ಕಾವ್ಯ ಸಂಗಾತಿ
ಅನಾರ್ಕಲಿ ಸಲೀಂ ಮಂಡ್ಯ
ನಾಲ್ಕೇ ತುತ್ತು ನೀಡಿ ಸಾಕು!
ಎದೆ ಸೀಳಿದರೂ
ನಾಲ್ಕಕ್ಷರವಿಲ್ಲವೆಂದು
ಅನುಕಂಪದಿ ನೀವೇ
ನುಡಿದ ಮಾತುಗಳನ್ನು
ಇಷ್ಟು ಬೇಗ ಮರೆತಿರಾ?
ಪಂಕ್ಚರ್ ಶಾಪ್,ಗುಜರಿ
ಬೀದಿ ಬೀದಿ ವ್ಯಾಪಾರದ
ನೊಂದ ಬದುಕು ನಿಮ್ಮದೆಂದು
ಕನಿಕರದಿ ಸಂತೈಸಿ ನಮಗಾಗಿ
ನೀವೂ ನೊಂದಿದ್ದು ಮರೆತಿರಾ?
ಎದೆಯೊಳಗೆ ಅಕ್ಷರ ಬಿತ್ತಿ
ಧರ್ಮ ಬದಿಗೊತ್ತಿ
ಅಕ್ಷರವೇ ಬಾಳಿನ ಬೆಳಕು
ಎಂದು ಹಿತವಚನ ನೀಡಿ
ಆಶೀರ್ವದಿಸಿದ್ದು ಮರೆತಿರಾ?
ಅವರವರ ಬೇಡಿಕೆ
ಅವರವರದು
ನಮ್ಮದೇನೂ ತಕರಾರಿಲ್ಲ
ಎಲ್ಲರನ್ನು ಸಲಹುವ ಪಾಲಕರು ನೀವು
ಇಲ್ಲ ಎನ್ನುವಿರಾ?
ಹಸನು ಬದುಕಿಗೆ ಪ್ರಾರ್ಥಿಸುವ
ಉಪವಾಸದ ಹೊತ್ತಲ್ಲೇ
ನಮ್ಮೆದುರಿದ್ದ ತುತ್ತನ್ನು
ಕಸಿದು ಕಿತ್ತು ಕೊಂಡಿರಲ್ಲ
ಸಮ್ಮತವೇ ಒಪ್ಪಿತವೇ ?
ಅಧಿಕಾರ ಬರುತ್ತದೆ, ಹೋಗುತ್ತದೆ
ಇಲ್ಲಿ ಯಾವುದೂ ಅಮರವಲ್ಲ
ಆದರೆ,ನಮ್ಮ ತುತ್ತು ಕಸಿದಿದ್ದು
ನ್ಯಾಯವೆನಿಸುವುದೇ ಪ್ರಕೃತಿಗೆ
ಹೃದಯದಿಂದ ಉತ್ತರಿಸುವಿರಾ?
ಅನ್ನದಾತ ಕರುಣಿಸಿದ್ದ ತುತ್ತನ್ನು
ಹೀಗೆ ಕಸಿದುಕೊಂಡಾಗ
ಆಗುವ ನೋವನ್ನು ಯಾವ ವೈದ್ಯ ತಾನೆ
ಶಮನ ಮಾಡಲು ಸಾಧ್ಯ; ನೀವಲ್ಲದೆ
ಅದೇ ಅನ್ನದಾತನಲ್ಲದೇ!
ನಾವೂ ಹಸಿದಿದ್ದೇವೆ ಎಲ್ಲರಂತೆ
ಭೂರೀ ಭೋಜನದ ಬೇಡಿಕೆಯಂತೂ
ನಾವೆಂದು ಇಡುವುದಿಲ್ಲ
ಮೊದಲಿನಂತೆ ನಾಲ್ಕೇ ತುತ್ತು ನೀಡಿ ಸಾಕು
ಅಷ್ಟರಲ್ಲೇ ಬದುಕಿಗೆ ಹರಿಸಿಕೊಳ್ಳುತ್ತೇವೆ ಬೆಳಕು!!
ಅನಾರ್ಕಲಿ ಸಲೀಂ ಮಂಡ್ಯ
ಹ್ರೃದಯಸ್ಪಂದನದ ಕವಿತೆ