ಆತನಲ್ಲಮ ಬಯಲ ತಬ್ಬಿದ ಮಹಾತ್ಮ

ಕಾವ್ಯ ಸಂಗಾತಿ

ಡಾ. ಪುಷ್ಪಾ ಶಲವಡಿಮಠ

ಆತನಲ್ಲಮ ಬಯಲ ತಬ್ಬಿದ ಮಹಾತ್ಮ

ಆತನಲ್ಲಮ ಸಕಲ ಸಮಯ ಪ್ರೀತ
ಆತನಲ್ಲಮ ಮಾಯೆಯ ಗೆದ್ದ ಸಂಪ್ರೀತ

ಜಗದೆದೆಯ ಮದ್ದಳೆಯ ಬಾರಿಸಿ
ಮನದ ತಿಮಿರದ ಧೂಳು ಒರಸಿ
ಸಾಧಕರೊಳಗಿನ ಜ್ಞಾನವ ಜರಡಿಯಾಡಿಸಿ
ಜನರೆಡೆಗೆ ಸಾಗಿಬಂದ ಮಹಾಂತನೀತ
ಆತನಲ್ಲಮ ಸಕಲ ಸಮಯ ಪ್ರೀತ

ಅಂಗಮೋಹ ಜಯಿಸಿ
ಮನದ ಮಾಯೆ ಗೆಲಿದು
ಅಕ್ಕಮನೆದೆಯಲಿ ಕರಗಿದಾತನೀತ
ಅಕ್ಕಮನ ಮನದ ಬತ್ತಲಯ ಜಗಕೆ ತೋರಿದಾತನೀತ
ಆತನಲ್ಲಮ ನೆಲದ ಮರೆಯ ನಿಧಾನನೀತ

ತನು ಬತ್ತಲೆಯಾದರೆ ಸಾಕೇ?!
ಮನ ಬತ್ತಲೆಯಾಗಬೇಕು
ಅಕ್ಕಮನಂತೆ ಅಲ್ಲಮನೂ ಆಗಬೇಕು
ಪರಮತತ್ವ ಸಾರ ಬೋಧಿಸುತ ಸಂಚರಿಸಿದಾತನೀತ
ಆತನಲ್ಲಮ ಬಯಲ ತಬ್ಬಿದ ಮಹಾತ್ಮ

ಶಿಲೆಯೊಳಗಣ ಪಾವಕದಂತೆ
ಮನದೊಳಗಡಗಿದ ಅರಿವು
ಗುರುವಾಗಬೇಕೆoದಾತನೀತ
ಮನದ ಮುಂದಣ ಆಸೆಯೇ ಮಾಯೆ ಎಂದಾತನೀತ
ಹೆಣ್ಣು ಹೊನ್ನು ಮಣ್ಣು ಮೌಲ್ಯ ತಿಳಿದು
ಮರುಳು ಜಗಕೆ ಸತ್ಯದರಳು ತಿಳಿಸಿದಾತನೀತ
ಆತನಲ್ಲಮ ಬಯಲೊಳಗಿನ ಮಹಾಬೆಳಗಿನಂತೀತ

ಉದಕದೊಳಗಣ ಪ್ರತಿಬಿಂಬದಂತೆ
ಮನದೊಳಗಿನ ವೈರಾಗ್ಯ
ಎಲ್ಲ ಇದ್ದೂ ಒಲ್ಲೆ ಎಂದು
ಎದ್ದು ಹೊರಟಾತನೀತ
ಆತನಲ್ಲಮ ಬೀಜದೋಳಗಣ ವೃಕ್ಷ

ಭೂಮಿಯ ಕಠಿಣನವನು
ಆಕಾಶದ ಮೆದುತನವನು
ತನ್ನೊಳಗಿರಿಸಿಕೊಂಡಾತನೀತ
ಗೊಗ್ಗಯ್ಯ ಗೋರಕ್ಷರ ಕಣ್ತೆರೆಸಿದಾತನೀತ
ಮುಕ್ತಾಯಕ್ಕಳಿಗೆ ಜನನ ಮರಣಗಳ
ನಿಜವನರುಹಿದಾತನೀತ
ಸಿದ್ದರಾಮನ ಕರ್ಮಲತೆಯಲಿ
ಹೂವರಳಿಸಿದಾತನೀತ
ಆತನಲ್ಲಮ ಮುಗಿಲ ಮರೆಯ
ಮಿಂಚಿನಂತೆ ಸುಳಿದಾತ

ಬಸವನ ಮಮತೆಗೆ ಸೋತವನೀತ
ಶೂನ್ಯದಲಿ ಲೀನವಾದವನೀತ
ಭವ ಹಿಂಗಲು ಬ ಎಂದಾತ
ಸರ್ವಜ್ಞನಾಗಲು ಸ ಎಂದಾತ
ಚೈತನ್ಯಾತ್ಮಕನಾಗಲು ವ ಎಂದು ವಚಿಸಿದಾತನೀತ

ಬಸವ ಎಂಬ ತ್ರಯಕ್ಷರ ಮಂತ್ರವ
ಧರೆಯಲಿ ಬಿತ್ತಿದಾತನೀತ
ಆತನಲ್ಲಮ ಗುಹೇಶ್ವರ ಲಿಂಗದೊಳಗಾದಾತನೀತ
ಗುಹ್ಯಾoತ ಗುಹ್ಯ ತಿಳಿಸಿಕೊಟ್ಟಾತನೀತ
ಆತನಲ್ಲಮ ಸಕಲ ಸಮಯ ಪ್ರೀತ
ಬಯಲ ತಬ್ಬಿದ ಮಹಾತ್ಮ


2 thoughts on “ಆತನಲ್ಲಮ ಬಯಲ ತಬ್ಬಿದ ಮಹಾತ್ಮ

  1. ಪುಷ್ಪ ಮೇಡಂ ಆತನಲ್ಲಮ ಕವಿತೆಯ ಪ್ರತಿ ಸಾಲುಗಳು ಕಾಡುತ್ತಿವೆ
    ಮತ್ತೆ ಮತ್ತೆ ಕವಿತೆ ಓದಿದಾಗ ಹೊಸ ಹೊಳಹು ಹೊಳೆಯುವಂತೆ ತೋರುವ ಕವಿತೆ
    ಶುಭಾಶಯಗಳು
    ಎ ಎಸ್. ಮಕಾನದಾರ. ಗದಗ

    1. ನೀವು ಶ್ರೇಷ್ಠ ಕವಿಗಳು. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್..

Leave a Reply

Back To Top