ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ ಅವರ ಲೇಖನಿಯಿಂದ

ಮಂಡಲಗಿರಿ ಪ್ರಸನ್ನ ರವರ ಗಜಲ್ ಗಳಲ್ಲಿ ಅನುರಾಗದ ಅಲೆಗಳು

ಎಲ್ಲರಿಗೂ ನಮಸ್ಕಾರಗಳು, ಹೇಗಿದ್ದೀರಿ, ಮಸ್ತ್ ಮಜಾ ಮಾಡ್ತಾ ಇದ್ದೀರಿ ಅಂದುಕೊಂಡಿರುವೆ. ‘ಗುರುವಾರ’ ಬಂತೆಂದರೆ ತಾವೆಲ್ಲರೂ ಈ ಗಜಲ್ ಪಾಗಲ್ ನ ದಾರಿ ಕಾಯುವಿರೆಂಬುದು ಬಲ್ಲೆ. ತಮ್ಮ ನಿರೀಕ್ಷೆ ಯಾವತ್ತೂ ಹುಸಿ ಮಾಡಲಾರೆ. ಇಂದು ಮತ್ತೊಮ್ಮೆ ತಮ್ಮ ಮುಂದೆ ಗಜಲ್ ಗೋ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ಬಂದಿರುವೆನು! ನೀವು ಗಜಲ್ ಕಾರರ ಪರಿಚಯವನ್ನು ಆಸ್ವಾದಿಸುವುದು ನೋಡೋದೇ ಒಂದು ಚಂದ. ಮತ್ತೇಕೆ ವಿಳಂಬ, ಚಲೋ… ಏಕ್ ಷೇರ್ ಅರ್ಜ್ ಹೈ…!!

“ಹೇಯ್ ಜೀವನವೇ ನೀನು ನನಗೆ ಸಮಾಧಿಗಿಂತ ಕಡಿಮೆ ಭೂಮಿ ನೀಡಿದ್ದೀಯಾ
ನಾನು ನನ್ನ ಕಾಲುಗಳನ್ನು ಚಾಚಿದರೆ, ನನ್ನ ತಲೆಯು ಗೋಡೆಗೆ ತಾಕುತ್ತದೆ”
-ಬಶೀರ್ ಬಧ್ರ

    ಮನುಷ್ಯ ತನ್ನ ಜೀವನದುದ್ದಕ್ಕೂ ಸದಾ ನೆಮ್ಮದಿಯನ್ನು ಅರಸುತ್ತಲೆ ಇದ್ದಾನೆ, ಇರುತ್ತಾನೆ. ಈ 'ನೆಮ್ಮದಿ' ಎಂದರೇನು, ಇದು ಎಲ್ಲಿ, ಯಾವಾಗ, ಹೇಗೆ, ಯಾರಿಂದ ಸಿಗುತ್ತದೆ ಎಂದೆಲ್ಲ ಯೋಚಿಸಿದರೆ ಇರುವ ಅರೆಬರೆ ನೆಮ್ಮದಿಗೂ ಸಂಚಕಾರ ತಪ್ಪಿದ್ದಲ್ಲ. ಇದೊಂದು ಅಮೂರ್ತ ಭಾವವಗಳ ರೂಪ, ಅನುಭವಕ್ಕೆ ನಿಲುಕುವ ಅಂಜನಾದ್ರಿ. ಆದರೆ ಇದಕ್ಕೆ ನಾವು ಮೂರ್ತರೂಪ ನೀಡಲು ಹೆಣಗುತ್ತ ನಮ್ಮ ನೆಮ್ಮದಿಗೆ ನಾವೇ ಗೋರಿ ತೋಡುತಿದ್ದೇವೆ. ನೆಮ್ಮದಿಯ ನೀಲನಕ್ಷೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತ ಹೋಗುತ್ತದೆ. ಎಲ್ಲರಿಗೂ ಯಾವುದೇ ಒಂದು ವಸ್ತು, ವಿಷಯ ನೆಮ್ಮದಿ ನೀಡಲಾರದು. ಕೆಲವರಿಗೆ ಧ್ಯಾನ, ಪ್ರಾರ್ಥನೆ ನೆಮ್ಮದಿ ನೀಡಿದರೆ, ಮತ್ತೆ ಕೆಲವರಿಗೆ ವಿಶ್ವ ಪರ್ಯಟನೆ ನೆಮ್ಮದಿ ನೀಡಬಹುದು. ಇನ್ನೂ ಕೆಲವರಿಗೆ ತಮ್ಮನ್ನು ತಾವು ಅರಿತಾಗ ನೆಮ್ಮದಿ ದೊರೆಯಬಹುದು. ಇನ್ನೂ ಹಲವರು ಓದು-ಬರಹದ ಮುಖಾಂತರ ನೆಮ್ಮದಿಯ ತಾಣ ತಲುಪಬಹುದು. ಇವೆಲ್ಲವುಗಳು ಕೇವಲ ಸಾಧ್ಯತೆ ಮಾತ್ರ. ಯಾರಿಗೆ ಯಾವುದು, ಯಾವಾಗ, ಹೇಗೆ, ಏಕೆ ನೆಮ್ಮದಿ ನೀಡಬಲ್ಲದು-ನೀಡಲಾರದು ಎಂಬುದನ್ನು ನಿಕಷೆಗೆ ಹಚ್ಚಿ ಹೇಳಲಾಗದು. ಆದಾಗ್ಯೂ ಸಾಹಿತ್ಯ ಎನ್ನುವ ಕಾಮನಬಿಲ್ಲು ಕದಡಿದ ಮನಸುಗಳಿಗೆ ನೆಮ್ಮದಿ ನೀಡುತ್ತದೆ, ನೀಡಬಲ್ಲದು ಎಂಬುದು ಹಲವರ ಜೀವನದಿಂದ ಸಾಬೀತಾಗಿದೆ. ತಾತ್ಕಾಲಿಕ ವಿಷಯಗಳಿಂದ

ತುಂಬಿರುವ ಜಗತ್ತಿನಲ್ಲಿ ಸಾಹಿತ್ಯ ಎನ್ನುವುದು ಶಾಶ್ವತವಾದ ಭಾವನೆಯಾಗಿದೆ. ನಿಜವಾದ ಸಾಹಿತ್ಯ ಏನನ್ನೂ ಹೇಳುವುದಿಲ್ಲ; ಬದಲಿಗೆ ಸಾಧ್ಯತೆಗಳನ್ನು ಹೊರಹಾಕುತ್ತದೆ. ಎಲ್ಲಾ ಬಾಗಿಲುಗಳನ್ನು ತೆರೆಯುತ್ತದೆ. ನಮಗೆ ಸರಿಹೊಂದುವ ಯಾವ ಬಾಗಿಲ ಮೂಲಕವಾದರೂ ನಾವು ನಡೆಯಬಹುದು. ಇದು ಸಾಹಿತ್ಯದ ಶಕ್ತಿ. ಇಂಥಹ ಸಾಹಿತ್ಯದ ಮುಕುಟ ಮಣಿ ಎಂದರೆ ಅದು ಕಾವ್ಯ. ಕಾವ್ಯವು ನಮ್ಮ ಜೀವನದ ಸಾಕ್ಷಿಯಾಗಿದೆ. ನಮ್ಮ ಜೀವನದ ಅನುಭವವು ದಟ್ಟವಾಗಿದ್ದರೆ, ಕಾವ್ಯವು ಫಲವಂತಿಕೆಯಿಂದ ಕೂಡಿರುತ್ತದೆ. ಇದು ಫೀಲ್ ಕೊಡುವ ಮುಂಗಾರು ಮಳೆಯೇ ಹೊರತು ವಿವರಣೆಗೆ ದಕ್ಕುವಂತದ್ದಲ್ಲ. ಅಂತೆಯೇ ಅಮೇರಿಕನ್ ಬರಹಗಾರ, ಕವಿ, ಸಂಪಾದಕ ಮತ್ತು ಸಾಹಿತ್ಯ ವಿಮರ್ಶಕರಾದ ಎಡ್ಗರ್ ಅಲನ್ ಪೋ ರವರು ಕಾವ್ಯ ಕುರಿತು ಹೇಳಿರುವ “ಪದಗಳಲ್ಲಿ ಸೌಂದರ್ಯದ ಲಯಬದ್ಧ ಸೃಷ್ಟಿಯೇ ಕಾವ್ಯ” ಎಂಬುದು ದಿಟವೆನಿಸುತ್ತದೆ. ಇಂಥಹ ಕಾವ್ಯದ ಹಲವು ಆಯಾಮಗಳಲ್ಲಿ ಉರ್ದು ಕಾವ್ಯ ರಾಣಿ ಗಜಲ್ ಸಹೃದಯ ಓದುಗರ ನಾಡಿಮಿಡಿತವಾಗಿದೆ. ಅರಬ್ ಮರುಭೂಮಿಯ ಈ ಹೂವು ಕನ್ನಡದ ಕಸ್ತೂರಿ ಮಣ್ಣಿನಲ್ಲಿ ಹುಲುಸಾಗಿಯೆ ಬೆಳೆಯುತ್ತಿದೆ. ಅಸಂಖ್ಯಾತ ಬರಹಗಾರರು ಗಜಲ್ ನ ಕೋಮಲತೆಗೆ ಮನಸೋತು ಗಜಲ್ ಕೃಷಿಯಲ್ಲಿ ನಿರತರಾಗಿದ್ದಾರೆ. ಅಂಥವರಲ್ಲಿ ಶ್ರೀ ಮಂಡಲಗಿರಿ ಪ್ರಸನ್ನ ಅವರೂ ಒಬ್ಬರು.

    ಸಾರಸ್ವತ ಲೋಕದಲ್ಲಿ ಸಾಹಿತಿಯಾಗಿ ಗುರುತಿಸಿಕೊಂಡಿರುವ ಶ್ರೀ ಮಂಡಲಗಿರಿ ಪ್ರಸನ್ನ ರವರು ಅವಿಭಜಿತ ರಾಯಚೂರು ಜಿಲ್ಲೆಯ (ಈಗಿನ ಕೊಪ್ಪಳ ಜಿಲ್ಲೆ) ಕನಕಗಿರಿಯಲ್ಲಿ ಶ್ರೀ ಕಲ್ಯಾಣರಾವ್ ಮತ್ತು ಶ್ರೀಮತಿ ಲಲಿತಮ್ಮ ದಂಪತಿಗಳ ಮಗನಾಗಿ ೧೯೬೩ ರ ಅಕ್ಟೋಬರ್‌ ೧೮ರಂದು ಜನಿಸಿದರು. ಓದಿದ್ದು ಇಂಜಿನಿಯರಿಂಗ್ ಹಾಗೂ ವೃತ್ತಿಯಿಂದ ಇಂಜಿನಿಯರ್ ಆದ ಶ್ರೀಯುತರು ಪ್ರವೃತ್ತಿಯಿಂದ ಉತ್ತಮ ಬರಹಗಾರರು. ಇವರು ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು ಪತ್ರಕರ್ತರಾಗಿಯೂ ಕೆಲವರ್ಷ ಸೇವೆಯನ್ನು ಸಲ್ಲಿಸಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಓದು-ಬರಹದೊಂದಿಗೆ ಹೆಜ್ಜೆ ಹಾಕುತ್ತಿರುವ ಮಂಡಲಗಿರಿ ಪ್ರಸನ್ನ ರವರು ಕಾವ್ಯ, ಕಥೆ, ಹೈಕು, ಮಕ್ಕಳ ಕಾವ್ಯ, ಲಲಿತ ಪ್ರಬಂಧ, ಮಕ್ಕಳ ನಾಟಕ, ನಾಟಕ, ಮಕ್ಕಳ ಕಾದಂಬರಿ, ವಿಮರ್ಶೆ, ಲೇಖನ, ಸಂಪಾದನೆ ಹಾಗೂ ಗಜಲ್ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ, ಬರುತ್ತಿದ್ದಾರೆ. ಇಲ್ಲಿಯವರೆಗೆ ಇವರು ಒಟ್ಟು ೧೪ ಕೃತಿಗಳನ್ನು ಪ್ರಕಟಿಸಿದ್ದು, ಅವುಗಳಲ್ಲಿ ೫ ಮಕ್ಕಳ ಕೃತಿಗಳಿವೆ. 'ಕನಸು ಅರಳುವ ಆಸೆ', (ಕವಿತೆ-೨೦೦೦), 'ಅಮ್ಮ ರೆಕ್ಕೆ ಹಚ್ಚು', (ಮಕ್ಕಳ ಕವಿತೆ-೨೦೦೩), 'ನಿನ್ನಂತಾಗಬೇಕು ಬುದ್ಧ', (ಕವಿತೆ-೨೦೧೬), 'ಏಳು ಮಕ್ಕಳ ನಾಟಕಗಳು', (ಮಕ್ಕಳ ನಾಟಕ-೨೦೧೬), 'ಪದರಗಲ್ಲು' (ಸಂಪಾದನೆ-೨೦೦೯), 'ನಾದಲಹರಿ', (ಸಂಪಾದನೆ-೨೦೧೦), 'ಕವಿರಾಜ', (ಸಂಪಾದನೆ-೨೦೧೨), 'ಮಕ್ಕಳ ಸಾಹಿತ್ಯ', (ಸಂಪಾದಿತ ಕೃತಿ-ಕರ್ನಾಟಕ ಸಾಹಿತ್ಯ ಅಕಾಡೆಮಿ-೨೦೧೯), 'ನೀನೊಲಿದಡೆ', (ಸಂಪಾದಿತ ಕಾವ್ಯ-೨೦೨೧), 'ಹೊಳೆದಂಡೆ ಮತ್ತು ಬೆಳ್ಳಕ್ಕಿಗಳು', (ಮಕ್ಕಳ ಕಾವ್ಯ-೨೦೨೧), ನನ್ನ ಪ್ರಯಾಸ ಕಥನಗಳು-ಲಲಿತ ಪ್ರಬಂಧ- (೨೦೨೨) ಹಾಗೂ 'ನಿದಿರೆ ಇರದ ಇರುಳು', ಎಂಬ ಗಜಲ್ ಸಂಕಲನ (೨೦೨೨)... ಮುಂತಾದ ಹಲವು ಸಾಹಿತ್ಯ ಪ್ರಕಾರಗಳ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವುಗಳೊಂದಿಗೆ 'ಹಳ್ಳಿ ಹಾದಿಯ ಹೂ', ಎಂಬ ಮಕ್ಕಳ ಕಾದಂಬರಿ, 'ಮಹಾಮನೆ', ಎಂಬ ನಾಟಕ ಕೃತಿಗಳು ಪ್ರಕಟಣೆಗೆ ಸಿದ್ದವಾಗಿವೆ. 

   ತಮ್ಮ ವೃತ್ತಿಯೊಂದಿಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರುವ ಶ್ರೀ ಮಂಡಲಗಿರಿ ಪ್ರಸನ್ನ ರವರ ಹಲವಾರು ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಉತ್ತಮ ಸಂಘಟಕರಾಗಿರುವ ಇವರು ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇವರ `ಅಮ್ಮ ರೆಕ್ಕೆ ಹಚ್ಚು’ ಸಂಕಲನದ `ಅಮ್ಮ ರೆಕ್ಕೆ ಹಚ್ಚು’ ಮಕ್ಕಳ ಕವಿತೆ ೨೦೦೭-೨೦೧೭ ರವರೆಗೆ ಮಹಾರಾಷ್ಟ್ರ ಪಠ್ಯಕ್ಕೆ ಆಯ್ಕೆಯಾಗಿ ಮರಾಠಿ ಕನ್ನಡ ಭಾರತಿ ಪಠ್ಯದಲ್ಲಿ ಸೇರ್ಪಡೆಯಾಗಿರುವುದನ್ನು ಇಲ್ಲಿ ಗಮನಿಸಬಹುದು. ಇವರಿಗೆ ನಾಡಿನ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿವೆ. ಅವುಗಳಲ್ಲಿ ವಿಜಯಪುರ ಜಿಲ್ಲೆಯ ೩೦೦೩ ರ `ಮಕ್ಕಳ ಸಾಹಿತ್ಯ ರತ್ನ ಪ್ರಶಸ್ತಿ’, ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ `ಶಿಕ್ಷಣ ಸಿರಿ’ ಪ್ರಶಸ್ತಿಗಳು ಪ್ರಮುಖವಾಗಿವೆ. ರಾವೂರ ವಲಯದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಲಭಿಸಿದೆ. 

   ಮನುಷ್ಯ ಸದಾ ಸಂತೋಷಕ್ಕಾಗಿ ಹಂಬಲಿಸುತಿದ್ದರೂ ಒಳಗಡೆಯ ಸುಪ್ತ ಮನಸ್ಸು ನೋವಿನ ದೇಹಲೀಜ್ ದಾಟುತ್ತ ಅಲ್ಲಿಯೇ ಸುತ್ತುತ್ತಿರುತ್ತದೆ! ಇದು ವೈರುಧ್ಯ ಅನಿಸಿದರೂ ಸಹ ಸತ್ಯ. ಇಂಥಹ ನೋವನ್ನು ನೋಯಿಸದೆ, ನೋವನ್ನೂ ಪ್ರೀತಿಸುವಂತೆ ಮಾಡುವ ಅದಮ್ಯ ಶಕ್ತಿ ಇರೋದು ಮಾತ್ರ ನಮ್ಮ ಗಜಲ್ ಗೆ ಎಂದರೆ ಅತಿಶಯೋಕ್ತಿಯಾಗದು. ಕಾರಣ ನೋವಿನ ಕುಲುಮೆಗೆ ಅಗ್ನಿಯ ರೆಕ್ಕೆಗಳು ಮೂಡುವುದೇ ನಮ್ಮವರಿಂದ. ದ್ರೋಹ ಯಾವಾಗಲೂ ನಾವು ಬಹಳಷ್ಟು ನಂಬುವ ಜನರಿಂದಲೇ ಬರುತ್ತದೆ. ಜೀವನವೇ ಹಾಗೆಯಲ್ಲವೆ. ಕೆಲವೊಮ್ಮೆ ಸಿಹಿಯಾಗಿರುವ ಭಾಗಕ್ಕೆ ನಾವು ಬರಬೇಕಾದರೆ ಕಹಿಯನ್ನು ದಾಟಿ ಬರಲೆಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ನಮಗೆ ಕಂಬನಿಯ ಕಡಲಿನಲ್ಲಿ ದೋಣಿ ಚಲಾಯಿಸುವ ಹುನರ್ ಅನ್ನು ನಮಗೆ ಕಲಿಸಿಕೊಡುತ್ತದೆ. ಕಣ್ಣೀರಲ್ಲಿಯೂ ಪನ್ನೀರಿನ ಹೆಜ್ಜೆ ಗುರುತುಗಳನ್ನು ಹುಡುಕುವ ಕಲೆ ಗಜಲ್ ಗೆ ಕರಗತವಾಗಿದೆ. ಸುಖನವರ್ ಮಂಡಲಗಿರಿ ಪ್ರಸನ್ನ ರವರ ಗಜಲ್ ಗಳಲ್ಲಿ ನೆನಪು, ಪ್ರಕೃತಿಯ ಹಲವು ವಿಸ್ಮಯಗಳು, ಬೆಳಗಿನ ರಂಗೋಲಿ, ಹೂವುಗಳು, ಕನಸು, ಪ್ರೇಮ, ವಿರಹ, ತ್ಯಾಗ, ವಂಚನೆ, ತೃಪ್ತಿ... ಹೀಗೆ ಮನುಷ್ಯ ಮತ್ತು ಪರಿಸರದ ಸಾವಯವ ಸಂಬಂಧವನ್ನು ಸಾರುವ ವೈವಿಧ್ಯಮಯ ವಿಷಯಗಳಿವೆ. ಇವುಗಳೊಂದಿಗೆ ನಿದ್ದೆಗೆಡಿಸುವ ಯಾತನೆಗಳು, ಮನುಷ್ಯನ ಒಳ ಸಂಕಟಗಳ ಭಾವನೆಗಳನ್ನು ಗಜಲ್‌ಗಳ ಉದ್ದಕ್ಕೂ ಕಾಣಬಹುದು. 

“ಕಣ್ಣಾಲಿ ನೀರು ಮಡುಗಟ್ಟಿ ಕತಕತನೆ ಕುದ್ದು ಆವಿಯಾಗುತಿದೆ
`ಗಿರಿ’ ಒಡಲ ಗಾಯಗಳನು ಒಂದಷ್ಟಾದರೂ ಮಾಯಲು ಬಿಡು”

ನೀರು ಆವಿಯಾಗುವುದು, ಆವಿಯಾದ ನೀರು ಮೋಡವಾಗುವುದು, ಮೋಡ ಮಳೆಯಾಗಿ ಸುರಿಯುವುದು… ಇದೆಲ್ಲ ಚಕ್ರದಂತೆ ನಮಗೆ ಭಾಸವಾಗುತ್ತದೆ. ಈ ಚಕ್ರದ ಮೂಲವೆಂದರೆ ‘ನೀರು’. ಮನುಷ್ಯನ ಬದುಕಿನ ಸ್ಥಾಯಿ ಭಾವವೆಂದರೆ ಕಣ್ಣೀರು, ನೋವು, ಗಾಯ… ಎಂದೆಲ್ಲ ಹೇಳಬಹುದು. ಇಲ್ಲಿ ಶಾಯರ್ ಪ್ರಸನ್ನ ಅವರು ಮೇಲಿನ ಷೇರ್ ನಲ್ಲಿ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿರುವ ಕಂಬನಿಯ ಕಿನಾರೆಯನ್ನು ತಮ್ಮ ಭಾವದೀಪ್ತಿಯಲ್ಲಿ ಸೆರೆಹಿಡಿದು, ಗಾಯ ಮಾಯಲು ಒಂದಿಷ್ಟು ಪುರುಸೊತ್ತನ್ನು ಬೇಡಿರುವುದು ಅನುಪಮವೆನಿಸುತ್ತದೆ.

“ನಯನಗಳೀಗ ಸೋತಿವೆ ದಣಿವು ಮರೆತು ನಿದಿರೆಗೆ ಜಾರಬೇಕೆಂದಿದ್ದೆ
ಹಾಸಿಗೆಯಲೂ ಮುಳ್ಳು ಕಾಣುತಿದ್ದೇನೆ ಈ ಯಾತನೆಗೆ ಕೊನೆಯೆಂದು”

ಮನುಷ್ಯನ ಆರೋಗ್ಯದಲ್ಲಿ ನಿದಿರೆಯ ಪಾತ್ರ ಅನನ್ಯ. ಆದರೆ ಆಧುನಿಕತೆಯ ಭೋಗ ಸಂಸ್ಕೃತಿಯಲ್ಲಿ ನಾವು ಇರುಳನ್ನೂ ಹಗಲನ್ನಾಗಿ ಪರಿವರ್ತಿಸಿದ್ದೇವೆ. ಇದುವೇ ಅಭ್ಯಾಸವಾಗಿ ಬೆಳೆಯುತ್ತಿರುವುದರಿಂದ ನಾವುಗಳು ನಿದ್ದೆಗೆ ಜಾರುವುದು ಸಹ ಸುಲಭದ ಮಾತಲ್ಲ. ನಿದಿರೆಗೂ ಪುಣ್ಯ ಮಾಡಿರಬೇಕು ಎಂಬ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಮಾತು ಕೇವಲ ಹಾಸಿಗೆಯಲಿ ಉರುಳಾಡುವ ದೇಹಕ್ಕೆ ಮೀಸಲಲ್ಲ, ಬದಲಿಗೆ ಇದು ಅಂತಹ ವ್ಯಕ್ತಿಯ ಮಾನಸಿಕ ಸ್ಥಿತಿಗೂ ಅನ್ವಯಿಸುತ್ತದೆ. ನಿದಿರೆ ಹತ್ತಿರವೂ ಸುಳಿಯುವುದಿಲ್ಲ ಎಂದರೆ ಅದಕ್ಕೆ ಬಾಹ್ಯ ಕಾರಣಗಳ ಜೊತೆಗೆ ಆಂತರಿಕ ಸಂಗತಿಗಳು ಸಹ ಇರುತ್ತವೆ ಎಂಬುದನ್ನು ಮರೆಯಲಾಗದು. ಇಲ್ಲಿ ಸುಖನವರ್ ಅವರು ಮನುಷ್ಯ ಹೇಗೆ ನಿದಿರೆಯೆಂಬ ಅಮೃತದಿಂದ ವಂಚಿತನಾಗಿ ಹೇಗೆ ಒದ್ದಾಡುತಿದ್ದಾನೆ ಎಂಬುದನ್ನು ತುಂಬಾ ಸರಳವಾಗಿ ಹಾಗೂ ತೀಕ್ಷ್ಣವಾಗಿ ಕಟ್ಟಿಕೊಟ್ಟಿದ್ದಾರೆ.

    ನಗುವಿನ ಬೆಲೆ, ಅದರ ಮಹತ್ವ ತಿಳಿಯಬೇಕಾದರೆ, ಕೊನೆಯವರೆಗೂ ಚಿರ ಹಸಿರಾಗಿ ಉಳಿಯಬೇಕಾದರೆ ನೋವು ನಮ್ಮ ಬಾಳಿನ ಪುಟಗಳಲ್ಲಿ ಅಚ್ಚರಿಯ ದಾಖಲೆಯನ್ನು ಮೂಡಿಸಿರಬೇಕು. ಈ ನೆಲೆಯಲ್ಲಿ ಗಜಲ್ ಲಾವಾರಸದ ಮಧ್ಯೆ ಜಿನುಗುವ ತುಂತುರು ಮಳೆಯಂತೆ! ಇಂಥಹ ಗಜಲ್ ಗಳು ಗಜಲ್ ಗೋ ಶ್ರೀ ಮಂಡಲಗಿರಿ ಪ್ರಸನ್ನ ಅವರಿಂದ ಮತ್ತಷ್ಟು ಮೊಗೆದಷ್ಟೂ ರಚನೆಯಾಗಲಿ, ಅವುಗಳು ಸಂಕಲನ ರೂಪ ಪಡೆದು ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ. 

“ಸಾವನ್ನು ಸಹ ಗುಣಪಡಿಸಬಹುದು
ಜೀವನಕ್ಕೆ ಯಾವುದೇ ಚಿಕಿತ್ಸೆ ಇಲ್ಲ”
-ಫಿರಾಕ್ ಗೋರಕಪುರಿ

‘ಕಾಲ’ವನ್ನು ತಡೆಯಲು, ಹಿಡಿಯಲು ಆದೀತೆ ಯಾರಿಂದಲಾದರೂ, ನೋ… ಅಲ್ಲವೇ. ನಾವೆಲ್ಲರೂ ಸಮಯದ ಮುಂದೆ ಮಂಡಿಯೂರಲೆಬೇಕು!! ಸರಿ, ಇರಲಿ ಪರವಾಗಿಲ್ಲ; ಬೇಸರ ಬೇಡ, ಇದೆಲ್ಲ ಸರ್ವೇ ಸಾಮಾನ್ಯ. ಮತ್ತೆ ಮುಂದಿನವಾರ, ಇದೇ ಗುರುವಾರದಂದು ನಾನು ತಮ್ಮ ಮುಂದೆ ಬರುವೆ, ಅಲ್ಲಿಯವರೆಗೆ ಬಾಯ್, ಟೇಕ್ ಕೇರ್…!!

ನಮಸ್ಕಾರಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top