ಅನುರಾಧಾ ಶಿವಪ್ರಕಾಶ್ ಕವಿತೆ-ಮಗು ತಾಯೆಯೆದೆಯ ನಗು

ಕಾವ್ಯ ಸಂಗಾತಿ

ಅನುರಾಧಾ ಶಿವಪ್ರಕಾಶ್

ಮಗು ತಾಯೆಯೆದೆಯ ನಗು

ಮಗುವೆ ನಿನ್ನ ವದನದಲ್ಲಿ
ಮುದ್ದು ಸುರಿಯುತಿರುವುದು
ಅದನು ಕಂಡ ತಾಯ ಎದೆಯು
ಅರಳಿ ನಗುತಲಿರುವುದು

ನಿನ್ನ ಆಟ ಪಾಠಗಳಲಿ
ನನ್ನ ಸಮಯ ಕಳೆಯಿತು
ಬಾಲ ಭಾಷೆ ತೊದಲು ನುಡಿಯು
ಅಮೃತಗಾನ ವಾಯಿತು

ನಗುವೊ ಅಳುವೋ ಎಲ್ಲ ಚಂದ
ನನ್ನ ದುಗುಡ ಮರೆಯಿತು
ಬಿಗುವೊ ಸೊಗವೊ ಮುಗ್ಧ ಭಾವ
ತಾಯಿ ಹೃದಯ ತಣಿಸಿತು.

ಹಗಲು ಇರುಳೊ ಪರಿವೆ ಇಲ್ಲ
ನಿನ್ನ ಲಾಲಿ ಹಾಡಲು
ಊಟ ನಿದ್ದೆ ಒಂದೂ ಬೇಡ
ನಿನ್ನ ಜೊತೆಗೆ ಕಳೆಯಲು

ನಿನ್ನ ಹಠವ ರಮಿಸಲಿಕ್ಕೆ
ಯಾವ ತಂತ್ರ ಫಲಿಸದು
ಅಳುವ ದನಿಯ ಸುಮ್ಮನಿರಿಸೆ
ಪಟ್ಟ ಪಾಡು ತೀರದು


Leave a Reply

Back To Top