ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ತೆರೆಯ ಹಿಂದಿನ ಎದೆಯ ನೋವುಗಳು…

ಒಂದು ದೊಡ್ಡ ಚಿತ್ರ ಬಿಡುಗಡೆಗೊಂಡಾಗ ನಿರ್ಮಾಪಕನಿಗೆ ಆತಂಕ, ಸಂಭ್ರಮ, ಸಡಗರ, ಇರುತ್ತದೆ…!!

ಯಾಕೆಂದರೆ ಆತನೋ ಆಕೆಯೋ ಸಾಲವನ್ನು ಮಾಡಿಯೋ, ದುಡಿದ ದುಡ್ಡನ್ನು ಚಿತ್ರ ನಿರ್ಮಾಣಕ್ಕೆ ಹಾಕಿರುವುದರಿಂದ ಇದು ಸಹಜವೂ ಕೂಡ.

ಅದಕ್ಕಾಗಿ, ಒಂದು ಚಿತ್ರದ ಸಿದ್ದತೆಯ ಹಿಂದೆ ಸಾವಿರಾರು ಬೆವರು ಹನಿಗಳ ಶ್ರಮವಿದೆ. ತೆರೆಯ ಮೇಲೆ ಕಾಣುವ ರಂಗು ರಂಗಿನ ಸನ್ನಿವೇಶಗಳನ್ನು ಸೃಷ್ಟಿಸಬೇಕಾದರೆ, ಹಲವಾರು ತಂತ್ರಜ್ಞರ, ನಿರ್ಮಾಪಕರ, ನಿರ್ದೇಶಕರ, ಕಲಾವಿದರ ಶ್ರಮ, ಕಾರ್ಮಿಕರ ಬೆವರು ವರ್ಣನಾತೀತ..!!

ಚಲನಚಿತ್ರ ಇಲ್ಲವೇ ಕಿರುತೆರೆಯ ಧಾರವಾಹಿಗಳನ್ನು, ಕಾರ್ಯಕ್ರಮಗಳನ್ನು ಸಂಯೋಜಿಸುವಾಗ ಒಬ್ಬ ಲೈಟ್ ಬಾಯ್ ಅಥವಾ ಬೆಳಕಿನ ಕೆಲಸ ಮಾಡುವ ಹುಡುಗ ಅಥವಾ ಹುಡುಗಿಯ ಬೆವರ ಹನಿಗಳಿಂದ ಹಿಡಿದು…

ಅವನು ತನ್ನೂರು ಬಿಟ್ಟು ಬಂದು.. ಚಲನಚಿತ್ರ ನಿರ್ಮಾಪಕರ ಬಳಿ ಯಾರದೋ ಶಿಫಾರಸ್ಸು ಮಾಡಿದರೂ ಅವನಿಗೆ ಅವಕಾಶ ನೀಡದೆ, ಲೈಟ್ ಬಾಯ್ ಆಗಿಯೋ, ಮೆಕಪ್ ಮ್ಯಾನ್ ಬಳಿ ಸಹಾಯಕನಾಗಿಯೋ ಕೆಲಸ ಪ್ರಾರಂಭಿಸುವ ಹುಡುಗ “ಸಿನೆಮಾ” ಎಂಬ ಬಣ್ಣದ ಲೋಕದಲ್ಲಿ ತನ್ನದೇ ಛಾಪು ಮೂಡಿಸಲು ಪರಿತಪಿಸುತ್ತಾನೆ. ಅಲ್ಲದೆ ವಯಕ್ತಿಕ ಬದುಕಿನ ಧಾವಂತಗಳ ನಡುವೆ ಸಾಧನೆ ಮಾಡಲು ಪ್ರಯತ್ನಿಸುತ್ತಾನೆ. ಇದರ ಮಧ್ಯ ಊರಿನಲ್ಲಿ ಅವ್ವನಿಗೋ ಇಲ್ಲವೋ ಅಪ್ಪನಿಗೋ ಕಾಯಿಲೆ…!! ಅಲ್ಲದೆ ಅಕ್ಕನ ಮದುವೆ…!! ಸಮಸ್ಯೆಗಳು ಒಂದೇ ಎರಡೇ…

ಚಲನಚಿತ್ರ ಸೆಟ್ ಗಳಿಂದ ದುಡ್ಡು ಕೇಳುವಂತಿಲ್ಲ. ಕೇಳಿದರೆ ಎಲ್ಲಿ ಕೆಲಸ ಬಿಡಿಸುತ್ತಾರೋ ಎನ್ನುವ ಆತಂಕ..!!

ಯಾವುದೋ ಕಾರಣಕ್ಕೆ ಮನೆಯವರಿಂದ ಜಗಳ ಕಾದು ಬೆಂಗಳೂರೆಂಬ ಮಾಯಾನಗರಿಗೆ ಬಂದ ಮೇಲೆ ಕೆಲಸ ಮಾಡುತ್ತಲೇ, ತನ್ನ ನೆಚ್ಚಿನ ಡ್ಯಾನ್ಸ್‌ ಮರೆಯದೆ ಕಲಿತು, ಅವರಿವರ ಸಹಾಯದಿಂದ ಸಹ ಕಲಾವಿದರ ಗುಂಪನ್ನು ಸೇರಿಕೊಂಡು, ಸಿನಿಮಾ ರಂಗದಲ್ಲಿ ನೃತ್ಯ ಪಟುವಾಗಿ ಕೆಲಸ ಮಾಡುತ್ತಲೇ, ಮನೆಯವರ ಮನಸ್ಸನ್ನು ಗೆಲ್ಲುವ ಹುಮ್ಮಸ್ಸಿನಲ್ಲಿ ಇವರ ಇಡಿ ಆಯುಷ್ಯ ಮುಗಿದು ಹೋಗಿರುತ್ತದೆ..!!

ಹೀಗೆ ತೆರೆಯ ಹಿಂದಿನ ಕಾರ್ಮಿಕರ ಎದೆಯ ಭಾರದ ನೋವುಗಳು ಹೇಳ ತೀರದು.

ಅವ್ವ – ಅಪ್ಪನ ಪ್ರೀತಿಯಿಂದ ದೂರವಾಗಿಯೋ, ಅವರ ಪ್ರೀತಿಯನ್ನು ಅರಸುತ್ತಾ ತಮ್ಮತನದ ಐಡೆಂಟಿಟಿ ಸ್ಥಾಪಿಸುವ ಇವರ ಹಣೆಯ ಬೆವರಿಗೆ ಕೊನೆಯಿಲ್ಲ..!!

ಸಹ ಕಲಾವಿದರನ್ನು ಪೂರೈಕೆ ಮಾಡುವ ಟಿಮ್ ಗಳು ನಿಗದಿಪಡಿಸಿದ ಸಮಯಕ್ಕೆ ಹೋಗಲೇಬೇಕು, ಅವರ ಎಷ್ಟು ಕೊಡುತ್ತಾರೋ ಅಷ್ಟು ಕೂಲಿಯನ್ನು ಪಡೆಯಬೇಕು. ಇದು ಪ್ರತಿಯೊಬ್ಬ ಸಹಕಲಾವಿದರ ಕೂಲಿಯ ಬದುಕು. ಸ್ವಲ್ಪ ನಿರ್ಲಕ್ಷ್ಯ ತೋರಿದರೆ ಅವರು ಅವಕಾಶವನ್ನೇ ನೀಡುವುದಿಲ್ಲ ಎನ್ನುವ ಆತಂಕ.

ಇನ್ನೂ ಸಂಗೀತ ನಿರ್ದೇಶನಕ್ಕೆ ಸಹಾಯ ಮಾಡುವ ಸಹಾಯಕರ ನೋವುಗಳು ಅಷ್ಟೇ ವಿದ್ಯುತ್ ಪೂರೈಕೆಯ, ಸಂಗೀತ ಪರಿಕರಗಳ ಜೋಡಣೆ, ಮೈಕ್ ಗಳ ಸಿದ್ಧತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.

ನಿರ್ದೇಶಕರಿಗೆ ಸಹಾಯ ಮಾಡುವವರ ಬೆವರ ಹನಿಗಳ ನೋವುಗಳು ಬೇರೆಯಾಗಿಲ್ಲ…!!
ಅವರ ಆದೇಶಗಳನ್ನು ಪಾಲಿಸುತ್ತಾ, ನೋಟ್ಸ್ ತಯಾರಿಸುವ, ಕಲಾವಿದರಿಗೆ ಸೂಚನೆಗಳನ್ನು ನೀಡುವ, ಚಿತ್ರೀಕರಣಕ್ಕೆ ತಯಾರಿ ಮಾಡುವ ಅವಸರದಲ್ಲಿ ಏನಾದರೂ ಎಡವಟ್ಟು ಮಾಡಿದರೆ ನಿರ್ದೇಶಕರೆಂಬ ಗುರುವಿನಿಂದ ಪೆಟ್ಟು ತಿನ್ನುವುದು ತಪ್ಪಿದಲ್ಲ..!!

ಕ್ರೇನ್ ನೆಡೆಸುವ ಆಪರೇಟಿಂಗ್ ಹುಡುಗರ ಸಹಾಸ, ಕ್ಯಾಮೆರಾಗಳನ್ನು ಹೊತ್ತು ತಿರುಗುವ ವ್ಯಕ್ತಿಗಳ ಹೆಗಲ ಗಾಯಗಳು, ಕ್ಯಾಮೆರಾಗಳನ್ನು ಬಳಸಿಕೊಂಡು ಚಿತ್ರಿಕರಿಸುವ, ನಿರ್ದೇಶಕನ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸುವ ಜವಾಬ್ದಾರಿಯನ್ನು ಹೊತ್ತ ಕ್ಯಾಮೆರ ಮ್ಯಾನಗಳ ಧ್ಯಾನಸ್ಥ ಮನಸ್ಸು ಅಭಿನಂದನೀಯ, ಕಲಾವಿದರಿಗೆ ಧ್ವನಿಯನ್ನು ಕಂಠದಾನ ಮಾಡುವವರ ಶ್ರಮ ಮರೆಯುವಂತಿಲ್ಲ…

ತೆರೆಯ ಹಿಂದಿನ ಪ್ರತಿಯೊಬ್ಬರ ಕರ್ತವ್ಯಗಳು ಅಪಾರ. ಒಬ್ಬೊಬ್ಬರ ಜೀವನ ಒಂದೊಂದು ಕತೆಯಾಗುತ್ತವೆ. ಕೆಲವು ಸಲ ಅವರು ತಯಾರಿಸುವ ಸಿನೆಮಾದ ಕತೆಯು ತೆರೆಯ ಹಿಂದಿನ ವ್ಯಕ್ತಿಯ ವಯಕ್ತಿಕ ಬದುಕಿನ ಕತೆಯಾಗಿರುತ್ತದೆ.

ತೆರೆಯ ಹಿಂದಿನ ಶ್ರಮಿಕರಿಗೆ ಅಡುಗೆ ಮಾಡುವವರಿಗೆ ಬೆಂಕಿಯ ಜ್ವಾಲೆಗೆ ಬೆವರುಗಳು ಸಾಲುಗಟ್ಟುತ್ತವೆ. ಊಟ ಬಡಿಸುವ ಸಲುವಾಗಿ ಬುತ್ತಿಯನ್ನು ಹೊತ್ತು ತಿರುಗುವವರ ನೆತ್ತಿಯು ಸುಡುತ್ತಿರುತ್ತದೆ.

ಇನ್ನೂ…

ಕಲಾವಿದರನ್ನು, ಎಲ್ಲರನ್ನೂ ಕರೆದೊಯ್ಯುವ ವಾಹನ ಚಾಲಕರ ದುಡಿಮೆ ಮೆಚ್ಚುವಂತಹದು.

ಸಿನೆಮಾದ ತೆರೆಯ ಮೇಲೆ ಕಾಣುವ ಕಲಾವಿದರ ಶ್ರಮದ ಬದುಕು ಮತ್ತೊಂದು ಮಗ್ಗುಲುಗಳನ್ನು ಹೊಂದಿದೆ..

ಹೆಣ್ಣು ಮಕ್ಕಳು ತಮ್ಮ ಕಲೆಯ ಬದುಕಿಗಾಗಿ ತಂದೆಯನ್ನೋ, ಗಂಡನನ್ನೋ ಅವಲಂಬಿಸಬೇಕು. ಕೆಲವು ಕಲಾವಿದರು ತಾಯಿಯನ್ನು, ಸಹೋದರಿಯರ ಸಹಾಯದಿಂದ ಕಲಾ ಬದುಕನ್ನು ಕಟ್ಟಿಕೊಂಡವರಿದ್ದಾರೆ. ಸೆಟ್‌ಗಳಲ್ಲಿ, ಹೊರಾಂಗಣ ಚಿತ್ರೀಕರಣದ ಸಂದರ್ಭದಲ್ಲಿ ಪ್ರಕೃತಿ ಕರೆಗಳನ್ನು, ಹೆಣ್ಣು ಮಕ್ಕಳು ವಯಕ್ತಿಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಲೇ ಚಿತ್ರೀಕರಣ ಮುಗಿಸಬೇಕಾಗುವ ಸಂದರ್ಭಗಳು ಹಲವು.

ಮಹಿಳೆಯರ ಸಮಸ್ಯೆಗಳು ಒಂದು ಬಗೆಯಾದಾದರೆ ಪುರುಷ ಕಲಾವಿದರ ನೋವುಗಳು ಹಲವು..

ತಂದೆ ತಾಯಿಗಳ ಆರೈಕೆಯಿಂದ ದೂರವಾಗಿಯೋ, ಹೆಂಡತಿಯ ಹುಟ್ಟು ಹಬ್ಬಕ್ಕೋ, ಮದುವೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಾಜರಾಗದೆ ಇರುವುದು, ಮಕ್ಕಳ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಜರಾಗದೆ ಪರಿತಪಿಸುವುದು ಮನಸ್ಸಿಗೆಯಾದ ನೋವು ಒಂದಲ್ಲ ಹಲವು.

ಇನ್ನೂ…

ನಿರ್ದೇಶಕನ ಪಾತ್ರವನ್ನು ನಿರ್ವಹಿಸುವ ವ್ಯಕ್ತಿಯ ಮೇಲೆ ದೊಡ್ಡ ಜವಾಬ್ದಾರಿಯಿರುತ್ತದೆ. ತನ್ನನ್ನು ನಂಬಿ ದುಡ್ಡು ಹಾಕಿದ ನಿರ್ಮಾಪಕರಿಗೆ ನಷ್ಟವಾಗದಂತೆಯೂ, ಜನರಿಗೆ ಮನೋರಂಜನೆಯನ್ನು ಒದಗಿಸುವ ಚಿತ್ರವನ್ನು ಕೊಡಬೇಕಾದ ಅನಿವಾರ್ಯತೆ ಆತನದು. ಈಗಾಗಲೇ ಒಂದೆರೆಡು ಚಿತ್ರಗಳು ಗೆದ್ದರಂತೂ ಗೆಲುವನ್ನು ಮುಂದುವರಿಸುವ ಅನಿವಾರ್ಯತೆ ಮತ್ತಷ್ಟೂ ಹೆಚ್ಚುತ್ತದೆ.

ಇವೆಲ್ಲವನ್ನೂ ಪರಿಗಣಿಸಿ ನೋಡಿದಾಗ…

ಸ್ನೇಹಿತರೇ,
ಒಂದು ಚಿತ್ರ ಸಿದ್ಧವಾಗುವ ಹೊತ್ತಿಗೆ ಸಾಕಷ್ಟು ಜನರ ಬೆವರ ಹನಿಗಳು ಹರಿದಿರುತ್ತದೆ. ತೆರೆಯ ಸುಂದರ ಕತೆಯ ಚಿತ್ರವನ್ನು ನಾವುಗಳು ನೋಡುವಾಗ ‘ಎಷ್ಟೊಂದು ಜನರ ಶ್ರಮವಿದೆ’ ಎಂಬ ಸಣ್ಣ ಪ್ರೀತಿ ಮೊಳಕೆಯೊಡೆಯಲಿ. ಸಮಾಜವನ್ನು ತಿದ್ದುವ, ಸಂಬಂಧಗಳನ್ನು ಗಟ್ಟಿಗೊಳಿಸುವ, ಉತ್ತಮ ಸಂದೇಶಗಳನ್ನು ಹೊತ್ತು ಬರುವ ಚಿತ್ರಗಳನ್ನು ನೀಡುವವರ ಬೆನ್ನ ಹಿಂದೆ ನಾವಿದ್ದೇವೆ ಎಂಬ ಅಭಯ ನೀಡೋಣ.

ಕನ್ನಡ ಚಲನಚಿತ್ರಗಳ, ಧಾರವಾಹಿಗಳ,ಕಾರ್ಯಕ್ರಮಗಳ ಕಾರ್ಮಿಕರ, ಕಲಾವಿದರ, ಸಂಗೀತಗಾರರ…ಪ್ರತಿಯೊಬ್ಬರ ಬೆವರ ಬದುಕಿಗೆ ಬೆಲೆ ಕೋಡೋಣ. ತೆರೆಯ ಹಿಂದಿನ ಅವರೆದೆಯ ನೋವುಗಳಿಗೆ ಸಾಂತ್ವನ, ಪ್ರೀತಿ, ಮಮಕಾರವನ್ನು ಅವರು ತಯಾರಿಸುವ ಚಿತ್ರಗಳನ್ನು ಸಿನಿಮಾ ಮಂದಿರದಲ್ಲಿ ನೋಡುವ ಮೂಲಕ ಪ್ರೋತ್ಸಾಹಿಸೋಣ..


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ

ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ
 ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ

2 thoughts on “

  1. ಪ್ರತಿ ವಾರ ವಿಭಿನ್ನ ವಿಷಯಗಳ ಮೇಲೆ ತಾವು ಅಂಕಣ ಬರೆಯುವ ರೀತಿ ಅನನ್ಯ. ಅಭಿನಂದನೆಗಳು

  2. ತೆರೆಯ ಹಿಂದೆ ಕಾಣದ ಕೈಗಳ ಬೆವರು ನಮಗೆ ಕಾಣುವುದಿಲ್ಲ.ಸಿನಿಮಾ ಅಂದರೆ ಕೇವಲ ಸಿನಿಮಾ ತಯಾರಿಯಲ್ಲಿ ಮಾತ್ರ ಅಲ್ಲ.,ಹಲವಾರು ಕಾರ್ಮಿಕರ ಸಾಹಸಗಳು,ಜಾಗೃತವಾದ ಬದುಕಿನ ಉತ್ಸಾಹಗಳು,ಈ ಬದುಕಿನ ಪ್ರತಿ ಅನ್ನದ ಅಗುಳ ಸಂಪಾದಿಸ ಹೊರಟ ನೂರಾರು ಕೈಗಳು ದುಡಿಯುತ್ತಲೇ ಆಶಾವಾದದಲ್ಲೇ ತೆರೆಯ ಮರೆಯಲ್ಲಿದ್ದಾರೆ.ಅವರ ಬಹುತೇಕ ಗುರುತರ ಕೆಲಸಗಳು ಯಾರಿಗೂ ಕಾಣಸಿಗದು.
    ಈ ದಿಶೆಯಲ್ಲಿ ಕಾಣದ ಪಾತ್ರಗಳು,ಮೌಲ್ಯವಾಗಿ ಉಸಿರಾಡುವ ಕಾಮ್ರೇಡ್ ಗಳು ಎಲೆಯ ಮರೆಯ ಕಾಯಿ ಎಂದು ಓದುಗರಿಗೆ ಬಿಸಿ ತಟ್ಟಿಸಿ ಎಚ್ಚರಿಸಿದ ರಮೇಶ ಬನ್ನಿಕೊಪ್ಪ ಇವರ ಅಂಕಣವು ಸಾಮಾಜಿಕ ಸ್ಥಾಯಿಪ್ರಜ್ಞೆಯಾಗಿದೆ

    ಅಭಿನಂದನೆಗಳು.

Leave a Reply

Back To Top