ಕಾವ್ಯ ಸಂಗಾತಿ
ವಿಶ್ವನಾಥ ಎನ್ ನೇರಳಕಟ್ಟ
ಚಹಾ ಆಗುವುದೆಂದರೆ…
ಮಾಮೂಲಿ ನೀರು
ಚಹಾ ಆಗುವುದೆಂದರೆ……
ಎದೆ ಮೇಲೆ ಬಿದ್ದ
ಚಹಾ ಹುಡಿಯ
ಬಣ್ಣ ಕಳಚುತ್ತಾ
ಬರಸೆಳೆದು ಅಪ್ಪಿಕೊಳ್ಳುವುದು
ಪರಕೀಯತೆಯ ಪ್ರಜ್ಞೆಯಿಲ್ಲದೆ
ಸಕ್ಕರೆಯ ಸಿಹಿಯನ್ನು
ಮೂಲಾಧಾರವಾಗಿ ಉಳಿಸಿಕೊಂಡು
ಮಧುರವಾಗುವುದು
ಮೃದು ಮಧುರವಾಗುವುದು
ಕಪ್ಪು ಬಿಳುಪುಗಳ ಭೇದ ಮರೆತು
ಭಾವಭಿತ್ತಿಯಲಿ ಒಂದಾಗಿಸಿಕೊಳ್ಳುವುದು
ಸುಗಂಧಭರಿತವಾಗುವುದು
ಏಲಕ್ಕಿಯನು ಮನದೊಳಗಿಳಿಸಿಕೊಂಡು
ಆಘ್ರಾಣಿಸಿದವರೆಲ್ಲರೂ ಮೆಚ್ಚಿಕೊಳ್ಳುವಂತಹ
ಪರಿಮಳವನ್ನು ಹಬ್ಬಿಸುವುದು
ಹುಳಿಯೂ ಬೇಕು
ತುಸುವೇ ತುಸು
ಲಿಂಬೆಯ ಹನಿಯನ್ನು
ಇದ್ದೂ ಇಲ್ಲದಂತೆ
ಜತನದಿಂದ ಕಾಪಿಟ್ಟುಕೊಳ್ಳುವುದು
ಶುಂಠಿಯ ಖಾರ ಹೆಚ್ಚಾಗಬಾರದು
ಕಡಿಮೆಯೂ ಅಲ್ಲ
ಜಜ್ಜಿಹೋದರೂ ಖಾರವನ್ನು ಬಿಡದಿರುವ
ಶುಂಠಿಯ ವ್ಯಕ್ತಿತ್ವ
ಅಂತರಂಗದಲಿ ಬೆರೆಯುವುದು
ಕುದಿಯುವುದು
ಒಡಲೊಳಗಣ ಬಿಸಿಯೇ
ಹಬೆಯಾಗಿ ಮೇಲೇರುವಂತೆ
ಕುದಿಯುವುದು
ರಸಾಸ್ವಾದಕರ ತುಟಿಗಳ
ಮೌನಸಂವಾದದಲಿ
ಸಾರ್ಥಕತೆ ಪಡೆದುಕೊಳ್ಳುವುದು
———————————————————
ವಿಶ್ವನಾಥ ಎನ್ ನೇರಳಕಟ್ಟೆ
ಚೆನ್ನಾಗಿದೆ…ಚಹಾ ಆಗುವುದೆಂದರೇ…. ಏನೆಲ್ಲಾ ಸ್ವಾಧವಾಗುವುದೂ…..!!!!