ಚಾರುಕೀರ್ತಿ ಭಟ್ಟಾರಕ ಸ್ವಾಮಿ ಜಿನೈಕ್ಯ

ನುಡಿ ನಮನ

ಚಾರುಕೀರ್ತಿ ಭಟ್ಟಾರಕ ಸ್ವಾಮಿ

ಹಾಸನ ಜಿಲ್ಲೆ, ಶ್ರವಣ ಬೆಳಗೊಳದ ವಿಶ್ವವಿಖ್ಯಾತ ಜೈನ
ಮಠದ ಮುಖ್ಯಸ್ಥರಾಗಿದ್ದ ಕರ್ಮಯೋಗಿ, ತಪೋನಿಧಿ,
ಸ್ವತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ತಮ್ಮ 75 ನೇ ವಯಸ್ಸಿನಲ್ಲಿ ಜಿನೈಕ್ಯರಾಗಿರುವುದು ಅತ್ಯಂತ ನೋವಿನ ಸಂಗತಿ. ವಿಶ್ವವಿಖ್ಯಾತ ಶ್ರವಣ ಬೆಳಗೊಳದಲ್ಲಿ
ನಾಲ್ಕು ಬಾರಿ ಅತ್ಯಂತ ಯಶಸ್ವಿಯಾಗಿ ಮಹಾ ಮಸ್ತಕಾಭಿಷೇಕಗಳನ್ನು ನಡೆಸಿದ್ದ ಶ್ರೀಗಳು, ತಮ್ಮ ಧಾರ್ಮಿಕ ಹಾಗೂ ಜನಪರ ಕೈಂಕರ್ಯಗಳ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದರು. ಸಂಸ್ಕೃತ, ಪ್ರಾಕೃತ, ಕನ್ನಡ, ಆಂಗ್ಲ ಭಾಷೆಗಳೂ ಸೇರಿದಂತೆ ಶ್ರೀಗಳು ಹಲವಾರು ಭಾರತೀಯ ಭಾಷೆಗಳ ಮೇಲೆ ಪ್ರಭುತ್ವ
ಸಾಧಿಸಿದ್ದರು. ದೇಶ ವಿದೇಶಗಳಲ್ಲಿ ಅಪಾರ ಸಂಖ್ಯೆಯ ಭಕ್ತರನ್ಬು ಹೊಂದಿದ್ದ ಶ್ರೀಗಳು, ಸಮಾಜ ಸೇವೆಯೇ
ತಮ್ಮ ಬದುಕಿನ ಗುರಿ ಎಂದು ಭಾವಿಸಿದ್ದರು. ಹಲವಾರು
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಜ್ನಾನ ದಾಸೋಹಕ್ಕೆ ನೆರವಾಗಿದ್ದ ಶ್ರೀಗಳು, ಹಲವಾರು ಆಸ್ಪತ್ರೆಗಳು, ವಸತಿ ನಿಲಯಗಳನ್ನು ಸ್ಥಾಪಿಸಿದ್ದರು.

ಶ್ರವಣ ಬೆಳಗೊಳದ ದಿಗಂಬರ ಜೈನ ಮಠದ ಮುಖ್ಯಸ್ಥರಾಗಿದ್ದ ಶ್ರೀಗಳು, 1949 ರ ಮೇ ತಿಂಗಳ 3 ರಂದು ಜನಿಸಿದರು. ವಿವಿಧ ಜೈನ‌ಮಠಗಳಲ್ಲಿ ಕನ್ನಡ,
ಸಂಸ್ಕೃತ, ಪ್ರಾಕೃತ, ಪಾಳಿ ಮತ್ತು ಆಂಗ್ಲ ಭಾಷೆಗಳಲ್ಲಿ
ಪ್ರಾವೀಣ್ಯತೆ ಪಡೆದರು. ಮೈಸೂರು ವಿಶ್ವ ವಿದ್ಯಾನಿಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಶ್ರೀಗಳು, ಬೆಂಗಳೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸಹ ಸ್ನಾತಕೋತ್ತರ ಪದವಿ ಪಡೆದಿದ್ದರು. ಇದಲ್ಲದೆ, ಕನ್ನಡ,
ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಹುಭಾಷಾ ವಿಶಾರದರೆನ್ನಿಸಿದ್ದರು.
ತಮ್ಮ 20 ನೇ ವಯಸ್ಸಿನಲ್ಲೇ ಶ್ರವಣ ಬೆಳಗೊಳದ ದಿಗಂಬರ ಜೈನ ಮಠದ ಧರ್ಮಾಚಾರ್ಯ ಪೀಠವನ್ಬು ಏರಿದ್ದ ಶ್ರೀಗಳು, ಕಳೆದ ಐವತ್ತು ವರ್ಷಗಳ ಕಾಲಘಟ್ಟದಲ್ಲಿ ಶ್ರೀ ಕ್ಷೇತ್ರದ ಸಮಗ್ರ ಬೆಳವಣಿಗೆ ಹಾಗೂ
ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸಿ, ಶ್ರವಣ ಬೆಳಗೊಳವನ್ನು ಪುಟಕ್ಕಿಟ್ಟ ಚಿನ್ನದ ಹಾಗೆ ಹೊಳೆಯುವಂತೆ ಮಾಡಿದರು. ಶ್ರೀಕ್ಷೇತ್ರದಲ್ಲಿ
1981, 1993, 2006 ಹಾಗೂ 2018 ರಲ್ಲಿ ನಡೆದ
ಮಹಮಸ್ತಾಭಿಷೇಕಗಳ ನೇತೃತ್ವವನ್ನು ವಹಿಸಿದ್ದ ಸ್ವಾಮಿಗಳು ಧಾರ್ಮಿಕ ಕಾರ್ಯಗಳ ಜೊತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಸಹಾ ನಡೆಸಿಕೊಂಡು ಬರುತ್ತಿದ್ದರು. ಶ್ರೀಗಳ ಕಾರ್ಯತತ್ಪರತೆಯನ್ನು ಮೆಚ್ಚಿ ನೂರಾರು ರಾಷ್ಟ್ರೀಯ
ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ಲಭಿಸಿದ್ದವು. ಅವುಗಳ ಪೈಕಿ ಮುಖ್ಯವಾಗಿ ಕರ್ಮಯೋಗಿ, ಆದ್ಯಾತ್ಮ ಯೋಗಿ ಭಟ್ಟಾರಕ ಶಿರೋಮಣಿ ಮುಂತಾದವುಗಳನ್ನು ಇಲ್ಲಿ ಉಲ್ಲೇಖಿಸಬಹುದು. ಪೂಜ್ಯ ಶ್ರೀಗಳು, 16ಕ್ಕೂ ಹೆಚ್ಚು
ದೇಶಗಳಗೆ ಬೇಟಿ ನೀಡಿ ಭಾರತದ ಧಾರ್ಮಿಕ ಹಾಗೂ ಆದ್ಯಾತ್ಮಿಕ ಕ್ಷೇತ್ರದ
ಶ್ರೀಮಂತಿಕೆ ಹಾಗೂ ಪರಂಪರೆಯನ್ನು ಪಸರಿಸಿದ್ದರು.
ತಮ್ಮ ಪ್ರವಚನಗಳ ಮ‌ೂಲಕ, ಜನರ‌ ಬದುಕಿಗೆ ದಾರಿದೀಪವಾಗಿದ್ದ ಶ್ರೀಗಳು, ನೂರಾರು ಜೈನ ಬಸದಿಗಳನ್ನು ಪುನರುಜ್ಜೀವನ ಗೊಳಿಸಿದರು. ಇತ್ತೀಚಿನ ದಿನಗಳಲ್ಲಿ ಶ್ರೀಗಳು, ವೈರಾಗ್ಯದ ಕಡೆ ವಾಲಿ, ಜೈನರಲ್ಲಿಅತ್ಯಂತ ಪ್ರಮುಖವಾದ ” ಸಲ್ಲೇಖನ ವ್ರತ” ವನ್ನು( ಅನ್ನಾಹಾರಗಳನ್ನು ತ್ಯಜಿಸುವುದು) ಕೈಗೊಂಡಿದ್ದರು
ಎಂದು ಹೇಳಲಾಗಿದೆ.

ಶ್ರೀಗಳ ನಿಧನದೊಂದಿಗೆ ಜೈನಧರ್ಮದ ಪ್ರಮುಖ
ಚೇತನವೊಂದು ಕಣ್ಮರೆಯಾಗಿದೆ. ಆದರೆ ಶ್ರೀಗಳುa
ಹೊತ್ತಿಸಿರುವ ಜ್ನಾನ ಜ್ಯೋತಿ, ಸಮಾಜವನ್ನು ನಿರಂತರವಾಗಿ ಬೆಳಗುತ್ತದೆ.


ಕೆ.ವಿ.ವಾಸು

Leave a Reply

Back To Top