ ಬ್ರಾಂಡಿನ ಜನಪ್ರಿಯತೆ ಮುಗಿಲು ಮುಟ್ಟಿತು. ಎಷ್ಟೇ ದರವನ್ನು ನಿಗದಿಪಡಿಸಿದ್ದರೂ ರಾಮ್ ಸ್ಯಾಂಡನ್ನು ಸರದಿಯಲ್ಲಿ ಕಾಯ್ದು ಖರೀದಿಸಲು ಜನ ಸಿದ್ಧರಿದ್ದರು.ಆದರೆ ಹೇಮಂತನ ಸಲಹೆಯ ಮೇರೆಗೆ ದರವನ್ನು ಸಿಕ್ಕಾಪಟ್ಟೆ ಏರಿಸಲಿಲ್ಲ. ಹೇಮಂತ ಸಿಕ್ಕ ಈ ಯಶಸ್ಸಿನಿಂದ ಸಂತೃಪ್ತನಾದ. ಅಂತೂ ಮಂಜಾಲದಲ್ಲಿ ತನ್ನನ್ನು ಬೀಳ್ಕೊಡುವಾಗ ನುಡಿದ ಅನಂತಕೃಷ್ಣರ ಮಾತು ಅಕ್ಷರಶಃ ನಿಜವಾಗಿ ಅವರನ್ನು ಸದಾಕಾಲ ನೆನೆಯುವಂತಾಯ್ತು. ಮುಂದೆ ಜರುಗುವ ಯಶಸ್ಸಿನ ಉತ್ತುಂಗದ ಸಾಧನೆ ಇನ್ನೂ ಹೇಮಂತನ ಅರಿವಿಗೆ ಬಂದಿರಲಿಲ್ಲ.

      ಕೃತಕ ಮರಳಿಗೆ ಬಣ್ಣಗಳನ್ನು ಮಿಶ್ರಣ ಮಾಡುವಾಗ ಅನೇಕ ರೀತಿಯ ತ್ಯಾಜ್ಯ ವಸ್ತುಗಳು ಶೇಖರವಾಗುತ್ತಿದ್ದವು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರ ಕಾನೂನುಗಳು ಕ್ಲಿಷ್ಟಕರವಾಗಿದ್ದವು. ರಾಮೇಗೌಡರಿಗಾಗಲೀ ಅಥವಾ ಹೇಮಂತನಿಗಾಗಲೀ ವಾಮಮಾರ್ಗಗಳಿಂದ ಆ ಕಾನೂನುಗಳ ತೊಡಕುಗಳನ್ನು ನಿವಾರಣೆ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಪರಿಸರಕ್ಕೆ ಹಾನಿಯಾಗದಂತೆ ಕರಾರುವಕ್ಕಾಗಿ ತ್ಯಾಜ್ಯ ವಸ್ತುಗಳನ್ನು ಸೂಕ್ತ ರಾಸಾಯನಿಕ ವಸ್ತುಗಳನ್ನು ಬಳಸಿ ನಿಷ್ಕ್ರಿಯಗೊಳಿಸಿ ಬಿಡುಗಡೆ ಮಾಡುವ ಕ್ರಮಗಳನ್ನು ಚಾಚೂ ತಪ್ಪದಂತೆ ಪಾಲಿಸಲಾಗುತ್ತಿತ್ತು. ಹೀಗೆ ಮಾಡುವಾಗ ಒಂದು ಪವಾಡವೇ ನಡೆದು ಹೋಯ್ತು. ಈ ರಾಸಾಯನಿಕ ಕ್ರಿಯೆಯಲ್ಲಿ ಅಚಾನಕ್ಕಾಗಿ ರೂಪುಗೊಂಡ ರಾಸಾಯನಿಕ ಮಿಶ್ರಣವೊಂದರ ಬಗ್ಗೆ ಹೇಮಂತನಿಗೆ ಕುತೂಹಲ ಮೂಡಿತು. ಆ ವಸ್ತುವನ್ನು ಮತ್ತಷ್ಟು ಪರಿಶೀಲನೆಗೆ ಒಳಪಡಿಸಿದಾಗ ಮತ್ತಷ್ಟು ಮಹತ್ವದ ಸಂಗತಿಗಳು ವೇದ್ಯವಾದವು. ಆ ಮಿಶ್ರಣಕ್ಕೆ ಆಹಾರದಲ್ಲಿ ಬಳಸುವ ಕೃತಕ ಬಣ್ಣದ ಗುಣವಿದ್ದು ಜೊತೆಗೆ ಆಶ್ಚರ್ಯವೆಂಬಂತೆ ಆಹಾರ ಸಂರಕ್ಷಣೆಗೂ ಹೆಚ್ಚಿನ ಮಟ್ಟದಲ್ಲಿ ಸಹಕಾರಿಯಾಗುವ ಅಂಶವಿರುವುದು ತಿಳಿಯಿತು. ಹೊಸದೊಂದು ಅವಿಷ್ಕಾರವಾಗಿರುವುದರ ಬಗ್ಗೆ ಅರಿವಾಗಿ ಹೇಮಂತನಿಗೆ ಖುಷಿಯಾಯಿತು.ತಕ್ಷಣ ಅದರ ಬಗ್ಗೆ ಸಂಶೋಧನಾ ಪ್ರಬಂಧವನ್ನು ಬರೆದು ವೈಜ್ನಾನಿಕ ಪತ್ರಿಕೆಯೊಂದರಲ್ಲಿ ಪ್ರಕಟಿಸಿದ. ತನ್ನ ಮಾಲೀಕರಾದ ರಾಮೇಗೌಡರಿಗೆ ಇದರ ಬಗ್ಗೆ ಹೇಳಿದರೂ ಅವರಿಗೆ ಸರಿಯಾಗಿ ಅರ್ಥವಾಗಲಿಲ್ಲ. ಆದರೂ ಹೇಮಂತನ ಒತ್ತಾಯಕ್ಕೆ ಮಣಿದು ರಾಮ್ ಸ್ಯಾಂಡ್ ಕಂಪನಿ ಮತ್ತು ಹೇಮಂತನ ಹೆಸರಿನಲ್ಲಿ ಜಂಟಿಯಾಗಿ ಆ ರಾಸಾಯನಿಕ ಮಿಶ್ರಣದ ಬಳಕೆಯ ಹಕ್ಕುಸ್ವಾಮ್ಯಗಳನ್ನು ನೋಂದಾಯಿಸಲು ಒಪ್ಪಿಗೆ ಕೊಟ್ಟರು.

    ಈ ಅವಿಷ್ಕಾರವು ಇವರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟ ವಿಚಾರ ತಿಳಿದ ಅಮೆರಿಕಾದ ಪ್ರಮುಖ ಆಹಾರ ಸಂಸ್ಕರಣಾ ಕಂಪನಿಯೊಂದು ಇದರ ಬಗ್ಗೆ ಆಸಕ್ತಿ ತೋರಿಸಿತು. ಹೇಮಂತನನ್ನು ಸಂಪರ್ಕಿಸಿ ಅನೇಕ ಬಾರಿ ಇಮೇಲ್‌ಗಳ ಮೂಲಕ ವಿಚಾರ ವಿನಿಮಯ ಮಾಡಿದರು. ಕೊನೆಗೆ ಒಂದು ದಿನ ಆ ಪ್ರಮುಖ ಕಂಪನಿಯ ಪ್ರತಿನಿಧಿಗಳು ಬೆಂಗಳೂರಿಗೆ ಬಂದೇ ಬಿಟ್ಟರು,ದೊಡ್ಡ ಮಟ್ಟದ ವ್ಯವಹಾರ ಕುದುರಿಸುವ ಸಲುವಾಗಿ.

    ಆ ಒಂದು ಯಕಃಶ್ಚಿತ್ ರಾಸಾಯನಿಕ ಮಿಶ್ರಣಕ್ಕೆ ಇಷ್ಟೊಂದು ಬೇಡಿಕೆಯಿರಬಹುದೆಂಬ ಕಲ್ಪನೆಯೂ ರಾಮೇಗೌಡರಿಗೆ ಇರಲಿಲ್ಲ. ಆ ಮಿಶ್ರಣವನ್ನು ತಯಾರಿಸಿ ತಮಗೆ ಪೂರೈಸಬೇಕೆಂಬ ಅಮೆರಿಕಾ ಕಂಪನಿಯ ಬೇಡಿಕೆಯನ್ನು ಇಬ್ಬರೂ ಒಪ್ಪಲಿಲ್ಲ. ಆಹಾರ ಸಂಸ್ಕರಣೆಯಲ್ಲಿ ಬಳಸುವ ಕೃತಕ ಬಣ್ಣಗಳು ಮತ್ತು ಸಂರಕ್ಷಕಗಳ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ್ದರಿಂದ ಮತ್ತೊಂದು ಸಾಹಸಕ್ಕೆ ಇಳಿಯುವುದು ಅವರಿಗೆ ಇಷ್ಟವಿರಲಿಲ್ಲ. ಕೊನೆಗೆ ಅಮೆರಿಕಾದ ಕಂಪನಿಯವರು ಮುಂದಿಟ್ಟ ಪ್ರಸ್ತಾಪವನ್ನು ಕೇಳಿ ಇಬ್ಬರೂ ದಿಗ್ಮೂಢರಾದರು.

    ಇವರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದ್ದ ಹಕ್ಕುಸ್ವಾಮ್ಯದ ವರ್ಗಾವಣೆಗೆ ಮಿಲಿಯಗಟ್ಟಲೆ ಡಾಲರುಗಳ ಬೆಲೆ ಕಟ್ಟಿದ್ದರು. ಅದನ್ನು ರೂಪಾಯಿಗೆ ಪರಿವರ್ತಿಸಿದರೆ ಕೋಟ್ಯಾಂತರ ರೂಪಾಯಿಗಳಾಗುತ್ತಿತ್ತು. ಈ ರಾಸಾಯನಿಕ ಮಿಶ್ರಣವನ್ನು ತಾವೇ ಉತ್ಪಾದನೆ ಮಾಡಿ ಊಹೆಗೂ ನಿಲುಕದಷ್ಟು ಲಾಭ ಗಳಿಸಬಹುದು ಎಂಬ ಯೋಚನೆ ಅವರದ್ದು. ಇವರು ಒಂದು ದಿನದ ಸಮಯ ಕೇಳಿದರು. ಇವರಿಗೆ ಇಷ್ಟವಿಲ್ಲವೇನೋ ಎಂದೆಣಿಸಿ ಅಮೆರಿಕಾದ ಕಂಪನಿಯವರು ತಾವು ಹೇಳಿದ್ದ ಬೆಲೆಯ ಜೊತೆಗೆ ತಮ್ಮ ಉದ್ದಿಮೆಯಲ್ಲಿ ಹೇಮಂತನಿಗೆ ಉನ್ನತ ಹುದ್ದೆಯೊಂದನ್ನು ನೀಡುವ ವಾಗ್ದಾನ ಮಾಡಿದರು.

    ಮುಂದೆ ಏನಾಯಿತೆಂಬುದನ್ನು ವಿವರಿಸಿ ಹೇಳುವ ಅಗತ್ಯವಿಲ್ಲ. ಅಮೆರಿಕಾದ ಕಂಪನಿಯವರು ನೀಡಿದ ಬೃಹತ್ ಮೊತ್ತವನ್ನು ರಾಮೇಗೌಡರು ಮತ್ತು ಹೇಮಂತ ಇಬ್ಬರೂ ಸಮನಾಗಿ ಹಂಚಿಕೊಂಡರು. ಹೇಮಂತನಿಗೆ ಬೆಂಗಳೂರನ್ನು ಅದಕ್ಕಿಂತ ಮುಖ್ಯವಾಗಿ ರಾಮ್ ಸ್ಯಾಂಡ್ ಕಂಪನಿಯನ್ನು ಬಿಡಲು ಮನಸ್ಸಾಗದೇ ಇದ್ದುದರಿಂದ ಎರಡು ತಿಂಗಳು ಬೆಂಗಳೂರಿನಲ್ಲಿ ಮತ್ತೆರಡು ತಿಂಗಳು ಅಮೆರಿಕಾದಲ್ಲಿ ಕೆಲಸ ಮಾಡುವ ಒಡಂಬಡಿಕೆ ಮಾಡಿಕೊಂಡ. ಹೇಮಂತನಿಂದ ಅದೃಷ್ಟದ ಬಾಗಿಲೇ ತೆರೆದಿದ್ದರಿಂದ ರಾಮೇಗೌಡರು ಎಲ್ಲದಕ್ಕೂ ಒಪ್ಪಿಕೊಂಡರು.

    ಹೀಗೆ ಅಮೆರಿಕಾ ಮತ್ತು ಬೆಂಗಳೂರಿನ ನಡುವೆ ತಿರುಗಾಡುತ್ತಾ ಸದಾಕಾಲ ಭೌತಿಕವಾಗೋ ಅಥವಾ ಇಂಟರ್‌ನೆಟ್ ಮೂಲಕವೋ ಎರಡೂ ಕಂಪನಿಗಳ ಕೆಲಸ ಮಾಡುತ್ತಾ ಹೇಮಂತ ಸಂಪೂರ್ಣವಾಗಿ ಮುಳುಗಿ ಹೋದ. ಅಮೆರಿಕಾದ ಕಂಪನಿಯವರು ಅಲ್ಲಿನ ಎಲ್ಲ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು ಹೇಮಂತ ಕಂಡುಹಿಡಿದ ರಾಸಾಯನಿಕ ಮಿಶ್ರಣದ ಉತ್ಪಾದನಾ ಘಟಕ ಪ್ರಾರಂಭಿಸಿ ಲಾಭ ಮಾಡುವುದನ್ನು ನೋಡಿದ ಮೇಲೆ ಅವರು ನೀಡಿದ್ದ ಇಡಿಗಂಟಿನ ಮೊತ್ತ ಏನೇನೂ ಅಲ್ಲ ಅಂತ ಅನಿಸಿತು. ತನಗೆ ಎಲ್ಲಾ ಸವಲತ್ತುಗಳ ಜೊತೆಗೆ ಕೈ ತುಂಬ ಸಂಬಳ ನೀಡುತ್ತಿರುವುದರಿಂದ ಮತ್ತು ಅವರು ನೀಡಿದ್ದ ಇಡಿಗಂಟೇ ಕಣ್ಣುಕುಕ್ಕುವಷ್ಟು ಇದ್ದುದರಿಂದ ನಿರುಪದ್ರವಿಯಾದ ಹೇಮಂತ ಯಾವುದರ ಬಗ್ಗೆಯೂ ಹೆಚ್ಚು ವಿಮರ್ಶೆ ಮಾಡದೆ ತೃಪ್ತ ಜೀವನ ನಡೆಸುತ್ತಿದ್ದ.

   ತನ್ನ ಮುಂದಿದ್ದ ಬೀರ್ ಮತ್ತು ಸ್ಯಾಂಡ್‌ವಿಚ್‌ಗಳು ಖಾಲಿಯಾದ್ದರಿಂದ ಹೇಮಂತ ವಾಸ್ತವಕ್ಕೆ ಬಂದ. ಇನ್ನೇನು ತನ್ನ ವಿಮಾನ ಹೊರಡುವ ಸಮಯ ಹತ್ತಿರಕ್ಕೆ ಬಂದದ್ದರಿಂದ ಹೊರಡಲು ಸಿದ್ಧನಾದ. ಕಿಟಕಿಯ ಪಕ್ಕವಿದ್ದ ತನ್ನ ಸೀಟಿನಲ್ಲಿ ಕುಳಿತು ಪ್ರಯಾಣಕ್ಕೆ ಯಾರು ಜೊತೆಯಾಗುತ್ತಾರೆ ಎಂದು ಯೋಚಿಸುವಷ್ಟರಲ್ಲಿ  ‘ನೈಜೀರಿಯ’  ಎಂದು ಬರೆದಿದ್ದ ಟಿಶರ್ಟ್ ಹಾಕಿಕೊಂಡಿದ್ದ ಕಪ್ಪು ವರ್ಣದ ಯುವ ಮಹಿಳೆಯೊಬ್ಬಳು ‘ಹಾಯ್’ ಎಂದು ನಸುನಕ್ಕು ಇವನ ಪಕ್ಕ ಕುಳಿತಳು.

     ವಿಮಾನ ಫ್ರಾಂಕ್‌ಫರ್ಟಿನ ನೆಲವನ್ನು ಬಿಟ್ಟು ಗಗನಕ್ಕೇರಿದ ಮೇಲೆ ಇನ್ನೂ ಏಳೆಂಟು ಗಂಟೆ ಪ್ರಯಾಣ ಮಾಡುವುದನ್ನು ನೆನೆದು ಪಕ್ಕದಲ್ಲಿ ಕುಳಿತಿದ್ದ ಮಹಿಳೆಯ ಜೊತೆ ಮಾತನಾಡುತ್ತಾ ಸ್ವಲ್ಪ ಹೊತ್ತು ಸಮಯ ಕಳೆಯಬಹುದೆಂದು ಯೋಚಿಸಿದ. ಪ್ರತಿ ತಿಂಗಳು ವಿಮಾನದಲ್ಲಿ ದೀರ್ಘ ಪ್ರಯಾಣ ಮಾಡುವಾಗ ಏನನ್ನಾದರೂ ಓದುವುದು ಅಥವಾ ಸಹ ಪ್ರಯಾಣಿಕರ ಜೊತೆ ಮಾತನಾಡುವ ಅಭ್ಯಾಸಗಳಿಂದ ಪ್ರಯಾಣದ ಬೇಸರವನ್ನು ಕಳೆಯಬಹುದೆಂಬುದನ್ನು ಅರಿತಿದ್ದ. ಪಕ್ಕದ ಮಹಿಳೆಯನ್ನು ಇಂಗ್ಲಿಷಿನಲ್ಲಿ ಮಾತಿಗೆಳೆದ.

   “ನೀವು ನೈಜೀರಿಯಾದವರೆ”

   “ಹೌದು. ನನ್ನ ಹೆಸರು ಅಡಾಕು ಎಮೆಮ್ ಕಡುನ. ಉತ್ತರ ನೈಜೀರಿಯಾದವಳು. ಬೆಂಗಳೂರಿನಲ್ಲಿ ಎಮ್.ಎ. ಲಿಟರೇಚರ್ ಮಾಡುತ್ತಿದ್ದೇನೆ”

   “ನಾನು ಹೇಮಂತ ಪೆನ್ನಂಗಳ. ನ್ಯೂಯಾರ್ಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ ಇನ್ನೊಂದು ಕೆಲಸವಿದೆ.”

  ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತಾ ಸಂಕ್ಷಿಪ್ತವಾಗಿ ತಮ್ಮ ಉದ್ಯೋಗದ ಬಗ್ಗೆ ಅಭಿರುಚಿಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.ಮಾತಿನ ಲಹರಿಯ ಮಧ್ಯೆ ಆಕೆ ಹೇಮಂತನ ಹೆಸರಿನ ಅರ್ಥ ಕೇಳಿದಳು.

  “ಹೇಮಂತ ಅಂದರೆ ಆರು ಋತುಗಳಲ್ಲಿ ಒಂದು. ಹಿಂದೂ ಕ್ಯಾಲೆಂಡರಿನ ೯ ಮತ್ತು ೧೦ನೇ ತಿಂಗಳುಗಳಾದ ಮಾರ್ಗಶಿರ ಮತ್ತು ಪುಷ್ಯಗಳನ್ನು ಸೇರಿಸಿ ಮಾಡಿದ ಋತು. ಸಂಪೂರ್ಣ ಚಳಿಗಾಲದ ಕಾಲ.”

  “ನಿಮ್ಮ ಹೆಸರಿನ ಇನ್ನೊಂದು ಭಾಗ ಹೇಳಿದಿರಲ್ಲ. ಅದೇನು.”

  “ಓಹ್,ಪೆನ್ನಂಗಳದ ಬಗ್ಗೆ ಕೇಳಿದಿರಾ. ಅದು ಹಾಗೇ ಬಂದದ್ದು.”

  “ಹಾಗೇ ಬಂದದ್ದು ಅಂದರೆ.ನಿಮ್ಮ ತಂದೆಯ ಹೆಸರೇ ಅಥವಾ ಊರಿನ ಹೆಸರೇ ಅಥವಾ ಮನೆತನದ ಹೆಸರೇ. ಏನಾದರೂ ಅರ್ಥ ಇರಬೇಕಲ್ಲ.”

  ಹೇಮಂತ ಸ್ವಲ್ಪ ಮಟ್ಟಿಗೆ ನಿರುತ್ತರನಾದ. ಆದರೂ ಸಾವರಿಸಿಕೊಂಡು ಹೇಳಿದ. “ಅದರ ನಿಜವಾದ ಅರ್ಥ ಗೊತ್ತಿಲ್ಲ.ಶಾಲೆಯ ದಾಖಲೆಗಳಲ್ಲಿ ಅದು ನನ್ನ ಹೆಸರಿನೊಡನೆ ಥಳಕು ಹಾಕಿಕೊಂಡಿದೆ. ಹೇಗೆ ಬಂತೋ ಗೊತ್ತಿಲ್ಲ.”

   ಮಹಿಳೆ ಸ್ವಲ್ಪ ಜೋರಾಗೇ ನಕ್ಕಳು.

  “ಹೆಸರಿನ ಅರ್ಥ ಗೊತ್ತಿಲ್ಲ ಅಂದರೆ ನಗು ಬರುತ್ತದೆ. ನಮ್ಮಲ್ಲಿ ಹೆಸರಿಗೆ ತುಂಬಾ ಪ್ರಾಮುಖ್ಯತೆ ಕೊಡುತ್ತೇವೆ. ನನ್ನ ಹೆಸರನ್ನೇ ತೆಗೆದುಕೊಳ್ಳಿ.ಅಡಾಕು ಎಂದರೆ ಹುಟ್ಟಿದ ಮನೆಗೆ ಐಶ್ವರ್ಯ ತರುವವಳು ಎಂದರ್ಥ.ನನ್ನ ಕುಟುಂಬಕ್ಕೆ ನಾನು ತುಂಬಾ ಐಶ್ವರ್ಯವನ್ನೇನೂ ತಂದಿಲ್ಲ.ಆದರೆ ನಾನು ಹುಟ್ಟಿದ ಮೇಲೇ ನನ್ನ ಅಪ್ಪನಿಗೆ ಶಿಕ್ಷಕ ಹುದ್ದೆ ದೊರೆತದ್ದು. ಎಮೆಮ್ ಎನ್ನುವುದು ನನ್ನ ಅಪ್ಪನ ಹೆಸರು.ಶಾಂತ ಸ್ವಭಾವದವನು ಎಂದರ್ಥ. ಆದರೆ ನಮ್ಮಪ್ಪ ಅದಕ್ಕೆ ತದ್ವಿರುದ್ಧ,ಯಾವಾಗಲೂ ಏನಾದರೊಂದು ಗಡಿಬಿಡಿಯಲ್ಲಿ ಇರುತ್ತಾನೆ. ಕಡುನ ಎನ್ನುವುದು ಒಂದು ನದಿಯ ಹೆಸರು. ನಮ್ಮ ಹಿಂದಿನ ತಲೆಮಾರಿನವರು ಆ ನದಿ ತೀರದಿಂದ ಬಂದವರು ಎನ್ನುವ ನಂಬಿಕೆ.ಕಡುನ ಎಂದರೆ ಮೊಸಳೆಗಳು ಎಂದರ್ಥ.ಬಹುಶಃ ಆ ನದಿಯಲ್ಲಿ ಹಿಂದೆ ಬಹಳ ಮೊಸಳೆಗಳು ಇದ್ದವೆಂದು ಕಾಣುತ್ತದೆ. ಹೀಗೆ ಪ್ರತಿಯೊಂದು ಹೆಸರಿಗೂ ಒಂದು ಅರ್ಥ ಅಂತ ಇದ್ದೇ ಇರುತ್ತದೆ.ಪ್ರಾಣಿಗಳ ಹೆಸರಿಗೂ ವಿಶಿಷ್ಟವಾದ ಅರ್ಥ ಇರುತ್ತದೆ. ಸಾಕುಪ್ರಾಣಿಗಳಾದ ನಾಯಿಬೆಕ್ಕುಗಳಿಗೇ ಅವುಗಳ ಹಾವಭಾವ ನೋಡಿ ಹೆಸರಿಡುವ ಪರಿಪಾಟವಿದೆ.ಇನ್ನು ಮನುಷ್ಯರ ಹೆಸರಿಗೆ ಅರ್ಥ ಇರುವುದಿಲ್ಲವೇ.ತಮ್ಮ ಹೆಸರಿನ ಅರ್ಥವೇ ಗೊತ್ತಿಲ್ಲದಿರುವುದು ಸ್ವಲ್ಪ ಮಟ್ಟಿಗೆ ಅವಮಾನದ ವಿಷಯ ಅಂತ ನನ್ನ ಭಾವನೆ. ನೀವು ಬೆಂಗಳೂರಿಗೆ ಹೋದ ಮೇಲೆ ಊರಿಗೆ ಹೋಗಿ ದೊಡ್ಡವರನ್ನು ಕೇಳಿ. ನಿಮ್ಮ ಹೆಸರಿನ ಅರ್ಥ ಸಿಗಬಹುದು.”

  ಹೇಮಂತನಿಗೆ ಮಾತಿನಲ್ಲಿದ್ದ ಉತ್ಸಾಹವೇ ಇಳಿದು ಹೋಯಿತು. ‘ನಿನ್ನ ಹೆಸರಿನ ಅರ್ಥ ಗೊತ್ತಿಲ್ಲದಿದ್ದರೆ ನೀನು ಮುಟ್ಠಾಳ’ ಎಂದು ಅವಳು ಛೀಮಾರಿ ಹಾಕಿದಂತೆ ಆಯಿತು. ಏನೇನೋ ಸುತ್ತಿ ಬಳಸಿ ಮಾತನಾಡಿ ತಮ್ಮ ಮಾತುಕತೆಗೆ ಇತಿಶ್ರೀ ಹಾಡಿ ನಿದ್ರೆ ಮಾಡುವ ಸೋಗು ಹಾಕಿದ.

   ಯಾವ ಕಡೆಯಿಂದ ಯೋಚಿಸಿದರೂ ಪೆನ್ನಂಗಳದ ಅರ್ಥವೇ ತಿಳಿಯುತ್ತಿಲ್ಲ. ಅದು ಊರಿನ ಹೆಸರೋ,ಕುಟುಂಬದ ಹೆಸರೋ ಅಥವಾ ಜಾತಿ ಸೂಚಕವೋ ಒಂದೂ ಗೊತ್ತಾಗುತ್ತಿಲ್ಲ. ಯಾವತ್ತೂ ಅದರ ಬಗ್ಗೆ ಇಷ್ಟೊಂದು ಚಿಂತೆಯಾಗಿರಲಿಲ್ಲ. ಮೊದಮೊದಲು ರಾಮ್ ಸ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡುವಾಗ ಪೆನ್ನಂಗಳ ಅಂದರೆ ತಮಿಳಿನ ಹೆಸರಿರಬೇಕೆಂದು ಕೆಲವರು ಇವನೊಡನೆ ತಮಿಳಿನಲ್ಲಿ ಮಾತನಾಡುವ ಪ್ರಯತ್ನ ಮಾಡುತ್ತಿದ್ದರು. ಇವನು ಪಿಳಿಪಿಳಿ ನೋಡುತ್ತಿದ್ದ ರೀತಿಯಿಂದ ಸುಮ್ಮನಾಗುತ್ತಿದ್ದರು. ತಮಿಳು ಮೂಲದ ಕೆಲವು ಕೆಲಸಗಾರರು  ಇವನಿಗೆ ಹತ್ತಿರವಾಗಲು ನೋಡಿದರು. ಇವನು ಕರ್ನಾಟಕದ ಮಧ್ಯದ ಮಂಜಾಲದವನು ಎಂದು ತಿಳಿದ ಮೇಲೆ ತಮ್ಮ ಪ್ರಯತ್ನವನ್ನು ನಿಲ್ಲಿಸಿದ್ದರು.

    ಈ ಸಲ ಬೆಂಗಳೂರಿಗೆ ಹೋದ ಮೇಲೆ ತನ್ನ ಹೆಸರಿನ ಮೂಲವನ್ನು ಕಂಡುಹಿಡಿಯಲೇಬೇಕೆಂದು ಶಪಥ ಮಾಡಿದ.

   ಬೆಂಗಳೂರು ತಲುಪಿದ ಕೂಡಲೇ ತನ್ನ ಅಪಾರ್ಟ್ಮೆಂಟಿಗೆ ಹೋಗಿ ಜೆಟ್‌ಲ್ಯಾಗಿನಿಂದ ತನಗಾಗಿರುವ ದಣಿವನ್ನೂ ಲೆಕ್ಕಿಸದೆ ಕಂಪ್ಯೂಟರ್ ಮುಂದೆ ಕುಳಿತ.ತನಗಿರುವ ಅಪರಿಮಿತ ಜ್ಞಾನವನ್ನೆಲ್ಲಾ ಬಳಸಿ ಪೆನ್ನಂಗಳ ಎಂಬ ಪದದ ಅರ್ಥ

ಹುಡುಕುವ ಹುಚ್ಚಿನಲ್ಲಿ ಬಿದ್ದ. ತನಗೆ ಗೊತ್ತಿರುವ ಭಾಷೆಗಳಲ್ಲಿ ಆಳವಾಗಿ ಹುಡುಕಿದರೂ ಪೆನ್ನಂಗಳ ಎಂಬ ಪದದ ಅರ್ಥ ಸಿಗಲಿಲ್ಲ. ಯಾವ ಭಾಷೆಯಲ್ಲಿ ಹುಡುಕಿದರೂ ‘did not match with any document’ ಅಂತ ಬಂದದ್ದೇ ಆಯ್ತು. ಹೇಮಂತ ನಿರಾಸೆಯ ಭಾವದಿಂದ ಬೇಸರ ಪಟ್ಟುಕೊಂಡ. ಅಕ್ಷರಗಳನ್ನು ಆ ಕಡೆ ಈ ಕಡೆ ಮಾಡಿ ಸ್ವಲ್ಪ ಬದಲಾವಣೆ ಮಾಡಿ ಹುಡುಕಿದರೆ  ವಿಚಿತ್ರವಾದ ಫಲಿತಾಂಶಗಳು ದೊರೆತವು.ಪೆನ್ನಂಗಾಲನ್ ಎಂಬ ಪದಕ್ಕೆ ವಿವಿಧ ರೀತಿಯ ಶೂಗಳ ಕಂಪನಿ ಎಂಬ ಅರ್ಥ ದೊರಕಿತು. ಪೆನಂಗಲ್ ಎಂಬ ಪದಕ್ಕೆ ಮಲೇಶಿಯಾದ ಜನಪದ ಕಥೆಯಲ್ಲಿ ಬರುವ ಸುಂದರವಾಗಿ ಕಾಣುವ ಹೆಣ್ಣು ಪಿಶಾಚಿ ಎಂಬ ಅರ್ಥ ದೊರೆತು ಕಂಪ್ಯೂಟರನ್ನೇ ಕುಕ್ಕುವಷ್ಟು ಸಿಟ್ಟು ಬಂತು.ಪನ್ಯಾಂಗರ ಎಂಬ ಪದಕ್ಕೆ ಮಾತ್ರ ಮನುಷ್ಯರ ಹೆಸರಿರುವುದು ತಿಳಿಯಿತು.ತಿನಾಶೆ ಪನ್ಯಾಂಗರ ಎಂಬ ಹೆಸರಿನ ಜಿಂಬಾಬ್ವೆ ದೇಶದ ಕ್ರಿಕೆಟ್ ಆಟಗಾರನೊಬ್ಬ ಇದ್ದದ್ದು ತಿಳಿಯಿತಾದರೂ ಅದಕ್ಕೂ ತನ್ನ ಹೆಸರಿನ ಮೂಲಕ್ಕೂ ಯಾವುದೇ ಸಂಬಂಧವಿಲ್ಲದ್ದು ಅರಿವಾಯಿತು. ಹೇಮಂತನಿಗೆ ವಿಮಾನದಲ್ಲಿ ನೈಜೀರಿಯಾದ ಮಹಿಳೆ ಹೇಳಿದಾಗ ಉಂಟಾದಕ್ಕಿಂತಲೂ ದುಪ್ಪಟು ಬೇಸರ,ಅವಮಾನ,ನಿರಾಸೆ ಮತ್ತು ಮಂಕು ಕವಿಯುವುದರ ಜೊತೆಗೆ ಮನಸ್ಸಿನಲ್ಲಿ ಒಂದು ರೀತಿಯ ಗೊಂದಲದ ಸ್ಥಿತಿ ನಿರ್ಮಾಣವಾಯಿತು.

   ಹೇಮಂತನಿಗೆ ಊಟ ಮಾಡುವ ಮನಸ್ಸಾಗಲಿಲ್ಲ. ಏರ್‌ಪೋರ್ಟಿನಲ್ಲಿ ಖರೀದಿಸಿದ್ದ ಕೇಕ್ ಮತ್ತು ಬಿಸ್ಕೆಟ್ಟುಗಳನ್ನು ತಿಂದು ತಣ್ಣನೆಯ ನೀರು ಕುಡಿದು ಆರಾಮ ಕುರ್ಚಿಯ ಮೆತ್ತನೆಯ ದಿಂಬುಗಳ ಮೇಲೆ ವಿರಮಿಸಿದ.ಹಾಗೇ ತನ್ನ ಬಾಲ್ಯದ ನೆನಪೆಲ್ಲವೂ ಸ್ಮೃತಿ ಪಟಲದ ಮೇಲೆ ಗಾಢವಾಗಿ ಅನಾವರಣಗೊಂಡಿತು.

     ಹೇಮಂತನ ಬಾಲ್ಯದ ದಿನಗಳಲ್ಲಿ ತಾರಾಪುರದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಸ್ತರರಾಗಿದ್ದ ಪೊನ್ನಪ್ಪ ಅಗಚಿಯವರೇ ಸರ್ವಸ್ವವೂ ಆಗಿದ್ದರು.ಇವನು ಪೊನ್ನಪ್ಪನವರ ಜೊತೆ ತಾರಾಪುರವನ್ನು ಸೇರಿದಾಗ ನಾಲ್ಕನೆಯ ತರಗತಿ ಇರಬೇಕೆಂದು ನೆನಪು. ಅದರ ಹಿಂದಿನ ದಿನಗಳ ನೆನಪು ಅಷ್ಟಾಗಿ ಇಲ್ಲ.ಅದರ ಹಿಂದಿನ ತರಗತಿಗಳನ್ನು ಯಾವುದೋ ಹಳ್ಳಿಯ ಶಾಲೆಯಲ್ಲಿ ಕಳೆದ ನೆನಪು ಮಾಸಲು ಮಾಸಲಾಗಿ ಇದ್ದರೂ ಪ್ರೌಢಶಾಲೆಗೆ ಬರುವಷ್ಟರಲ್ಲಿ ಆ ಅಸ್ಪಷ್ಟ ಚಿತ್ರಣಗಳೆಲ್ಲ ಸಂಪೂರ್ಣವಾಗಿ ಅಳಿಸಿ ಹೋಗಿದ್ದವು. ತಾರಾಪುರಕ್ಕೆ ಬಂದ ಹೊಸತರಲ್ಲಿ ಇವನ ಆರೋಗ್ಯ ಹದಗೆಟ್ಟಿತ್ತಂತೆ.ಯಾವುದೋ ರಕ್ತದ ಕಣಗಳು ಕಡಿಮೆಯಾಗಿದ್ದರಿಂದ ರಕ್ತ ನೀಡಬೇಕಾಗಿತ್ತಂತೆ. ಪೊನ್ನಪ್ಪ ಮಾಸ್ತರರು ಸ್ವತಃ ತಮ್ಮ ರಕ್ತವನ್ನೇ ನೀಡಿದ್ದರಂತೆ.ಈ ವಿಷಯವನ್ನು ಇತರರು ಹೇಳುತ್ತಿದ್ದುದನ್ನು ಕೇಳಿದ್ದ. ಸುಮಾರು ವಿಶಾಲವಾಗಿದ್ದ ಕೋಣೆಯೊಂದರಲ್ಲಿ  ಪೊನ್ನಪ್ಪನವರೊಡನೆ ವಾಸ. ಅವರೇ ಅಡಿಗೆ ಮಾಡುತ್ತಿದ್ದರು.ಪಾಠ ಹೇಳಿಕೊಡುತ್ತಿದ್ದರು.ಇವನು ಬೆಳೆದಂತೆಲ್ಲಾ ಸ್ವಾವಲಂಭಿಯಾಗುವಂತೆ ಎಲ್ಲಾ ಕೆಲಸಗಳನ್ನೂ ಹೇಳಿಕೊಟ್ಟಿದ್ದರು.ಐಶಾರಾಮೀ ಜೀವನ ಇಲ್ಲದಿದ್ದರೂ ಯಾವುದೇ ಕಷ್ಟಕೋಟಲೆಗಳ ಪರಿವೆಯಿಲ್ಲದೆ ಪೊನ್ನಪ್ಪನವರು ಪೋಷಣೆ ಮಾಡಿದ್ದರು.ತಾರಾಪುರದಂತಹ ಹಳ್ಳಿಯಲ್ಲಿ ಮತ್ತಾವ ಸೌಲಭ್ಯಗಳನ್ನೂ ನಿರೀಕ್ಷಿಸುವಂತೆ ಇರಲಿಲ್ಲ.ಪ್ರತಿ ಶನಿವಾರ ಬೆಳಗಿನ ತರಗತಿ ಮುಗಿಸಿ ತಮ್ಮ ಊರಾದ ಅಗಚಿಗೆ ಹೊರಟು ಬಿಡುತ್ತಿದ್ದರು.ಮತ್ತೆ ಬರುತ್ತಿದ್ದುದು ಸೋಮವಾರ ಬೆಳಿಗ್ಗೆಯೇ. ಆ ಸಮಯದಲ್ಲಿ ಇವನೊಬ್ಬನೇ ಕಾಲ ಕಳೆಯಬೇಕಾಗುತ್ತಿತ್ತು. ಮೊದಮೊದಲು ರಾತ್ರಿಯ ನೀರವತೆಯನ್ನು ಎದುರಿಸುವುದಕ್ಕೆ ಭಯವಾಗುತ್ತಿತ್ತು. ಕಾಲ ಕಳೆದಂತೆ ಒಬ್ಬನೇ ಇರುವುದನ್ನು ರೂಡಿ ಮಾಡಿಕೊಂಡ. ಯಾವುದಕ್ಕೂ ಇರಲಿ ಅಂತ ತನ್ನ ಸಹೋದ್ಯೋಗಿಯಾಗಿದ್ದ ಗೋವಿಂದಪ್ಪ ಮಾಸ್ತರರಿಗೆ ವಾರಾಂತ್ಯಗಳಲ್ಲಿ ಹೇಮಂತನ ಕಡೆ ಸ್ವಲ್ಪ ನಿಗಾವಹಿಸಲು ವ್ಯವಸ್ಥೆ ಮಾಡಿದ್ದರು. ಬೇಸಿಗೆ ರಜೆಯಲ್ಲೂ ಇದೇ ಕಥೆ. ಇದರಿಂದಾಗಿ ಒಬ್ಬಂಟಿಯಾಗಿ ಬದುಕುವ ಕ್ರಮ ಹೇಮಂತನಿಗೆ ಬಾಲ್ಯದಿಂದಲೂ ಅಭ್ಯಾಸವಾಗಿತ್ತು.

     ಪೊನ್ನಪ್ಪ ಮಾಸ್ತರರು ಮಂಜಾಲದ ಆಚೆ ಇರುವ ಮಲೆನಾಡಿನ ಕಡೆಯ ಅಗಚಿ ಗ್ರಾಮದವರು ಎಂಬುದು ಹೇಮಂತನಿಗೆ ತಿಳಿದಿತ್ತು. ಅದರಿಂದಾಚೆಗೆ ಅವರ ಬಗ್ಗೆ ಹೆಚ್ಚೇನೂ ಮಾಹಿತಿ ಇರಲಿಲ್ಲ. ಇವನ ಹುಟ್ಟು,ಅಪ್ಪ ಅಮ್ಮ,ಸ್ವಂತ ಊರು ಮುಂತಾದ ಯಾವ ಸಂಗತಿಗಳ ಬಗ್ಗೆಯೂ ಅವನಿಗೆ ಸ್ಪಷ್ಟವಾದ ಅರಿವಿರಲಿಲ್ಲ. ಯಾರಾದರೂ ಕೇಳಿದರೆ ಅಗಚಿ ಕಡೆಯವನು ಎಂದಷ್ಟೇ ಹೇಳುತ್ತಿದ್ದ. ಇವನೊಬ್ಬ ಅನಾಥ ಹುಡುಗ ಎಂದೇ ಬಿಂಬಿತವಾಗಿದ್ದರಿಂದ ತಾರಾಪುರದಲ್ಲಿ ಯಾರೂ ಅವನನ್ನು ಈ ವಿಷಯಗಳ ಬಗ್ಗೆ ಹೆಚ್ಚು ಕೆದಕಿ ಕೇಳುತ್ತಿರಲಿಲ್ಲ. ಆದರೂ ಕೆಲವು ಕುಹಕಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ರಜಾ ದಿನಗಳಲ್ಲೂ ತನ್ನ ಕೋಣೆಯಿಂದ ಆಚೆ ಬರದೆ ಓದುವುದರಲ್ಲೇ ನಿರತನಾಗಿರುತ್ತಿದ್ದ. ಇದರ ದೆಸೆಯಿಂದಾಗಿ ಹೇಮಂತ ಅಂತರ್ಮುಖಿಯಾಗಿ ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ರೂಪುಗೊಂಡ.

    ಇದೇ ರೀತಿ ಹತ್ತನೇ ತರಗತಿಯವರೆಗೆ ಹೇಮಂತ ಪೊನ್ನಪ್ಪ ಮಾಸ್ತರರ ಸುಪರ್ದಿಯಲ್ಲೇ ಬೆಳೆದ.ವಿದ್ಯಾಭ್ಯಾಸದಲ್ಲಿ ತುಂಬಾ ಬುದ್ಧಿವಂತನಲ್ಲದಿದ್ದರೂ ಸಾಧಾರಣ ಮಟ್ಟಿಗೆ ಉತ್ತಮ ಅಂಕಗಳನ್ನು ತೆಗೆಯುತ್ತಿದ್ದ. ತಾರಾಪುರದಲ್ಲಿ ಪ್ರೌಢಶಾಲೆಯ ನಂತರ ಓದುವುದಕ್ಕೆ ವ್ಯವಸ್ಥೆ ಇಲ್ಲದ್ದರಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆಯ ಊರಿಗೆ ಹೋಗುವುದು ಅನಿವಾರ್ಯವಾಯಿತು.

    ಯಾವುದೋ ಯೋಜನೆ ಹಾಕಿಕೊಂಡವರಂತೆ ಪೊನ್ನಪ್ಪ ಮಾಸ್ತರರು ಹೇಮಂತನನ್ನು ಮಂಜಾಲದ ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿಸಿದ್ದರು.ವಿಫುಲ ಅವಕಾಶಗಳು ದೊರೆಯುತ್ತವೆ ಎಂದೆಣಿಸಿ ಹೊಸದಾಗಿ ಪ್ರಾರಂಭವಾಗಿದ್ದ ಕೆಮಿಕಲ್ ಎಂಜಿನಿಯರ್ ವಿಭಾಗವನ್ನು ಕೊಡಿಸಿದ್ದರು.ಉಳಿದುಕೊಳ್ಳುವುದಕ್ಕೆ ಬಿಸಿಎಮ್ ಹಾಸ್ಟಿಲಿನಲ್ಲಿ ವ್ಯವಸ್ಥೆ ಮಾಡಿದ್ದರು. ಅಲ್ಲಿ

ಎಲ್ಲವೂ ಉಚಿತವಾಗಿ ಸಿಗುತ್ತಿತ್ತು.ವಿದ್ಯಾಭ್ಯಾಸಕ್ಕೆ ಮತ್ತು ಹಾಸ್ಟೆಲ್ಲಿಗೆ ಬೇಕಾದ ಸರ್ಟಿಫಿಕೇಟುಗಳ ಹಾಗೂ ಫೀ ವ್ಯವಸ್ಥೆಯನ್ನೆಲ್ಲಾ ಪೊನ್ನಪ್ಪನವರೇ ಮಾಡಿದ್ದರಿಂದ ಹೇಮಂತನಿಗೆ ಉಳಿದ ವಿದ್ಯಾರ್ಥಿಗಳಿಗೆ ಎದುರಾಗುತ್ತಿದ್ದ ಯಾವ ಸಮಸ್ಯೆಗಳೂ ಆಗಲಿಲ್ಲ.ಮೇಲು ಖರ್ಚಿಗೆ ಉಪಯೋಗವಾಗಲೆಂಬ ಉದ್ದೇಶದಿಂದ ತಮಗೆ ಪರಿಚಿತರಾಗಿದ್ದ ಅನಂತಕೃಷ್ಣರ ಮಾರುತಿ ಸ್ಟೋರ್ಸಿನಲ್ಲಿ ಪಾರ್ಟ್ ಟೈಮ್ ಕೆಲಸ ಕೊಡಿಸಿದ್ದರು.

   ತಾರಾಪುರದಿಂದ ಮಂಜಾಲದ ಪಾಲಿಟೆಕ್ನಿಕ್ ಕಾಲೇಜಿಗೆ ಇವನ ಟಿಸಿ ಬಂದಾಗಲೇ ಇವನ ಪೂರ್ಣ ಹೆಸರು ಹೇಮಂತ ಪೆನ್ನಂಗಳ ಎನ್ನುವುದು ತಿಳಿದದ್ದು. ಇದರ ಬಗ್ಗೆ ಪೊನ್ನಪ್ಪ ಮಾಸ್ತರರಲ್ಲಿ ಕೇಳಬೇಕೆಂದು ಅನೇಕ ಸಲ ಮನಸಿಗೆ ಬಂದಿತ್ತು. ಆದರೆ ಕೇಳಲಾಗಲೇ ಇಲ್ಲ. ತಾಯಿಯ ಹೆಸರು ಮಂಗಳಮ್ಮ ಎಂಬುದೂ ಆಗಲೇ ಗೊತ್ತಾದದ್ದು.ಪೊನ್ನಪ್ಪ ಮಾಸ್ತರರು ಪ್ರತಿ ಶನಿವಾರ ತಾರಾಪುರದಿಂದ ಅಗಚಿಗೆ ಹೋಗುವಾಗ ಮಂಜಾಲಕ್ಕೆ ಬಂದು ಬೇರೆಯ ಬಸ್ಸು ಹಿಡಿದು ಹೋಗಬೇಕಾಗಿತ್ತು. ಪ್ರತಿವಾರವೂ ತಪ್ಪದೇ ಇವನನ್ನು ನೋಡಿಕೊಂಡೇ ಹೋಗುತ್ತಿದ್ದರು.ಏನಾದರೂ ತಿಂಡಿಯ ಪೊಟ್ಟಣವನ್ನೋ,ತಮಗೆ ತೋಚಿದ ಪುಸ್ತಕ ಪೆನ್ನುಗಳನ್ನೋ ತಂದು ಇವನಿಗೆ ಕೊಡುವುದು ನಿರಂತರವಾಗಿ ನಡೆದಿತ್ತು.

   ಪೊನ್ನಪ್ಪ ಮಾಸ್ತರ್ ಇವನಪ್ಪ ಅಲ್ಲ ಎನ್ನುವುದು ಅವನಿಗೆ ತಿಳಿದಿತ್ತು. ತಾಯಿಯ ಹೆಸರೇನೋ ಟಿಸಿಯಿಂದ ತಿಳಿಯಿತು. ಆದರೆ ಅವರು ಯಾರು,ಹೇಗಿದ್ದರು,ಯಾವ ಊರು ಎನ್ನುವ ಯಾವ ಸಂಗತಿಗಳೂ ಅವನಿಗೆ ಗೊತ್ತಾಗಲಿಲ್ಲ.ಅಪರೂಪಕ್ಕೊಮ್ಮೆ ಪೊನ್ನಪ್ಪ ಮಾಸ್ತರಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಿದಾಗ ಹಾರಿಕೆಯ ಮಾತುಗಳನ್ನಾಡಿ ವಿಷಯಾಂತರ ಮಾಡುತ್ತಿದ್ದರು. ತಾನು ಚಿಕ್ಕವನಿದ್ದಾಗಲೇ ತಂದೆತಾಯಿಗಳು ತೀರಿಹೋದರೆಂದು ಹೇಳಿದ್ದರು.ಯಾವುದೋ ರಹಸ್ಯವನ್ನು ತನ್ನಿಂದ ಮುಚ್ಚಿಡುತ್ತಿದ್ದಾರೆಂಬುದು ಅರಿವಾದರೂ ಅನಾಥವಾಗಿದ್ದ ತನ್ನನ್ನು ತಕ್ಕಮಟ್ಟಿಗೆ ಪೋಷಿಸುತ್ತಿದ್ದ ಕಾರಣಕ್ಕೆ ತೃಪ್ತಭಾವದಿಂದ ಸುಮ್ಮನಾಗುತ್ತಿದ್ದ.

    ಇವನು ಅಂತಿಮ ವರ್ಷದ ಪಾಲಿಟೆಕ್ನಿಕ್‌ನಲ್ಲಿದ್ದಾಗ  ಎರಡು ವಾರ ಪೊನ್ನಪ್ಪನವರ ಆಗಮನವಾಗಲಿಲ್ಲ. ಒಂದು ಸಂಜೆ ಅಂಗಡಿಗೆ ಹೋದಾಗ ಅನಂತಕೃಷ್ಣರು ಪೊನ್ನಪ್ಪನವರಿಗೆ ಹೃದಯಾಘಾತವಾಗಿ ತೀರಿಕೊಂಡ ವಿಷಯವನ್ನು ಹೇಳಿದರು. ಅಂದು ಇಡೀ ರಾತ್ರಿ ನಿದ್ರೆ ಮಾಡದೆ ಅತ್ತಿದ್ದ.ತನಗಿದ್ದ ಒಂದೇ ಒಂದು ಮಾನವ ಕೊಂಡಿಯೂ ಕಳಚಿತಲ್ಲಾ ಎಂದು ಅತೀವ ದುಃಖವಾಯಿತು. “ನಿನ್ನ ಬದುಕನ್ನು ನೀನೇ ರೂಪಿಸಿಕೊಳ್ಳಬೇಕು ಮತ್ತು ಆದಷ್ಟು ಬೇಗ”ಎಂದು ಪದೇ ಪದೇ ಪೊನ್ನಪ್ಪ ಮಾಸ್ತರರು ಹೇಳುತ್ತಿದ್ದ ಮಾತು ನೆನಪಾಗಿ ಧೈರ್ಯ ತಂದುಕೊಂಡ. ಮಾಸ್ತರರ ಕುಟುಂಬದವರ ಬಗ್ಗೆಯಾಗಲೀ ಅವರ ಊರಾದ ಅಗಚಿಯ ಬಗ್ಗೆಯಾಗಲೀ ಇವನಿಗೆ ಯಾವ ಮಾಹಿತಿಯೂ ಇಲ್ಲದ್ದರಿಂದ ಮತ್ತು ಅವರು ತೀರಿಕೊಂಡು ಎರಡು ವಾರಗಳ ಮೇಲಾಗಿರುವುದರಿಂದ ಅಗಚಿಗೆ ಹೋಗಿ ಬರಲು ಮನಸಾಗಲಿಲ್ಲ.

    ಬಾಲ್ಯದ ನೆನಪುಗಳನ್ನೆಲ್ಲ ಮನನ ಮಾಡಿಕೊಂಡ ಹೇಮಂತ ಮತ್ತೊಮ್ಮೆ ಎಲ್ಲವನ್ನೂ ವಿಶ್ಲೇಷಿಸುತ್ತಾ ಪೆನ್ನಂಗಳ ಎಂಬ ಹೆಸರಿನ ಬಗ್ಗೆ ಬೆಳಕು ಚೆಲ್ಲಬಹುದಾದ ಹೊಳವುಗಳ ಕುರಿತು ಆಳವಾಗಿ ಯೋಚಿಸಿದ. ಮಂಜಾಲದ ಪಾಲಿಟೆಕ್ನಿಕ್ ಕಾಲೇಜಿಗೆ ಸೇರುವಾಗ ಮಾತ್ರ ತನ್ನ ಹೆಸರಿನ ಮುಂದಿದ್ದ ಹೇಮಂತ.ಪಿ. ಎನ್ನುವ ಅಕ್ಷರಕ್ಕೆ ಪೆನ್ನಂಗಳ ಎಂಬ ವಿಸ್ತೃತ ಆಕಾರವಿದ್ದು ಆಗಲೇ ತನ್ನ ತಾಯಿಯ ಹೆಸರು ಮಂಗಳಮ್ಮ ಎನ್ನುವ ವಿಚಾರ ಮೊದಲ ಬಾರಿಗೆ ತಿಳಿಯಿತೆಂಬುದನ್ನು ಬಿಟ್ಟರೆ ಮತ್ತಾವ ಕುರುಹೂ ಅರಿವಿಗೆ ಬರಲಿಲ್ಲ.ಬಗೆದಷ್ಟೂ ನೆನಪಿನ ಗಣಿ ಖಾಲಿ ಖಾಲಿಯಂತೆ ಭಾಸವಾಯಿತು.ಇದೇ ಗುಂಗಿನಲ್ಲಿ ಬೆಳಿಗ್ಗೆ ನಿಧಾನಕ್ಕೆ ಎದ್ದವನು ಒಂದು ನಿರ್ಧಾರಕ್ಕೆ ಬಂದ. ತಾರಾಪುರಕ್ಕೆ ಮತ್ತು ಅಗಚಿಗೆ ಭೇಟಿ ನೀಡಿದರೆ ಏನಾದರೊಂದು ಕುರುಹು ಸಿಗುತ್ತದೆಂಬ ನಂಬಿಕೆ ದೃಢವಾಗುತ್ತಾ ಬಂತು.

   ರಾಮ್ ಸ್ಯಾಂಡ್ ಕಛೇರಿಗೆ ಹೋದವನೇ ವೈಯಕ್ತಿಕ ಕಾರಣದಿಂದಾಗಿ ಒಂದು ವಾರ ರಜೆ ಬೇಕೆಂದು ಕೋರಿಕೆ ಸಲ್ಲಿಸಿ ರಾಮೇಗೌಡರಿಗೂ ಫೋನಿನ ಮೂಲಕ ವಿಷಯ ತಿಳಿಸಿದ.ಕೆಲಸಕ್ಕೆ ಸೇರಿದಾಗಿನಿಂದ ಒಂದು ದಿನವೂ ರಜೆ ತೆಗೆದುಕೊಳ್ಳದೆ ಅವಿರತವಾಗಿ ದುಡಿಯುತ್ತಿದ್ದ ಹೇಮಂತನ ಬಗ್ಗೆ ಕಂಪನಿಯಲ್ಲಿ ಎಲ್ಲರಿಗೂ ಅಭಿಮಾನವಿತ್ತು.ಯಾವುದೇ ತೊಡಕಿಲ್ಲದೆ ರಜೆ ಮಂಜೂರಾಯಿತು. ಬಹುಶಃ ತಡವಾಗಿಯಾದರೂ ಮದುವೆಯ ಬಗ್ಗೆ ಮನಸು ಮಾಡಿರಬೇಕೆಂದು ಎಲ್ಲರೂ ಯೋಚಿಸಿ ಸಂತೋಷಪಟ್ಟರು.    

  ಮರುದಿನ ಹೇಮಂತ ತಾರಾಪುರ ಗ್ರಾಮದಲ್ಲಿದ್ದ. ಮೊದಲಿಗೆ ಪ್ರೌಢಶಾಲೆಗೆ ಭೇಟಿ ನೀಡಿದ. ಎಲ್ಲಾ ಶಿಕ್ಷಕರೂ ಹೊಸಬರಾದ್ದರಿಂದ ಇವನಿಗೆ ಪರಿಚಯ ಇರಲಿಲ್ಲ. ಆದರೆ ಇವನು ಹೊಸ ರಾಸಾಯನಿಕ ಮಿಶ್ರಣವನ್ನು ಅವಿಷ್ಕಾರ ಮಾಡಿದಾಗ ಅದು ಪತ್ರಿಕೆಗಳಲ್ಲಿ ಸುದ್ಧಿಯಾಗಿತ್ತು ಮತ್ತು ಇವನು ತಾರಾಪುರದಲ್ಲಿ ಓದಿದ ವಿಷಯ ಜಗಜ್ಜಾಹಿರಾಗಿತ್ತು. ಹೇಮಂತ ಮುಖ್ಯೋಪಾಧ್ಯಾಯರ ಬಳಿ ತನ್ನ ಪರಿಚಯವನ್ನು ಹೇಳಿದ ಕೂಡಲೇ ಆದರಾಭಿಮಾನಗಳಿಂದ ಪ್ರತಿಕ್ರಿಯಿಸಿದರು. ಮೊದಲೇ ನಿರ್ಧರಿಸಿದಂತೆ ಪೊನ್ನಪ್ಪ ಮಾಸ್ತರರ ಹೆಸರಿನಲ್ಲಿ ಒಂದು ಅತ್ಯಾಧುನಿಕ ಗ್ರಂಥಾಲಯವನ್ನು ನಿರ್ಮಿಸಿ ಕೊಡುವುದಾಗಿ ವಾಗ್ದಾನ ಮಾಡಿ ಮುಂಗಡವಾಗಿ ಐವತ್ತು ಲಕ್ಷ ರೂಪಾಯಿಗಳ ಚೆಕ್ಕನ್ನು ನೀಡಿದ.ಉಳಿದ ರೂಪುರೇಷೆಗಳನ್ನು ನಂತರ ಚರ್ಚಿಸುವ ಎಂದು ಹೇಳಿ ತಾನು ಬಂದ ವಿಷಯವನ್ನು ಅರುಹಿದ. ಅಚಾನಕ್ಕಾಗಿ ಬಂದ

ದೇಣಿಗೆಯ ದೆಸೆಯಿಂದ ಇವನ ಬಗ್ಗೆ ಗೌರವ ಇನ್ನೂ ಹೆಚ್ಚಾಗಿ ಶಾಲೆಯ ಕಛೇರಿ ಸಿಬ್ಬಂದಿಗಳು ಇವನು ಓದುತ್ತಿದ್ದ ಕಾಲದ ಹಳೆಯ ಎಲ್ಲಾ ದಾಖಲೆಗಳನ್ನು ಹುಡುಕಿ ತೆಗೆದಿಟ್ಟರು. ಮಾಧ್ಯಮಿಕ ಶಾಲೆಯಿಂದ ಬಂದಿದ್ದ ಟಿಸಿಯಲ್ಲಿ ಹೇಮಂತ ಪೆನ್ನಂಗಳ ಎಂದು ನಮೂದಾಗಿತ್ತು. ತಾಯಿಯ ಹೆಸರು ಮಂಗಳಮ್ಮ ಎಂದಿತ್ತು. ತಂದೆಯ ಹೆಸರಿನ ಮುಂದೆ ಏನೂ ಬರೆದಿರಲಿಲ್ಲ.ಜನ್ಮದಿನಾಂಕವೂ ತನಗೆ ತಿಳಿದ ದಿನಾಂಕವೇ ಆಗಿತ್ತು. ವಿಳಾಸದ ಮುಂದೆ ಪೊನ್ನಪ್ಪ ಮಾಸ್ತರರ ವಿಳಾಸವಿತ್ತು. ಮುಂದೆ ಮೂರು ವರ್ಷಗಳ ನಂತರ ಇವನು ಶಾಲೆ ಬಿಡುವವರೆಗಿನ ಎಲ್ಲಾ ದಾಖಲೆಗಳಲ್ಲೂ ಯಥಾವತ್ತಾಗಿ ಇವೇ ವಿವರಗಳು ಮುಂದುವರೆದಿದ್ದವು. ಪೆನ್ನಂಗಳ ಮೂಲದ ಪದ ಹೇಗೆ ಉದ್ಭವವಾಯಿತೆಂಬುದಕ್ಕೆ ಇಂಬು ಕೊಡುವಂತಹ ಯಾವ ಕುರುಹೂ ಸಿಗದೆ ನಿರಾಸೆಯಾಯ್ತು. ಮತ್ತೆ ಅಲ್ಲಿಂದ ಮುಖ್ಯೋಪಾಧ್ಯಾರೇ ಮಾಧ್ಯಮಿಕ ಶಾಲೆಗೆ ಕರೆದೊಯ್ದರು. ಅಲ್ಲೂ ಸಹ ಏನಾದರೂ ಅವಶ್ಕತೆಯಿದ್ದರೆ ಧನಸಹಾಯ ಮಾಡುವ ಭರವಸೆಯಿತ್ತ. ಸರ್ಕಾರೀ ಶಾಲೆಗಳಿಗೆ ಕಡಿಮೆಯಾಗುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯಿಂದಾಗಿ ಬೆರಳೆಣಿಕೆಯಷ್ಟಿದ್ದ ಶಿಕ್ಷಕರು ಉತ್ತಮವಾದ ಶೌಚಾಲಯ ವ್ಯವಸ್ಥೆ ಮಾಡುವಂತೆ ವಿನಂತಿಸಿದರು. ತನ್ನ ಬ್ಯಾಂಕ್ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿಗಳು ಉಪಯೋಗವಿಲ್ಲದಂತೆ ಬಿದ್ದಿದ್ದರಿಂದ ಸೂಕ್ತ ಯೋಜನೆಯೊಂದನ್ನು ರೂಪಿಸಿದ ಮೇಲೆ ಹಣ ವರ್ಗಾವಣೆ ಮಾಡುವುದಾಗಿ ಹೇಳಿದ. ಧೂಳು ಹಿಡಿದ ಗಂಟುಗಳನ್ನು ಬಿಚ್ಚಿ ಸುಮಾರು ಇಪ್ಪತ್ತು ವರ್ಷಗಳಷ್ಟು ಹಳೆಯದಾದ  ಕಡತಗಳನ್ನು ಹುಡುಕಿದರು. ಒಂದರಿಂದ ಏಳನೆ ತರಗತಿಯವರೆಗೂ ಒಂದೇ ಶಾಲೆಯಾಗಿದ್ದರಿಂದ ಹೇಮಂತ ನಾಲ್ಕನೇ ತರಗತಿ ಸೇರಿದಾಗಿನಿಂದ ಏಳನೇ ತರಗತಿ ಬಿಡುವವರೆಗೂ ಎಲ್ಲ ದಾಖಲೆಗಳೂ ಸಿಕ್ಕಿದವು. ಆ ದಾಖಲೆಗಳನ್ನು ನೋಡಿ ಅವನಿಗೆ ಮತ್ತಷ್ಟು ನಿರಾಸೆಯಾಯಿತು. ಏಕೆಂದರೆ ಅಲ್ಲೆಲ್ಲೂ ಪೆನ್ನಂಗಳ ಎಂಬ ಪದವೇ ಇರಲಿಲ್ಲ. ಎಲ್ಲಾ ಕಡೆ ಹೇಮಂತ.ಪಿ.ಎಂದು ದಾಖಲಾಗಿತ್ತು. ಆದರೆ ಒಂದು ಹೊಸ ವಿಷಯ ತಿಳಿಯಿತು.ಇವನು ಆ ಶಾಲೆಗೆ ನಾಲ್ಕನೇ ತರಗತಿಗೆ ದಾಖಲಾಗುವಾಗ ಹನುಮಂತ ಎಂಬ ಹೆಸರಿದ್ದು ಅದನ್ನು ಹೊಡೆದು ಹಾಕಿ ಹೇಮಂತ.ಪಿ. ಎಂದು ಬರೆಯಲಾಗಿತ್ತು.ಯಾವುದೇ ಆಧಾರವಿಲ್ಲದೆ ಸುಮ್ಮನೆ ಹೆಸರನ್ನು ತಿದ್ದಿ ಬದಲಾಯಿಸಿರುವುದನ್ನು ನೋಡಿ ಶಿಕ್ಷಕರಿಗೆ ಆಶ್ಚರ್ಯವಾದರೂ ಬಹುಶಃ ಪೊನ್ನಪ್ಪ ಮಾಸ್ತರರು ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಇದು ಸಾಧ್ಯವಾಗಿರಬಹುದೆಂದು ತರ್ಕಿಸಿದರು.

     ಮುಂದೆ ಏನು ಮಾಡಬೇಕೆಂದು ತಿಳಿಯದೆ ಹೇಮಂತ ಕಳವಳಗೊಂಡ. ಇವನು ಎರಡೂ ಶಾಲೆಗಳಿಗೆ ದೇಣಿಗೆ ನೀಡಿದ ವಿಚಾರದಿಂದ ಸಂತಸಗೊಂಡಿದ್ದ ಶಿಕ್ಷಕರು ತಾರಾಪುರ ಗ್ರಾಮದ ಕೆಲವು ಮುಖ್ಯಸ್ಥರನ್ನು ಭೇಟಿ ಮಾಡಿಸುವ ಆಲೋಚನೆಯಲ್ಲಿದ್ದರು.ಆದರೆ ಹೇಮಂತ ತನಗೆ ಸಮಯವಿಲ್ಲವೆಂಬ ಕಾರಣ ನೀಡಿ ಮುಂದೊಂದು ದಿನ ಇದಕ್ಕಾಗಿಯೇ ಬಿಡುವು ಮಾಡಿಕೊಂಡು ಬರುವುದಾಗಿ ತಿಳಿಸಿದ. ಆ ಶಿಕ್ಷಕರ ಜೊತೆಯೇ ಊಟ ಮಾಡಲು ಕುಳಿತಾಗ ಪೊನ್ನಪ್ಪ ಮಾಸ್ತರರಿಗೆ ಆಪ್ತವಾಗಿದ್ದ ಗೋವಿಂದಪ್ಪ ಮಾಸ್ತರರು ಸೇವೆಯಿಂದ ನಿವೃತ್ತರಾಗಿ ತಮ್ಮ ಸ್ವಂತ ಊರಾದ ಗಡಿಕಟ್ಟೆ ಗ್ರಾಮದಲ್ಲಿ ನೆಲೆನಿಂತಿರುವ ವಿಷಯ ತಿಳಿದು ಅವರಿಂದ ಏನಾದರೂ ಮಾಹಿತಿ ಸಿಗಬಹುದು ಎಂದೆಣಿಸಿದ. ಅಲ್ಲಿಂದ ಹೊರಟು ಮಂಜಾಲಕ್ಕೆ ಹೋಗುವ ದಾರಿಯಲ್ಲೇ ಇರುವ ಗಡಿಕಟ್ಟೆಯತ್ತ ತನ್ನ ಪಯಣ ಬೆಳೆಸಿದ.

                         ಗಡಿಕಟ್ಟೆ ಗ್ರಾಮದಲ್ಲಿ ಗೋವಿಂದಪ್ಪ ಮಾಸ್ತರರ ಮನೆ ಹುಡುಕುವುದು ಅಂತಹ ಕಷ್ಟವಾಗಲಿಲ್ಲ. ಇವನನ್ನು ನೋಡಿದ ಕೂಡಲೇ ಗುರ್ತು ಹಿಡಿಯದಿದ್ದರೂ ಪರಿಚಯ ಹೇಳಿಕೊಂಡ ನಂತರ ಗುರ್ತು ಸಿಕ್ಕಿ ಸಂತಸದಿಂದ ಮಾತನಾಡಿದರು. ಹೇಮಂತ ತಾನು ಬಂದ ವಿಷಯವನ್ನು ಹೇಳಿ ಪೊನ್ನಪ್ಪ ಮಾಸ್ತರರು ಮತ್ತು ತನ್ನ ಬಗ್ಗೆ ಅವರಿಗೆ ಗೊತ್ತಿದ್ದ ಎಲ್ಲಾ ಸಂಗತಿಗಳನ್ನು ಸವಿವರವಾಗಿ ಹಂಚಿಕೊಳ್ಳುವಂತೆ ವಿನಂತಿಸಿಕೊಂಡ.  ಗೋವಿಂದಪ್ಪ ಮಾಸ್ತರರು ತಮ್ಮ ನೆನಪಿನ ಬುತ್ತಿ ಬಿಚ್ಚಿ ನಿಧಾನವಾಗಿ ಹೇಳತೊಡಗಿದರು.

   “ಪೊನ್ನಪ್ಪ ಬಹಳ ಒಳ್ಳೆಯ ಮನುಷ್ಯ. ನನ್ನೊಡನೆ ಆಪ್ತವಾಗಿದ್ದದ್ದು ನಿಜ. ಬಹಳಷ್ಟು ವಿಷಯಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾನೆ. ಅವನು ಅಕಾಲಿಕವಾಗಿ ಸತ್ತಾಗ ಅವನ ಊರು ಅಗಚಿಗೂ ಹೋಗಿದ್ದೆ. ಅದರ ನಂತರ ಅವರ ಮಗ ತಾರಾಪುರಕ್ಕೆ ಬಂದು ಕೆಲವು ದಾಖಲಾತಿಗಳನ್ನು ತೆಗೆದುಕೊಂಡು ಹೋದ.ಪಿಂಚಣಿ ಮತ್ತು ಇತರೆ ಸೌಲಭ್ಯಗಳನ್ನು ಪಡೆಯಲು ಅವು ಬೇಕಿತ್ತಲ್ಲ. ಆಮೇಲೆ ಏನಾಯ್ತು ಗೊತ್ತಾಗಲಿಲ್ಲ.

    ತಂದೆಯಿಲ್ಲದ ಮಗುವನ್ನು ಓದಿಸಲು ಒಪ್ಪಿಕೊಂಡಿರುವುದಾಗಿಯೂ, ಅದಕ್ಕೆ ಮನೆಯವರ ಪ್ರತಿರೋಧ ಇರುವುದಾಗಿಯೂ ಹೇಳುತ್ತಿದ್ದ.ಒಂದು ಸಲ ಊರಿನಿಂದ ಬರುವಾಗ ಒಂದೆರಡು ದಿನ ತಡವಾಗಿ ಬಂದ.ಬರುವಾಗ ನಿನ್ನನ್ನು ಕರೆದುಕೊಂಡು ಬಂದಿದ್ದ. ನಿನ್ನ ತಾಯಿಯೂ ಇದ್ದಕ್ಕಿದ್ದಂತೆ ಸತ್ತು ಹೋದದ್ದರಿಂದ ತನಗೂ ಜೊತೆಯಾಗುತ್ತದೆಂದು ಇಲ್ಲಿಗೇ ಕರೆತಂದುದಾಗಿ ಹೇಳಿದ.

    ನಿನ್ನನ್ನು ಕರೆತಂದಾಗ ನಿನಗಿದ್ದ ಯಾವುದೋ ಖಾಯಿಲೆಯಿಂದಾಗಿ ರಕ್ತ ನೀಡಬೇಕಾಗಿ ಬಂತು.ನಿನ್ನದು ಅಪರೂಪದ ವಿರಳ ಗುಂಪಿಗೆ ಸೇರಿದ್ದರಿಂದ ರಕ್ತ ಸಿಗುವುದು ಕಷ್ಟವಾಗಬಹುದೆಂದು ವೈದ್ಯರು ಹೇಳಿದರು. ಪೊನ್ನಪ್ಪ ತನ್ನ ರಕ್ತ ಆಗಬಹುದೆಂದು ಪರೀಕ್ಷಿಸಿ ನೋಡಲು ಹೇಳಿದ. ಆಶ್ಚರ್ಯವೆಂಬಂತೆ ಅವನದೂ ಅದೇ ಗುಂಪಿಗೆ ಸೇರಿದ್ದರಿಂದ ಸಮಸ್ಯೆ ಸುಲಭವಾಗಿ ಬಗೆಹರಿಯಿತು. ಆಮೇಲೆ ನೀನು ಖಾಯಿಲೆ ಬಿದ್ದದ್ದೇ ಇಲ್ಲ.

      ನಾವಿದ್ದದ್ದು ಒಂದರಿಂದ ಏಳನೆಯ ತರಗತಿವರೆಗೆ ಇದ್ದ ಸಂಯುಕ್ತ ಶಾಲೆಯಾಗಿದ್ದರಿಂದ ನಮ್ಮ ಶಾಲೆಯಲ್ಲೇ ನಿನ್ನನ್ನು ಸೇರಿಸಿದ. ಹನುಮಂತ ಅಂತ ಇದ್ದ ನಿನ್ನ ಹೆಸರು ಚೆನ್ನಾಗಿಲ್ಲ ಅಂತ ಹೇಮಂತನೆಂದು ಬದಲಾಯಿಸಿದ. ರಿಜಿಸ್ಟರಿನಲ್ಲಿ ನಿನ್ನ ತಾಯಿಯ ಹೆಸರು ಮಾತ್ರ ಬರೆಸಿ ತಂದೆಯ ಹೆಸರನ್ನು ಖಾಲಿ ಬಿಡಿಸಿದ. ಮಗನ ಬಗ್ಗೆ ಕಾಳಜಿಯನ್ನೇ ತೋರದೆ ಗತಿಸಿದ ಅಪ್ಪನ ಹೆಸರೇ ಬೇಡವೆಂದ. ಆಗ ದಾಖಲಾತಿಗಳೆಲ್ಲವೂ ಶಾಲೆಯ ಮಟ್ಟದಲ್ಲೇ ಇರುತ್ತಿದ್ದುದರಿಂದ ಎಲ್ಲವೂ ಅವನೆಣಿಸಿದಂತೆಯೇ ಆಯಿತು.

     ಪೊನ್ನಪ್ಪ ಹೆಸರಿಗೆ ಕನ್ನಡದ ಮಾಸ್ತರ್.ಆದರೆ ಎಲ್ಲಾ ವಿಷಯಗಳನ್ನೂ ಶಾಲೆಯಲ್ಲಿ ಬೋಧಿಸುತ್ತಿದ್ದ. ನಿನಗೆ ಪಾಠ ಹೇಳಿಕೊಡಲೆಂದೇ ಏನಾದರೂ ಓದುತ್ತಿದ್ದ. ಆಗಿನ ಕಾಲದಲ್ಲಿ ಬರುತ್ತಿದ್ದ ಸಂಬಳ ಕಡಿಮೆಯೇ ಮತ್ತು ಆ ಸಂಬಳದ ಹಣಕ್ಕೂ ಮನೆಯಲ್ಲಿ ಲೆಕ್ಕ ಕೊಡಬೇಕಾಗಿತ್ತೆಂದು ಕಾಣುತ್ತದೆ. ನಿನಗೆ ಹಣವನ್ನು ವ್ಯಯಿಸುವುದು ಅವನ ಹೆಂಡತಿ ಮಕ್ಕಳಿಗೂ ಇಷ್ಟವಿರಲಿಲ್ಲವಂತೆ.ಆದುದರಿಂದ ನಿನ್ನ ಖರ್ಚಿಗಾಗಿ ಬೇರೆ ಮಕ್ಕಳಿಗೆ ಮನೆಪಾಠ ಹೇಳಿ ಮೇಲು ಸಂಪಾದನೆ ಮಾಡುತ್ತಿದ್ದ.

   ನಿನ್ನ ಮೇಲಂತೂ ಅವನಿಗೆ ತುಂಬಾ ಪ್ರೀತಿ.ನೀನು ಒಬ್ಬ ಅನಾಥ ಹುಡುಗನೆಂಬುದು ಇಡೀ ಹಳ್ಳಿಗೇ ಗೊತ್ತಿತ್ತು. ಒಮ್ಮೆ ಊರಿನ ಗೌಡರೊಬ್ಬರು ರಜಾದಿನಗಳಲ್ಲಿ ನಿನ್ನನ್ನು ಮನೆ ಕೆಲಸಕ್ಕೆ ಕಳಿಸಲು ಕೇಳಿದಾಗ ವ್ಯಗ್ರನಾಗಿದ್ದ. ಕೆಳಗಿನವರ ಅಸಹಾಯಕತೆಯನ್ನು ಉಳ್ಳವರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆಂದು ಬೇಸರಪಟ್ಟು ಆ ಪ್ರಸ್ತಾಪವನ್ನು ನಯವಾದ ಮಾತುಗಳಿಂದ ತಿರಸ್ಕರಿಸಿದ್ದ.

     ನೀನು ಕೊನೆಯ ವರ್ಷದ ಪಾಲಿಟೆಕ್ನಿಕ್ ಓದುವಾಗ ತನ್ನ ಜವಾಬ್ದಾರಿಯೆಲ್ಲಾ ಮುಗಿಯುತ್ತಾ ಬಂದಿದೆ.ಓದು ಮುಗಿದು ಕೆಲಸವೊಂದು ಸಿಕ್ಕಿಬಿಟ್ಟರೆ ತಾನು ನಿರಾಳನೆಂದು ಹೇಳುತ್ತಿದ್ದ. ಅಷ್ಟರಲ್ಲಿ ಅವನೇ ಹೊರಟು ಹೋದ.

     ನಿನ್ನ ಬಗ್ಗೆ ಪತ್ರಿಕೆಗಳಲ್ಲಿ ಓದಿ ಖುಷಿಯಾಯಿತು. ಪೊನ್ನಪ್ಪ ಇದ್ದಿದ್ದರೆ ಎಷ್ಟು ಸಂಭ್ರಮಿಸುತ್ತಿದ್ದ ಅಂತ ಅನಿಸಿದ್ದಿದೆ. ಅವನ ಕಷ್ಟ ಸಾರ್ಥಕವಾಗುವಂತೆ ದಡ ಸೇರಿದ್ದೀಯಲ್ಲ,ಅಷ್ಟು ಸಾಕು ಬಿಡು”.

    ಇಷ್ಟು ಹೇಳಿ ಗೋವಿಂದಪ್ಪನವರು ನಿಲ್ಲಿಸಿದರು.ತೃಪ್ತನಾಗದ ಹೇಮಂತ ತನ್ನ ಹೆಸರಿಗೆ ಥಳುಕು ಹಾಕಿಕೊಂಡಿರುವ ಪೆನ್ನಂಗಳ ಪದದ ಬಗ್ಗೆ ಕೇಳಿದ.

    “ನಮ್ಮ ಶಾಲೆಯಲ್ಲಿ ಇರುವವರೆಗೂ ಹೇಮಂತ.ಪಿ.ಎಂದಿತ್ತು.ನಿನ್ನನ್ನು ಪ್ರೌಢಶಾಲೆಗೆ ಸೇರಿಸುವಾಗ ಅದನ್ನು ಪೆನ್ನಂಗಳ ಅಂತ ಬರೆಸಿದನೆಂದು ಕಾಣುತ್ತದೆ.ಅದರ ನಿಜವಾದ ಅರ್ಥ ನನಗೆ ಗೊತ್ತಿಲ್ಲ. ನೀನು ಮಂಜಾಲದಲ್ಲಿ ಪಾಲಿಟೆಕ್ನಿಕ್ ಓದುವ ಮಧ್ಯದಲ್ಲಿ ನಿನ್ನ ಟಿಸಿಯಲ್ಲಿ ಸ್ವಲ್ಪ ತಪ್ಪಾಗಿದೆಯೆಂದು ಅದನ್ನು ಬದಲಿಸಬೇಕೆಂದು ಹಲುಬುತ್ತಿದ್ದ. ಅದಕ್ಕಾಗಿ ಕಾಲೇಜಿನವರಿಗೆ ಅರ್ಜಿಯನ್ನು ನೀಡಿದ್ದರೂ ಪ್ರಯೋಜನವಾಗಿಲ್ಲವೆಂದು ಹೇಳುತ್ತಿದ್ದ.ಆದರೆ ಅಷ್ಟೊತ್ತಿಗೆ ಕಾನೂನುಗಳೆಲ್ಲವೂ ಬಿಗಿಯಾಗಿದ್ದರಿಂದ ಟಿಸಿಯ ವಿವರಗಳನ್ನು ಬದಲಿಸುವುದು ಸುಲಭದ ಕೆಲಸವಾಗಿರಲಿಲ್ಲ”.

    ಇನ್ನಾವ ಉಪಯುಕ್ತವಾದ ವಿವರಗಳೂ ಅವರಿಂದ ದೊರೆಯಲಿಲ್ಲ.ಪೊನ್ನಪ್ಪ ಮಾಸ್ತರರ ಹೊರತಾಗಿ ಇವರೂ ಸಹ ತನ್ನ ಬಗ್ಗೆ ಆಸ್ಥೆ ತೋರಿದ್ದರಿಂದ ಅವರ ಋಣ ತೀರಿಸುವ ಸಲುವಾಗಿ ಧನಸಹಾಯ ಮಾಡುವೆನೆಂದು ಹೇಳಿದ.ಗೋವಿಂದಪ್ಪನವರು ತಮಗೆ ಬರುತ್ತಿರುವ ಪಿಂಚಣಿಯೇ ಸಾಕಾಗುತ್ತಿದ್ದು ಹೆಚ್ಚಿನ ಹಣದ ಅವಶ್ಯಕತೆಯಿಲ್ಲವೆಂದು ಹೇಳಿ ಇವನ ಕೋರಿಕೆಯನ್ನು

ನವಿರಾಗಿ ನಿರಾಕರಿಸಿದರು.

  ಅವರಿಗೆ ನಮಸ್ಕರಿಸಿ ಅಗಚಿಯ ಪೊನ್ನಪ್ಪ ಮಾಸ್ತರರ ಮನೆಯ ವಿಳಾಸವನ್ನು ಪಡೆದು ಅಲ್ಲಿಂದ ಹೊರಟ.ಆಗಲೇ ಮುಸ್ಸಂಜೆಯಾದ್ದರಿಂದ ಅಂದು ಮಂಜಾಲದಲ್ಲಿ ತಂಗಿ ಮರುದಿನ ಬೆಳಿಗ್ಗೆ ಅಗಚಿಗೆ ಹೋಗುವ ತೀರ್ಮಾನ ಮಾಡಿದ.

  ಮಂಜಾಲದ ಪೂರ್ವಕ್ಕೆ ಒಂದು ಗಂಟೆ ಪಯಣಿಸಿ ಮಲೆನಾಡಿನ ಕಾಫಿ ತೋಟಗಳ ಮಧ್ಯೆ ಇದ್ದ ಅಗಚಿಯನ್ನು ತಲುಪಿದ. ಅದೊಂದು ಪುಟ್ಟ ಗ್ರಾಮ. ಊರಿನ ಮಧ್ಯೆಯಿದ್ದ ಪೊನ್ನಪ್ಪ ಮಾಸ್ತರರ ಮನೆಯಲ್ಲಿ ಯಾರೋ ಬಾಡಿಗೆಗೆ ವಾಸವಿದ್ದರು. ಮಾಸ್ತರ ಕುಟುಂಬ ಹತ್ತಿರದಲ್ಲೇ ಇರುವ ತೋಟದ ಮನೆಯಲ್ಲಿದ್ದಾರೆಂದು ತಿಳಿದು ಅತ್ತ ಕಡೆ ಹೊರಟ.

     ತೋಟದೊಳಗೆ ಇದ್ದ ಮನೆಯೆದುರು ಮಾಸ್ತರರ ಮಗ ಶಿಶಿರ ಸಿಕ್ಕಿ ಅವನ ಪರಿಚಯವಾಯಿತು.ಮನೆಯೊಳಗೆ ಕರೆದೊಯ್ದು ಕೂರಿಸಿ ತನ್ನ ಅಮ್ಮನನ್ನು ಅಂದರೆ ಮಾಸ್ತರರ ಹೆಂಡತಿಯವರನ್ನು ಕರೆತಂದ. ಹೇಮಂತ ಅವರಿಗೆ ನಮಸ್ಕರಿಸಿ ತನ್ನ ಬಗ್ಗೆ ಸಂಪೂರ್ಣವಾಗಿ ಹೇಳಿದ.ಅವರಿಗೆ ಇವನು ಇಷ್ಟೊಂದು ಸಾಧನೆಯನ್ನು ಮಾಡಿರುವುದರ ಬಗ್ಗೆ ಅರಿವೇ ಇಲ್ಲದಂತೆ ತೋರಿತು.ಸ್ವಲ್ಪ ಹೊತ್ತು ಮೌನ ಆವರಿಸಿತು.ಯಾರೂ ಮಾತನಾಡಲಿಲ್ಲ. ಕೊನೆಗೆ ಹೇಮಂತನೇ ಮೌನವನ್ನು ಮುರಿದು ತನ್ನ ಪಾಲಿನ ವಿದ್ಯಾಭ್ಯಾಸಕ್ಕೆ ಪೊನ್ನಪ್ಪ ಮಾಸ್ತರರೇ ಕಾರಣವಾದದ್ದು,ಅವರ ಸಾವಿನ ವಿಷಯ ತನಗೆ ತಡವಾಗಿ ತಿಳಿದದ್ದು,ಅಗಚಿ ಗ್ರಾಮದ ವಿಳಾಸವೇ ತನಗೆ ಗೊತ್ತಿಲ್ಲದೆ ಈ ಕಡೆ ಬರಲು ಸಾಧ್ಯವಾಗದೇ ಇದ್ದದ್ದು ಮುಂತಾದ ಎಲ್ಲವನ್ನೂ ಹೇಳಿ ತನ್ನ ಬ್ಯಾಗಿನಿಂದ ಚೆಕ್ ಪುಸ್ತಕವನ್ನು ತೆಗೆದು ಐವತ್ತು ಲಕ್ಷ ರೂಪಾಯಿಗಳಿಗೆ ಚೆಕ್ ಬರೆದು ಅದನ್ನು ಸ್ವೀಕರಿಸಬೇಕೆಂದು ವಿನಮ್ರವಾಗಿ ಬೇಡಿಕೊಂಡ.

     ಮಾಸ್ತರರ ಹೆಂಡತಿ ನಿಧಾನಕ್ಕೆ ಮಾತನಾಡಲು ಪ್ರಾರಂಭಿಸಿದರು.

     “ಪೊನ್ನಪ್ಪ ಮಾಸ್ತರರು ಸಹೃದಯೀ ಮನುಷ್ಯ. ಯಾರಿಗೇ ಕಷ್ಟವಾದರೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಎರಡು ಮೂರು ಕಡೆ ವರ್ಗಾವಣೆಯಾದರೂ ಈ ತೋಟದ ಸಲುವಾಗಿ ನಾನು ನಮ್ಮ ಅತ್ತೆಯವರೊಡನೆ ಇಲ್ಲೇ ಉಳಿದೆ. ಮಾಸ್ತರರು ಮಾತ್ರ ಪ್ರತಿ ಶನಿವಾರ ಸಂಜೆ ಬಂದು ಸೋಮವಾರ ಬೆಳಿಗ್ಗೆ ಹೋಗುತ್ತಿದ್ದರು.

      ನಿಮ್ಮ ತಾಯಿ ಮಂಗಳಮ್ಮ ತೋಟದ ಕೆಲಸಕ್ಕೆ ಬರುತ್ತಿದ್ದಳು. ನಿಮ್ಮ ಅಪ್ಪ ವೆಂಕಟೇಶ ಗಾರೆ ಕೆಲಸ ಮಾಡುತ್ತಿದ್ದ. ಅವನಿಗೆ ಹಿಂದೆ ಮುಂದೆ ಯಾರೂ ಇರಲಿಲ್ಲ.ವಿಪರೀತ ಕುಡಿಯುತ್ತಿದ್ದ.ನಾವು ಊರಿನೊಳಗೆ ಸಣ್ಣ ಮನೆಯೊಂದನ್ನು ಕಟ್ಟಿದೆವು. ನಮಗೆ ಇಬ್ಬರು ಮಕ್ಕಳು.ಮೊದಲನೆಯವಳು ವಸಂತ.ಈಗ ಮದುವೆಯಾಗಿ ಬೆಂಗಳೂರಿನಲ್ಲಿದ್ದಾಳೆ.ಇವನು ಶಿಶಿರ, ಎರಡನೆಯವನು. ನಾನು ನನ್ನ ಮಕ್ಕಳೊಂದಿಗೆ ಊರಿನ ಮನೆಗೆ ಹೋದೆ. ಅತ್ತೆಯವರು ಬರಲು ಒಪ್ಪಲಿಲ್ಲ. ತಲೆತಲಾಂತರದಿಂದ ಇರುವ ತೋಟದ ಮನೆಯನ್ನು ಬಿಟ್ಟು ಬರಲೊಪ್ಪದೆ  ಹಠ ಮಾಡಿದರು.ಅವರೊಬ್ಬರೇ ಕೊನೆಯವರೆಗೆ ಇಲ್ಲಿದ್ದರು. ಹಗಲು ಹೊತ್ತು ಕೆಲಸಕ್ಕೆ ಬರುತ್ತಿದ್ದ ಮಂಗಳಮ್ಮನಿಗೆ ಅತ್ತೆಯವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ವಹಿಸಿದ್ದೆವು.

    ನೀನು ಹುಟ್ಟಿದ ಮೇಲೆ ನಿಮ್ಮಪ್ಪ ಕುಡಿಯುವುದನ್ನು ಇನ್ನೂ ಜಾಸ್ತಿ ಮಾಡಿದ್ದ.ನಾಲ್ಕೈದು ತಿಂಗಳಾದ ಮೇಲೆ ಕುಡಿದೂ ಕುಡಿದೂ ಸತ್ತೇ ಹೋದ.ನಿನಗೆ ಹನುಮಂತನೆಂಬ ಹೆಸರಿಟ್ಟಿದ್ದ ನೆನಪು.ಹೇಮಂತ ಯಾವಾಗಾಯ್ತೋ ಗೊತ್ತಿಲ್ಲ.ನಿಮ್ಮಪ್ಪ ಸತ್ತ ಮೇಲೆ ಮಂಗಳಮ್ಮ ತೋಟದ ಮನೆಯಲ್ಲೇ ಹೆಚ್ಚಾಗಿ ಇರತೊಡಗಿದಳು.ನಮಗೆ ನಿನ್ನ ಮೇಲೆ ಯಾವ ದ್ವೇಷವೂ ಇರಲಿಲ್ಲ. ಆದರೆ ಮಾಸ್ತರರು ನಿನ್ನ ಬಗ್ಗೆ ವಿಪರೀತ ಕಾಳಜಿ ಮಾಡುತ್ತಿದ್ದರು.ನಮ್ಮ ಮಕ್ಕಳ ಆಸ್ಥೆಗಿಂತಲೂ ಹೆಚ್ಚು ಗಮನ ನಿನ್ನ ಕಡೆ ಇದ್ದಂತೆ ಅನಿಸಿತು.ಇದಕ್ಕಾಗಿ ನಮ್ಮಿಬ್ಬರ ನಡುವೆ ಅನೇಕ ಸಲ ಜಗಳವಾಗಿದೆ. ಕೇಳಿದರೆ, ಮಂಗಳಮ್ಮ ನಮ್ಮ ಮನೆಯನ್ನೇ ನಂಬಿದ್ದಾಳೆ.ಅವಳಿಗಿನ್ನಾರು ದಿಕ್ಕು ಅಂತ ನನಗೆ ಸಮಜಾಯಿಷಿ ನೀಡುತ್ತಿದ್ದರು. ಒಮ್ಮೆ ಮಂಗಳಮ್ಮ ಖಾಯಿಲೆ ಬಂದು ಇದ್ದಕ್ಕಿದ್ದಂತೆ ಪ್ರಾಣ ಬಿಟ್ಟಳು. ನಿನ್ನನ್ನು ಏನು ಮಾಡುವುದೆಂಬ ದೊಡ್ಡ ಪ್ರಶ್ನೆ ಎದುರಾಯಿತು.ವೆಂಕಟೇಶನಿಗೂ ಯಾರೂ ಇರಲಿಲ್ಲ. ಮಂಗಳಮ್ಮನ ಅಣ್ಣ ಒಬ್ಬ ಇದ್ದ. ಅವನೂ ಸಹ ನಿನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಹಿಂದೆಮುಂದೆ ನೋಡಿದ. ಕೊನೆಗೆ ಮಾಸ್ತರರು ನಿನ್ನನ್ನು ತಾರಾಪುರಕ್ಕೆ ಕರೆದುಕೊಂಡು ಹೋಗಿ ಅಲ್ಲೇ ಒದಿಸುತ್ತೇನೆಂದು ಹೇಳಿದರು. ನಿನ್ನಮ್ಮ ಮಂಗಳಮ್ಮನಿಗೆ ನಿನ್ನ ವಿದ್ಯಾಭ್ಯಾಸದ ಬಗ್ಗೆ ಮಾತು ನೀಡಿರುವುದಾಗಿ ಹೇಳಿದರು.ಇವರಿಂದ ಮಾತು ಪಡೆಯಲು ಅವಳು ಯಾರು ಅಂತ ಕೋಪ ಬಂತು.ನನಗೆ ಇದು ಸರ್ವಥಾ ಇಷ್ಟವಾಗಲಿಲ್ಲ. ಆದರೆ ಅತ್ತೆಯವರು ಮಂಗಳಮ್ಮ ತಮಗೆ ಆರೈಕೆ ಮಾಡಿದ್ದ ಸಹಾನುಭೂತಿಯಿಂದಲೋ ಏನೋ ಮಗನಿಗೂ ಜೊತೆಯಾಗುತ್ತದೆ ಮತ್ತು ಅನಾಥ ಹುಡುಗನ ಪೋಷಣೆ ಮಾಡಿದರೆ ಪುಣ್ಯ ಬರುತ್ತದೆ ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದರು.ಮಾಸ್ತರರಿಗೆ ಬರುತ್ತಿದ್ದ ಸಂಬಳದಲ್ಲಿ ಅವರ ಖರ್ಚಿಗಾಗುವಷ್ಟು ಇಟ್ಟುಕೊಂಡು ಉಳಿದ ಹಣ ನಮಗೆ ನೀಡಬೇಕೆಂಬ ಶರತ್ತಿನೊಂದಿಗೆ ಒಪ್ಪಿಕೊಂಡೆ. ಅವರು ಸತ್ತ ಮೇಲೆ ನಿನ್ನ ಬಗ್ಗೆ ನಾವಾರೂ ಯೋಚನೆ ಮಾಡಲೇ ಇಲ್ಲ.

    ಮಾಸ್ತರರು ಸತ್ತಾಗ ಶಿಶಿರನನ್ನು ಅನುಕಂಪದ ಹುದ್ದೆಗೆ ಸೇರಿಸಬಹುದಿತ್ತು.ಆದರೆ ಇವನು ಹತ್ತನೇ ತರಗತಿಯನ್ನೂ ಪಾಸು ಮಾಡದೇ ಇದ್ದುದರಿಂದ ಗುಮಾಸ್ತನ ಕೆಲಸವೂ ಸಿಗುವುದಿಲ್ಲವೆಂದು ತಿಳಿದು ಅದರ ಕಡೆ ಮನಸು ಮಾಡಲಿಲ್ಲ. ವಸಂತಳಿಗೂ ಮದುವೆಯಾಗಿ ಬೆಂಗಳೂರು ಸೇರಿದಳು.ಇವನಿಗೂ ಮದುವೆಯಾಗಿ ತೋಟ ನೋಡಿಕೊಂಡು ಇದ್ದಾನೆ. ಅತ್ತೆಯವರು ಕಾಲವಾದ ನಂತರ ನಾವು ತೋಟದ ಮನೆಗೇ ಸ್ಥಳಾಂತರವಾಗಿ ಇಲ್ಲೇ ವಾಸ ಮಾಡುತ್ತಿದ್ದೇವೆ”.

   ಹೇಮಂತ ಮತ್ತೆ ಪೆನ್ನಂಗಳ ಪದದ ಬಗ್ಗೆ ಕೇಳಿದ. ಅದರ ಬಗ್ಗೆ ಅವರಿಗೇನೂ ಗೊತ್ತಿರಲಿಲ್ಲ. ತಾನು ತಿಳಿದುಕೊಂಡಿದ್ದಂತೆ ಪೊನ್ನಪ್ಪ ಮಾಸ್ತರರ ಮನೆಯವರಿಗೆ ತನ್ನ ಬಗ್ಗೆ ಅಂತಹ ದ್ವೇಷದ ಭಾವನೆಯಿಲ್ಲ ಎಂಬುದರ ಅರಿವಾಗಿ ಮನಸ್ಸು ಹಗುರವಾಯಿತು. ಮಾಸ್ತರರ ಹೆಂಡತಿಯವರೂ ಮನಸು ಸಡಿಲಗೊಳಿಸಿದ್ದರಿಂದ ಸ್ವಲ್ಪ ಹೊತ್ತು ಲೋಕಾಭಿರಾಮವಾಗಿ ಮಾತನಾಡಿದರು. ಇವನ ಸಾಧನೆಯ ಬಗ್ಗೆ ವಿಚಾರಿಸಿಕೊಂಡು ಇನ್ನೂ ಮದುವೆಯಾಗದಿರುವುದನ್ನು ಕೇಳಿ ಆಶ್ಚರ್ಯಪಟ್ಟರು.ಹೇಮಂತ ನೀಡಿದ್ದ ಚೆಕ್ಕಿನ ಮಹಿಮೆಯೋ ಏನೋ,ತಮಗೆ ಗೊತ್ತಿರುವ ಯಾವುದಾದರೂ ಹುಡುಗಿಯಿದ್ದರೆ ಮದುವೆ ಮಾಡಿಸುವ ಬಗ್ಗೆ ಮಾತನಾಡಿದರು.

        ಹೇಮಂತನ ಧಾವಂತವೇ ಬೇರೆಯಿತ್ತು.ತನ್ನ ಮೂಲವನ್ನು ಸರಿಯಾಗಿ ತಿಳಿದದ್ದು ಸಂತಸದ ವಿಷಯವಾದರೂ ಪೆನ್ನಂಗಳದ ಮೂಲವನ್ನು ಹುಡುಕಲೇ ಬೇಕಾಗಿತ್ತು. ಮಂಗಳಮ್ಮನ ಅಣ್ಣನನ್ನು ಭೇಟಿ ಮಾಡುವ ಇಚ್ಚೆ ವ್ಯಕ್ತಪಡಿಸಿದ. ಇದಕ್ಕೆ ಸಮ್ಮತಿಸಿದ ಮಾಸ್ತರರ ಹೆಂಡತಿಯವರು ಶಿಶಿರನನ್ನು ಜೊತೆಗೆ ಹೋಗುವಂತೆ ಹೇಳಿದರು.

     ಶಿಶಿರ ಅವರಿವರನ್ನು ವಿಚಾರಿಸಿ ಮಂಗಳಮ್ಮನ ಅಣ್ಣನ ವಿಳಾಸವನ್ನು ಪತ್ತೆ ಹಚ್ಚಿದ.ಅಗಚಿಯಿಂದ ಏಳೆಂಟು ಕಿಮೀ ದೂರದಲ್ಲಿರುವ ಕಮಟೀಹಳ್ಳಿ ಊರಿನಲ್ಲಿರುವುದು ತಿಳಿಯಿತು. ಮಂಗಳಮ್ಮನ ಅಣ್ಣ ಧರಣೀಶ ಮನೆಯಲ್ಲೇ ಇದ್ದ.ತನ್ನನ್ನು ಹುಡುಕಿಕೊಂಡು ಯಾರೋ ದೊಡ್ಡ ಮನುಷ್ಯರಂತೆ ಕಾಣುವವರು ಕಾರಿನಲ್ಲಿ ಬಂದದ್ದನ್ನು ನೋಡಿ ಅವನಿಗೆ ಆಶ್ಚರ್ಯವಾಯಿತು. ಪೊನ್ನಪ್ಪ ಮಾಸ್ತರರ ಮಗ ಅಂತ ಶಿಶಿರ ಹೇಳಿದಾಗ ಪರಿಚಯದ ಭಾವದಿಂದ ತನ್ನ ಪುಟ್ಟ ಮನೆಯ

ಜಗುಲಿಯ ಮೇಲೆ ಕೂರಿಸಿದ. ಶಿಶಿರನ ಜೊತೆಯಲ್ಲಿ ಬಂದವರು ಯಾರಿರಬಹುದೆಂದು ಪ್ರಶ್ನಾರ್ಥಕವಾಗಿ ನೋಡಿದ.

        ಹೇಮಂತ ತನ್ನ ಬಗ್ಗೆ ಸಂಕ್ಷಿಪ್ತವಾಗಿ ಅರುಹಿದ.ತಾನು ವಿಪರೀತ ಹಣ ಗಳಿಸಿರುವುದನ್ನು ಉದ್ದೇಶಪೂರ್ವಕವಾಗೇ ಮುಚ್ಚಿಟ್ಟನಾದರೂ ಹಣದ ಪ್ರಭಾವದಿಂದ ಯಾವ ಸತ್ಯವನ್ನಾದರೂ ಹೊರತೆಗೆಯಬಹುದೆಂಬುದರ ಅರಿವಿದ್ದರಿಂದ ಒಂದು ಲಕ್ಷ ರೂಪಾಯಿಯನ್ನು ಧರಣೀಶನ ಕೈಗಿಟ್ಟು ತನ್ನ ಮತ್ತು ತನ್ನ ತಾಯಿಯ ಬಗ್ಗೆ ಗೊತ್ತಿರುವ ಎಲ್ಲಾ ವಿಷಯಗಳನ್ನೂ ಮುಚ್ಚಿಡದೆ ಹೇಳಬೇಕೆಂದು ವಿನಂತಿಸಿಕೊಂಡ.

     ಧರಣೀಶ ಸಖೇದಾಶ್ಚರ್ಯದ ಜೊತೆ ತನ್ನ ತಂಗಿಯ ಮಗ ಇಷ್ಟು ಎತ್ತರಕ್ಕೆ ಬೆಳೆದಿರುವುದನ್ನು ತಿಳಿದು ಸಂತಸಪಟ್ಟ. ತನಗೆ ಗೊತ್ತಿರುವ ಎಲ್ಲಾ ಸಂಗತಿಗಳನ್ನೂ ಹೇಳಿದರೆ ಮತ್ತಷ್ಟು ಹಣ ಸಿಗಬಹುದೆಂದೆಣಿಸಿ ತನ್ನ ತಂಗಿಯ ಬಗ್ಗೆ ಹೇಳತೊಡಗಿದ.

   “ನಮಗೆ ಆಸ್ತಿ ಅಂತ ಇರುವುದು ಈ ಮುರುಕು ಮನೆಯೊಂದೇ.ಅವರಿವರ ತೋಟದಲ್ಲಿ ಕೂಲಿ ಕೆಲಸ ಮಾಡುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ನಮ್ಮಪ್ಪ ಅಮ್ಮ ನನಗೆ ಓದಿಸಲು ಪ್ರಯತ್ನ ಪಟ್ಟರೂ ವಿದ್ಯೆ ನನ್ನ ತಲೆಗೆ ಹತ್ತಲಿಲ್ಲ. ಅಗಚಿಯ ವೆಂಕಟೇಶ ಯಾರೂ ದಿಕ್ಕಿಲ್ಲದವನು ಮತ್ತು ಕುಡುಕ ಅಂತ ಗೊತ್ತಿದ್ದರೂ ಮಂಗಳಿಯನ್ನು ಅವನಿಗೆ ಮದುವೆ ಮಾಡಿದರು. ವೆಂಕಟೇಶನೂ ಮದುವೆಗೆ ಹೆಣ್ಣು ಸಿಕ್ಕರೆ ಸಾಕು ಅಂತ ಇದ್ದ. ಏನೂ ಬೇಡಿಕೆ ಇಡದೆ ಧರ್ಮಸ್ಥಳದಲ್ಲಿ ಸರಳವಾಗಿ ಮದುವೆ ಆಗಲು ಒಪ್ಪಿದ.ನನ್ನದೂ ಮದುವೆ ಆಯಿತು.ಅಪ್ಪ ಅಮ್ಮ ಇಬ್ಬರೂ ತೀರಿಕೊಂಡರು.

   ನಮ್ಮ ಭಾವ ವೆಂಕಟೇಶ ಒಳ್ಳೆಯವನೇ.ಗಾರೆ ಕೆಲಸ ಚೆನ್ನಾಗಿ ಮಾಡುತ್ತಿದ್ದ ಅಂತ ಎಲ್ಲರೂ ಹೇಳುತ್ತಿದ್ದರು.ಆದರೇನು ಮಾಡುವುದು.ದುಡಿದ ಹಣವನ್ನೆಲ್ಲ ಕುಡಿತಕ್ಕೇ ಹಾಕುತ್ತಿದ್ದ.ಮಂಗಳಿ ಪೊನ್ನಪ್ಪ ಮಾಸ್ತರರ ತೋಟದಲ್ಲಿ ಕೆಲಸ ಮಾಡುತ್ತಾ ಸಂಸಾರ ನಿಭಾಯಿಸುತ್ತಿದ್ದಳು.

   ಮಂಗಳಿಗೆ ಗಂಡು ಮಗು ಆಯ್ತು.ಕಷ್ಟದಲ್ಲೂ ನಮ್ಮ ಮನೆಯಲ್ಲೇ ಇಟ್ಟುಕೊಂಡು ಬಾಣಂತನ ಮಾಡಿದೆವು. ನಮ್ಮ ಮನೆದೇವರಾದ ಹನುಮಂತನ ಹೆಸರನ್ನೇ ಇಟ್ಟೆವು.ನನ್ನ ತಂಗಿ ಇಲ್ಲಿದ್ದಾಗ ಭಾವ ಒಮ್ಮೆ ಬಂದಿದ್ದರು.ರಾತ್ರಿ ಕುಡಿದು ಏನೇನೋ ಮಾತಾಡಿದ್ದರು. ಕುಡಿತ ಬಿಡುವವರೆಗೂ ಹಾಸಿಗೆಗೆ ಸೇರಿಸುವುದಿಲ್ಲವೆಂದು ಶಪಥ ಮಾಡಿ ಎರಡು ವರ್ಷದಿಂದ ಜೊತೆಯಲ್ಲಿ ಮಲಗದಿದ್ದರೂ ಅವಳಿಗೆ ಮಗು ಆದದ್ದು ಹೇಗೆ ಅಂತ ದುಃಖಿಸಿ ಗೋಳಾಡಿದರು.ಹೊರಗೆ ಕೆಲಸಕ್ಕೆ ಹೋಗುತ್ತಾಳೆ.ಯಾರಿಗೆ ಹುಟ್ಟಿದೆಯೋ ಏನೋ ಅಂತ ಮಗುವಿನ ಮುಖವನ್ನೇ ನೋಡಲಿಲ್ಲ. ಮರ್ಯಾದೆಗಂಜಿ ಸುಮ್ಮನಿರುವುದಾಗಿ ಹೇಳಿದರು. ಕುಡುಕ ಎನ್ನುವ ಅಪವಾದದ ಜೊತೆಗೆ ಹೆಂಡತಿಯ ಹಾದರದ ವಿಷಯವೂ ಬಯಲಾದರೆ ಹೇಗೆ ಜನರನ್ನು ಎದುರಿಸುವುದು ಎಂಬ ಅಳುಕು ಇದ್ದಿರಬೇಕು.ನಾವಿದ್ದ ಪರಿಸ್ಥಿತಿಯನ್ನು ನೆನೆದು ನಾನೂ ಇದರ ಬಗ್ಗೆ ಹೆಚ್ಚು ಹಸ್ತಕ್ಷೇಪ ಮಾಡಲಿಲ್ಲ. ಹೆರಿಗೆಯಾದ ತಿಂಗಳಿಗೇ ಮಂಗಳಿಯನ್ನು ಅಗಚಿಗೆ ಬಿಟ್ಟು ಬಂದು ಸುಮ್ಮನಾದೆ.

    ಸ್ವಲ್ಪ ದಿನಗಳ ನಂತರ ಭಾವ ಸತ್ತರೆಂಬ ಸುದ್ಧಿ ಬಂತು.ಕುಡಿದ ಅಮಲಿನಲ್ಲಿ ನೀರಿನಲ್ಲಿ ಮುಳುಗಿ ಸತ್ತಿದ್ದಾನೆಂದೇ ಎಲ್ಲರ ಎಣಿಕೆಯಾಗಿತ್ತು.ಆದರೆ ನಿಸ್ಸಂದೇಹವಾಗಿ ಆತ್ಮಹತ್ಯೆ ಮಾಡಿಕೊಂಡು ಸತ್ತಿರುವುದಾಗಿ ನನಗೆ ಖಾತ್ರಿಯಿತ್ತು. ಹೆಚ್ಚು ಮಾತನಾಡಿದರೆ ಎಲ್ಲಾ ಜವಾಬ್ದಾರಿಯೂ ನನ್ನ ಮೇಲೆ ಬೀಳುತ್ತದೆಂದು ಸುಮ್ಮನಿದ್ದೆ.ನಮಗೇ ಸರಿಯಾಗಿ ಹೊಟ್ಟೆಗೆ ಹಿಟ್ಟಿಲ್ಲ. ಇನ್ನು ಮಂಗಳಿಯೂ ಮಗುವಿನೊಂದಿಗೆ ನಮ್ಮ ಮನೆ ಸೇರುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಅಂತ್ಯಕ್ರಿಯೆ ಮುಗಿದ ಮೇಲೆ ಪೊನ್ನಪ್ಪ ಮಾಸ್ತರರು ಮಂಗಳಿಗೆ ತಮ್ಮ ತೋಟದ ಮನೆಯಲ್ಲೇ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ ಮೇಲೆ ನಿರಾಳವಾಗಿ ಊರು ಸೇರಿದೆ.

   ಏಳೆಂಟು ವರ್ಷ ಏನೂ ಸಮಸ್ಯೆ ಇರಲಿಲ್ಲ.ಇದ್ದಕ್ಕಿದ್ದಂತೆ ಮಂಗಳಿಯ ಸಾವಿನ ಸುದ್ಧಿ ಬಂದಾಗ ಅಗಚಿಗೆ ಓಡಿ ಹೋದೆ. ಹನುಮಂತನ ಜವಾಬ್ದಾರಿಯನ್ನು ನನ್ನ ಹೆಗಲಿಗೇ ಕಟ್ಟುತ್ತಾರೇನೋ ಎಂಬ ಭಯವಿತ್ತು. ಪೊನ್ನಪ್ಪ ಮಾಸ್ತರರು ಅವನನ್ನು ಓದಿಸುವ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳಲು ನಿರ್ಧರಿಸಿದಾಗ ಖುಷಿಯಾಯ್ತು.ಮತ್ತೆ ಮಂಗಳಿಯ ಮಗನ ಬಗ್ಗೆ ನಾನು ವಿಚಾರಿಸಲೇ ಇಲ್ಲ. ಇವತ್ತು ನಿನ್ನನ್ನು ಈ ರೂಪದಲ್ಲಿ ನೋಡಿ ಆನಂದವಾಯ್ತು.ಆದರೆ ನಾವಿಟ್ಟಿದ್ದ ಹೆಸರು ಹನುಮಂತ

ಅಂತ. ಅದು ಹೇಮಂತ ಹೇಗಾಯ್ತು”.

    ಸಂಬಂಧದಲ್ಲಿ ಸ್ವತಃ ಸೋದರಮಾವನಾಗಬೇಕಾದ ಧರಣೀಶನ ಸ್ವಾರ್ಥದ ಬಗ್ಗೆ ಹೇಮಂತನಿಗೆ ಹೇಸಿಗೆಯಾಯಿತು. ಆದರೆ ಎರಡು ಮೂರು ದಶಕಗಳ ಹಿಂದಿನ ಕಥೆಯನ್ನು ನೆನೆದು ಈಗ ಯಾವ ಪ್ರಯೋಜನವೂ ಇಲ್ಲವೆಂದು ಸುಮ್ಮನಾದ. ಪೊನ್ನಪ್ಪ ಮಾಸ್ತರರು ತನ್ನನ್ನು ನೋಡಿಕೊಳ್ಳದೇ ಇದ್ದಿದ್ದರೆ ತನ್ನ ಬದುಕು ಏನಾಗುತ್ತಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂಬುದನ್ನು ನೆನೆದು ಅವರ ಬಗ್ಗೆ ಗೌರವ ಇನ್ನೂ ಹೆಚ್ಚಾಯಿತು. ಹೇಮಂತನ ಹೆಸರು ಬಂದಿದ್ದರ ಬಗ್ಗೆ ಹೇಳಿ ಮತ್ತೆ ಪೆನ್ನಂಗಳ ಎಂಬ ಪದದ ಮೂಲದ ಬಗ್ಗೆ ಕೇಳಿದ.ಧರಣೀಶನಿಗೆ ಅದೇನೆಂದು ಅರ್ಥವಾಗದೆ ಪಿಳಿಪಿಳಿ ಕಣ್ಣು ಬಿಟ್ಟ. ಧರಣೀಶನ ಅಪ್ಪ ಅಮ್ಮ ಸೋದರ ಸಂಬಂಧಿಗಳು ಮತ್ತು ಅವರ ಊರು, ಜಾತಿ ಎಲ್ಲದರ ಹೆಸರನ್ನು ಸುತ್ತಿ ಬಳಸೀ ವಿಚಾರಿಸಿದರೂ ಯಾವುದೂ ಪೆನ್ನಂಗಳ ಪದದ ಹತ್ತಿರಕ್ಕೂ ಬರಲಿಲ್ಲ.

   ಹೇಮಂತನಿಗೆ ತನ್ನ ಹುಡುಕಾಟದ ಕೊನೆಯನ್ನು ತಲುಪಿರುವುದು ಸ್ಪಷ್ಟವಾಗಿ ವೇದ್ಯವಾಯಿತು.ಇನ್ನಾರನ್ನೂ ವಿಚಾರಿಸುವುದಾಗಲೀ ಮತ್ತಾವ ಊರಿಗೆ ಭೇಟಿ ಕೊಡುವುದಾಗಲೀ ಉಳಿದಿಲ್ಲವೆಂಬುದು ಖಾತ್ರಿಯಾಗಿ ಮನಸು ಖಾಲಿಯಾದ ಅನುಭವವನ್ನು ನೀಡಿದಂತಾಯ್ತು.ತನ್ನ ಮನದಲ್ಲಿ ಅಸ್ಪಷ್ಟ ಚಿತ್ರಣವಾಗಿಯೂ ರೂಪುಗೊಳ್ಳದಿದ್ದ ಅಮ್ಮನೊಡನೆ ತೀರಾ

ಸ್ವಾರ್ಥಿಯಾಗಿ ನಡೆದುಕೊಂಡಿದ್ದರೂ ರಕ್ತ ಸಂಬಂಧದ ದೃಷ್ಟಿಯಿಂದ ಹಾಳಾಗಿ ಹೋಗಲಿ ಎಂದೆಣಿಸಿ ಹತ್ತು ಲಕ್ಷ ರೂಪಾಯಿಯ ಚೆಕ್ಕನ್ನು ಧರಣೀಶನ ಹೆಸರಿಗೆ ಬರೆದು ಅವನಿಗೊಪ್ಪಿಸಿ ಹೊರಡಲನುವಾದ.

     ಧರಣೀಶನಿಗೆ ವಾಸ್ತವವನ್ನು ಅರಗಿಸಿಕೊಳ್ಳಲಾಗಲಿಲ್ಲ.ತನ್ನ ತಂಗಿಯ ಮಗನನ್ನು ಸರಿಯಾಗಿ ಸತ್ಕರಿಸುವುದಿರಲಿ ಅವನ ವಿಳಾಸ ಅಥವಾ ದೂರವಾಣಿ ಸಂಖ್ಯೆ ಪಡೆಯುವುದನ್ನೇ ಮರೆತ.ಬೆರಗುಗಣ್ಣಿನಿಂದ ನೋಡುತ್ತಿದ್ದ ಶಿಶಿರನ ಜೊತೆ ಹೇಮಂತ ಹೊರಟುಹೋದ.

     ಕಮಟೀಹಳ್ಳಿಯಿಂದ ಅಗಚಿಗೆ ಬರುವವರೆಗೂ ಶಿಶಿರನೊಡನೆ ಒಂದು ಮಾತನ್ನೂ ಆಡಲಿಲ್ಲ. ಶಿಶಿರನನ್ನು ಅವನ ಮನೆಗೆ ಬಿಟ್ಟು ಬೆಂಗಳೂರಿನ ಕಡೆ ಪಯಣಿಸಿದ.ಅಗಚಿಯಿಂದ ಮಂಜಾಲದವರೆಗಿದ್ದ ಮಲೆನಾಡಿನ ಅಚ್ಚ ಹಸಿರಿನ ಸೌಂದರ್ಯ ಕಣ್ಣೆದುರಿಗಿದ್ದರೂ ಅದನ್ನು ಆಸ್ವಾದಿಸಲು  ಆಗದಷ್ಟು ಅನ್ಯಮನಸ್ಕನಾಗಿದ್ದ. ಧರಣೀಶ ಹೇಳಿದ ಸತ್ಯದಿಂದ ದಿಗ್ಮೂಢನಂತಾಗಿದ್ದ.ತನ್ನಮ್ಮ ಹೀಗೇಕೆ ಮಾಡಿದಳು.ಯಾರ ಜೊತೆ ಕೂಡಿ ತನ್ನ ಜನನವಾಯಿತು.ತನ್ನ ನಿಜವಾದ ತಂದೆ ಅಗಚಿಯ ಯಾವ ಗಂಡಸಾದರೂ ಆಗಿರಬಹುದು. ಪೊನ್ನಪ್ಪ ಮಾಸ್ತರರ ತೋಟದ ಕೆಲಸಕ್ಕೆ ಬರುತ್ತಿದ್ದ ಮತ್ತಾವ ಗಂಡಸೂ  ಆಗಿರಬಹುದು. ತಾನು ಅಕ್ರಮ ಸಂಬಂಧಕ್ಕೆ ಹುಟ್ಟಿದ್ದು ತಿಳಿದು ಖೇದವಾಯಿತು.ಇದನ್ನು ಇನ್ನೂ ಕೆದಕಿ ವಿಚಾರಿಸುತ್ತಾ ಹೋದಂತೆ ತನ್ನ ಮರ್ಯಾದೆ ಹಾಳಾಗುವುದು ನಿಚ್ಚಳವೆನಿಸಿತು.ತನ್ನ ಮಾವ ಧರಣೀಶ ಸತ್ಯ ಹೇಳದಿದ್ದರೂ ಅಗುತ್ತಿತ್ತು ಅಂತನಿಸಿ ಅವನ ಮೇಲೆ ಸಿಟ್ಟು ಬಂತು. ಎರಡು ದಿನದಿಂದ ಅವಿರತವಾಗಿ ಶ್ರಮಪಟ್ಟರೂ ತನ್ನ ಹೆಸರಿನ ಮೂಲ ಅಜ್ಞಾತವಾಗೇ ಉಳಿಯಿತಲ್ಲಾ ಎಂಬ ಬೇಸರದ ಜೊತೆಗೆ ತಾನು ಹಾದರಕ್ಕೆ ಹುಟ್ಟಿದವನು ಎಂಬ ಕ್ಷುದ್ರತೆಯ ಭಾವ ಗಟ್ಟಿಯಾದಂತಾಗಿ ಮ್ಲಾನವದನನಾದ.ತನ್ನ ಹೆಸರಿಗೆ ಅಂಟಿಕೊಂಡಿದ್ದ ಪೆನ್ನಂಗಳದ ಅರ್ಥವೇನು ಎಂಬುದರ ಮೂಲವನ್ನು ಹುಡುಕುತ್ತಾ ಹೊರಟವನಿಗೆ ತನ್ನ ಹುಟ್ಟಿನ ಅನರ್ಥದ ದರ್ಶನವಾಗಿ ಘಾಸಿಯಾದಂತಾಯಿತು. ಇದೇ ಆಲೋಚನೆಯಲ್ಲಿ ಮನಸು ಹುಚ್ಚೆದ್ದು ಕುಣಿದ ದಣಿವಿಗೆ ಹೇಮಂತನಿಗೆ ಕಾರಿನಲ್ಲೇ ನಿದ್ರೆ ಆವರಿಸಿತು.

   ಬೆಂಗಳೂರಿನ ತನ್ನ ಅಪಾರ್ಟ್ಮೆಂಟ್ ಸೇರಿದ ಮೇಲೆ ಹೇಮಂತನಿಗೆ ವಿಷಣ್ಣತೆಯ ಭಾವ ತುಂಬಿ ಬಂದಂತೆ ಆಯಿತು. ಮೊದಲಿನಿಂದಲೂ ಒಬ್ಬನೇ ಇದ್ದು ಅಭ್ಯಾಸವಾಗಿದ್ದ ಹೇಮಂತನಿಗೆ ಈಗ ನಿಜವಾದ ಒಂಟಿತನ ಕಾಡಲಾರಂಭಿಸಿತು.ತಾನು ಯಾರು ಎನ್ನುವ ಪ್ರಶ್ನೆಯ ಜೊತೆಗೆ ತನಗೆ ಯಾರೂ ಇಲ್ಲವೆಂಬ ಸತ್ಯ ಅಪ್ರಿಯವೆನಿಸಿತು.ತನ್ನ ಹೆಸರು ಹೇಮಂತನಾದದ್ದು ತಿಳಿಯಿತು,ಜಾತಿ ತಿಳಿಯಿತು,ಊರು ತಿಳಿಯಿತು,ತಾಯಿಯ ಬಗ್ಗೆ ತಿಳಿಯಿತು,ಸಂಬಂಧದ ಬಗ್ಗೆ ತಿಳಿಯಿತು,ಆದರೆ ತನಗೆ ಮುಖ್ಯವಾಗಿ ಬೇಕಾಗಿದ್ದ ಪೆನ್ನಂಗಳದ ಮೂಲ ಮಾತ್ರ ತಿಳಿಯಲಿಲ್ಲ.

    ಪೆನ್ನಂಗಳದ ಅರ್ಥ ದೊರಕಿದ್ದರೆ ತಾನು ಕಳೆದ ಎರಡು ದಿನದಿಂದ ಸುತ್ತಾಡಿ ಭೇಟಿ ಮಾಡಿದ ಜನರೊಡನೆ ಆಡಿದ ಮಾತುಗಳನ್ನು ಮತ್ತೆ ಮತ್ತೆ ನೆನೆದು ಪುಳಕಗೊಳ್ಳುತ್ತಿದ್ದ.ಆದರೆ ಈಗ ಆ ಪರಿಸ್ಥಿತಿ ಇರಲಿಲ್ಲ. ವಾಪಸ್ಸು ಬರುವಾಗ ಮಂಜಾಲದಲ್ಲಿ ಮಾರುತಿ ಸ್ಟೋರ್ಸಿಗೆ ಭೇಟಿ ನೀಡಿ ಅನಂತಕೃಷ್ಣರನ್ನು ಮಾತನಾಡಿಸಬೇಕು ಎಂದು ಯೋಚಿಸಿದ್ದ. ಆದರೆ ತನ್ನ ವಿಫಲ ಹುಡುಕಾಟದ ದೆಸೆಯಿಂದ ಆಸಕ್ತಿಯೇ ಮೂಡಲಿಲ್ಲ.

    ವಿಮಾನದಲ್ಲಿ ಭೇಟಿಯಾದ ನೈಜೀರಿಯಾದ ಮಹಿಳೆ ಬೆಂಗಳೂರಿನಲ್ಲೇ ಇರುವುದರಿಂದ ಅಚಾನಕ್ಕಾಗಿ ಎಲ್ಲಾದರೂ ಭೇಟಿಯಾಗಿ ಪೆನ್ನಂಗಳದ ಮೂಲ ಹುಡುಕಿದೆಯಾ ಎಂದು ಕೇಳಿಬಿಟ್ಟರೆ ಏನು ಮಾಡುವುದೆಂಬ ಭಯ ಕಾಡಿ ಅಸ್ವಸ್ಥನಾದ. ಮತ್ತೆ ಮುಂದಿನ ಪ್ರಯಾಣದ ವೇಳೆ ವಿಮಾನದಲ್ಲಿ ಸಿಕ್ಕಿಬಿಟ್ಟರೆ ಅಂತ ಮನಸಿಗೆ ಬಂತಾದರೂ ಹೇಗಾದರೂ ಮಾಡಿ ತಪ್ಪಿಸಿಕೊಂಡರಾಯಿತು ಎಂದು ಸಮಾಧಾನ ಪಟ್ಟುಕೊಂಡ.

  ಹೇಮಂತ ತನ್ನ ಉದ್ಯೋಗದ ಸಲುವಾಗಿ ಅನೇಕ ಸ್ತರದ ಜನರನ್ನು ಭೇಟಿ ಮಾಡುತ್ತಿದ್ದ. ಅದರಲ್ಲಿ ಕೆಲವರು ಏನಾದರೂ ಮಾತನಾಡಲೇಬೇಕೆಂಬ ಉಮೇದಿನಿಂದ ಸ್ವಂತ ಊರಿನ ಬಗ್ಗೆ, ತಂದೆತಾಯಿಗಳ ಬಗ್ಗೆ ಅಥವಾ ಸಂಬಂಧಿಗಳ ಬಗ್ಗೆ ಕೇಳಿದಾಗ ಕ್ವಚಿತ್ತಾಗಿ ಏನೋ ಉತ್ತರಿಸುತ್ತಿದ್ದನಾದರೂ ಮನಸ್ಸಿಗೆ ತಳಮಳವಾಗುತ್ತಿತ್ತು. ಈಗ ತನ್ನ ಹೆಸರಿಗೆ ಅಂಟಿಕೊಂಡಿರುವ ಪೆನ್ನಂಗಳದ ಅರ್ಥವನ್ನು ಯಾರಾದರೂ ಕೇಳಿದರೆ ದುಪ್ಪಟವಾಗಿ ತಳಮಳವಾಗುವುದು ಖಚಿತವಾಯಿತು.

   ತಾನೇಕೆ ಈ ವಿಷಯದಲ್ಲಿ ಹೆದರಿಕೊಳ್ಳಬೇಕು. ಏನೇನೋ ರಾದ್ಧಾಂತ ಮಾಡಿಕೊಳ್ಳುವವರು ಧೈರ್ಯದಿಂದ ಎದುರಿಸುವುದಿಲ್ಲವೆ. ಅಷ್ಟಕ್ಕೂ ಹೆಸರಿನಲ್ಲಿ ಏನಿದೆ.ಗುಲಾಬಿಯನ್ನು ಬೇರೆ ಹೆಸರಿಟ್ಟು ಕರೆದರೆ ಅದರ ಸಿಹಿ ಕಡಿಮೆಯಾದೀತೇ. ನಿಂಬೆಹಣ್ಣಿಗೆ ಬೇರೆ ಹೆಸರಿಟ್ಟರೆ ಅದರ ಹುಳಿಗೆ ಮುಕ್ಕು ಬಂದೀತೇ.ತನಗೆ ಯಾವ ಹೆಸರಿದ್ದರೂ ತನ್ನ ವ್ಯಕ್ತಿತ್ವ ಹಾಗೇ ಇರುತ್ತದೆ. ಹೀಗೆ ಯೋಚಿಸುತ್ತಾ ಸಮಾಧಾನ ಮಾಡಿಕೊಳ್ಳಲು ಪ್ರಯತ್ನಿಸಿದರೂ ಮತ್ತೆ ಮತ್ತೆ ನೈಜೀರಿಯಾದ ಮಹಿಳೆಯ ಚಿತ್ರ ಎದುರಿಗೆ ಬಂದು ಅಣಕಿಸಿದಂತೆ ಆಯಿತು.

   ಇದರಿಂದ ಪಾರಾಗಲು ಮತ್ತೊಂದು ದಾರಿ ಹೊಳೆಯಿತು. ತನ್ನ ಹೆಸರನ್ನೇ ಬದಲಿಸಿಕೊಂಡು ಪೆನ್ನಂಗಳ ಪದವನ್ನು ಬಿಟ್ಟುಬಿಟ್ಟರೆ ಹೇಗೆ ಎಂದು ಯೋಚಿಸಿದ.ಈಗ ಆ ಹೆಸರು ತನ್ನ ಎರಡೂ ಕಂಪನಿಗಳಲ್ಲಿ ಚಿರಪರಿಚಿತವಾಗಿರುವುದರಿಂದ ತಾನು ಬದಲಿಸಿಕೊಂಡರೂ ತನ್ನ ಸುತ್ತಲಿನ ಜನ ಅದೇ ಹೆಸರಿನಿಂದ ಕರೆಯುತ್ತಾರೆ ಮತ್ತು ಹೆಸರು ಬದಲಿಸಿಕೊಳ್ಳುವಾಗ ಯಾರಾದರೂ ಕಾರಣ ಕೇಳಿದರೆ ಏನೆಂದು ಹೇಳುವುದು ಎಂಬುದನ್ನು ನೆನೆದು ಆ ಯೋಜನೆಯನ್ನು ಮನಸ್ಸಿನಿಂದ ಕಿತ್ತೆಸೆದ.

    ಈ ಎಲ್ಲಾ ಗೊಂದಲ ತುಮುಲಗಳಿಂದಲೇ ಹೇಮಂತ ಯಾವುದಾದರೂ ಹುಡುಗಿಯನ್ನು ಪ್ರೀತಿ ಮಾಡುವುದಕ್ಕಾಗಲೀ ಅಥವಾ ಮದುವೆಯ ಪ್ರಯತ್ನವನ್ನು ಮಾಡುವುದಕ್ಕಾಗಲೀ ಹಿಂಜರಿದದ್ದು.  ಪೊನ್ನಪ್ಪ ಮಾಸ್ತರರ ಹೆಂಡತಿಯವರು ತನಗೆ ಮದುವೆ ಮಾಡಿಸಲು ಹುಡುಗಿಯನ್ನು ನೋಡುವುದಾಗಿ ಹೇಳಿದಾಗ ಮನಸ್ಸಿನಲ್ಲಿ ಹೊಸ ಬೆಳಕೊಂದು ಪ್ರತಿಫಲನವಾದಂತೆ ಅನಿಸಿದ್ದರೂ ಈಗ ಅದೆಲ್ಲ ಬೇಡವೆನಿಸಿತು.ಮದುವೆಯಾಗುವುದೇ ಬೇಡವೆಂಬ ತನ್ನ ನಿರ್ಧಾರ ಮತ್ತಷ್ಟು ಅಚಲವಾದಂತೆ ಅನಿಸಿ ನಿರ್ವಿಕಾರ ಮನಸ್ಥಿತಿಯಿಂದ ಕಾಲ ದೂಡುವ ತೀರ್ಮಾನಕ್ಕೆ ಬಂದ.

    ತುಮುಲಗಳಿಂದಲೇ ತುಂಬಿದ ಈ ಇಡೀ ಕಥೆಯನ್ನು ಓದಿದ ಯಾರಿಗಾದರೂ ಹೇಮಂತನಿಗೆ ಸಾಮಾನ್ಯ ಜ್ಞಾನ ಕಡಿಮೆ ಅಂತ ಅನಿಸುವುದರಲ್ಲಿ ಸಂಶಯವಿಲ್ಲ.ಸತ್ಯದ ಸುತ್ತ ವೃತ್ತಾಕಾರದಲ್ಲಿ ಸುತ್ತಾಡಿದನೇ ಹೊರತು ಸತ್ಯದ ಹುತ್ತಕ್ಕೆ ಕೈ ಹಾಕಲೇ ಇಲ್ಲ.

    ಮೊದಲನೆಯದಾಗಿ ಕನ್ನಡದ ಮಾಸ್ತರರಾಗಿದ್ದ ಪೊನ್ನಪ್ಪನವರು ತನ್ನ ಮಕ್ಕಳಿಗೆ ಋತುಗಳ ಹೆಸರನ್ನೇ ಇಟ್ಟಿದ್ದರು. ವಸಂತ ಮತ್ತು ಶಿಶಿರವಾದ ಮೇಲೆ ಹನುಮಂತ ಎಂಬ ಹೆಸರನ್ನು ಬದಲಿಸಿ ಹೇಮಂತನೆಂದು ಬದಲಾಯಿಸಿರುವುದು ಅಕಸ್ಮಿಕವಾಗೇನೂ ಅಲ್ಲ. 

   ಎರಡನೆಯದಾಗಿ ಹೇಮಂತನದು ವಿರಳವಾದ ಅಪರೂಪದ ರಕ್ತದ ಗುಂಪು.ಇದೇ ಕಾರಣದಿಂದ ಅವನು ತನ್ನ ಹೆಸರನ್ನು ಅನೇಕ ರಕ್ತನಿಧಿ ಕೇಂದ್ರಗಳಲ್ಲಿ ಮತ್ತು ಸ್ವಸಹಾಯ ಸಂಘಗಳಲ್ಲಿ ನೋಂದಾಯಿಸಿದ್ದ.ಆಗಾಗ್ಗೆ ಇವನ ಗುಂಪಿನ ರಕ್ತದ ಅವಶ್ಯಕತೆ ಇದ್ದ ತುರ್ತು ಸಂದರ್ಭಗಳಲ್ಲಿ ಇವನಿಗೆ ಕರೆಗಳು ಬಂದು ಅನೇಕ ಸಲ ರಕ್ತದಾನ ಮಾಡಿದ್ದಾನೆ.ಇವನು ಚಿಕ್ಕವನಿದ್ದಾಗ ಪೊನ್ನಪ್ಪ ಮಾಸ್ತರರು ಇವನಿಗೆ ರಕ್ತ ನೀಡಿದ್ದ ವಿಷಯ ತಿಳಿದಿದ್ದರೂ,ಅವರ ರಕ್ತ ಇವನಿಗೆ ಹೇಗೆ ಹೊಂದಿಕೆ ಆಯಿತೆಂಬುದರ ಬಗ್ಗೆ ಇವನು ಯೋಚಿಸಲೇ ಇಲ್ಲ.

     ಮೂರನೆಯದಾಗಿ ಮಂಗಳಮ್ಮನ ಗಂಡನ ಹೆಸರು ವೆಂಕಟೇಶ ಎಂಬುದು ಪೊನ್ನಪ್ಪ ಮಾಸ್ತರರಿಗೆ ತಿಳಿದಿತ್ತು.ಎಂತಹ ಕೆಟ್ಟವನಾದರೂ ಅಪ್ಪ ಅಪ್ಪನೇ.ಹೀಗಿದ್ದರೂ ಕೂಡ ಟಿಸಿಯಲ್ಲಿ ಅಪ್ಪನ ಹೆಸರಿನ ಮುಂದೆ ಖಾಲಿ ಬಿಡುವಂತೆ ಪೊನ್ನಪ್ಪ ಮಾಸ್ತರರು ಮಾಡಿದ್ದರ ಹಿಂದಿನ ಮರ್ಮವನ್ನು ಹೇಮಂತ ಅರ್ಥೈಸಲು ಪ್ರಯತ್ನಿಸಲೇ ಇಲ್ಲ.ವೆಂಕಟೇಶ ತನ್ನ ಅಪ್ಪನಲ್ಲ ಎಂದು ಹೇಳುವ ಸೂಚನೆಯೆಂಬುದು ಅವನಿಗೆ ತರ್ಕ ಮಾಡಲು ಆಗಲಿಲ್ಲ.

      ನಾಲ್ಕನೆಯದಾಗಿ ಹೇಮಂತನ ಟಿಸಿಯಲ್ಲಿ ಏನೋ ಬದಲಾವಣೆಯಾಗಬೇಕೆಂದು ಹಲುಬುತ್ತಿದ್ದ ಪೊನ್ನಪ್ಪ ಮಾಸ್ತರರು ಇದಕ್ಕಾಗಿ ಮಂಜಾಲದ ಪಾಲಿಟೆಕ್ನಿಕ್ ಕಾಲೇಜಿಗೆ ಅರ್ಜಿಯನ್ನೂ ನೀಡಿದ್ದರೆಂದು ಗೋವಿಂದಪ್ಪ ಮಾಸ್ತರರು ಹೇಳಿದ್ದರೂ ಹೇಮಂತ ಆ ಹೇಳಿಕೆಯ ಆಳಕ್ಕಿಳಿದು ಯೋಚಿಸಲಿಲ್ಲ.ಇಲ್ಲವಾದರೆ ಆ ಅರ್ಜಿಯನ್ನು ಹುಡುಕಬಹುದಿತ್ತು.ಹುಡುಕಿದ್ದರೆ ಪೆನ್ನಂಗಳ ಎಂಬುದನ್ನು ಪೊನ್ನಂಗಳ ಎಂದು ಬದಲಾವಣೆ ಆಗಬೇಕೆಂದು ಪೊನ್ನಪ್ಪ ಮಾಸ್ತರರ ಕೈ ಬರಹದಲ್ಲಿದ್ದ  ಅರ್ಜಿಯನ್ನು ನೋಡಬಹುದಿತ್ತು.

    ಕೊನೆಯದಾಗಿ ಮಾಧ್ಯಮಿಕ ಶಾಲೆಯಿಂದ ನೀಡಿದ ಟಿಸಿಯಲ್ಲಿ ಪೊನ್ನಂಗಳ ಎಂದು ಇದ್ದದ್ದು ಪ್ರೌಢಶಾಲೆಯ ಪ್ರವೇಶಾತಿಯನ್ನು ದಾಖಲಿಸುವಾಗ ಪೆನ್ನಂಗಳ ಎಂದು ಆಕಸ್ಮಿಕವಾಗಿ ಬದಲಾಗಿದ್ದು ಹೇಮಂತನ ಕಣ್ಣಿಗೆ ಬೀಳಲೇ ಇಲ್ಲ. ಬಹಶಃ ಆ ಸಮಯದಲ್ಲಿ ಈ ಕಾಗುಣಿತದ ಸಣ್ಣ ಪ್ರಮಾದ ಪೊನ್ನಪ್ಪ ಮಾಸ್ತರರ ಕಣ್ಣಿಗೂ ಬಿದ್ದಿರಲಿಕ್ಕಿಲ್ಲ.ಇಲ್ಲದಿದ್ದರೆ ಪೊನ್ನಪ್ಪ ಮತ್ತು ಮಂಗಳ ಪದಗಳ ಸಮ್ಮಿಳನದಿಂದಾದ ಪೊನ್ನಂಗಳವನ್ನು ಬದಲಾಯಿಸಲು ಖಂಡಿತವಾಗಿ ಬಿಡುತ್ತಿರಲಿಲ್ಲ.

   ಆದ್ದರಿಂದಲೇ ಹೇಮಂತನಿಗೆ ಸಾಮಾನ್ಯ ಜ್ಞಾನ ಕಡಿಮೆಯೆಂಬ ಅಭಿಪ್ರಾಯಕ್ಕೆ ಬಂದದ್ದು.ತನ್ನ ಬುದ್ಧಿಗೆ ಸ್ವಲ್ಪ ಕಸರತ್ತು ನೀಡಿದ್ದರೂ ಹೇಮಂತನಿಗೆ ಸತ್ಯದರ್ಶನವಾಗಿ ಗೊಂದಲಗಳು ದೂರವಾಗುತ್ತಿದ್ದವು.ಹೇಮಂತ ಬಾಲ್ಯದಿಂದಲೂ ತನ್ನ ಸಹಪಾಠಿಗಳೊಡನೆ ಚುಕ್ಕಿಯಾಟ ಆಡುವಾಗ ಸೋಲುತ್ತಿದ್ದ. ತನ್ನ ಕಣ್ಣೆದುರಿಗೇ ಸತ್ಯ ಸಂಗತಿಗಳು ಹಲವಾರು ಚುಕ್ಕಿಗಳಂತೆ ನಿಚ್ಚಳವಾಗಿ ಗೋಚರಿಸಿದರೂ ಅವುಗಳನ್ನು ಸೇರಿಸಿ ಚೌಕಗಳನ್ನು ಮಾಡುವುದರಲ್ಲಿ ಸೋತಿದ್ದ. ಬದುಕಿನ ಚುಕ್ಕಿಯಾಟದಲ್ಲಿ ಹೇಮಂತ ವಿಫಲನಾಗಿದ್ದ.


          

ಡಾ.ಕೆ.ಎಸ್.ಗಂಗಾಧರ

ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು

ಕಿವಿ ಮೂಗು ಗಂಟಲು ವಿಭಾಗ,ಮೆಗ್ಗಾನ್ ಆಸ್ಪತ್ರೆ

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ

ಸಾಗರ ರಸ್ತೆ,ಶಿವಮೊಗ್ಗ-೫೭೭೨೦೧

2 thoughts on “ಡಾ.ಕೆ.ಎಸ್.ಗಂಗಾಧರ ನೀಳ್ಗಥೆ-ಹೆಸರ ಮೂಲದ ಹಿಂದೆ

  1. Ganganna kathe thumba chennagidhe, javabdhari anno padha, dha chitrana dha moolagala arivu ponnappa master, swarthadhindha, istella madidhare, super agi kathe mudidhe

    1. ಪ್ರತಿಕ್ರಿಯೆಗೆ ಧನ್ಯವಾದಗಳು

Leave a Reply

Back To Top