ಕಾವ್ಯ ಸಂಗಾತಿ
ಕವಿತೆ
ಅನಸೂಯ ಜಹಗೀರದಾರ
ಒಂಟಿ ಗುಬ್ಬಿ ಚಿಂತಿಸುತ್ತಿತ್ತು
ಇಂದು ಸಿಕ್ಕ ಚಿಗುರು
ನಾಳೆಯೂ ದೊರಕಬಹುದೆ
ಗೂಡಿನಲಿ ಮೊಟ್ಟೆಗಳಿವೆ
ಕಾವು ಕೊಡಬೇಕಿದೆ
ಇನ್ನೇನು
ಮೊಟ್ಟೆಯೊಡೆದು
ಮರಿ ಜೀವ ತಳೆಯುತ್ತವೆ
ಗುಟುಕ ಕೊಡಲು
ಮತ್ತೂ ಹಸಿರು ಉಳಿಯಬಹುದೆ
ಏಕಾಂಗಿ ನಾನಿಲ್ಲಿ
ಜೊತೆಗಾರ ದೂರದಲ್ಲಿ
ಮತ್ತೊಂದು ಜಲಾಶಯ
ಹುಡುಕುತ್ತ
ಪಯಣಿಸಿರಬಹುದು
ಮತ್ತೆ ಬರಬಹುದೆ
ಮರಿ ಕಣ್ಬಿಟ್ಟಾಗ
ಅವುಗಳ ಕಾಣಲು
ಮತ್ತೆ ಸಿಗಬಹುದೆ
ರೆಕ್ಕೆ ಬಡಿದು ಪುಕ್ಕ ಉದುರಿಸಿ
ಜೊತೆಗೂಡಿದ
ಆ ದಿನಗಳು
ಇದೆಲ್ಲ ಇಲ್ಲಿ ಚಿಂತಿಸುತ್ತಿರುವಂತೆ
ಎಲ್ಲ ನೆನಪನು
ಮೆಲುಕು ಹಾಕುವಂತೆ
ಅಲ್ಲಿಯೂ ಮಿಡಿದಿರಬಹುದೆ
ಜೊತೆಗಾರನೆದೆಯಲ್ಲಿ
ಕಾವಿಕ್ಕಿ ಮೇವುಣಿಸಿ
ಬೆಳಸಬೇಕಲ್ಲ ಮರಿಗಳ
ರೆಕ್ಕ ಪುಕ್ಕ ಬಂದು
ಹಾರಿ ಹೋಗುವತನಕ
ಈ ಎಲ್ಲ ಹೊಣೆ
ತನ್ನದೇ ಮಾತ್ರವೇಕೆ..??
ಜೊತೆಗಾರ ಬಂದಾನೆ
ಜೊತೆಯಲ್ಲಿ ನಿಂದಾನೆ..!!
ಗುಬ್ಬಿ ಚಿಂತಿಸುತ್ತಿತ್ತು
ಮತ್ತೆ ಮತ್ತೆ ನೆನಪ
ಮೆಲುಕು ಹಾಕುತ್ತಿತ್ತು