ಕೆ.ಎನ್.ಲಾವಣ್ಯ ಪ್ರಭಾರವರ ಸಂಕಲನ ‘ಸ್ಪರ್ಶ ಶಿಲೆ’

ಪುಸ್ತಕ ಸಂಗಾತಿ

ಸ್ಪರ್ಶ ಶಿಲೆ’

ಕೆ.ಎನ್.ಲಾವಣ್ಯ ಪ್ರಭಾ

“ಕಾವ್ಯದ ಝರಿ;ಆಂತರ್ಯದ ಸಿರಿ”

“ಕಾವ್ಯದ ಝರಿ;ಆಂತರ್ಯದ ಸಿರಿ”

ಕವಿತೆಗಳ ಸಾಲಿನಲಿ ಪದಪುಂಜ ವೈಭವವು
ಮೆರೆಯುತಿವೆ ಲಾವಣ್ಯ ಪ್ರಭೆಯೊಳಗೆ
ಒಂದೊಂದು ಕವನಗಳು ಪುಟವಿತ್ತ ಚಿನ್ನವವು
ತೋರುತಿವೆ ಕಾರುಣ್ಯ ಗಣದೊಳಗೆ…

ಹೀಗೆ ಕವಯಿತ್ರಿಯ ಪ್ರತಿಯೊಂದು ಕವನಗಳು ವಿಶೇಷ ,ವಿಶಿಷ್ಟತೆಯಿಂದ ಮೂಡಿಬಂದಿವೆ.ಕವನಗಳಲ್ಲಿನ ಕುತೂಹಲತೆ, ಆರ್ದ್ರತೆ ,ಸಾಮಾಜಿಕ ತುಡಿತಗಳು, ಕಾಳಜಿ , ಪ್ರಾಕೃತಿಕ ವಿಷಯಗಳು,ಪ್ರೀತಿ ,ವಾತ್ಸಲ್ಯ ನೋವು, ನಲಿವು ,ಆತಕ ,ಆತುರ ,ಕಾತುರ, ಹಂಬಲ ಹೀಗೆ ಹಲವಾರು ವಿಷಯ ವಸ್ತುಗಳನ್ನೊಳಗೊಂಡ ಸಾಲುಗಳು ನಿಜಕ್ಕೂ ಅದ್ಭುತ, ಅಮೋಘ ,ಅದ್ವಿತೀಯವೆನಿಸುತ್ತಿವೆ.

ಕವಯಿತ್ರಿ ಬರೆದಿರುವ ಕಾವ್ಯದಲ್ಲಿ ಹತ್ತಾರು ವಿಧದಲ್ಲಿ ವಿಷಯವಸ್ತುಗಳು ಮೇಳೈಸುತ್ತಿವೆ.ಹರಿತ, ಲಲಿತ, ಕೌತುಕತೆ, ಮಾಧುರ‍್ಯ, ಮ್ಲಾನ ಎಂಬ ದಾರಿಗಳನ್ನು ಆರಿಸಿಕೊಂಡು ತಮ್ಮ ಬರವಣಿಗೆಯೊಳಗೆ ತೋರಿಸಿರುವರು.ತಮ್ಮ ಕಾವ್ಯದ ಆಶಯಕ್ಕೆ ಎಲ್ಲೂ ಕೂಡ ಯಾವುದೇ ರೀತಿಯಲ್ಲೂ ಮತ್ತು ಮೂಲದ್ರವ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ತಮ್ಮ ಸಾಹಿತ್ಯೋಪಮೆಯನ್ನು ಬಳಸಿರುವುದು ಶ್ಲಾಘನೀಯವಾಗಿದೆ. ಇಲ್ಲಿ ಕವಯಿತ್ರಿಯು ತಮ್ಮ ಶಬ್ಧಭಂಢಾರಕ್ಕಿಂತಲೂ ಕವಿತೆಗೆ ಬೇಕಾಗಿರುವಂತಹ ಪರಿಕರ ಮತ್ತು ರೂಪಕಗಳು ಬಳಸಿಕೊಂಡು ಅದ್ಭುತವಾದ ಕವನಗಳನ್ನು ರಚಿಸಿರುವುದನ್ನು ನಾವು ಈ ಸಂಕಲನದೊಳಗೆ ನೋಡಬಹುದಾಗಿದೆ. ಹೇಳಬೇಕಾದ ವಿಷಯ ಅಥವಾ ಮುಟ್ಟಿಸಬೇಕಾದ ಸಂದೇಶವನ್ನು ಔಚಿತ್ಯಪೂರ್ಣವಾಗಿ ಹಾಗು ಔನ್ನತ್ಯವಾಗಿ ಮನಃಪೂರ್ವಕವಾಗಿ ಎಷ್ಟು ಅಗತ್ಯವೋ ಅಷ್ಟೆ ಪ್ರಮಾಣದ ಸಾಹಿತ್ಯ ಲೇಪನವನ್ನು ಇಲ್ಲಿ ಅನುಸರಿಸಿರುವುದು ತುಂಬಾ ಸೊಗಸಾಗಿದೆ. ಕಾವ್ಯದ ಅಚ್ಚುಕಟ್ಟು, ಬಳಸಿರುವ ನಿಯಮಗಳು, ಅವರ ಚಾಕ್ಯತೆ, ಹುಟ್ಟು ಹಾಕಿದ ಕವನ ಶೀರ್ಷಿಕೆಗಳನ್ನೊಂದಿಗೆ ಬರೆದಿರುವ ಕವನದ ಸಾಲುಗಳು ನಿಜಕ್ಕೂ ಯಶಸ್ವಿಪೂರ್ಣ ಕೈಂಕರ್ಯವೆಂದರೆ ತಪ್ಪಾಗಲಾರದು..

ಕವಯಿತ್ರಿಯ ಕಾವ್ಯವೆಂಬ ಹೃದಯದೊಳಗೆ ಹತ್ತು ಹಲವು ಕವನಗಳು ತಮ್ಮ ಕಲ್ಪನಾ ಲೋಕದ ಕಾಲ್ಪನಿಕತೆಯನ್ನು ಎತ್ತಿ ತೋರಿದರೆ ;ಮತ್ತೊಮ್ಮೆ ನವಿರುತನ ,ಬಂಧ, ಅನುಬಂಧಗಳ ಬಗ್ಗೆ ವಾತ್ಸಲ್ಯ,ಸಲ್ಲಾಪ , ಪ್ರೀತಿ ,ಸ್ನೇಹಗಳು ,ಭಕ್ತಿ ಪ್ರದಾಯಕ ಗೀತೆಗಳನ್ನು ವಿಮರ್ಶಾತ್ಮಕವಾಗಿಯೇ ಅರುಹಿರುವರು;

ಕವಯಿತ್ರಿ ತಮ್ಮ ಮಾತಿನಲ್ಲಿಯೇ ತಮ್ಮ ಭಾವನೆಗಳಿಗೆ ಅಕ್ಷರ ರೂಪ ನೀಡಿರುವುದಂತು ಅದ್ಭುತವೆನಿಸಿದೆ.ಇಲ್ಲಿ ಅವರ ಎಲ್ಲಾ ಕವನಗಳನ್ನು ಓದಿ ಅರ್ಥೈಸಿಕೊಳ್ಳಲು ಸುಲಭವಾಗಿವೆ.
ತಮ್ಮ ಮನಸ್ಸು, ಹೃದಯ, ಮೆದುಳುಗಳೆಂಬ ಅಂತರಂಗದ ಮೂಲಕ ಬರಹ ರೂಪದಲ್ಲಿ ಅಭಿವ್ಯಕ್ತಿಸುತ್ತಿರುವ ವಿಧಾನ ನಿಜಕ್ಕೂ ಖುಷಿಯಾಗುವುದು.ಎಲ್ಲಾ ಕವನಗಳು ಕೂಡ ಒಂದೇ ತೆರನಾಗಿರುವುದಿಲ್ಲ.ಪ್ರತಿ ಕವನಗಳು ತಮ್ಮದೆ ಆದ ವಿಧಾನ ,ಅರ್ಥ, ಕೌಶಲ್ಯಗಳನ್ನು ಹೊಂದಿರುವೆಂದು ಸಾಬೀತು ಪಡಿಸುತ್ತ ವಿಷಯ ವಸ್ತುವಿನ ತಳಹದಿಯೊಂದಿಗೆ ಕವನಗಳ ಸಾಲುಗಳನ್ನು ಹೆಣೆದಿದ್ದಾರೆ.

ಕವಯಿತ್ರಿಯ ಕಾವ್ಯವೆಂಬ ಹೃದಯದೊಳಗೆ ಹತ್ತು ಹಲವು ಕವನಗಳು ತಮ್ಮ ಕಲ್ಪನಾ ಲೋಕದ ಕಾಲ್ಪನಿಕತೆಯನ್ನು ಎತ್ತಿ ತೋರಿದರೆ ;ಮತ್ತೊಮ್ಮೆ ನವಿರುತನ ,ಬಂಧ, ಅನುಬಂಧಗಳ ಬಗ್ಗೆ ವಾತ್ಸಲ್ಯ,ಸಲ್ಲಾಪ , ಪ್ರೀತಿ ,ಸ್ನೇಹಗಳು ,ಭಕ್ತಿ ಪ್ರದಾಯಕ ಗೀತೆಗಳನ್ನು ವಿಮರ್ಶಾತ್ಮಕವಾಗಿಯೇ ಅರುಹಿರುವರು;

ದನಿ ಎತ್ತುವುದು. ಹೀಗೆ ತಮ್ಮ ಕವನ ಸಂಕಲನದಲ್ಲಿ ಪ್ರಕೃತಿಯ ಚೆಲುವು ಒಲವು ಬಾಂದಳದ ಹೊಳಪು ಚಂದಿರನ ಬೆಳಕು ಅಮ್ಮನಿಲ್ಲದ ಮಗುವಿನ ಅನಾಥ ಪ್ರಜ್ಞೆ ಹಲವಾರು ಮಾರ್ಮಿಕ ಸಾಲುಗಳನ್ನೊತ್ತು ಬಂದಿರುವ ಈ ಸಂಕಲನ ಪ್ರಚಲಿತ ವಿಷಯವಸ್ತುವಿನ ಚಿತ್ರಣವನ್ನು ಅತ್ಯಂತ ಸುಂದರವಾಗಿ ತೋರಿಸಿರುವುದು ಶ್ಲಾಘನೀಯವಾಗಿದೆ. ಒಟ್ಟಾರೆಯಾಗಿ ತಮ್ಮ ಮನಸ್ಸು ಏನು ಹೇಳುತ್ತದೋ ಅದನ್ನೆ ಯಥಾವತ್ತಾಗಿ ಈ ಸಂಕಲನದಲ್ಲಿ ಬಿತ್ತರಿಸಿರುವುದು ಕವಯಿತ್ರಿಯ ಚಾಕಚಕ್ಯತೆಯಾಗಿದೆ.ಇವರ ಕಾವ್ಯ ನಿರ್ಮಿತಿಯ ಶೈಲಿ ಪದಪುಂಜಗಳ ಬಳಕೆ ಅವುಗಳ ಅರ್ಥವೈಶಾಲ್ಯತೆ ಭಾಷೆಯ ಮೇಲಿನ ಹಿಡಿತ ಭಾಷಾ ಪ್ರಬುದ್ಧತೆ ಎಲ್ಲವೂ ಅದ್ಭುತವಾಗಿದ್ದು,ಹೃದಯ ತಟ್ಟುವ ಕವನಗಳನ್ನು ಹೆಣೆದು ಪುಸ್ತಕವಾಗಿಸಿರುವ ಅವರ ಜಾಣ್ಮೆ ಸೊಗಸಾಗಿದೆ.ಅದೆಷ್ಟೊ ಕವನಗಳು ಬೆರಗು ಸೊಬಗನ್ನುಂಟು ಮಾಡಿದರೆ ಮತ್ತೊಂದಷ್ಟು ಕವಿತೆಗಳು ಚಿಂತನಾರ್ಹ ಬರಹಗಳ ಕೈಪಿಡಿ ಇದಾಗಿದೆ ಎಂದರೆ ತಪ್ಪಾಗಲಾರದು.

ಕವಯಿತ್ರಿಯ ಸಂಕಲದೊಳಗೆ ಪ್ರವೇಶಿಸಿದಾಗ
ಮುತ್ತು, ರತ್ನ ,ಹವಳದಂತಹ ಕವಿತೆಗಳನ್ನೋದಿ ಮನಸ್ಸು ಪುಳಕಗೊಂಡಿದ್ದಂತು ಸುಳ್ಳಲ್ಲ.

ಭೂಮಿ ಇವಳು”…..

ಭೂಮಿ ಇವಳು
ತುಂಬು ಗರ್ಭದಿಂದುದಿಸಿದ
ಹಸಿರು ಚಿಗುರುಗಳ ಅಪ್ಪಿ ಹಿಡಿವಳು
ತನ್ನೊಡಲ ನೋವು ನಲಿವಿನಲೆಂದು
ಹೂಯ್ದೂಟಕ್ಕೆ ಸಾಗರವಾದಳು
ಇವಳೆದೆಯೆ ಅಗೆದು

ಬೋಳು ಬಯಲಾಗಿಸಿದವರನ್ನೆಲ್ಲಾ
ಮತ್ತೆ ಮತ್ತೆ ಕ್ಷಮಿಸಿ ತಬ್ಬಿದವಳು…

ತುಂಬಿದ ಬಸುರಿಯಾಗಿ ತನ್ನೊಳಗೆ ಹಸಿರು ಹೊದ್ದು ಕಂಗೊಳಿಸುವ ಭೂಮಿ ತನ್ನ ಒಡಲಿಂದ ಉದಿಸಿದ ಹಸಿರು ಚಿಗುರಗಳ ಅಪ್ಪಿ ನಲಿವ ರೋಮಾಂಚನ ಅದ್ಭುತ ,ಅಮೋಘ, ಅನನ್ಯವಾದುದು.ಹಾಗಾಗಿ ಭೂತಾಯಿಗೆ ನಾವು ಸದಾ ಕೃತಜ್ಞರಾಗಿರಬೇಕೆ ವಿನಃ ಕೃತಘ್ನರಾಗಬಾರದು ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಹೇಳುವುದರ ಮೂಲಕ ಉಣ್ಣಿಸುವ ಪರಿಯಲ್ಲಿರುವ ಉಪಕಾರ ಸ್ಮರಣೆಗೆ ಮತ್ತೊಂದು ಉದಾಹರಣೆ ನೀಡುವುದು ಅಸಾಧ್ಯವೆಂಬುದನ್ನು ಈ ಕವನದಲ್ಲಿ ತಿಳಿಸಿಕೊಟ್ಟಿದ್ದಾರೆ.ಭೂತಾಯಿ ನಮ್ಮ ಮಾತೃದೇವತೆ ;ಅವಳಿಲ್ಲದೆ ನಾವಿಲ್ಲ ಆದರೆ ಇಂದು ಅವಳ ಗರ್ಭವನ್ನೆ ಸೀಳುತ್ತಿದ್ದಾರೆ. ಆಳದಿಂದ ಜೆಸಿಬಿ ಬಳಸಿ ಮಣ್ಣು ತೆಗೆಯುವುದರಿಂದ ಅಕ್ಕ ಪಕ್ಕದ ಜಮೀನಿಗೂ ಅಪಾಯ ಉಂಟಾಗುವುದಲ್ಲದೆ; ಇದರಿಂದಾಗಿ ಭೂ ಕುಸಿತ ಉಂಟಾಗಬಹುದು ಅಥವಾ ಅಂತರ್ಜಲ ಕುಸಿತವಾಗಬಹುದು.ಹಾಗಾಗಿ ದಯಮಾಡಿ ಎಲ್ಲರು ಅಕ್ರಮ ಕಲ್ಲುಗಣಿಗಾರಿಕೆ, ಅರಣ್ಯ ನಾಶವನ್ನು ನಿಲ್ಲಿಸಿ.ಮಣ್ಣಿಗಾಗಿ ಗುಡ್ಡಗಳ ಒಡಲನ್ನೂ ಬಗೆದು ಬೋಳು ಮಾಡಬೇಡಿ ಎಂದು ಉತ್ತಮ ಸಂದೇಶವನ್ನು ನೀಡಿದ್ದಾರೆ..

“ಸ್ಪರ್ಶ ಶಿಲೆ”……

ಖಾರ ಅರೆದರೆದು ಕೆಂಪಾದ ಕಲ್ಲೋ.?
ಒಗೆದೊಗೆದು ಬಟ್ಟೆ ಸವೆದ ಕಲ್ಲೋ.?
ನಿಟ್ಟುಸಿರಿಟ್ಟ ಜಗುಲಿಕಟ್ಟೆಯ ಕಲ್ಲೋ.?
ಮನೆಯ ಮುಂದಿನ ಚರಂಡಿಯ ಹೊಲಸು
ಮುಚ್ಚಿ ಮೌನವಾದ ಕಲ್ಲೋ.?
ಏನೆಂದು ಉತ್ತರಿಸುವುದು.?

ವಾವ್.! ಕವಯಿತ್ರಿಯ ಮನದೊಳಗೆ ಹರಿದಾಡುವ ಚಿಂತನೆಗಳಿಗೆ ದೊಡ್ಡದೊಂದು ಸಲಾಮು🙏🙏 ….
ಅದ್ಭುತ ಚಿಂತನಾಲಹರಿ ನಿಜಕ್ಕೂ ಊಹಿಸಲಾಗುವು..ಸ್ಪರ್ಶಶಿಲೆ ಶೀರ್ಷಿಕೆಯನ್ನೊತ್ತ ಸಾಲುಗಳು ಅತ್ಯಂತ ಅರ್ಥಪೂರ್ಣ ಹಾಗೆಯೆ ಕುತೂಹಲ ವಿಮರ್ಶಾತ್ಮಕತೆಯ ಅಡಿಯಲ್ಲೆ ಹರಿದಾಡುವ ಸಾಲುಗಳಿವೆ..
ಏಕೆ.? ಹೇಗೆ.? ಯಾವಾಗ.? ಎಂತಹ.| ಯಾವ.? ಏನು.? ಎಂಬ ಪ್ರಶ್ನೆಗಡಿಯಲ್ಲಿ ಬಂದಿರುವ ಪ್ರಶ್ನೆಗಳು..ಸತ್ಯ ಕೌತುಕಕ್ಕೆ ಎಡೆ ಮಾಡಿಕೊಟ್ಟಿವೆ
ಚಿಂತನೆಗೆ ಓರೆ ಹಚ್ಚುವಂತಿವೆ.ಸರಳ ಪದಗಳಿಂದಲೆ ಕಠಿಣ ಪ್ರಶ್ನೆಗಳೆಂಬ ಬಾಣ ಬೀಸಿರುವುದು ಚಿಂತನೆ ಹಾಗು ಮಂಥನಕ್ಕೆ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದೆ.
ಉತಯೋಗಿಸು ಕಲ್ಲುಗಳಿಗೂ ರೂಪವಿದೆಯೇ ಬಣ್ಣ ವಿದೆಯೇ .? ಎಂಬ ಪ್ರಶ್ನೆಗಳು ಎದೆಯಾಳಕ್ಕಿಳಿಯುವಂತೆ ಮಾಡಿವೆ..

ಯುಗಾದಿ”….

ಎದೆಯೊಳಗೆ ಪ್ರೇಮಪಚ್ಚೆಯ ಪದಕ
ಮುಖದಲ್ಲಿ ಮಂದಹಾಸದ ಬೆಳಕು
ಮುಂದೆ…..
ಅಗಾಧ ಅನಂತ ಅವಕಾಶದೊಳಗೆ
ಚಾಚಿಕೊಂಡಿರುವ ಅದೃಶ್ಯ ತೋಳುಗಳ
ಭರವಸೆಯ ಭವಿತವ್ಯದ
ಭರಪೂರ ಪ್ರೇಮಸೇತು ‘ಯುಗಾದಿ’

ಹೊಸವರುಷದ ಹೊಸತನದ ಗಾಳಿಯನ್ನು ಹೊತ್ತು ತರುವ ಈ ಯುಗಾದಿಯನ್ನು ಒಂದು ಪ್ರೇಮಸೇತುವಾಗಿ ವರ್ಣಿಸಿರುವುದು ಒಂಥರ ಆಶ್ಚರ್ಯ ಹಾಗು ಅನನ್ಯವೆನಿಸಿದೆ.
ಎದೆಯೊಳಗಣದ ಪ್ರೇಮಪಚ್ಚೆಯ ಪದಕವಿದು ಮೊಗದೊಳಗೆ ಹೊಳೆಯುವ ಮಂದಹಾಸವೆಂಬ ಬೆಳಕು.ಇನ್ನು ಮುಂದುವರಿದಂತೆ
ಇದೊಂದು ಅಗಾಧ, ಅನಂತ ,ಅವಕಾಶದೊಳಗೆ ಚಾಚಿಕೊಂಡಿರುವ ಭವಿತವ್ಯದ ಭರವಸೆಯ ಭರಪೂರವೆ ಈ ಪ್ರೇಮಸೇತುವೆ ಸ್ಪರ್ಶಕಲೆಯಾಗಿ ಸ್ಪಂದಿಸಿದೆ…

ಸಲ್ಲಾಪˌ”…..

ಮುಸ್ಸಂಜೆಗೂ ಈಗ ಮಾದಕ ಬೆಡಗು
ನಿಶೆ ಆವರಿಸುವ ಹೊತ್ತಲ್ಲಿ
ಮಗ್ಗುಲಿಗೆ ಅವನ ಹೆಗಲು ಒರಗಿ
ರಾಗ ಅನುರಾಗ ಚಿತ್ರಭಿತ್ತಿ
ಮಳೆಹನಿಗಳನ್ನು ಬಚ್ಚಿಟ್ಟುಕೊಂಡ
ನೀಲಿಯೊಳಗೆ
ಸಪ್ತವರ್ಣಗಳ ಹೋಳಿ

ಕವಯಿತ್ರಿಯ ಉಪಮಾನ ಉಪಮೇಯಗಳ ದಿಬ್ಬಣ ಪ್ರತಿ ಕವನಗಳಲ್ಲೂ ವೈಯ್ಯಾರವನ್ನು ಮೆರೆದಿವೆ ಎಂದರೆ ತಪ್ಪಾಗಲಾರದು. ಹಾಗೆಯೆ ಈ ಸಲ್ಲಾಪ ಹೆಸರಿಗೆ ತಕ್ಕಂತೆ ಕವಿತೆಯ ಮಜಲುಗಳನ್ನೆ ಕುಣಿಸಿ ಮೆರೆಸಿರುವರು.ಸಲ್ಲಾಪ ಗಂಡು ಹೆಣ್ಣಿನ ನಡುವೆ ನಡೆಯುವ ರಸಮಯ ಸುಸಂದರ್ಭವನ್ನು ಮುಸ್ಸಂಜೆಯ ಕೆಂಬಾರನಿಗೆ ಹೋಲಿಸಿ ಅವನ ಅಂದ ,ಚಂದ ,ಬಿಂಕು, ಬಿಗುಮಾನಗಳನ್ನು ನೀಲಾಜಾಲವಾಗಿ ಹೆಣೆದಿರುವ ಕವಯಿತ್ರಿಯ ಜಾಣ್ಮೆ ಚಾಕಚಕ್ಯತೆಗಳು ನಿಜಕ್ಕೂ ಮೆಚ್ಚತಕ್ಕದ್ದು.
ಮುಸ್ಸಂಜೆಯ ಸೂರ್ಯನ ರಂಗು ಅವನ ಒಲವು ಚೆಲುವು ಅವನೊಟ್ಟಿಗೂ ಗೂಡು ಸೇರಲು ತವಕಿಸುತಿರುವ ಹಕ್ಕಿಗಳ ಚಿಲಿಪಿಲಿ ಗಾನ ಮಾಧುರ್ಯ ಹಾರಾಡುತ್ತಿರುವ ಹಕ್ಕಿಗಳ ಸಾಲು ಸಾಲು ತೋರಣ ಕಂಗಳಿಗೆ ಅಬ್ಬಬ್ಬಾ!ಎನಿಸುವಂತಿದ್ದವು.ಇಂತರ ರಮ್ಯ ಮನೋಹರ ದೃಶ್ಯಗಳನ್ನು ಈ ಸಲ್ಲಾಪ ಕವಿತೆಯಲ್ಲಿ ಹೋಲಿಕೆಯೊಂದಿಗೆ ಬಿತ್ತರಿಸಿರುವ ವಿಧಾನ ನನಗಂತು ಅಪ್ಯಾಯಮಾನವೆನಿಸಿದ್ದಂತು ಸತ್ಯ..

ಹೀಗೆ ಕವಯತ್ರಿಯು ಇಲ್ಲಿ ಒಟ್ಟು ೩೬ ಕವನಗಳಲ್ಲು ಹಲವಾರು ವಿಚಾರಧಾರೆಗಳನ್ನು ಪ್ರಸ್ತುತಪಡಿಸಿರುವರು.ಕವಯತ್ರಿಯು ವಿಚಾರಪರತೆಯ ಅಡಿಯಲ್ಲಿ ಭೂಮಿ ಇವಳು ಎಂಬ ಭೂತಾಯಿಯ ಬಗ್ಗೆ ಪ್ರಾರಂಭಿಸುತ್ತ ಭೂತಾಯಿಗೆ ಮನುಜನಿಂದ ಆಗುತ್ತಿರುವ ಸಂಕಷ್ಟಗಳು, ತುಳಿತ ,ಅಗೆತ ಹೀಗೆ ಹಲವಾರು ನೋವುಗಳನ್ನು ತನ್ನೊಡಳೊಳಗೆ ತುಂಬಿಕೊಂಡಿರುವ ಭೂತಾಯಿಯ ಚೆಲುವು, ಒಲವುಗಳ ,ಒರತೆಯನ್ನು ವಿವರಿಸುತ್ತ;
ಲಯರೂಪಿಯ ಬಗ್ಗೆ ವರ್ಣನೆ ,ಹೊಸ್ತಿಲ ಹುಣ್ಣಿಮೆಯ ಸೌಂದರ್ಯ ,ನಿಗೂಢತೆ ,ಚಂದ್ರನ ಆಕರ್ಷಣೆ ,ಅವನೂರಿನ ಸೌಂದರ್ಯದ ವರ್ಣನೆ, ಸರಸ ,ಸಲ್ಲಾಪ ,ವಿರಹಗಳ ಬಗ್ಗೆ ಸುಂದರ ವಿವರಣೆ.’ಬುದ್ಧಂ ಶರಣಂ ಗಚ್ಛಾಮಿ’ ಬುದ್ಧ ಪೌರ್ಣಿಮೆಯ ಮಹತ್ವ, ಪೂಜೆ ಎರಡನ್ನು ಕುರಿತು ವಿಚಾರಧಾರೆ.ಅಮಲು ,ಘಮಲುಗಳ ಚಿತ್ರ ,ವಿಚಿತ್ರಗಳು. ಸ್ಪರ್ಶ ಶಿಲೆಯ ಮಹತ್ವದರಿವು. ಯುಗಾದಿ ಹೇಗೆ.? ಪ್ರೇಮಸೇತುವೆಯಾಗಿದೆ ಎಂಬುದರ ಕುತೂಹಲವನ್ನು ಏಕೆ.? ಹೇಗೆ.? ಯಾವ.? ಯಾವಾಗ.? ಯಾವುದರಿಂದ.? ಎಲ್ಲಿ .? ಹೀಗೆ ಹತ್ತು ಹಲವು ಪ್ರಶ್ನೆಗಳೊಂದಿಗಿನ ಕುತೂಹಲ ಕೆರಳಿಕೆ. ಪೌರ್ಣಿಮೆಯ ಚೆಲುವು, ಒಲವು ಅದರ ಪರಿಚಯ.ನಿಸರ್ಗದ ವೈಚಿತ್ರಗಳು ಸುಂದರತೆ ಸ್ಪಷ್ಟತೆಯ ನಿರೂಪಣೆ ಚಂದವಾಗಿದೆ.ನಲ್ಲ ,ನಲ್ಲೆಯ ಸಂಭಾಷಣೆ ,
ಸಂಪ್ರೀತಿಯ ಸಂವೇದನೆ ,ಸಾಂಗತ್ಯದ ಸಿಂಚನ, ನಂಬಿಕೆ ,ವಿಶ್ವಾಸಗಳ ಮೆಟ್ಟಿಲತ್ತಿ ಕಾರ್ಯತತ್ಪರತೆಯೊಳಗೆ ಸತ್ಯದ ಪರಾಕಾಷ್ಟೆಯನ್ನು ವಿಜೃಂಭಿಸಿದ ಬಗ್ಗೆ ಸೊಗಸು. ಸಮಯ,ಚೆಲುವು, ಬೆಳಗಿನ ಅದ್ಭುತ ದೃಶ್ಯಾವಳಿಗಳು ಬಹಳ ಸುಂದರವಾಗಿ ಮೂಡಿಬಂದಿವೆ. ಇಲ್ಲಿ ಕವಯತ್ರಿಯ ಚಾಕಚಕ್ಯತೆ ಸಹನೆ, ಪದಪುಂಜಗಳ ಬಳಕೆ ಭಾಷೆಯ ಮೇಲಿನ ಹಿಡಿತ ಎಲ್ಲವೂ ತುಂಬಾ ಲಾಲಿತ್ಯಪೂರ್ಣವಾಗಿದೆ;ಇಲ್ಲಿರುವ ಹೆಚ್ಚು ಕಡಿಮೆ ಕವನಗಳು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿವೆ.
ಕವಯತ್ರಿಯ ಎಲ್ಲಾ ಕವನಗಳು ಉತ್ತಮ ರಚನೆಗಳಾಗಿದ್ದು ಮುಂಬರುವ ಹೊತ್ತಿಗೆಯಲ್ಲಿ ಮತ್ತಷ್ಟು ಹೊಸತನ ಹೊತ್ತು ತರಲೆಂದು ಆಶಿಸುವೆ…

ಈ ಒಂದು ಕೃತಿಗೆ ಅಮೋಘವಾಗಿ ಮುನ್ನುಡಿ ಹಾಗೂ ಬೆನ್ನುಡಿಯನ್ನು ತುಂಬಾ ಸುಂದರವಾಗಿ ಬರೆದಿರುವಂತಹ ಕೇಶವ ಮಳಗಿ ಸರ್ ಹಾಗು ಈ ಕೃತಿಗೆ ಶುಭ ನುಡಿಯನ್ನು ಗಣೇಶ ಅಮೀನಗಡ ಸರ್ ರವರು ಬಹಳ ಸೊಗಸಾಗಿ ಬರೆದಿರುವರು.

       ಕವಯತ್ರಿರವರ ಬರಹದೊಳಗಿನ ಅಪಾರ ಜ್ಞಾನ ವಿದ್ವತ್ ನನಗಂತು ತುಂಬಾ ಇಷ್ಟವಾಯಿತು ,ಇವರ ಕವನಗಳಲ್ಲಿ ಒಳರ‍್ಥ ರ‍್ಥಮಾಡಿಕೊಂಡು ಓದಿದಾಗ ಮನಸ್ಸಿಗೆ ಉಲ್ಲಾಸ ಉತ್ಸಾವನ್ನುಂಟು ಮಾಡುವುದಂತು ಸತ್ಯ.ಇವರ ಜಾಣ್ಮೆ ಸೃಜನಶೀಲತೆ ಈ ಕೃತಿಯಲ್ಲಿ ತುಂಬ ಸುಂದರವಾಗಿ ಮೂಡಿ ಬಂದಿದೆ. ಇವರ ಕವನ ರಚನಾ ಕೌಶಲ್ಯ ಮತ್ತಷ್ಟು ಹೆಚ್ಚಲಿ. ಸಾಹಿತ್ಯ ಪ್ರಿಯರು ಈ ಸಂಕಲನವನ್ನು ಪ್ರೀತಿಯಿಂದ ಓದುತ್ತಾರೆಂಬ ಭರವಸೆಯಲ್ಲಿ ಶುಭಹಾರೈಸುವೆ…

ಅಭಿಜ್ಞಾ .ಪಿ.ಎಮ್.ಗೌಡ

3 thoughts on “ಕೆ.ಎನ್.ಲಾವಣ್ಯ ಪ್ರಭಾರವರ ಸಂಕಲನ ‘ಸ್ಪರ್ಶ ಶಿಲೆ’

  1. ಬಹಳ ಚೆನ್ನಾಗಿ ಗ್ರಹಿಸಿದ್ದಿರ
    ಅಭಿನಂದನೆಗಳು ಇಬ್ಬರಿಗೂ

Leave a Reply

Back To Top