ಆ ದೃಶ್ಯ-ಅನಸೂಯ ಜಹಗೀರದಾರರವರ ಕಥೆ

ಕಥಾ ಸಂಗಾತಿ

ಅನಸೂಯ ಜಹಗೀರದಾರ

ಆ ದೃಶ್ಯ

ಆತ ಹಣವೆಂಬ ಮರೀಚಿಕೆಯ ಹಿಂದೆ ಬಿದ್ದಿದ್ದ.
ನಿಜ ಹಣ ಅಂದ್ರೆ ಹೆಣವೂ ಬಾಯ್ಬಿಡುವ ಕಾಲದಲ್ಲಿ…, ಹಣ ಇಲ್ಲದಿದ್ದಲ್ಲಿ ದೇವರ ದರ್ಶನವೂ ಸಿಗದ ದುರ್ಲಭ ಕಾಲದಲ್ಲಿ….,ದುಡ್ಡೇ ದೊಡ್ಡಪ್ಪ ಗಾದೆ ಮಾತಾದ ಕಾಲದಲ್ಲಿ ‌..,ಆತ ವಾಸಿಸುತ್ತಿದ್ದನಲ್ಲ..!!ಅಂದಮೇಲೆ ಹಣಕ್ಕೆ ಸಿಗುವ ಮರ್ಯಾದೆಯ ಪಡೆಯಲು ಉತ್ಸುಕನಾಗಿದ್ದ.ಆ ದಾರಿಯ ಪಥಿಕನಾಗಿದ್ದ.

ಆಗಾಗ ಹೇಳುತ್ತಿದ್ದಳು ಹೆಂಡತಿ.”ನೋಡಿ ಮನೆಯತ್ತ ಗಮನ ಕೊಡಿ.ಮಕ್ಕಳತ್ತ ಒಂದಿಷ್ಟು ಗಮನ ಇರಲಿ.ಬಹಳ ದಿನವಾಯ್ತು ನಾವೆಲ್ಲೂ ಸುತ್ತಾಡಲು ಹೋಗಿಲ್ಲ.ಮನೆಯಲ್ಲಿದ್ದು ಬೇಜಾರು”ಅಂದಾಗಲೆಲ್ಲ
“ಅದಕ್ಕೇನಂತೆ ಹೋಗೋಣ” ಅನ್ನುತ್ತಿದ್ದ.
ಇಂದು ನಾಳೆ ವಾರ ಅನ್ನುತ್ತ ವರ್ಷಗಳೇ ಗತಿಸುತ್ತಿದ್ದವು.ಸದಾ ಕೆಲಸ ಕಾರ್ಯಗಳು ಮೀಟಿಂಗಗಳು..! ಬರಬರುತ್ತ ಕ್ಲಾಸ್ ಒನ್ ಕಾಂಟ್ರ್ಯಾಕ್ಟರ್ ಬೇರೆ..ಮತ್ತೂ ಬಿಸಿಯಾದ‌ ಕೆಲಸಗಳು…ಶೆಡ್ಯೂಲ್ ಪ್ರೊಗ್ರಾಮ್ ಗಳು.ಆಫೀಸು
ಓಡಾಟ..ಓಡಾಟ…!!
ಕುಟುಂಬದತ್ತ ಗಮನ ತೀರಾ ಕ್ವಚಿತವಾಯಿತು.
ವಾರಕ್ಕೊಮ್ಮೆ ಬರುವುದು ಒಟ್ಟಾರೆ
ತನ್ನದೇ ಮನೆಯಲ್ಲಿ ಅತಿಥಿಯಾದದ್ದು ಆತನ ಸ್ವ ನಿರ್ಧಾರವಾಗಿತ್ತು..!

ಮಕ್ಕಳು ಕಾಲೇಜಿಗೆ ಹೋಗುತ್ತಿದ್ದಾರೆ.ಅವರೀಗ ತಮ್ಮ ಹತ್ತಿರ ಇರುವುದಿಲ್ಲ.ಅಲ್ಲಲ್ಲಿ ಒಳ್ಳೆಯ ಕಾಲೇಜಿನಲ್ಲಿ ಪಿಜಿ ಗಳಲ್ಲಿ ಇದ್ದಾರೆ.ಯಾವಾಗಲಾದರೊಮ್ಮೆ ರಜೆ ಅವಧಿಯಲ್ಲಿ ಬರುತ್ತಾರೆ ಮನೆಗೆ.ಏಕಾಂಗಿಯಾದ ಆಕೆಗೆ ಬೇಜಾರು ಕಳೆಯಲು ಆಧುನಿಕ ಉಪಕರಣಗಳಿವೆ.ಟಿವಿ,ಮೊಬೈಲು,ಕಂಪ್ಯೂಟರ್.
ಅಲ್ಲಲ್ಲಿ ಮಹಿಳಾ ಸಂಘಗಳಲ್ಲಿ ಪದಾಧಿಕಾರಿ.ಅಧ್ಯಕ್ಷರು
ಪದವಿ ಅಲಂಕರಿಸಿವೆ.ಆದಾಗ್ಯೂ ಅವಳಿಗೆ ಅದ್ಯಾವುದರಲ್ಲಿ ಸಮಾಧಾನ ಸಿಗುತ್ತಿಲ್ಲ.ಏನೋ ಕಳೆದುಕೊಂಡಂತಹ ಭಾರೀ ಕೊರತೆಯ ಅನುಭವ.ಮನೆಯ ಕೋಣೆ ವಿವಿಧ ಅತ್ಯಾಧುನಿಕ
ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿದರೂ ಮನದ ಕೋಣೆ ಖಾಲಿ ಖಾಲಿಯಾಗಿಯೇ ಇದೆ.

ಅವಳ ಖ್ಯಾಲವೂ ಚಿತ್ತವೂ ಒಂದು ಶೂನ್ಯದಿಂದ ಹೊರಟು ಮತ್ತೊಂದು ಶೂನ್ಯಕೆ ಕೊನೆಯಾಗುತ್ತಿದೆ.
ಇತ್ತೀಚೆಗೆ ಎಂದೂ ಕಾಣದಂತಹ ಸುಸ್ತು.ಕೈಕಾಲು ನಡುಕ ಬಸವಳಿದಂತೆ ದೇಹ.. ಸದಾ ವಿಶ್ರಾಂತ್ರಿಯ ಬಯಸಹತ್ತಿದೆ.

ಆತ ಆಕೆಯನ್ನು ಕರೆದೊಯ್ಯದ ಆಸ್ಪತ್ರೆಗಳಿಲ್ಲ.ಚೆಕ್ ಮಾಡದ ವೈದ್ಯರುಗಳಿಲ್ಲ.ಯಾವುದೇ ಆಸ್ಪತ್ರೆಯಲ್ಲೂ ಸಂಪೂರ್ಣ ಗುಣಮುಖಳಾಗುತ್ತಿಲ್ಲ.ಖರ್ಚು ಮಾಡಲು ಬೇಕಾದಷ್ಟು ಇದೆ.ಉಣಲು ಉಡಲು ಬೇಕಾದಷ್ಟು ಇದೆ
ಹೊಳೆಯಂತೆ ಹಣವ ಹರಿಸಬಲ್ಲನಾತ..! ಆದರೆ ಆಕೆಗೆ ಕಾಡುವ ಬ್ಲಡ್ ಕ್ಯನ್ಸರ್ ರೋಗ..ಜೀವ ಹಿಂಡುತ್ತಿದೆ.ಶುದ್ಧ ಗಾಳಿಯ ಹೊತ್ತೊಯ್ಯುವ ಕೆಂಪು ರಕ್ತ ಕಣಗಳ ಕೊರತೆ.ಮೈಯೆಲ್ಲ ಬಿಳಿಯ ರಕ್ತ ಹರಿಯುತ್ತಿದೆ.ಉಸಿರಾಡಲೂ ಕಷ್ಟ..!! ನೆಮ್ಮದಿಯಲಿ ಕೊನೆಯುಸಿರೆಳೆಯಲು ಸಿದ್ಧಗೊಂಡಿದೆ ಮನ.

ಆಕೆ ಆಡಿದಳು ಕೊನೆಯ ಮಾತುಗಳನು‌‌‌..ಅವನೊಂದಿಗೆ..,”ಇಲ್ನೋಡಿ
ನನಗೆ ಹಣದ ಕೊರತೆ ಇರಲಿಲ್ಲ.ಬಾಲ್ಯದಲ್ಲಿ ಅತ್ಯಂತ ಸುಖೀ ಕುಟುಂಬದಿಂದಲೇ ಬಂದೆ.ಅಲ್ಲಿ ಪ್ರೀತಿ, ಮಮತೆ,ಮತ್ತು ಆರೈಕೆಯ ಕೊರತೆ ಇತ್ತು.ಅಪ್ಪ ನನ್ನತ್ತ ಗಮನ ಕೊಡುತ್ತಿರಲಿಲ್ಲ.ಸದಾ ತನ್ನ ರಾಜಕಾರಣ,ಕಾರ್ಖಾನೆ ಕೆಲದಲ್ಲಿರುತ್ತಿದ್ದ.ಅಮ್ಮ ತನ್ನ
ಬಳಗ,ಬಂಧು,ಮಹಿಳಾ ಲೋಕದಲ್ಲಿ ಬ್ಯೂಸಿ ಇರುತ್ತಿದ್ದಳು.ಕಾರ್ಯಕ್ರಮಗಳು,ಸಮಾರಂಭಗಳು,
ರಾಜಕಾರಣದಲ್ಲೂ ಅಪ್ಪನೊಂದಿಗೆ ಹೆಜ್ಜೆ ಹಾಕುತ್ತಿದ್ದಳು.ಹೀಗಾಗಿ ನಾನು ಒಂಟಿಯಾಗಿಯೇ ಬೆಳೆಯುತ್ತಿದ್ದೆ.ಕಾಲೇಜು ದಿನಗಳು ಒಂದಿಷ್ಟು ಖುಶಿ ಕೊಟ್ಟವು.ಗೆಳತಿಯರು,ಹಿತೈಷಿ ಗೆಳೆಯರು ಜೊತೆಯಾಗುತ್ತಿದ್ದರು.ನಗು,ಮಾತು ಕತೆ ಅನುಭವ ಹಂಚಿಕೊಳ್ಳುತ್ತಿದ್ದೆವು.ಆದರೆ ಒಂದೆಡೆ ಖಾಲಿತನ,ಒಂದು ನಮೂನೆಯ ಭುಗುಲುತನ ಮನದಲಿ ಮನೆಮಾಡಿತ್ತು.ನಿಮ್ಮನ್ನು ನೋಡಿದ ಮೇಲೆ
ಹನಿ ಪ್ರೀತಿಗಾಗಿ ಹಾತೊರೆಯುತ್ತಿದ್ದ ನಾನು ಎಲ್ಲವನ್ನು ಬಿಟ್ಟು ನಿಮ್ಮೊಂದಿಗೆ ದಾಂಪತ್ಯದ ಸಪ್ತಪದಿ ತುಳಿದೆ.
ಆದರೆ…ಏನಾಯಿತು..? ಬರಬರುತ್ತ ಅದೇ ಖಾಲಿತನ ಹಿಂಸೆಯ ಒಂಟಿತನ ಇಲ್ಲೂ ಆವರಿಸಿತು.ಅಪ್ಪನ ಸಮಾನರಾಗಲೂ ನೀವೂ ಹ್ಯಾವು ಪಂಥದ ಪಥದಲಿ ಸಾಗಿದ್ರಿ.ಸಾಧಿಸಿಯೂ ತೋರಿಸಿದ್ರಿ.ಎಲ್ಲವೂ ಗೆದ್ದೆನೆನ್ನುವ ಖುಶಿ ನಿಮ್ಮದು.ಇನ್ನೇನು ಮಕ್ಕಳು ವಿದೇಶದಲ್ಲಿದ್ದು ಓದುತ್ತಾರೆ.ಮುಂದೆ ಕೆಲಸ ಮಾಡುತ್ತಾರೆ.ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಅನ್ನುವುದರಲ್ಲಿ ಏನಿದೆ.. ಅವರೆಲ್ಲ ಚೆನ್ನಾಗಿಯೇ ಇರುತ್ತಾರೆ.ನಾನು ಕಂಡರಿಯದ ಸಿರಿವಂತಿಕೆ ಏನೂ ಇರಲಿಲ್ಲ.ಆದರೆ ನಾನು ಯಾವುದಕ್ಕೆ ಹಂಬಲಿಸಿದೆನೋ ಅದನ್ನು ಈ ಭೂಮಿತಾಯಿಯೇ ತಬ್ಬಿಕೊಂಡು ಉಣಿಸಬಹುದು ನನಗೆ.ಅದೇ ಹನಿ ಪ್ರೀತಿ..! ಪ್ರೀತಿಯ ಸಿಂಚನ…!”ಆಕೆ ಕಣ್ತುಂಬಿ ನೋಡಿದಳು ಎಲ್ಲವನು ಮತ್ತೊಮ್ಮೆ..! ವಿದಾಯ ಹೇಳುವಂತಿತ್ತು ಮುಖಭಾವ.

ಆತ ಕೇಳುತ್ತಿದ್ದ ಮೂಕನಾಗಿ.ಅವಳಿನ್ನು ಬಹಳ ಹೊತ್ತು ಇರಲಾರಳು.ಎಂದಿಲ್ಲದ ಲಕ್ಷ್ಯದಲ್ಲಿ ಆತ ಆಕೆಯ ಮಾತುಗಳನ್ನು ಕೇಳುತ್ತಿದ್ದ.ಮಧ್ಯ ಮಧ್ಯ ತನ್ನ ಕೈಯಿಂದ ಅವಳ ಹಸ್ತಗಳನ್ನು ನವಿರಾಗಿ ಅದುಮುತ್ತಿದ್ದ…!!

ಆಕೆಯ ಏಕಾಂತ ಕಳೆಯಲು ಸಂಗಾತಿಗಳಾಗಿದ್ದ ಆ ಮನೆಯ ಗಿಳಿ,ಲವ್ ಬರ್ಡ್,ಗಳು ಮೂಕವಾಗಿ ನೋಡುತ್ತಿದ್ದವು ಆ ಧೃಶ್ಯವನ್ನು..!! ನಾಯಿ ಜ್ಯೂಲಿ ಮತ್ತು ಕಾಳ ಒಡತಿಯ ಹತ್ತಿರ ಮುಂಗಾಲು ಊರಿ ಕುಳಿತಿದ್ದವು‌ ಮೂಕವಾಗಿ..!!


ಅನಸೂಯ ಜಹಗೀರದಾರ


10 thoughts on “ಆ ದೃಶ್ಯ-ಅನಸೂಯ ಜಹಗೀರದಾರರವರ ಕಥೆ

  1. ತುಂಬಾ ಅರ್ಥಪೂರ್ಣ ಕಥೆ…ಮನುಷ್ಯನಿಗೆ ಹಣದ ಕಂತೆಗಿಂತ ನೆಮ್ಮದಿಯ ಸಾಂಗತ್ಯ ಮುಖ್ಯ ಎನ್ನುವುದನ್ನು ಮತ್ತೊಮ್ಮೆ ನೆನಪಿಸಿದ ಬಗೆ ಚೆನ್ನಾಗಿದೆ.

  2. ಕಥೆಯ ಆಶಯ ಹೇಳಿದಿರಿ.
    Thank you so much sir…!

  3. ಒಳ್ಳೆಯ ಸಂದೇಶವೇನೋ ಇದೆ.ಆದರೆ ಮನುಷ್ಯನ ಆಸೆಗೆ ಬುದ್ಧಿ ಮಾತು ಹಿಡಿಯುವುದಿಲ್ಲ. ಹಣದಿಂದ ಸುಖಸಂತೋಷಗಳನ್ನು ಕೊಂಡುಕೊಳ್ಳಲು ಆಗುವುದಿಲ್ಲ ಎಂದು ಸಾರುವ ಅಸಂಖ್ಯಾತ ಉದಾಹರಣೆಗಳು ನಮ್ಮ ಮುಂದಿವೆ.ಆದರೂ ಅನೇಕರು ಹಣದ ಹಿಂದೆ ತಪಸ್ಸು ಮಾಡುವಂತೆ ಬಿದ್ದಿರುವುದು ಇಂದಿನ ವಾಸ್ತವ.

    1. ನಿಜ.ಇದವೇ ಜೀವನ ಮತ್ತು ವಾಸ್ತವ.ಗೊತ್ತಾದಾಗ ಹೊತ್ತಾಗಿತ್ತು ಅನ್ನುವಂತೆ ಪಶ್ಚಾತ್ತಾಪ ಪಟ್ಟಾಗ ಸಮಯ ಮೀರಿರುತ್ತದೆ.
      ನಿಮ್ಮ ಸ್ಪಂದನೆಗೆ ಧನ್ಯವಾದಗಳು. ಸರ್.

  4. ಹಣ,ಪ್ರೆಸ್ಟೇಜು,ಐಷಾರಾಮಿ ಜೀವನ ಪಡೆಯಲು ಎಲ್ಲರೂ ಓಡುತ್ತಲೇ ಇರುತ್ತಾರೆ.ನಾನು ಸಹ.ಆದರೆ, ಮನೆತನದ ಪ್ರೀತಿ,ಶ್ರದ್ಧೆಗಳು ಬದುಕಿನ ಕಟ್ಟುಪಾಡುಗಳ ಸುತ್ತ ಪ್ರಭಾವ ಬೀರುವಂತಾದ್ದು.ಒಂದು ಪಡೆಯಲು ಹೋದರೆ,ಒಂದನ್ನು ಕಳೆದುಕೊಳ್ಳಲೇಬೇಕು.ಪ್ರೀತಿಯ ಆಳಕ್ಕಿಳಿದರೆ ಗಳಿಸಲಾಗದು.ಈ ಕತೆಯಲ್ಲಿರುವುದು ಅಕ್ಷರಶಃ ನಿಜ. ಇದೆಲ್ಲವನ್ನು ಅನುಭವದಿಂದ ಬರೆದ ಸಹೋದರಿ ಅನುಸೂಯ ಜಾಗಿರ್ದಾರ ಅವರ ಸಾಹಿತ್ಯದ ಬೆಳವಣಿಗೆ ಪ್ರಿಯವಾಗುತ್ತದೆ.ಮನೆಯ ದೈನಂದಿನ ವಾತಾವರಣವನ್ನು ಪ್ರೀತಿಯ ಆಸೆಯನ್ನು ಎದೆಗಿಟ್ಟುಕೊಂಡು ಲಯವಾಗುವ ಕತೆಯು ಓದಿಸಿಕೊಂಡೋಗುತ್ತದೆ.

  5. ಧನ್ಯವಾದಗಳು ಸಹೋದರ.ವಿವರಣೆ ಇಷ್ಟವಾಯ್ತು.

Leave a Reply

Back To Top