ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಕವಿತೆ-ಮರದ ಕತ್ತಲಗಾಥೆ

ಕಾವ್ಯ ಸಂಗಾತಿ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಮರದ ಕತ್ತಲಗಾಥೆ

ಎಷ್ಟು ಶತಮಾನಗಳಿಂದ
ಈ ಮರ-
ಅದೆಷ್ಟು ಜನರಿಗೆ
ನೆರಳು ಕೊಟ್ಟಿದೆಯೋ…ಏನೋ..?

ತನ್ನ ಹಣ್ಣಲೆಗಳ ಕಳಚಿ
ಅದೆಷ್ಟು ಬಾರಿ-
ನಗ್ನವಾಗಿ ನಿಂತು
ಬೆಚ್ಚಿ ಬಿದ್ದಿದೆಯೋ..ಏನೋ..?

ಬೇರು ಕಣ್ಣಾಗಿ
ಭುವಿಯಾಳದಲ್ಲಿಳಿದು
ಚಿಗುರ ತೊಟ್ಟಿಲಾಗಲು
ಅದೆಷ್ಟು ಕಠೋರ
ತಪಸ್ಸು ಮಾಡಿದೆಯೋ..ಏನೋ..?

ಪರಿಮಳ ಹೊತ್ತು
ಹಣ್ಣು ಬಿಟ್ಟ-
ದಿನಮಾನಗಳಲ್ಲಿ
ಅದೆಷ್ಟು ಕಲ್ಲೇಟು ತಿಂದು
ಬಸವಳಿದು ವೇದನೆಗೊಳಪಟ್ಟಿದೆಯೋ….ಏನೋ..?

ತಂಗಾಳಿಗೆ ತಲೆ ಬಾಗಿ
ವಸಂತನ ಮೋಹಿಸಿ
ಪ್ರಸವ ವೇದನೆಯಲಿ
ಉಸ್ಹಿರಿಡಿದು
ಅದೆಷ್ಟು ಕೊಡಲಿಗೆ ಕೊರಳೊಡ್ಡಿದೆಯೋ…ಏನೋ..?

ಮಸಣದೊಳಗೆ
ಚಿತೆಯಾಗಿ-
ಹೆಣದ ಜೊತೆಯಲಿ
ತನ್ನನು ತಾನುರಿದು
ಅಸ್ಥಿಯಾಗಿ-
ಅದೆಷ್ಟು ಮನುಜರ ಋಣ ತೀರಿಸಿದೆಯೋ…ಏನೋ..?


ಶರಣಪ್ಪ ತಳ್ಳಿ ಕುಪ್ಪಿಗುಡ್ಡ

5 thoughts on “ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಕವಿತೆ-ಮರದ ಕತ್ತಲಗಾಥೆ

  1. ಅಸ್ಮಿತೆಯ ಹುಡುಕಾಟದ ಬದುಕಲ್ಲಿ ಮರಯಾವಾಗಲೂ ಪಟ್ಟಭದ್ರ ಬುನಾದಿ….ಚೆನ್ನಾಗಿದೆ ಕವನಸಹೋದರ

  2. ಮರಕ್ಕಿರುವ ಮಮಕಾರ ಮನುಜನಿಗಿಲ್ಲ ಇದು ಜನಜನಿತ ಸತ್ಯ… ಕವಿತೆ ಈ ಸತ್ಯದ ಸ್ಮರಣೆ….ಸುಂದರ ಅನಾವರಣ ಅಭಿನಂದನೆಗಳು ಸರ್….

  3. ಮರದ ರೂಪಕ ಮನುಜ ನಿರೂಪಕನಾಗಿ ಒಂದು ದುರಂತ ವಾಸ್ತವದ ಚಿತ್ರಣಗೈಯುವ ಕವನ ಕುಸುರಿ.
    ಭಲೇ…!!

Leave a Reply

Back To Top