ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೆ ಒಂದಿಷ್ಟು ಹೊತ್ತು

ಮೆಲು ತಂಗಾಳಿ : ಕಾದಂಬರಿ


ಲೇಖಕಿ : ಸಾಯಿಸುತೆ

ಮೆಲು ತಂಗಾಳಿ : ಕಾದಂಬರಿ
ಲೇಖಕಿ : ಸಾಯಿಸುತೆ
ಪ್ರಕಾಶಕರು : ಸುಧಾ ಎಂಟರ್ ಪ್ರೈಸಸ್ ಮೊದಲನೆಯ ಮುದ್ರಣ : ಆಗಸ್ಟ್ ೨೦೨೧

ಗೂಢ ಎರಡುಬಾಯಿಯ ಖಡ್ಗ
ಏನು ಅದು ಹೊರ ಚೆಲುವು
ಸಿಪ್ಪೆ ಚಪ್ಪರಿಸಿ ಕೆಟ್ಟಿತು ಕಣ್ಣು
ತಿರುಳನೇ ಹಂತದ ಕನಸು ಸಾಲದೇ
ಎರಡು ಬಾಯಿಯ ಖಡ್ಗ
ಗೋಪಾಲಕೃಷ್ಣ ಅಡಿಗ

ಸಾಯಿಸುತೆ ಮೇಡಮ್ ಅವರ ಹೊಸ ಕಾದಂಬರಿ ಬಿಡುಗಡೆಯಾದೊಡನೆಯೇ ಹೇಳಿಟ್ಟು ತರಿಸಿಕೊಂಡಿದ್ದೆ. ತಕ್ಷಣ ಓದದೇ ಇರಲು ಸಾಧ್ಯವೇ? ಅಂತೂ ತಲುಪಿದ ಎರಡನೇ ದಿನಕ್ಕೆ ಓದಿ ಮುಗಿಸಿದೆ .ಸಾಯಿಸುತೆಯವರ ಸಿಗ್ನೇಚರ್ ಟಚ್ ಇರುವ ಕಥೆ .ಮೇಲು ಮಧ್ಯಮ ಕುಟುಂಬ ಆದರೆ ಪ್ರೀತಿ ಪ್ರೇಮದ ಸುತ್ತ ತಿರುಗದ ಜೀವನದ ಸಂಜೆಯಲ್ಲಿ ಸಿಲುಕಿದ ಸಂಬಂಧದ ಸುಳಿಯ ಕಥೆ_ವ್ಯಥೆ .ಸಮಕಾಲೀನ ಬದುಕನ್ನು ಸದಾ ಅವಲೋಕಿಸುವ ಲೇಖಕಿಯವರ ಚಿರಂತನವಾದ ವಾಸ್ತವಿಕ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿ .

ಬೆಂಗಳೂರಿನ ಪ್ರತಿಷ್ಟಿತ ಭೂಮಿಕಾ ಅಪಾರ್ಟ್ ಮೆಂಟ್ ನ ನಿವಾಸಿಗಳು ಮತ್ತು ಆಪ್ತ ಸ್ನೇಹಿತರು ಆದ ಅರವಿಂದ್ ಕೌಶಿಕ್ ಮೃದುಲಾ ಹಾಗೂ ಮೋಹನ್ ವಿಶ್ವ ಶ್ವೇತಾ ದಂಪತಿಗಳ ಕಥೆ . ಅರವಿಂದರ ಪತ್ನಿ ಮೃದುಲಾ ಮೋಹನ್ ವಿಶ್ವರ ಆಫೀಸಿನಲ್ಲೇ ಮೊದಲಿನಿಂದ ಕೆಲಸ ಮಾಡುವವಳು . ವಸುಧಾ ಮತ್ತು ವಸುಧೇಂದ್ರ ಅರವಿಂದ ಮೃದುಲಾರ ಅವಳಿ ಮಕ್ಕಳು .ಅರವಿಂದನ ಷಷ್ಠಿಪೂರ್ತಿ ಶಾಂತಿಯ ದಿನವೇ ಮೃದುಲಾ ಹೃದಯಾಘಾತದಿಂದ ಮರಣಿಸುತ್ತಾಳೆ. ಮಗಳು ವಸುಧಾ ದೂರದ ಮಲೆನಾಡಿನ ಅತ್ತೆಮನೆಯಲ್ಲಿ. ವಸುಧೇಂದ್ರ ಮತ್ತು ಸೊಸೆ ನಿಶ್ಚಿತ ಕಾಂಟ್ರ್ಯಾಕ್ಟ್ ಪ್ರಕಾರ ಅಮೇರಿಕಕ್ಕೆ ಹೊರಡಲೇಬೇಕು .ಏಕಾಂಗಿಯಾದ ಅರವಿಂದ ಮೃದುಲಾಳ ಸಾವಿನ ಎರಡೂವರೆ ವರ್ಷದ ಬಳಿಕ ಲೂಸಿಯಾ ಎಂಬುವವರ ಆಕರ್ಷಣೆಗೆ ಬಿದ್ದು ಲಿವ್ ಇನ್ ರಿಲೇಶನ್ ನಲ್ಲಿ ಇರುತ್ತಾನೆ .ಕಾಲಕ್ರಮೇಣ ಅದು ಮೋಹನ್ ವಿಶ್ವ ಶ್ವೇತಾ ಮತ್ತು ಅಪಾರ್ಟ್ ಮೆಂಟ್ ನವರ ಗಮನಕ್ಕೂ ಬೀಳುತ್ತದೆ .ಮಗಳು ವಸುಧಾಗೂ ಅದರ ಸುಳಿವು ಸಿಕ್ಕಿರುತ್ತದೆ .ಇದ್ಯಾವುದೂ ತಿಳಿಯದ ವಸುದೇಂದ್ರ ಕಾಂಟ್ರಾಕ್ಟ್ ಅವಧಿ ಮುಗಿದ ತಕ್ಷಣ ಒಬ್ಬಂಟಿ ತಂದೆಯ ಜತೆಗಿರಲು ಭಾರತಕ್ಕೆ ಕುಟುಂಬ ಸಮೇತ ವಾಪಸಾಗುತ್ತಾನೆ
ಅಲ್ಲಿಂದ ಆರಂಭವಾಗುವ ಕಾದಂಬರಿ ಹಣದ ಮೇಲೆ ಅವಲಂಬಿತವಾದ ಸಂಬಂಧಗಳು, ಕುರುಡು ವ್ಯಾಮೋಹಗಳು, ತಪ್ಪು ಮಾಡಿದ ಮೇಲೆ ಅದನ್ನು ಸಂಭಾಳಿಸಬೇಕಾದ ಅನಿವಾರ್ಯತೆ, ಅಪರಾಧಿಪ್ರಜ್ಞೆ ಈ ಎಲ್ಲ ಮನೋಭಾವಗಳ ಸಂಕೀರ್ಣಗಳನ್ನು ಪದರ ಪದರವಾಗಿ ಅನಾವರಣಗೊಳಿಸುತ್ತಾ ಹೋಗುತ್ತದೆ . ತಾಯಿ ಮೃದುಲಾಳ ಸ್ಥಾನದಲ್ಲಿ ಮಕ್ಕಳು ಲೂಸಿಯಾಳನ್ನು ಎಂದೂ ನೋಡಲು ಸಿದ್ಧವಿಲ್ಲವೆಂದು ಗೊತ್ತಿದ್ದ ಅರವಿಂದ್ ತನ್ನ ಬಾಳಿನಲ್ಲಿ ಲೂಸಿಯಾ ಆಗಮನವನ್ನು ಧೈರ್ಯವಾಗಿ ಒಪ್ಪಿಕೊಳ್ಳಲು ಹೇಳಿಕೊಳ್ಳಲು ಸಿದ್ಧನಿರುವುದಿಲ್ಲ. ಭೂಮಿಕಾ ಅಪಾರ್ಟ್ ಮೆಂಟ್ ನ ಏಳನೇ ಅಂತಸ್ತಿನ ಮೆಲು ತಂಗಾಳಿ ಮೃದುಲಾ ಅರವಿಂದರ ಕನಸಿನ ಗೂಡು. ಮೊದಲಿಂದ ಅದರ ಮೇಲೆಯೇ ಕಣ್ಣಿಟ್ಟಿದ್ದ ಲೂಸಿಯಾ ನಂತರ ಹಂತ ಹಂತವಾಗಿ ಅರವಿಂದನ ಮನೆಗೆ ಪ್ರವೇಶಿಸಿ ಹಣ ಒಡವೆ ವಸ್ತುಗಳನ್ನು ತನ್ನದಾಗಿಸಿಕೊಳ್ಳುತ್ತಿರುತ್ತಾಳೆ .ವಸುಧೇಂದ್ರನ ಸಂಸಾರ ಬಂದಿದ್ದರಿಂದ ಮೆಲು ತಂಗಾಳಿಯಿಂದ ಸ್ವಲ್ಪಕಾಲ ದೂರವಿರಲು ಹೇಳಿ ಅವಳನ್ನು ಕಳಿಸಿರುತ್ತಾನೆ ಅರವಿಂದ. ಲೂಸಿಯಾಳ ಸತತ ಬಲವಂತ, ಮಕ್ಕಳಿಗೆ ತಮ್ಮ ವಿಷಯ ತಿಳಿಸಿ ಎಂಬ ವರಾತ, ಅವಳ ಅಳಿಯ ರಾಬರ್ಟ್ ನ ಕಿರಿಕ್ ಮತ್ತು ಮಗಳು ಜಾಸ್ಮಿನ್ ಳ ದುರಾಸೆ ಅವಳ ಮೊಮ್ಮಕ್ಕಳ ಕಾಟ ಇದೆಲ್ಲರ ಮಧ್ಯೆ ಮಗನ ಆಗಮನದ ಸಂತೋಷ ಸವಿಯಲೇ ಆಗಿರುವುದಿಲ್ಲ .

ಚಿಕ್ಕ ವಯಸ್ಸಿನಲ್ಲೇ ಮೋಹನ್ ಆಫೀಸಿನಲ್ಲಿ ಕೆಲಸ ಮಾಡುವ ಮೃದುಲಾ ತನ್ನ ಸಂಬಂಧಿಗಳ ಬಗ್ಗೆ ಸುಳಿವು ಕೊಟ್ಟಿರುವುದಿಲ್ಲ. ಹಂತಹಂತವಾಗಿ ತನ್ನ ಬುದ್ದಿವಂತಿಕೆಯಿಂದ ಮೇಲೆ ಬಂದು ತನ್ನ ಆಫೀಸನ್ನು ಅಭಿವೃದ್ಧಿ ಗೊಳಿಸಿದ ಮೃದುಲಾ ಬಗ್ಗೆ ಮೋಹನ್ ವಿಶ್ವ ಮತ್ತು ಶ್ವೇತಾ ದಂಪತಿಗಳಿಗೆ ಅಭಿಮಾನ ವಿಶ್ವಾಸ. ಹಾಗಾಗಿಯೇ ಮೃದುಲಾಳಂತಹ ಪನ್ನೀರಿನ ಸಿಂಚನ ಹೊಂದಿದ ಅರವಿಂದ ಕೊಳಚೆ ನೀರಿಗೆ ಹಾತೊರೆದನಲ್ಲಾ ಎಂದು ಅವನ ಮೇಲೆ ಅಸಮಾಧಾನವಿದ್ದರೂ ಮೃದುಲಾಳ ಮಕ್ಕಳಿಗಾಗಿ ಅವನಿಗೆ ಸಹಾನುಭೂತಿ ತೋರುತ್ತಾರೆ . ಲೂಸಿಯಾ ಮೆಲುತಂಗಾಳಿ ಫ್ಲಾಟ್ ನ ಅರ್ಧ ಒಡೆತನ ಕೊಡಿಸುವಂತೆ ಇಲ್ಲದಿದ್ದಲ್ಲಿ ತಮ್ಮಿಬ್ಬರ ಸಂಬಂಧ ಬಹಿರಂಗಗೊಳಿಸುವುದಾಗಿ ಬೆದರಿಸುತ್ತಾಳೆ . ಹಾಗಾದರೆ ಮುಂದೇನಾಯ್ತು? ಮೆಲು ತಂಗಾಳಿ ಬಿರುಗಾಳಿಗೆ ಸಿಲುಕಿತೇ ತಿಳಿಯಲು ನೀವು ಕಾದಂಬರಿ ಓದಲೇಬೇಕು.

ಒಂದು ಗಂಡಿಗೊಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು ಎಂಬುದು ಇದೆ ಎಂದರೂ ಅದಕ್ಕೆ ಮದುವೆಯ ಬೆಸುಗೆ ಬೇಕೇಬೇಕು .ಮಿಕ್ಕವೆಲ್ಲಾ ತಾತ್ಕಾಲಿಕ ಅನೈತಿಕ. ಇಡೀ ಕಾದಂಬರಿಯನ್ನು ಆವರಿಸುವುದು ಮೃದುಲಾಳ ವ್ಯಕ್ತಿತ್ವ ಅವಳ ನೆನಪಿನ ಮೆಲುಕು ಗಳಲ್ಲೇ ಅವಳ ವ್ಯಕ್ತಿತ್ವದ ಚಿತ್ರಣ ಮುಗಿಸಿದ್ದಾರೆ ಅನಾಥೆಯಂತೆ ಎಲ್ಲ ಸಂಬಂಧ ಬಿಟ್ಟುಬರುವ ಪಿಯುಸಿ ಪಾಸಾದ ಹುಡುಗಿ ಪದವಿ ಪೂರೈಸಿ ಲಾಯರ್ ಕಚೇರಿಯಲ್ಲಿ ತನ್ನ ಬುದ್ಧಿವಂತಿಕೆಯ ಛಾಪು ಮೂಡಿಸುವುದು ಎಷ್ಟೇ ಹೆಚ್ಚಿನ ಹಣದ ಆಮಿಷ ಕೊಟ್ಟರು ಬೇರೆ ವಕೀಲರ ಬಳಿ ಹೋಗದೆ ತಮ್ಮ ಕೃತಜ್ಞತೆ ಕೋರುತ್ತಿರುವುದು ಅವಳ ಉದಾತ್ತ ಗುಣಕ್ಕೆ ಮಾದರಿ ..ತನಗೆ ನೆರವಾದವರನ್ನು ಮರೆಯದಿರುವುದು ಅವಳು ಮೆಲು ತಂಗಾಳಿ ಎಂಬ ಮನೆಯ ಹಳೆಯ ಹೆಸರು ಮತ್ತು ಅದರ ಮೊದಲ ಒಡೆಯರ ಫೋಟೋಗಳನ್ನು ತೆಗೆಯದಿರುವುದು ಸಾಕ್ಷಿ. ಸ್ವಲ್ಪ ಹಣದ ಬಗ್ಗೆ ಲೋಭವಿರುವ ಪತಿಯನ್ನು ವಿರೋಧಿಸುವ ಮನಸ್ಥೈರ್ಯವೂ ಅವಳಿಗಿದೆ. ಮಗನ ವಿದ್ಯಾಭ್ಯಾಸ ಮತ್ತು ಮಗಳ ಮದುವೆ ವಿಷಯದಲ್ಲಿ ಅವರಿಗೆ ಒತ್ತಾಸೆಯಾಗಿ ನಿಲ್ಲುತ್ತಾಳೆ. ಹೀಗೆ ಕಥೆ ಇಡೀ ಮೃದುಲಾ ಮೆಲು ತಂಗಾಳಿಯಾಗಿ ಪಸರಿಸುತ್ತಾ ಆಹ್ಲಾದ ತರುವುದರ ಜತೆಗೆ ಪಾತ್ರಗಳಿಗೆ ಜೀವಂತಿಕೆಯ ಸೆಲೆಯಾಗಿ ಆವರಿಸುತ್ತಾಳೆ . ಪರಿಶುದ್ಧ ಸ್ನೇಹಕ್ಕೆ ಮೋಹನ್ ವಿಶ್ವ ಶ್ವೇತಾ ದಂಪತಿಗಳು ಒಳ್ಳೆಯ ಉದಾಹರಣೆ. ವಸುಧಾ ರಾಜೀವ ಮತ್ತು ಅವನ ಮನೆಯವರನ್ನು ಸುಂದರವಾಗಿ ಚಿತ್ರಿಸಲಾಗಿದೆ ಅತಿಯಾದ ಪುತ್ರಿ ವ್ಯಾಮೋಹ ಮತ್ತು ಹಣಕ್ಕಾಗಿ ಅರವಿಂದನ ಸ್ನೇಹ ಮಾಡುವ ಲೂಸಿಯಾ ಅವಳಂಥವರೇ ಎಲ್ಲೆಡೆ ಇರುತ್ತಾರೆ ಎಚ್ಚರ ವಹಿಸಬೇಕೆಂಬ ಸಂದೇಶ. ಮಗ ವಸುಧೆಂದ್ರ ವಿದೇಶದ ನೌಕರಿಯನ್ನೇ ತ್ಯಜಿಸಿ ತಂದೆಗಾಗಿ ಮರಳಿ ಬರುತ್ತಾನೆ. ಅತ್ತೆಯಂತೆಯೇ ಕುಟುಂಬದ ಒಳಿತಿಗಾಗಿ ಮಿಡಿಯುವ ಅಂತಃಕರಣ ಸೊಸೆ ನಿಶ್ಛಿತಾದ್ದು. ಒಂದು ದುರ್ಬಲ ಗಳಿಗೆಯಲ್ಲಿ ಎಡವಿ ಸ್ನೇಹ ಮಾಡಿದರೂ ಅದು ತಪ್ಪು ಎಂಬ ಅಪರಾಧಿ ಮನೋಭಾವ ತುಂಬಿಕೊಳ್ಳುವ ಅರವಿಂದ ಕೌಶಿಕ್ ತನ್ನ ಪತ್ನಿಯ ಬಗ್ಗೆ ಇನ್ನೂ ಹೆಚ್ಚು ಕಾಳಜಿ ವಹಿಸಿದ್ದರೆ ಅವಳನ್ನು ಉಳಿಸಿಕೊಳ್ಳಬಹುದಿತ್ತೇನೋ ಎನ್ನಿಸುತ್ತೆ ಸಾಮಾನ್ಯ ನಾವು ಸುತ್ತಮುತ್ತ ನೋಡುವ ಸಮಾಜದ ಗಂಡಸರ ಪ್ರತಿನಿಧಿಯಾಗಿ ಅವನ ಪಾತ್ರವನ್ನು ರೂಪಿಸಿದ್ದಾರೆ .

ಮೇಡಮ್ ಅವರ ಎಲ್ಲ ಕಾದಂಬರಿಗಳಂತೆ ಕೈಗೆತ್ತಿಕೊಂಡರೆ ಮುಗಿಸುವ ತನಕ ಕೆಳಗಿಡದಂತೆ ಓದಿಸಿಕೊಂಡು ಹೋಗುವ ಕಾದಂಬರಿ. ತಮ್ಮ ಸ್ವಾರ್ಥ ಸಾಧನೆಗೆ ಹೊಂಚುಹಾಕುವ ಜನರಿಂದ ದೂರವಿದ್ದರೆ ಒಳಿತು ಎನ್ನುವುದನ್ನು ಮಾರ್ಮಿಕವಾಗಿ ಸೂಚಿಸಿದ್ದಾರೆ . ಸದಾಶಯದ ಸದಭಿರುಚಿಯ ಸುಂದರ ನಿರೂಪಣೆಯ ಕಥೆ ಮೊದಲೇ ಬೇಕು ಎನ್ನುವ ಪುಸ್ತಕಗಳ ಸಾಲಿಗೆ ಮತ್ತೊಂದು ಸೇರ್ಪಡೆ.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top