ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ 

ಮಾತೃ ಭಾಷೆ ಕಲಿಯೋಣ,

ನಾನು ನನ್ನ ಶಿಕ್ಷಕ ವೃತ್ತಿ ಪ್ರಾರಂಭಿಸಿ ಇದು ಇಪ್ಪತ್ತನೇ ವರ್ಷ. ಇಷ್ಟು ವರ್ಷಗಳಲ್ಲಿ ನಾನು ಮುಖ್ಯವಾಗಿ ದುಡಿದ ಶಾಲೆಗಳು ಮೂರು. ನನ್ನ ವೃತ್ತಿ ಬದುಕಿನ ಹತ್ತು ವರ್ಷ (ದಶಕ)ಗಳನ್ನು ದೂರದ ಸುಳ್ಯದಲ್ಲಿ ಕಳೆದಿರುವ ನಾನು, ಪ್ರತಿ ವರ್ಷ ಶಿಕ್ಷಕರ ವರ್ಗಾವಣೆ ಆಗುವ ಸಂದರ್ಭದಲ್ಲಿ ಅರ್ಜಿ ಹಾಕಿ , ಸಿಗದೆ ನಿರಾಶಳಾಗುತ್ತಿದ್ದೆ. ನನಗೆ ಸುಳ್ಯದಲ್ಲಿ ನಾನಿದ್ದ ಸರಕಾರಿ ಪ್ರೌಢ ಶಾಲೆ ಐವರ್ನಾಡು ಚೆನ್ನಾಗಿಯೇ ಇತ್ತು. ಶಾಲೆಯ, ವೃತ್ತಿಯ ಯಾವುದೇ ಸಮಸ್ಯೆ ಇರಲಿಲ್ಲ ಆದರೆ ಕಾರ್ಕಳದ ನಮ್ಮ ಮನೆಯಲ್ಲಿ ಅಮ್ಮ ಒಬ್ಬರೇ ಇರುವ ಕಾರಣ ಅಮ್ಮನ ಮನೆ ಹತ್ತಿರ ಬರಬೇಕಿತ್ತು. ಮತ್ತೆ ಬಂಧುಗಳ ಪ್ರತಿ ಕಾರ್ಯಕ್ರಮಕ್ಕೂ ನಾನು ಮತ್ತು ನನ್ನ ಮಗಳು ಮಿಸ್ ಆಗುತ್ತಿದ್ದ ಕಾರಣ ಮಗಳಿಗೆ ಬಂಧುಗಳ ಬಾಂಧವ್ಯ ತಪ್ಪಿ ಹೋಗಿತ್ತು. ವರ್ಷಕ್ಕೆ ಒಮ್ಮೆ ಒಂದು ದಿನ ಮುಖ ನೋಡಿ ಪೂಜೆಗೆ ಬಂದು ಹೋಗುವುದಷ್ಟೇ ಆಗಿತ್ತು. ಕರೋನ ಸಮಯದಲ್ಲಿ ಸ್ವಲ್ಪ ಎಲ್ಲರ ಜೊತೆ ಬೆರೆಯುವ ಅವಕಾಶ ಸಿಕ್ಕಿತು.

ನನಗೆ ಉಡುಪಿ ಜಿಲ್ಲೆಗೆ ವರ್ಗಾವಣೆ ಸಿಗುವುದು ಕಷ್ಟ ಎಂದು ಅರಿತು, ನಾನು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳಕ್ಕೆ ಹತ್ತಿರದ ಊರುಗಳ ಬಗ್ಗೆ ಹುಡುಕ ತೊಡಗಿದೆ. ಆಗ ಮೂಲ್ಕಿಯಲ್ಲಿ ಆಂಗ್ಲ ಭಾಷಾ ಶಿಕ್ಷಕರ ಹುದ್ದೆ ಖಾಲಿ ಇರುವುದು ತಿಳಿಯಿತು.ಏನೋ ದೇವರ ದಯೆಯಲ್ಲಿ  ಕಳೆದ ವರ್ಷ ಡಿಸೆಂಬರ್ ನಲ್ಲಿ ಅಮ್ಮನ ಮನೆ ಹತ್ತಿರದ ಶಾಲೆ ಅಲ್ಲದೆ ಹೋದರೂ ಕೇವಲ ಒಂದು ಗಂಟೆ ದೂರದ ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಮಾಡುವ ಅವಕಾಶ ಒದಗಿ ಬಂದಿತು. ಇಲ್ಲಿ ಬಂದ ಮರು ವರ್ಷ ಅಂದರೆ ಒಂದು ವರ್ಷದ ಒಳಗೆಯೇ ಇಲ್ಲಿನ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮ ನನಗೆ ಖುಷಿ ತಂದ ವಿಚಾರ. ಬಹಳ ವರ್ಷಗಳ ಹಿಂದಿನ ಶಾಲೆ. ಅಲ್ಲದೆ ಹಲವು ಮೇಧಾವಿಗಳು ಕಲಿತ ಶಾಲೆಯಲ್ಲಿ ನಾನು ಸೇವೆಯನ್ನು ಮಾಡುತ್ತಿರುವೆ ಎಂದು ಖುಷಿ ಒಂದೆಡೆ. ಆದರೆ ಒಂದು ಕಾಲದಲ್ಲಿ ಸಾವಿರಕ್ಕೂ ಮಿಕ್ಕಿ ಮಕ್ಕಳಿದ್ದ ದೊಡ್ಡ ಶಾಲೆ ಇಂದು ಅಕ್ಕ ಪಕ್ಕ ಒಂದೆರಡು ಕಿಲೋ ಮೀಟರ್ ಗಳಲ್ಲಿ ಮೂರು ನಾಲ್ಕು ಖಾಸಗಿ ಶಾಲೆಗಳಿಂದ ಸುತ್ತುವರಿದ ಮತ್ತು ಅಕ್ಕ ಪಕ್ಕ ಮಾತ್ರ ಅಲ್ಲದೆ ದೂರದ ಊರಿನಿಂದಲೂ ಸ್ಕೂಲ್ ಬಸ್ ಬಂದು ಇಲ್ಲಿನ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗುವುದರಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಆಂಗ್ಲ ಮಾಧ್ಯಮದ ಸಹಿತ ಪ್ರತಿ ತರಗತಿಯಲ್ಲಿ ಮೂರು ನಾಲ್ಕು ಸೆಕ್ಷನ್ ಗಳಲ್ಲಿ ಇದ್ದ ಮಕ್ಕಳ ಸಂಖ್ಯೆಯ ಒಂದು ತರಗತಿಯ ಭಾಗವೂ ಈಗ ಪ್ರೌಢ ಶಾಲಾ ವಿಭಾಗದಲ್ಲಿ ಇಲ್ಲ. ಕಾರಣ ಇಲ್ಲಿನ ಆಂಗ್ಲ ಮಾಧ್ಯಮ ಮುಚ್ಚಿ ಹೋಗಿರುವುದು ಮತ್ತು ಕನ್ನಡ ಮಾಧ್ಯಮ ಕಲಿಕೆಯ ಬಗ್ಗೆ ಜನರಲ್ಲಿ ಇರುವ ತಾತ್ಸಾರದ ಜೊತೆಗೆ ಸರಕಾರಿ ಶಾಲೆ ಎಂದರೆ ಅಲ್ಲಿಗೆ ಏನೂ ಗತಿ ಇಲ್ಲದವರ ಮಕ್ಕಳು, ಬಡವರ ಮಕ್ಕಳು, ಘಟ್ಟದವರ ಮಕ್ಕಳು ಮಾತ್ರ ಬರುತ್ತಾರೆ ಎಂಬ ತಾತ್ಸಾರ ಭಾವನೆ ಕೆಲವೊಂದು ಜನರಲ್ಲಿ ಆದರೆ ಇನ್ನೂ ಕೆಲವು ಜನರಿಗೆ ಇದು ಬೇಡ, ಸ್ಟೇಟಸ್ ಮುಖ್ಯ!
        ಆದರೆ ಸರಕಾರಿ ಶಾಲೆಯನ್ನೂ ಕೂಡಾ ಉತ್ತಮ ರೀತಿಯಲ್ಲಿ ನಡೆಸಿ ತೋರಿಸಬಹುದು ಅದಕ್ಕೆ ಊರಿನ ಹಿರಿಯ ಜನರ, ವಿದ್ಯಾರ್ಥಿ ಸರಕಾರಿ ಶಾಲೆಗಳಲ್ಲಿ , ಹಳೆ ವಿದ್ಯಾರ್ಥಿಗಳು, ಅಲ್ಲಿ ಮೊದಲು ಕೆಲಸ ಮಾಡಿದ ಶಿಕ್ಷಕರು ಎಲ್ಲಾ  ಸೇರಿ ದತ್ತು ಪಡೆದ ನಾಡಿನ ಶಾಲೆಗಳು ಖ್ಯಾತಿಯಲ್ಲಿವೆ.  ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಮಾತ್ರ ಸರಕಾರ ಕೊಡಬಲ್ಲುದು. ಉಳಿದಂತೆ ತಮ್ಮ ಊರಿನ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಆ ಊರಿನ ಮಹನೀಯರು ಕೊಟ್ಟು ಶಾಲೆಯನ್ನೂ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿರುವ ಶಾಲೆಗಳು ತುಂಬಾ ಇವೆ. ಅದೇ ರೀತಿ ನಮ್ಮ ದೊಡ್ಡ ಪ್ರೌಢ ಶಾಲೆ, ಆರು ಮತ್ತು ಏಳನೇ ತರಗತಿ ಇರುವ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪದವಿ ಪೂರ್ವ ಕಾಲೇಜು.
ಹಿರಿಯ ವಿದ್ಯಾರ್ಥಿಗಳು ಮತ್ತು ಊರಿನ ದಾನಿಗಳನ್ನು ಸೇರಿಸಿ ಶಾಲೆಯನ್ನು ಪುನರುದ್ಧಾರ ಮಾಡುವ ಸೇವೆಗೆ ರಾತ್ರಿ ಹಗಲೆನ್ನದೆ ಕೈಂಕರ್ಯ ತೊಟ್ಟವರು ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ವಾಸುದೇವ ಬೆಳ್ಳೆಯವರು, ಪ್ರೌಢ ಶಾಲಾ ವಿಭಾಗದ ಹಿರಿಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಟಿ ನಾಯಕ್ ಅವರು, ಕಾಲೇಜಿನ ಎಸ್ ಬಿ ಸಿ  ಯ ಅಧ್ಯಕ್ಷರಾದ ಶ್ರೀಯುತ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಪ್ರೌಢ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ಹರ್ಷರಾಜ್ ಶೆಟ್ಟಿ ಅವರ ಸತತ ಕಾರ್ಯ  ಒಂದೆಡೆ ಆದರೆ ಹಿಂದೆ ಶಾಲೆಗೆ ಆಗಾಗ ಭೇಟಿ ನೀಡಿ ಶಾಲೆಯ ಬಗ್ಗೆ ವಿಚಾರಿಸುತ್ತಿದ್ದ ದಿವಂಗತ ಡಾಕ್ಟರ್ ಅಚ್ಯುತ ಕುಡ್ವ ಅವರ ಜೊತೆಗಿದ್ದ ಸಹಾಯ ಹಸ್ತ ನೀಡಿದ ಶ್ರೀಯುತ ಎಂ. ಬಿ. ಖಾನ್ ಮತ್ತು ಎಲ್ಲಾ ಕಾರ್ಯಕ್ರಮಗಳ ರೂವಾರಿ ಎನ್ನಬಹುದಾದ ಶ್ರೀಯುತ ಯದು ನಾರಾಯಣ ಶೆಟ್ಟಿ. ಇಲ್ಲಿ ಶಾಲಾ ಕಾಲೇಜಿನ ಉಪನ್ಯಾಸಕರು, ಶಿಕ್ಷಕ ಬೋಧಕೇತರ ವೃಂದದವರು ನೀಡುತ್ತಿರುವ ಸಹಕಾರವೂ ದೊಡ್ಡದು ಎಂದೇ ಹೇಳುವುದು ಅತಿಶಯೋಕ್ತಿಯೇನಲ್ಲ. ಹಾಗೆಯೇ ಬೆನ್ನು ಮೂಳೆಗಳಾಗಿ ನಿಂತ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇಲ್ಲಿದ್ದರೆ, ಹಿರಿಯ ವಿದ್ಯಾರ್ಥಿ ನಾಯಕರ ಸಹಾಯ ಎಂದೂ ಮರೆಯಲು ಆಗದು. ಶಾಲೆಯ ಉನ್ನತಿ ಒಬ್ಬರಿಂದ ಆಗದ ಕಾರ್ಯ. ಇಲ್ಲಿ ಹನಿಗೂಡಿದರೆ ಮಾತ್ರ ಹಳ್ಳ.
ಈ ಶಾಲೆಯ ಉದ್ದಾರವನ್ನು ತನ್ನ ಧ್ಯೇಯವಾಗಿ ಇರಿಸಿಕೊಂಡು ದೂರದ ಮುಂಬೈಯಿಂದ ಆಗಾಗ ಬಂದು ಮೇಲುಸ್ತುವಾರಿ ಮಾಡುತ್ತಾ ಶಾಲೆಯ ಎಲ್ಲಾ ಕೋಣೆಗಳಿಗೆ ಪೈಂಟಿಂಗ್ ಸಮೇತ ಕಾಲೇಜಿನ ಸುವರ್ಣ ಮಹೋತ್ಸವಕ್ಕೆ ಅಪಾರವಾದ ಕಾರ್ಯ, ತನುಮನ – ಧನ ಸಹಾಯ ನೀಡಿ ಅಷ್ಟಕ್ಕೇ ಅಲ್ಲದೆ ಈಗಲೂ ಮುತುವರ್ಜಿ ವಹಿಸುತ್ತಿರುವ ಕಾರ್ಯ ಶ್ಲಾಘನೀಯ! ಕೋಟಿ ರೂಪಾಯಿಗಳ ಯೋಜನೆ ಹಾಕಿ ಅದನ್ನು ಪ್ರಾಯೋಗಿಕವಾಗಿ ಮಾಡುವುದು ಸುಲಭದ ಮಾತೇನೂ ಅಲ್ಲ ಅಲ್ಲವೇ?

     ಪ್ರತಿ ಊರಿನಲ್ಲಿ ಊರಿನ ಹಿರಿಯರು, ಸ್ವಲ್ಪ ಧನಿಕರು ಅನ್ನಿಸಿಕೊಂಡವರು ಮುಂದೆ ಬಂದು ಆ ಊರಿನ ಶಾಲೆಯನ್ನು ಅಭಿವೃದ್ಧಿ ಪಥದತ್ತ ಸಾಗಿಸುವ ಪಣ ತೊಟ್ಟು ಆ ದಿಸೆಯತ್ತ ದೃಷ್ಟಿ ಹರಿಸಿ, ಊರಿನ ಜನರನ್ನು , ಹಳೆ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಮಾಡುವ ಇಂತಹ ಸಾರ್ವಜನಿಕ ಕಾರ್ಯಗಳು ಮಾನವನನ್ನು ಎಂದೂ ಹಿಂದಕ್ಕೆ ತಳ್ಳಲಾರವು. ಇಂತಹ ಹಲವಾರು ಜನರ ಮಹಾನ್ ಕಾರ್ಯವನ್ನು ನಾನು ಬಂಟ್ವಾಳ ತಾಲೂಕಿನಲ್ಲಿ ಇರುವಾಗ ನೋಡಿದ್ದೆ ಕೂಡಾ. ಊರಿನ ಶಾಲೆಯನ್ನು ದತ್ತು ಪಡೆದು ಪ್ರೋತ್ಸಾಹಿಸುವುದು. ಮುಚ್ಚಿದ ಶಾಲೆಗಳನ್ನು ಹಲವಾರು ಕಡೆ ತೆರೆಸಲಾಗಿದೆ.

   ನನ್ನ ಕೋರಿಕೆ ಇಷ್ಟೇ. ನಮ್ಮ ಶಾಲೆ, ನಮ್ಮ ಊರು, ನಮ್ಮ ಕುಟುಂಬ, ನಮ್ಮ ಮನೆ, ನಮ್ಮ ರಾಜ್ಯ, ನಮ್ಮ ದೇಶ ಹೇಗೆ ನಮಗೆ ಪ್ರಿಯವೋ ಹಾಗೆಯೇ ನಮ್ಮ ಭಾಷೆ ಕೂಡಾ ನಮಗೆ ಪ್ರಿಯ ಅಲ್ಲವೇ? ಮಾತೃ ಭಾಷೆ ತುಳು ಆದರೂ ನಾವು ಉಪಯೋಗಿಸುವ ಭಾಷೆ, ಓದುವ, ಬರೆಯುವ, ಮನೆಯಿಂದ ಹೊರಗೆ ಹೆಚ್ಚಾಗಿ ಬಳಸುವ ರಾಜ್ಯ ಭಾಷೆ ಕನ್ನಡ. ಕನ್ನಡ ಉಳಿಸಬೇಕು ಎಂದರೆ ಕನ್ನಡವನ್ನು ಶಾಲೆಗಳಲ್ಲಿ ಕಲಿಯಬೇಕು.  ಕನ್ನಡವನ್ನೇ ತನ್ನ ಉಸಿರಾಗಿಸ ಬೇಕು ಕನ್ನಡದಲ್ಲೇ ಆಲೋಚಿಸಬೇಕು ಎಂದಾದರೆ ಕನ್ನಡ ಮಾಧ್ಯಮದಲ್ಲೇ ಕಲಿಯಬೇಕು. ನಮ್ಮ ಮಕ್ಕಳಿಗೆ ಈಗ ಅತ್ತ ಸರಿಯಾದ ಕನ್ನಡವೂ ಬಾರದು, ಇತ್ತ ಆಂಗ್ಲ ಭಾಷೆಯು ಬಾರದು. ಎರಡು ದೋಣಿಗಳಲ್ಲಿ ಕಾಲಿಟ್ಟು ಯಾವುದನ್ನೂ ಬಿಡಲಾರದ ಪರಿಸ್ಥಿತಿಗೆ ನಾವು ಅವರನ್ನು ತಂದಿಟ್ಟಿದ್ದೇವೆ. ಮಗ್ಗಿಗಳು, ಕನ್ನಡ ಪ್ರಾಸದ ಹಾಡುಗಳು ನಮ್ಮ ಕಾಲಕ್ಕೆ ಮುಗಿಯ ಬಾರದು ಎಂದಿದ್ದರೆ ಕನ್ನಡ ಕಲಿಸಬೇಕು, ಕನ್ನಡದಲ್ಲಿ ಬೆರೆಸಬೇಕು. ಕನ್ನಡ ಉಳಿಯಲಿ. ಪ್ರತಿ ಊರಿನ ಕನ್ನಡ ಸರಕಾರಿ ಶಾಲೆಗೂ ಊರಿನ ಜನರ ಸಹಕಾರ, ಬೆಂಬಲ ಇರಲಿ. ನಮ್ಮೂರ ಸರಕಾರಿ ಶಾಲೆ ಬಡವಾಗದೆ ಇರಲಿ. ನಮ್ಮ ಮಾತೃಭಾಷೆ ನಮ್ಮ ಮುಂದಿನ ಪೀಳಿಗೆಯ ಬಾಯಲ್ಲಿ ಮೃತವಾಗದೆ, ಅವರ ಮಕ್ಕಳಿಗೂ ಹರಿಯುವಂತೆ ಆಗಲಿ. ಮಾತೃಭಾಷೆ ಉಳಿಸಬೇಕು. ಅಮ್ಮನನ್ನೇ ವೃದ್ಧಾಶ್ರಮಕ್ಕೆ ತಳ್ಳುವ ನಾವು ಇನ್ನು ಮಾತೃ ಭಾಷೆಗೆ ಮಹತ್ವ ಕೊಡುತ್ತೇವೆಯೆ ಎನ್ನುವ ಹಾಗೆ ಆಗಬಾರದು. ಓದು ಬರಹಕ್ಕಿಂತಲೂ ಮಾನವತೆ, ಮಾನವೀಯ ಮೌಲ್ಯಗಳು ಮುಖ್ಯ ಎಂದು ನಮ್ಮ ಹಲವಾರು ಹಿರಿಯರು ತೋರಿಸಿ ಕೊಟ್ಟಿದ್ದಾರೆ. ಓದು ಬರಹದ ಜೊತೆ ಮಾನವೀಯ ಮೌಲ್ಯಗಳು ಇಲ್ಲದೆ ಹೋದರೆ ಓದು ಶೂನ್ಯ ಅಲ್ಲವೇ? ಸರಕಾರಿ ಶಾಲೆಗಳ ಬೆಳವಣಿಗೆಗೆ ಕೈ ಜೋಡಿಸೋಣ, ಮಾತೃ ಭಾಷೆ ಕಲಿಯೋಣ, ಕಲಿಸೋಣ, ಬೆಳೆಸೋಣ. ನಮ್ಮ ನೆಲ ನಮ್ಮ ಉಸಿರು, ಉಳಿಸೋಣ. ನೀವೇನಂತೀರಿ?

—————————————-


ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top