ಅಡಿಗರ ಸಾಕ್ಷಿ ಪತ್ರಿಕೆ 37ನೇ ಸಂಚಿಕೆಯ ಮರುಓದು- ಭಾರತಿ ಅಶೋಕ್

ವಿಶೇಷ ಲೇಖನ

ಈಚಿನ ಕನ್ನಡ ಕವಿತೆಗಳ ಕುರಿತ

ಸಾಕ್ಷಿ ೩೭ನೇ ಸಂಚಿಕೆ

(ಹೇಮಂತ)ಯ ಮರು ಓದು”

ಎರಡನೆ ಭಾಗ-

ಆರೈಕೆ- ಪೋಷಣೆಯ ಕೊರತೆಯ ನಡುವೆಯು  ಪರಂಪರೆಯ ಮುಂದುವರಿಕೆ ಮತ್ತು ಇರುವ ಪೋಷಕಗಳನ್ನೇ  ಬಳಸಿಕೊಂಡು ಎದ್ದು ನಿಲ್ಲುವ ಗುಣವನ್ನು ”ಸಂಪರ್ಕ” ಕವಿತೆಯ ಮೂಲಕ  ಚಿತ್ತಾಲರು ತಮ್ಮ ಆಶಯವನ್ನು  ಪೋಷಿಸಿದ್ದಾರೆ. ರಾಷ್ಟ್ರದ ಬೆನ್ನೆಲುಬಾಗಿರುವ ಕೃಷಿಯನ್ನು ಮರೆತು ಕಾಂಕ್ರೀಟ್ ಕಾಡಾಗುತ್ತಿರುವ ಈವತ್ತಿನ ಸಂದರ್ಭದಲ್ಲಿ, ಆಧುನಿಕ ತಂತ್ರಜ್ಞಾನದ ಉನ್ನತ  ಶಿಖರದಲ್ಲಿದ್ದೇವೆ. ಅಭಿವೃದ್ಧಿಯ ನೆಪದಲ್ಲಿ ಭಾರತ ತನ್ನ ಮೂಲ ಕಸಬನ್ನು ಮರೆತಿರುವ  ಸಂದರ್ಭದಲ್ಲಿ ಚಿತ್ತಾಲರ ಈ ಕವಿತೆ ಅದರ ಅಣಕದಂತಿದೆ.
       ‘ಖಾಲಿ ಟಿನ್ನು ನಮ್ಮ ಮೌಢ್ಯತೆಯ ಸಂಕೇತವಾಗಿ “ಬೀದಿಯ ಧೂಳು” ಆಧುನಿಕತೆಯ ಹಲವು ಮಗ್ಗಲುಗಳನ್ನು ಪ್ರತಿನಿಧಿಸುತ್ತದೆ. ಆಧುನಿಕತೆಯು ನಮ್ಮ  ಮೂಲ ವೃತ್ತಿಗೆ ಮಾರಕವಾಗದಂತೆ  ಎಚ್ಚರ ವಹಿಸಬೇಕಾಗಿದೆ. ವೈಜ್ಞಾನಿಕ ಸಂಶೋಧನೆಗಳು ಜಿಡ್ಡುಗಟ್ಟಿದ ನಮ್ಮ  ಸಮಾಜದ ಕಂದಾಚಾರಗಳನ್ನು ತೊರೆದು, ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತರಾಗಿರುವ ಕಸಬನ್ನು ಇನ್ನು ಉನ್ನತಿಕರಿಸಿ, ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಿ ಅದರಿಂದ ಅವಲಂಬಿತರನ್ನು ಸ್ವಾವಲಂಬಿಗಳನ್ನಾಗಿಸುವುದರ ಜೊತೆಗೆ ಅವರ ಜೀವನಮಟ್ಟವನ್ನು ಹೆಚ್ಚಿಸಿ ಅವರ ವೈಯುಕ್ತಿಕ ಆದಾಯವನ್ನು ಹಾಗೆ ರಾಷ್ಟ್ರೀಯ ಆದಾಯವನ್ನು ಹೆಚ್ಚಿಸುವಂತಿರಬೇಕು.
    ಇಂಗ್ಲೆಂಡ್ ತನ್ನ ಮೂಲ ವೃತ್ತಿಯನ್ನು ಮರೆತು ಕೈಗಾರಿಕರಣಕ್ಕೆ ಹೆಚ್ಚಿನ ಮಾನ್ಯತೆ ನೀಡಿದ್ದರಿಂದಾಗಿ ಮೂಲ ಅಸ್ಥಿತ್ವವನ್ನೇ ಕಳೆದುಕೊಂಡತು. ಇನ್ನು ಕ್ಯೂಬಾ ಆಧುನಿಕ ಯಂತ್ರೋಪಕರಣಗಳನ್ನು ತನ್ನ ಮೂಲ ಕೃಷಿ ಉತ್ಪನ್ನವಾದ ಕಬ್ಬಿನ ಬೆಳೆಗೆ ಪೂರಕವಾಗಿ ಬಳಸಿಕೊಂಡು ಸಕ್ಕರೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿ ಸಕ್ಕರೆ ಖಣಜವಾಗಿ ತಲೆ ಎತ್ತಿ ಮೆರೆಯುತ್ತಿದೆ. ನಾವು ಎಷ್ಟೇ ಸಾಧಿಸಿದರೂ ಬದುಕಲು ನೆಲವನ್ನು ಆಶ್ರಯಿಸಲೇಬೇಕು. ಪ್ರಕೃತಿಯ ಮುಂದೆ ಮಾನವ ಮುಗ್ದ ಮಗುವಾಗಿ, ಪ್ರಕೃತಿಗೂ ಜೀವಕ್ಕೂ ನಡುವೆ  ಭೂಮಿ ಸಂಪರ್ಕ ಸೇತುವೆಯಾಗಿ ಕಾಣ್ಕೆ ನೀಡುವುದು. ಕೃಷಿಯನ್ನು ಕಡೆಗಣಿಸುತ್ತಿರುವ ಸಂದರ್ಭದಲ್ಲಿ ಚಿತ್ತಾಲರು ಭವಿಷ್ಯದ ಬಗ್ಗೆ ಚಿಂತನೆ ನಡೆಸಿದ್ದಾರೆ.

      ಎಲ್ಲಾ ಸಾಹಿತ್ಯದಂತೆ ಕನ್ನಡ ಸಾಹಿತ್ಯವೂ ಸಹ ಅಂದಂದಿನ ರಾಜಕೀಯದ ಸ್ಪಂದನೆಯಾಗಿದೆ. ಆಧುನಿಕ ಕನ್ನಡ ಕಾವ್ಯವು ಬದಲಾದ  ರಾಜಕೀಯ ಘಟನೆಯೊಂದಿಗೆ ಬದಲಾವಣೆಗಳೊಂದಿಗೆ ಬೆಸೆದುಕೊಂಡಿದೆ. ಸ್ವಾತಂತ್ರ ಪೂರ್ವದಲ್ಲಿದ್ದ ಸಮಷ್ಟಿ ಪ್ರಜ್ಞೆ ಆ ಕಾಲದ ರಾಜಕೀಯದಿಂದ ಪ್ರೇರಿತವಾಗಿದ್ದು, ಸ್ವಾತಂತ್ರ್ಯಾನಂತರ ವ್ಯಕ್ತಿ ಸ್ವತಂತ್ರ್ಯದ ಚಿಂತನೆ ನಡೆದು ಆ ಕಾಲದ ಕಾವ್ಯವು ಸಹ ವ್ಯಕ್ತಿ ಕೇಂದ್ರಿತ ನೆಲೆಯಲ್ಲಿ ರಚನೆಗೊಳ್ಳುವುದು ಅನಿವಾರ್ಯವಾಯಿತು. ಈ(ನವ್ಯ) ಪ್ರಜ್ಞೆ ಪಾಶ್ಚಾತ್ಯ ಸಾಹಿತ್ಯದ ಪ್ರಭಾವವೆಂತಾಗಲಿ ಅಥವಾ ಅಡಿಗರ ವೈಯುಕ್ತಿಕ ಅಗತ್ಯವೆಂತಲೋ ಹೇಳುವುದಕ್ಕಿಂತ  ಅದೊಂದು ಆ ಕಾಲದ ರಾಜಕೀಯ ಸಾಮಾಜಿಕ ಅಗತ್ಯವೆಂದೇ ಹೇಳಿದರೆ ತಪ್ಪಾಗುವುದಿಲ್ಲ. ೧೯೬೦ರ ಭಾರತ ರಷ್ಯಾ ಒಪ್ಪಂದವೂ ಅಂದಿನ ರಾಜಕೀಯದ ಒಂದು ಸಾಹಿತ್ಯದ ಪ್ರಮುಖ ಘಟ್ಟವೂ ಆಯಿತು. ಅಂದರೆ, ಕನ್ನಡ ಕಾವ್ಯ ಭಾರತದ ರಾಜಕೀಯ ಸಂದರ್ಭದೊಡನೆ ನೇರ ಸಂಬಂಧ ಪಡೆದು ಸೃಷ್ಠಿಯಾಗಿದೆ ಎಂಬುದಕ್ಕೆ ಅಡಿಗರ ಇತ್ತೀಚಿನ ಕವನಗಳೂ ನಿದರ್ಶನವಾಗುತ್ತವೆ.  ೭೬ ರಿಂದೀಚೆಗೆ ಬಂದ  ಅಡಿಗರ ನಾಲ್ಕುಕವಿತೆಗಳಲ್ಲಿ (೧) ಸಾಮಾನ್ಯನಂತೆ ಈ ನಾನು(೨)ನಿನ್ನ ಗದ್ದೆಗೆ ನೀರು.(೩)ಅಜ್ಞಾತವಾಸ. (೪)ಪೌರುಷದ ಪರಿಪಾಠಿ.

          “ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು” ಈ ಕವಿತೆಯ  ತಾತ್ವಿಕತೆ ಸ್ವಾತಂತ್ರ್ಯಾ ನಂತರ ಸಂದರ್ಭದಲ್ಲಿ ತಮ್ಮದೇ ಭಾವನೆಯ ನಾಡನ್ನು ಕಟ್ಟುವುದಕ್ಕಾಗಿ ಮೌಢ್ಯದಿಂದ ಮಲಗಿದ ದಾಸ್ಯವನ್ನೇ ನಿಜವೆಂದು ನಂಬಿ ಕುಳಿತಿರುವ  ಜನರೇ ಎದ್ದೇಳಿ, ರಕ್ತ ಹೀರುವ ತಿಗಣೆಗಳನ್ನು, ಕರುಳು ಬಗೆಯುವ ನರಿ ನಾಯಿಗಳನ್ನು ನೀವೆದ್ದು ಹೂಂಕರಿಸಿದರೆ ಬಿಟ್ಟೋಡುವವು ದೂರಕೆ ಎನ್ನುವುದಾಗಿತ್ತು. ನವೋದಯದ ಕೇಂದ್ರವನ್ನು ಹೊಂದಿದ ಈ ಕಾವ್ಯ ಎಲ್ಲರನ್ನು ಬಡಿದೆಬ್ಬಿಸುತ್ತದೆ. ಎಲ್ಲರೂ ಒಕ್ಕೊರಲಿನಿಂದ ಕೂಗಿ  ಸುಲಿಗೆಯಾಗಿದ್ದು ಸಾಕು, ಅಣ್ಣ ತಮ್ಮ, ಅಕ್ಕ ತಂಗಿ ಎನ್ನುವ ಸಮಭಾವನೆ  ಬೆಳೆದರೆ ಈ ನರಕ ದೂರವಾಗಿ ಆ ಸ್ವರ್ಗ ಬಂದೇ ಬರುತ್ತದೆ ಎನ್ನುವುದಾಗಿತ್ತು.
     ತದನಂತರದಲ್ಲಿ ಬಂದ ಕವನಗಳು  ತಮ್ಮ ಚಿಂತನೆಗಳನ್ನು  ಸಮಷ್ಟಿಯನ್ನು ವ್ಯಕ್ತಿ ಮೂಲಕ ನೋಡುವ ಹೊಸ ದೃಷ್ಟಿಯತ್ತ ಹೊರಳಿಸಿದರು. ಆದರ್ಶವಾದಿಯ ಮನೋಭಾವವಾಗಲಿ, ಅಲ್ಲಿನ ಕನಸುಗಾರಿಕೆಯಾಗಲಿ ಇಲ್ಲಿ ಕಂಡುಬರುವುದಿಲ್ಲ. ಅವರದ್ದು ಅಂತರ್ಮುಖಿ ಆತ್ಮನಿರೀಕ್ಷಣ ಚಿಂತನೆ. ಇಲ್ಲಿ ಅನ್ವೇಷಣೆ ಅವರ ಮುಖ್ಯ ಕಾಳಜಿಯಾಗಿದೆ. ಅಡಿಗರ  ಮೊದಲಿನ ಮತ್ತು ಇತ್ತೀಚಿನ ಕವನಗಳ ಸಾಮ್ಯತೆ ಎಂದರೆ, ಅಬ್ಬರದ ಆವೇಶ ಅಂದು ಇಂದು ಹಾಗೆ ಇದೆ. ವಸ್ತುವಿನಲ್ಲಿರುವ  ಭಿನ್ನತೆ ಅದಕ್ಕೆ ಅವಕಾಶ ಮಾಡಿದೆ ಎಂದರೆ, ಅದು ಅಸಮರ್ಥನೀಯ ಕಾರಣವಾಗಲಾರದು. ಒಂದು ಸತ್ಯವೆಂದರೆ, ಅಡಿಗರ ಆತ್ಮನಿರೀಕ್ಷನ  ಕವನಗಳಂತೆ ಅವರ ಸಾಮಾಜಿಕ ರಚನೆಗಳು ಸಹ ಅತ್ಯುತ್ತಮ ರಚನೆಗಳಾಗಿವೆ.
     ತನಗೆ ನಿಜವೆನಿಸಿದ್ದು ಮತ್ತು ತಾನು ಹೇಳುವುದು, ಈ ಎರಡರ ನಡುವೆ  ಕಂದಕವಿರದಿದ್ದರೆ  ಅದು “ಸಾಹಿತ್ಯದಲ್ಲಿ ಪ್ರಾಮಾಣಿಕತೆ” ಎನ್ನುವ ಅಡಿಗರ ಈ ಅಭಿಪ್ರಾಯ ಸ್ವಲ್ಪ ಮಟ್ಟಿಗೆ ಸತ್ಯವಾದುದು. ಸಾಹಿತಿಗೆ ಭಾಷಾ ಬಳಕೆಯ ಜವಬ್ಧಾರಿ ಇರಬೇಕು. ಭಾಷೆ ಕೇವಲ ಅರ್ಥದ ವಾಹಕವಾಗದೇ, ಅನಭಾವದ ಅಭಿವ್ಯಕ್ತಿಯ ವಾಹಕವನ್ನಾಗಿಸುವಲ್ಲಿ ಅವನು ತುಂಬಾ ಜಾಗರೂಕನಾಗಿರಬೇಕು. ಉದಾ; ನಮ್ಮ ಅನುಭವವನ್ನು ಹೇಳುವಾಗ, ಅಥವಾ ನಮ್ಮ ಪ್ರಜ್ಞೆಯ ವಸ್ತುವಾದ ಸಂಸ್ಕೃತಿಯನ್ನು ನಿರೂಪಿಸುವಾಗ, ಭಾಷೆ ಅರ್ಥ ಪ್ರಕಟಣೆಗಿಂತ ಅನುಭವದ ಅಭಿವ್ಯಕ್ತಿಯಾಗಿ ನಿಲ್ಲುತ್ತದೆ. ಅನುಭವಕ್ಕೆ ಬಾರದ ಪ್ರಜ್ಞೆಯು ವಸ್ತುವಾದಾಗ, ಸಂಗತಿಗಳನ್ನು ಹೇಳುವಾಗ  ಭಾಷೆ ಅರ್ಥವಾಹಕವಾಗಿ ಮಾತ್ರ ದುಡಿಯುತ್ತದೆ. ತನ್ನತನವನ್ನು ಕಳೆದುಕೊಳ್ಳುತ್ತದೆ.
       “ಅಡಿಗರ ಕಾವ್ಯದ ಹುಟ್ಟು  ಪ್ರತಿಭಟನೆಯ ಒಡಲಲ್ಲಿ” ಪ್ರತಿಭಟನೆ ಅರ್ಥಪೂರ್ಣವಾದದ್ದು ಅವರ ಇತ್ತೀಚಿನ ಕವನಗಳು ಚಾರಿತ್ರಿಕ ಸಂದರ್ಭವೊಂದರಿಂದ ಮೂಡಿ ಬಂದಿರುವುದರಿಂದ ದೇಶದ ಇತಿಹಾಸದಲ್ಲಿ ಮಾತ್ರವೇ ಅಲ್ಲ, ಸಾಹಿತ್ಯದ ಇತಿಹಾಸದಲ್ಲೂ ಅದೊಂದು ದಾಖಲೆಯಾಗಿ ಉಳಿದಿದೆ. ಅವರ ಸಮಗ್ರ ಕಾವ್ಯದ ಹಿನ್ನಲೆಯಲ್ಲಿ ಸಾಮಾಜಿಕ ಕವನಗಳಿಗಿಂತ  ಅವರ ಆತ್ಮ ನಿರೀಕ್ಷಣ ಕವನಗಳು ಹೆಚ್ಚು ಸಾರ್ಥಕ  ರಚನೆಗಳು ಎನ್ನುವುದು ಅವರ  ಕಾವ್ಯಧೋರಣೆಯನ್ನು ನಿರ್ದೇಶಿಸುತ್ತದೆ.
     ಅಡಿಗರ ಇತ್ತೀಚಿನ ಕವನಗಳ ಬಗ್ಗೆ ಬರೆಯುವಾಗ, ಅವುಗಳ ಪ್ರಾಯೋಗಿಕ ವಿಮರ್ಶೆಯನ್ನಾಗಲಿ, ಅರ್ಥವಿವರಣೆಯನ್ನು ಮಾಡುವುದಲ್ಲ. ಅಂಥ ಪ್ರಯತ್ನದ ಫಲಿತವೂ ತೀರಾ ಸೀಮಿತವಾಗಿಬಿಡುತ್ತದೆ. ಹೀಗಾಗಿ ಅವರ ಒಟ್ಟಾರೆ ಕಾವ್ಯ ದೋರಣೆಯನ್ನು ಗುರ್ತಿಸುವ  ಕನ್ನಡ ಕಾವ್ಯ ಸಂದರ್ಭದಲ್ಲಿ, ಹಾಗೂ ಅಡಿಗರ ಸಮಗ್ರ ಕಾವ್ಯದ ಹಿನ್ನಲೆಯಲ್ಲಿ ಅವರ ಇತ್ತೀಚಿನ ಕವಿತೆಗಳ ಸ್ಥಾನವೇನೆಂಬುದನ್ನು ಮಾತ್ರ ಗುರ್ತಿಸಿದ್ದಾರೆ ಲೇಖಕರು.

    “ನ ಭೂತೋ ನ ಭವಿಷ್ಯತಿ” ಎನ್ನುವಂತೆ, ಸನಾತನ  ಸಂಸ್ಕೃತಿಯ ಬೇರುಗಳ ಸಹಾಯವಿಲ್ಲದೇ ಅದರ ಭವಿಷ್ಯದ ಚಿಗುರನ್ನು ಕಾಣಲು ಸಾಧ್ಯವಿಲ್ಲ “ಈ ಮರದ ತುದಿಗಿರುವ ಪುಟ್ಟ ಚಿಗುರೆಲೆಯೊಡನೆ ಬೆಳೆಯಲೇ ಬೇಕು ಬಹುಗಾಢ ಸ್ನೇಹ” ಮನುಷ್ಯ ಎಷ್ಟೇ ಸಾಧನೆ ಮಾಡಿದರೂ ಭೂಮಿಯಲ್ಲೇ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕು. ಆಧುನಿಕ ತಂತ್ರಜ್ಞಾನದ ತುತ್ತ ತುದಿಯಲ್ಲಿರುವ ನಾವುಗಳು ಭೂಮಿಯ ಬಂಧನದಿಂದ ದೂರ ಸರಿದು ಬದುಕಲು ಸಾಧ್ಯವಿಲ್ಲ. ಹೊಟ್ಟೆಗೆ ಅನ್ನವಿಲ್ಲದೇ ಬದುಕುಲೂ ಸಾಧ್ಯವಿಲ್ಲ ಎನ್ನುವ ಸತ್ಯ ಗೊತ್ತಿದ್ದರೂ ಸಂಪ್ರದಾಯಿಕ ವ್ಯವಸಾಯಕ್ಕೆ ಶರಣು ಹೊಡೆದು, ಆಧುನಿಕತೆಯತ್ತ ಮುಖ ಮಾಡಿದ್ದೇವೆ.  ಆದರೂ ಆ ಜ್ಞಾನವನ್ನು ಮಾನವನ ಪ್ರಗತಿಗೆ ಪೂರಕವಾಗಿ ಬಳಸಿಕೊಂಡು ಮುನ್ನೆಡೆಯಬೇಕು, ಹಳೇಯದು ಎನ್ನುವ ಅಸಡ್ಡೆಯನ್ನು ತೊರೆದು ಹೊಸದು ಎನ್ನುವ ಬಿಗುಮಾನ ಬಿಟ್ಟು ಎರಡರ ಮದ್ಯದ ಹೊಂದಾಣಿಕೆ ಬದುಕಿನ ಆಶಯವಾಗಬೇಕಾಗಿದೆ. ಎರಡರ ಸಮಾಗಮದಿಂದ  ಹಳೆಯ ತಲೆಮಾರಿನ ಸಂಪ್ರದಾಯಿಕ ಜ್ಞಾನದೊಂದಿಗೆ  ಹೊಸ ಪೀಳಿಗೆಯ ಆಧುನಿಕ ತಂತ್ರಜ್ಞಾನವೂ ಸೇರಬೇಕಾಗಿದೆ. ಅದನ್ನು  ಬೇರಿನಿಂದ ತುದಿಯ ಚಿಗುರಿನವರೆಗೂ ತಲುಪಿಸುವ ಮಾರ್ಗ ಕಂಡುಕೊಳ್ಳಬೇಕಾಗಿದೆ. ಕಾರಣ, ಅದನ್ನು ಭವಿಷ್ಯದ ಭವ್ಯವಾದ ಬದುಕನ್ನು ಸುಗವiವಾಗಿ ಮುನ್ನೆಡೆಸಲು ಮತ್ತು ಪರಂರೆಯ ಜ್ಞಾನ ನಿರಂತರವಾಗಿ ಹರಿದು, ಆ ಜ್ಞಾನಕ್ಕೆ ದಕ್ಕೆ ತರುವ ಹೊರಗಿನ ಯಾವ ಶತೃವೂ ಕೂಡ ಅದರೆದುರು ನಿಲ್ಲದಂತೆ  ಬಂದರು ತನ್ನದೆಂಬ ಅಭಿಮಾನದಿಂದ ಹೋರಾಡಿ ಪರಂಪರೆಯ ರಕ್ಷಣೆ ಮಾಡುವಂತಹ ಹೊಣೆಗಾರಿಕೆ ನಮ್ಮ ಯುವ ಪೀಳಿಗೆಗೆ ಬೇಕಾಗಿದೆ ಎನ್ನುವ ಆಶಯವನ್ನು ಮಾದವ ಕುಲಕರ್ಣಿ ಅವರ “ಚಿಗುರೆಲೆ ಮತ್ತು ಸ್ನೇಹ” ಕವಿತೆ ಹೊತ್ತು ನಿಂತಿದೆ

         ಜಾತ್ಯಾತೀತ ಭಾರತದಲ್ಲಿ, ಜಾತಿ ಜಾತಿಗಳ  ಕಿತ್ತಾಟ, ವೈಷಮ್ಯಗಳು ಇಂದು ಹಿಂದೆಂದಿಗಿಂತಲೂ ಜೋರಾಗಿವೆ. ಬಹುತ್ವ  ಭಾರತದ ಹೆಸರು ಹೇಳುತ್ತಲೇ ಏಕತಾನತೆ ಅಟ್ಟಹಾಸ ಮೆರೆಯುತ್ತಿದೆ.  ಬಡವನ ಬದುಕಿನ ಈ ಏಕತಾನತೆ, ನೀರವ ಮೌನಕ್ಕೆ ತಳ್ಳುತ್ತಿವೆ. ಉಳ್ಳವನ ಮುಖವಾಡದೊಳಗಿನ ನಾಟಕ  ಅರ್ಭಟಕ್ಕೆ ಅವನ ಕಿವಿ ಕಿವುಡಾಗಿವೆ. “ದೊಡ್ಡವರ ಐಷಾರಾಮಿ ಬದುಕಿನೊಳಗೆ ಬಡವನಿಗೆ ನೋ ಎಂಟ್ರಿ” ದೊಡ್ಡವ ಇನ್ನು ದೊಡ್ಡವನಾಗಿ, ಚಿಕ್ಕವ ಇನ್ನು ಚಿಕ್ಕವನಾಗುವ ಪರಿಸ್ಥಿಯನ್ನು ಕುಲೀನರ ಪರೆದೆಯ ಹಿಂದಿನ ಕಚ್ಛೆ ಹರುಕತನವನ್ನು ಕಂಡು ಕಾಣದಂತಿರಲೂ ಆಗದೆ, ಅತ್ತ  ರೊಚ್ಚಿಗೆದ್ದು ಶಿಕ್ಷಿಸಲೂ ಆಗದೆ  ತನ್ನದೆಲ್ಲವನ್ನು ಕಳೆದುಕೊಂಡು ಲೆಕ್ಕ ಸಿಗದ  ಸಮಾಜದಲ್ಲಿ  ಕೊಚ್ಚಿ ಹೋಗುತ್ತಿದ್ದಾನೆ. ಎಂದು ಜಯಂತ ಕಯ್ಕಿಣಿಯವರು ತಮ್ಮ  “ದಿನ ಮತ್ತೂ ಮತ್ತೊಂದು” ಕವಿತೆಯಲ್ಲಿ ನೊಂದು ನುಡಿಯುತ್ತಾರೆ.
      ಬಿಸಿಲಿನ ಬೇಗೆಗೆ ಒಣಗಿ ನಾರುತ್ತಿರುವ ಗಟಾರವೂ  ಮತ್ತೆ ಮಳೆಗಾಲಕ್ಕೆ ತುಂಬಿ ಹರಿಯುವ ನಿರೀಕ್ಷೆ, ಭರವಸೆ ಹೊತ್ತು ಕಾಯುತ್ತಿರುವಾಗ, ನಿರ್ಗತಿಕ ಅದಾವುದರ ಸೆಲೆ ಕಾಣುವ ಆಸೆ, ನಿರೀಕ್ಷೆ ಬಿಟ್ಟು ಅದೇ ಗಟಾರದ ಕೊಚ್ಚೆ ನೀರಿನಲ್ಲಿ ತನ್ನ ಬದುಕನ್ನು ತೇಲಿ ಬಡುವ ಬಡವನ ಪರಿಸ್ಥಿತಿಯನ್ನು ಕವಿತೆಯಲ್ಲಿ ತೊರಿಸುತ್ತಾರೆ. ಹೊಲಸು ನಾರುವ ಗಟಾರವೆಂಬ ಸಮಾಜದಲ್ಲಿ ಬಲಹೀನನ ಬದುಕು ತೀರಾ ಹೀನಾಯ. ಆದರೆ ಇಂಥ ಸಮಾಜದಿಂದ ಪ್ರೀತಿಯನ್ನು, ಅದರ ಆಲಿಂಗನದ ಬಿಸಿ ತಾಪದಿಂದ ಬೆಚ್ಚಿ ಬಿದ್ದು ಕಣ್ಣು ತೆರೆದರೆ ಮತ್ತೆ ನಿರಾಸೆ. ಏಕೆಂದರೆ ಅದು ನಿದ್ರೆಯಲ್ಲಿ ಕಂಡ ಕನಸು!  ಉಳ್ಳವನ  ಜೀವನೋತ್ಸಾಹದಲ್ಲಿ ವ್ಯಭಿಚಾರ ತಾರಕಕ್ಕೇರಿ ಪ್ರಕೃತಿಯೇ ನಿಶ್ಯಬ್ಧವಾಗಿ ಮಿಕ ಮಿಕ  ಕಣ್ಣು ಬಿಡುತ್ತಿರೆ “ಪ್ರಪಂಚದ ಎಲ್ಲಾ ಪಾಪಗಳಿಗೂ ಒಂದು ಕೊನೆ ಇದೆ, ಅದರ ಭಾರ ಹೆಚ್ಚಿದಂತೆ ಅಂತ್ಯವೂ ಸಮೀಪಿಸುತ್ತಿದೆ” ಎಂದು  ಸ್ವತಃ ತಾನೆ ಗೀತೆಯಲ್ಲಿ ಸಂಭವಾಮಿ ಯುಗೆ ಯುಗೆ ಎಂದು  ಘೋಷಿಸಿಕೊಂಡಂತೆ ಇಷ್ಟೆಲ್ಲಾ ಅನ್ಯಾಯ, ಅತ್ಯಾಚಾರ, ದೊಂಬೆ, ಗಲಬೆ ಹಿಂಸಾಚಾರಗಳು ನಡೆಯುತ್ತಿದ್ದರೂ, ಮತ್ತೆ ಮತ್ತೊಮ್ಮೆ ಸಂಭವಿಸುವ ಇರಾದೆ  ಇದೆಯೋ….? ಅಥವಾ ನೀನು  ಅವರ ಪಾಳೆಯಕ್ಕೆ ಸೇರಿಬಿಟ್ಟೆಯೋ….. ಎನ್ನುವ ಭರವಸೆ ಮತ್ತು ಅನುಮಾನಗಳ ದ್ವಂದ್ವದಲ್ಲಿ  ಆ ಭಗವಂತನನ್ನು ಪ್ರಶ್ನಿಸುತ್ತಾರೆ ಕಾಯ್ಕಿಣಿಯವರು.

      ಒಬ್ಬ ಕವಿಯ ಕಾವ್ಯ ಸೃಷ್ಟಿಯನ್ನು ಗಮನಿಸಿ, ಅದು ದೀರ್ಘವಲ್ಲವಿದ್ದರೂ ಅದನ್ನು ಪ್ರದಾನ               ಕಾವ್ಯವೆಂದು ಹೇಳಬಹುದು. ಸಮೃದ್ಧವಾದ ಅನುಭವವು  ಆ ಕವಿಯಿಂದ ಕಾವ್ಯ ಶರೀರವನ್ನು ಸೃಷ್ಠಿಸುವ ಶಕ್ತಿಯನ್ನು ನೀಡುತ್ತದೆ. ಒಂದು ಜೀವನ ವಿನ್ಯಾಸದ  ಸಾಕ್ಷತ್ಕಾರದ ಜೊತೆಗೆ, ಭಾಷಾ ಸಂಪನ್ಮೂಲವನ್ನು ಬಳಸಿಕೊಳ್ಳುವ, ಅದ್ಭುತ ಪ್ರತಿಭೆ ಆತನ ಮುಂದೆ ಹೊಸ ಸಾಧ್ಯತೆಗಳನ್ನು ಸೃಜಿಸಿ, ಸಂವೇಧನೆಗಳನ್ನು ವಿಸ್ತರಿಸುತ್ತ ಅದನ್ನು ಸೂಕ್ಷ್ಮಗೊಳಿಸುವುದು ಪ್ರದಾನವಾದ ಲಕ್ಷuವೆಂದು ಲೇಖಕರಾದ ಎಲ್ ಎಸ್ ಶೇಷಗಿರಿರಾವ್ ಅವರು ತಮ್ಮ “ಕಾವ್ಯ ಆಪೇಕ್ಷಿಸುವ ಶಿಸ್ತು ಅನೇಕರಿಗೆ ಅಪ್ರಿಯವೆಂದು ತೋರುತ್ತದೆ” ಎನ್ನುವ ಲೇಖನದಲ್ಲಿ ಹೇಳುತ್ತಾರೆ. ಅನುಭವ ಸಮೃದ್ಧಿ ಎಂದರೆ, ವೈವಿದ್ಯವೂ ಅದರಲ್ಲಿಯೇ ಇರುತ್ತದೆ ಎಂದರ್ಥ. ಕೆಲವು ಕವಿಗಳು ತಮ್ಮ ಬರವಣಿಗೆಯಲ್ಲಿ  ವೈವಿದ್ಯದ ಕೊರತೆಯಿಂದ  ಪ್ರಧಾನ ಕಾವ್ಯದ ರಚನೆಯಿಂದ  ವಂಚಿತರಾಗುತ್ತಾರೆ.  ದಿಗ್ಭ್ರಮೆ ಹಿಡಿಸುವ  ಬಾಳಿನ ವೈವಿದ್ಯದೊಡನೆ ಸೆಣಸಿ ಒಂದು ವಿನ್ಯಾಸವನ್ನು ಗುರುತಿಸುವ ಕವಿ ಕಾವ್ಯ ಸೃಷ್ಠಿಯಲ್ಲಿ ಈ ವಿನ್ಯಾಸ ಅವನ ಪ್ರತಿಭೆಯ ಕ್ರಿಯಾ ಪ್ರಕ್ರಿಯೆಯ ಭಾಗವಾದಾಗ, ಅದೊಂದು ಪ್ರಧಾನ ಕಾವ್ಯವೆಂದು  ಹೇಳಬಹುದು. ಆಗ ಕವಿ ತನ್ನ ಸಾಮಗ್ರಿಯ ಮೇಲೆ ಪ್ರಭುತ್ವ  ಸಾಧಿಸಿದ್ದಾನೆ ಎಂಬ ಅನುಭವಕ್ಕೆ  ಆಸ್ಪದ ಮಾಡಿಕೊಡುತ್ತದೆ. ಇಂತಹ ಪ್ರಭುತ್ವಕ್ಕೆ ಶಕ್ತಿ ಬೇಕು. ಈ ಶಕ್ತಿಯನ್ನು ಬೇಂದ್ರೆ ಅಡಿಗ ಮತ್ತು ಕುವೆಂಪು ರವರಲ್ಲಿ  ಭಾಷೆಯ ಹೊಸ ಸಾದ್ಯತೆಯನ್ನು, ಶ್ಲೇಷೆಯನ್ನು ದುಡಿಸಿಕೊಂಡ ರೀತಿಯಲ್ಲಿ ಕಾಣುತ್ತೇವೆ ಎಂದು ಲೇಖಕರು ಹೇಳುತ್ತಾರೆ.
   “ಇತ್ತೀಚೆಗೆ ಕನ್ನಡದಲ್ಲಿ ಕಾವ್ಯವು ಕ್ಷೀಣಿಸುತ್ತದೆ” ಎಂದರೆ ಅದಕ್ಕೆ  ಲೇಖಕರು ಎರಡು ಕಾರಣಗಳನ್ನು ಕೊಡುತ್ತಾರೆ,  ಒಂದು ನಮ್ಮ ಕಾಲದ  ಸಂದರ್ಭ ಇನ್ನೊಂದು ವಿಮರ್ಶೆಯ ಸ್ಥಿತಿ. ಕಾವ್ಯದ ಸೃಷ್ಠಿಗೆ ಅಗತ್ಯವಾದ “ಅಪ್ರೆಂಟಿಸಿಷಿಪ್” ಅವಧಿಗೆ ಬಹುಮಂದಿ ಸಿದ್ಧರಿಲ್ಲ.  ಕಾವ್ಯ ಸೃಷ್ಟಿ ಮಾಡುವ ಪ್ರತಿಭೆ ಇರುವವರೆಗೂ  ಕಥೆ, ಕವನ, ಚಲನಚಿತ್ರಗಳು ನೀಡುವ ಕ್ಷಿಪ್ರ ಮತ್ತು ವ್ಯಾಪಕ ಜನಪ್ರಿಯತೆಗೆ ಒಲಿಯುತ್ತಾರೆ. ಬರಹಗಾರನ  ವಿಚಾರದ ಪರಿಪಕ್ವತೆ, ಗಹನತೆಗಳಿಗಿಂತ  ಕ್ರಾಂತಿಯ ಲೇಪವೇ ಮುಖ್ಯವಾದ ವಾತಾವರಣದಲ್ಲಿ ವಿಚಾರಧಾರೆಯನ್ನು ಅರಗಿಸಿಕೊಳ್ಳಲು ಕಾವ್ಯ ಆಪೇಕ್ಷಿಸುವ ಶಿಸ್ತು ಅನೇಕರಿಗೆ ಅಪ್ರಿಯವಾಗಿ ಕಾಣುತ್ತದೆ ಇನ್ನು ಎರಡನೇ ಬಗೆಯ ಕಾವ್ಯ ಅಧ್ಯಯನವನ್ನು, ಸಂಯಮವನ್ನು ನಿರೀಕ್ಷಿಸುತ್ತದೆ.
      ವಿಡಂಬನೆಯು ಕಾವ್ಯದ ಜೀವಾಳವೆನ್ನುವ ಭಾವನೆ  ಬೆಳೆದದ್ದು ತೀರಾ  ದುರಾದೃಷ್ಟಕರ. ಹಾಸ್ಯ ಬರಹಗಾರನನ್ನು ಎಲ್ಲಿಗೆ ಒಯ್ಯುತ್ತದೆ,  ಬರಿಯ ವಿಡಂಬನೆ ಎಲ್ಲಿಗೆ ಒಯ್ಯುತ್ತದೆ ಎನ್ನುವುದನ್ನ ಷೇಕ್ಸ್‌ಪಿಯರ್, ಬೆನ್ ಜಾನ್ಸನ್ ಇವರ ಕಡೆಯ ನಾಟಕಗಳಲ್ಲಿ ಕಾನಬಹುದು. ಎಷ್ಟೋ ಮಂದಿ ಕವಿಗಳು ವಿಡಂಬನೆಗೆ ಜೋತು ಬಿದ್ದು ಬೆಳೆಯಲಾರದೇ ಹೋದರು. ವಿಡಂಬನೆಗಳಿಂದ ಬರುವ ಶೀಘ್ರ ಜನಪ್ರಿಯತೆ ಮೂಲಕ ಎಂಬುದು  ಸರ್ವವಿದಿತ. ಅಡಿಗರು ವಿಡಂಬನೆಗೆ ಸೋಲದೇ ಇದ್ದುದರಿಂದ ಬೆಳೆದರು.
       ಕಾವ್ಯ ಜನಸಾಮಾನ್ಯರನ್ನು ತಲುಪುವಂತಾಗಬೇಕಾದರೆ, ಜನ ಜೀವನದ ವಾತಾವರಣ, ಕಾವ್ಯ ಸಾಮಗ್ರಿಯು ವೈವಿಧ್ಯಮಯವಾಗಿದ್ದು, ಅದು ಜನರ ಬದುಕಿನ ಭಾಗವಾಗಿರಬೇಕು. ಅವರ ದಿನ ನಿತ್ಯದ ಆಗು ಹೋಗುಗಳು, ಬದುಕಿನ ಸುಖ ದುಃಖಗಳು ಕಾವ್ಯದ ಪರಿಕರಗಳಾದರೆ, ಅವರಿಗೂ ಅವುಗಳ ಪರಿಚಯವಿರುವುದರಿಂದ, ಅವು ಅವರ ಅನುಭವವೇ ಆಗಿರುವುದರಿಂದ ಮತ್ತು ಕಾವ್ಯದ ವಾಚನದಿಂದ ಸುಲಭವಾಗಿ ಗ್ರಹಿಸುವುದರಿಂದ ಅವರಿಗೆ ಬೇಗ ತಲುಪುತ್ತದೆ. ಹಾಗೆ ನೋಡಿದರೆ ಕಾವ್ಯದ ಒಂದೇ ಓದಿಗೆ ತನ್ನ ಒಳ ಹೊರಗನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಆದರೂ, ಓದಬೇಕು, ಓದಿ ಅದರ ಸತ್ಯಾಸತ್ಯತೆಯನ್ನು ಕಾಣಬೇಕೆಂಬ  ಭಾವನೆಯನ್ನು ಉಂಟುಮಾಡಬೇಕು

     “ ಒಂದು ಇನ್ನೊಂದನ್ನು ಆಕರ್ಷಿಸುತ್ತದೆ, ಹಾಗೆ ತನ್ನೊಳಗೆ ಆದನ್ನು ಬಿಡುತ್ತದೆ” ತನ್ನದಾಗಿಸಿ ಬಿಡುತ್ತದೆ ಮನುಷ್ಯ ಯಾವುದೋ ಒಂದು ಸಿದ್ಧಾಂತಕ್ಕೋ, ತತ್ವಕ್ಕೋ ಅಥವಾ ಒಂದು ಮೌಲ್ಯಕ್ಕೋ  ಒಂದು ಅಭ್ಯಾಸಕ್ಕೋ ಮೊದಲ ಸಲ  ತೆರೆದುಕೊಂಡಾಗ ಅದು ಅವನಿಗೆ ಅಪ್ಯಾಯಮಾನವಾಗಿ, ಆತ್ಮೀಯವಾಗಿ ಕಾಣುತ್ತದೆ, ಹಿತವೆನಿಸುತ್ತದೆ ”ಜಿಗಣೆ ತಲೆಹೊಕ್ಕದ್ದು ತಿಳಿಯಲೇ ಇಲ್ಲ, ಮೊದಲು ತಣ್ಣಗೇ ಇತ್ತು” ಅದು(ಯಾವುದಾದರೂ) ತನ್ನೊಳಗೆ ಬರುವುದು ತಿಳಿಯುವುದೇ ಇಲ್ಲ. ಕ್ರಮೇಣ ಅದು ಅವನಲ್ಲಿ ಅಂತರ್ಗತವಾಗುತ್ತಾ ಸಾಗುತ್ತದೆ- ಅವನಿಗೆ ತಿಳಿಯದಂತೆ. ಮುಂದೊಂದು ದಿನ  ಅವನನ್ನು ಸಂಪೂರ್ಣವಾಗಿ ಆವರಿಸಿಕೊಂಡು “ಅದು ಮತ್ತು ಅವನು” ಬೇರೆ ಎನ್ನುವ  ಭಾವ  ಹೊರಟು ಹೋಗಿ ಅದು ಅವನಾಗಿಬಿಡುವ ಸನ್ನಿವೇ಼಼ಷವನ್ನು  ಎನ್ ವಿ ಭಾಗ್ಯಲಕ್ಷ್ಮೀಯವರ  “ಜಿಗಣೆ ಮತ್ತು ನಾನು” ಎನ್ನುವ ಕವಿತೆಯ ಹಿನ್ನಲೆಯಲ್ಲಿ ನೋಡುತ್ತೇವೆ.
    ಮನುಷ್ಯ ತನ್ನ ದಿನನಿತ್ಯದ ಜೀವನದಲ್ಲಿ ಇಂತಹ ಹಲವಾರು ವಿಷಯ, ತತ್ವ,  ವ್ಯಕ್ತಿಗಳಿಗೆ ಮುಖಾಮುಖಿಯಾಗುತ್ತಲೇ ಇ್ತರುತ್ತಾನೆ.  ಅದರೊಂದಿಗೆ ಅವನ ಬದುಕು ಸಾಗುತ್ತಿರುತ್ತದೆ. ತನಗರಿವಿಲ್ಲದೇ ತಾನು  ವ್ಯಕ್ತಿ ಅಥವಾ ಸಿದ್ಧಾಂತಕ್ಕೆ ಒಳಗಾಗಿ ಅದು ತನ್ನ ಅರಿವಿಗೆ ಬರುವ ವೇಳೆಗಾಗಲೇ ಅದರಿಂದ ಹೊರ ಬರಲಾರದಷ್ಟು ಅದರ ಹಿಡಿತಕ್ಕೆ ಒಳಗಾಗಿರುತ್ತಾನೆ ”ಮಿದುಳೊಣಗಿ ಜಿಗಣಿಯಾಯಿತು” ವಿನಾಶದ ಅಂಚಿಗೂ ಒಯ್ಯುವ ಗುಣ ಅದಕ್ಕೆ ಇರುವುದು ಸತ್ಯ. ಉದಾ; ಮದ್ಯದ ಚಟ, ಯಾರದೋ ಒತ್ತಾಯಕ್ಕೋ, ಬಲವಂತಕ್ಕೋ ಅದರ ಸಹವಾಸಕ್ಕೆ ಒಳಗಾದರೆ, ಮೊದಲು ಮನುಷ್ಯ ಮದ್ಯವನ್ನು ಸ್ವಹಃ ಮಾಡಿದರೆ, ನಂತರ ಮದ್ಯ ಮದ್ಯವನ್ನು, ಕೊನೆಗೆ ಅದು ಅವನನ್ನೇ ಆಹುತಿ ಪಡೆದು ಬಿಡುತ್ತದೆ. ಎನ್ ವಿ ಭಾಗ್ಯಲಕ್ಷ್ಮೀಯವರು “ಜಿಗಣೆ” ಎನ್ನುವ  ಪ್ರತಿಮೆಯ ಮೂಲಕ ಬದುಕಿನ ತಾತ್ವಿಕತೆಯನ್ನು ಕಟ್ಟಿಕೊಟ್ಟಿದ್ದಾರೆ. ಜಿಗಣೆ ಒಮ್ಮೆ ಹಿಡಿದರೆ ರಕ್ತ ಹೀರಿ ಬಿಡುತ್ತದೆ ಅದರ ಕೆಲಸ ಅದು .

(ಮುಂದುವರೆಯುತ್ತದೆ- ನಾಳೆ ಮೂರನೆ ಮತ್ತು ಕೊನಯಕಂತು)


ಭಾರತಿ ಅಶೋಕ್.

Leave a Reply

Back To Top