ಮಹಿಳಾ ಸ್ವಾವಲಂಬನೆ ಕಲಿಸಿದ ಕಲ್ಯಾಣದ ಶರಣರು

ವಿಶೇಷ ಲೇಖನ

ಡಾ.ದಾನಮ್ಮ ಝಳಕಿ

ಮಹಿಳಾ ಸ್ವಾವಲಂಬನೆ ಕಲಿಸಿದ ಕಲ್ಯಾಣದ ಶರಣರು

ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಡುತ್ತಿರುವ ನಾವು, ಮಹಿಳಾ ಹಕ್ಕು, ಸ್ತ್ರೀ ಸ್ವಾತಂತ್ರ್ಯ ಬಗ್ಗೆ ಘೋಷಣೆ ಕೂಗುತ್ತಲೇ ಇದ್ದೇವೆ. ಮಹಿಳೆಯ ಸಬಲೀಕರಣ ಹಾಗೂ ಸಮಾನತೆ ಸಾಧಿಸಲು ಪ್ರಯತ್ನಗಳು ನಿರಂತರ ಸಾಗುತ್ತಲೇ ಇವೆ.. ಅತ್ಯಂತ ಅಭಿವೃದ್ಧಿ ಸಾಧಿಸಿ, ಹೆಗ್ಗಳಿಕೆಯನ್ನು ಪಡೆದ ರಾಷ್ಟ್ರಗಳಲ್ಲಿಯೂ ಮಹಿಳೆಗೆ ಇತ್ತೀಚಿಗೆ ಮತದಾನ ಹಕ್ಕು ಸಿಕ್ಕಿರುವ ವಿಷಯ ಎಲ್ಲರಿಗೂ ತಿಳಿದ ವಿಷಯವಾಗಿದೆ. ಆಧುನಿಕ ಕಾಲದಲ್ಲಿಯೂ ಸಹ ಮಹಿಳೆ ಅನೇಕ ಜ್ವಲಂತ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ, ಶೋಷಣೆಗೊಳಪಡುತ್ತಿರುವ ವಿಷಯ ಪ್ರತಿದಿನ ಮಾಧ್ಯಮಗಳಲ್ಲಿ ಕಾಣುತ್ತೇವೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಪ್ರಯತ್ನಗಳು ಸಾಗುತ್ತಲಿದ್ದರೂ ಲಿಂಗ ತಾರತಮ್ಯ ನಿಂತಿಲ್ಲ. ಮಹಿಳೆಯನ್ನು ದೇವತೆಯಾಗಿ ಇಲ್ಲವೇ ವೈಭೋಗದ ವಸ್ತುವಾಗಿ ಅಥವಾ ಜಾಹೀರಾತಿನ ಸರಕಾಗಿ ನೋಡುವ ಜಾಯಮಾನ ಇನ್ನೂ ನಿಂತಿಲ್ಲ. ಮಹಿಳೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ನಿರ್ಣಯ ತೆಗೆದುಕೊಳ್ಳುವ ಹಕ್ಕು, ಔದ್ಯೋಗಿಕ ಹಕ್ಕು, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ್ಯ ಹಾಗೂ ಸಮಾನ ಅವಕಾಶಗಳು ದೊರತರೆ ಮಾತ್ರ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಾವಲಂಬಿಯಾಗಿ ಬದುಕಬಲ್ಲಳು
ಪ್ರತಿ ಭಾಷಣದಲ್ಲಿ, ಲೇಖನದಲ್ಲಿ “Behind every great man there is an women” ಎನ್ನುವ ನಾವುಗಳೆಲ್ಲಾ; ಮೂಲಭೂತ ಹಕ್ಕು ಅವಕಾಶಗಳ ಕಡೆಗೆ ಗಮನ ಹರಿಸಿದಾಗ ಇದು ಬರೀ ವಾಕ್ಯ ಮಾತ್ರವೆಂದೆನಿಸುತ್ತದೆ. ಇದಕ್ಕೆ ಅಪವಾದವಾಗಿ ಹನ್ನೆರಡನೆಯ ಶತಮಾನದ ಶರಣರು-ಶರಣೆಯರು ಬದುಕಿದರು. 12 ನೇಯ ಶತಮಾನದ ಶರಣರ ಕಾಲ ಮಹಿಳೆಗೆ ಸಮಾನ ಅವಕಾಶದ ಅನಾವರಣ ಕಾಲ. ಮಹಿಳೆಯರಿಗೆ ಸ್ವಾವಲಂಬನೆಯನ್ನು ಕಲಿಸಿದ ಕಾಲ. ಏಕೆಂದರೆ ಶರಣರು ಮಹಿಳೆಯರಿಗೆ ಸಮಾನ ಅವಕಾಶ ನೀಡುವದರ ಮೂಲಕ ವ್ಯಕ್ತಿ ಗೌರವವನ್ನು, ಸ್ವಾಭಿಮಾನವನ್ನು ಭಿತ್ತಿದರು. ಸ್ವಾವಲಂಬನೆಯನ್ನು ಕಲಿಸಿದರು. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಸಮಾನ ಕಾಯಕಕ್ಕೆ ಪ್ರಧಾನ್ಯತೆ ನೀಡಿದರು. ಬಿದ್ದ ಅಕ್ಕಿಗಳನ್ನು ಆಯ್ದು ತರುವ ಕಾಯಕವನ್ನು ಲಕ್ಕಮ್ಮ ವಹಿಸಿಕೊಂಡಿದ್ದಳು. ಪತಿಯೊಡನೆ ಕಟ್ಟಿಗೆ ಹೊತ್ತು ತರುವುದು ಮೋಳಿಗೆ ಮಹಾದೇವಿಯದಾಯಿತು. ಆಮುಗೆ ಕಾಯಕವ ರಾಯಮ್ಮ ಮಾಡಿದರೆ, ರೆಮ್ಮವ್ವೆ ಕದಿರಿನಿಂದ ನೂಲು ತೆಗೆಯುವ ಕಾಯಕವ ಮಾಡಿದಳು. ಸೋಮವ್ವೆ ಕೊಟ್ಟಣ ಕುಟ್ಟುವ ಕಾಯಕ ಮಾಡಿದರೆ; ನಿಂಬವ್ವೆ ನೀರು ಹೊರುವ ಕಾಯಕ ಮಾಡುತ್ತಿದ್ದಳು. ತಮ್ಮ ಆಧ್ಯಾತ್ಮಿಕ ಬದುಕಿಗೆ ಕಾಯಕವೆನ್ನುವುದು ಮೂಲಭೂತವಾದ ಅರ್ಹತೆಯಾಗಿತ್ತು. “ಶರಣ ಸತಿ-ಲಿಂಗ ಪತಿ” ಎನ್ನುವ ಮಾತನ್ನು ಶರಣರು-ಶರಣೆಯರು ತತ್ವಶ: ಪಾಲಿಸಿದರು. ಇಷ್ಟಲಿಂಗದ ಪರಿಕಲ್ಪನೆಯ ಮೂಲಕ ಧಾರ್ಮಿಕ ಹಕ್ಕನ್ನು ದೊರಕಿಸಿದರು. ಕೈಯಲ್ಲಿ ಇಷ್ಟಲಿಂಗವ ಹಿಡಿದು; ಮತ್ತೇ ಬೇರೊಂದು ಕಲ್ಲು ದೇವರಿಗೆ ಅಡ್ಡ ಬೀಳುವ ಭಕ್ತರನ್ನು ಕಂಡು ಅಕ್ಕಮಹಾದೇವಿ ಹೀಗೆ ಹೇಳುತ್ತಾಳೆ.


ಒಳಗಣ ಗಂಡನಯ್ಯಾ ಹೊರಗಣ ಮಿಂಡನಯ್ಯಾ
ಎರಡನೂ ನಡೆಸಲು ಬಾರದಯ್ಯಾ
ಲೌಕಿಕ ಪರಮಾರ್ಥವೆಂಬರಡನೂ ನಡೆಸಲು ಬಾರದಯ್ಯಾ
ಚೆನ್ನ ಮಲ್ಲಿಕಾರ್ಜುನಯ್ಯ ಬಿಲ್ವ ಬೆಳವಲಕಾಯಿ
ಒಂದಾಗಿ ಹಿಡಿಯಲು ಬಾರದಯ್ಯಾ

ಅನುಭವ ಮಂಟಪದಲ್ಲಿ ಶರಣರಿಗಿಂತ ಎಷ್ಟೋ ಸಲ ಶರಣೆಯರು ತಮ್ಮ ವ್ಯಾಚಾರಿಕತೆಯ ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ. ಅಕ್ಕಮಹಾದೇವಿ ತಾನು ಚೆನ್ನಮಲ್ಲಿಕಾರ್ಜುನನಿಗೆ ಒಳಗಾದವಳು, ಮಿಕ್ಕವರೆಲ್ಲಾ; ಸಹೋದರರು. ತಾನು ಮದುವಣಗಿತ್ತಿಯಾಗಿ ಚೆನ್ನಮಲ್ಲಿಕಾರ್ಜುನನೆಂಬ ಮದುಮಗನಿಗೆ ಶರಣರೆಂಬ ತಂದೆ-ತಾಯಿಗಳ ಸಮ್ಮುಖದಲ್ಲಿ ಮದುವೆಯಾದವಳು ಎಂದು ಪ್ರಭುದೇವರ ಜೊತೆ ವಾದಿಸಿ ಗೆದ್ದಳು. ಉಪದೇಶವು ದ್ವೈತಿಯ ಲಕ್ಷಣವೇ ಹೊರತು ಅದ್ವೈತಿಯ ಲಕ್ಷಣವಲ್ಲವೆಂದು ಅಲ್ಲಮ ಪ್ರಭುವಿನ ಜೊತೆಗೆ ಚರ್ಚೆಗಿಳಿದ ಮುಕ್ತಾಯಕ್ಕ ಶರಣರ ಮೆಚ್ಚುಗೆ ಪ್ರಶಂಸೆ ಗಳಿಸಿದಳು.
ಮೋಳಿಗ ಮಾರಯ್ಯ ತಾನು ಲಿಂಗದಲ್ಲಿ ಐಕ್ಯವಾಗುವುದಾಗಿ ಹೇಳಿದಾಗ; ಸತಿ ಮಹಾದೇವಿ ತಾನು ಬೇರೆ, ಲಿಂಗ ಬೇರೆ ಎಂಬ ಭಿನ್ನವಾದಕ್ಕೆ, ಅಜ್ಞಾನಕ್ಕೆ ದು:ಖಿಸಿ ಬುದ್ಧಿವಾದ ಹೇಳುತ್ತಾಳೆ.

“ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ
ರೋಷವೆಂಬುದು ಯಮಧೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ” ಎಂದು ಮಾರಯ್ಯನಿಗೆ ಸತಿ ದಿಟ್ಟತನದ ಮಾತನ್ನು ಆಡುತ್ತಾಳೆ.
ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಸಂಗಮಕ್ಕೆ ಹೋದ ನಂತರ ತಮ್ಮ ಸತಿ ನೀಲಾಂಬೆಕಯನ್ನು ಕರೆದು ತರುವಂತೆ ಹಡಪದ ಅಪ್ಪಣ್ಣನವರನ್ನು ಕಳಿಸದಾಗ ಆಶ್ಚರ್ಯಗೊಂಡ ನೀಲಾಂಬಿಕೆ.

ನಾನರ ಸಾರುವೆನೆಂದು ಚಿಂತಿಸಲೇಕಯ್ಯ?
ನಾನರ ಹೊಂದುವೆನೆಂದುಭ್ರಮೆ ಪಡೆಸಲೇಕಯ್ಯ?
ನಾನರ ಇರವನರಿಯೆನೆಂದು ಪ್ರಳಾಪಿಸಲೇಕಯ್ಯ?
ಪರಿಣಾಮ ಮೂರ್ತಿ ಬಸವನ ರೂಪು”

ಕರಸ್ಥಳದಲ್ಲಿ ಬೆಳಗಿದ ಬಳಿಕ; ಸಂಗಯ್ಯನ ಹಂಗು ನಮಗೇಕೆ ಅಪ್ಪಣ್ಣಾ?” ಎಂದು ನೇರವಾಗಿ ಪ್ರಶ್ನಿಸಿದ್ದಾಳೆ. ಇದರಿಂದ ಕಲ್ಯಾಣದ ಶಿವಶರಣೆಯರು ಎಷ್ಟರ ಮಟ್ಟಿಗೆ ವೈಚಾರಿಕವಾಗಿ ಏರಿದ್ದರು ಎಂದು ತಿಳಿದು ಬರುತ್ತದೆ. ದುಗ್ಗಳೆ, ಮಹಾದೇವಿ, ಅಕ್ಕಮ್ಮ, ಲಕ್ಕಮ್ಮ, ಲಿಂಗಮ್ಮ, ಆಮುಗರರಾಯಮ್ಮ, ಸೋಮವ್ವೆ, ನಿಂಬವ್ವೆ, ಕಾಳವ್ವೆ, ಸತ್ಯಕ್ಕ, ಮೋಳಿಗೆ ಮಹಾದೇವಿ, ನೀಲಾಂಬಿಕೆ, ಅಕ್ಕನಾಗಮ್ಮ, ಮುಕ್ತಾಯಕ್ಕ ಬೊಂತಾದೇವಿ, ಗೊಗ್ಗವ್ವೆ, ಕದಿರ ರೆಮವ್ವೆ, ರೇಕಮ್ಮ, ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ, ಮಸಣಮ್ಮ, ಕೊಂಡಿಮಂಚಣ್ಣಗಳ ಪುಣ್ಯಸ್ತ್ರೀ ಲಕ್ಕಮ್ಮ, ಕಾಲಕಣ್ಣಿಯ ಕಾಮಮ್ಮ, ರೇಚವ್ವೆ, ಕೇತಲದೇವಿ ಹೀಗೆ ಅನೇಕ ಮಹಿಳೆಯರು ಸಾಧಿಸಲಾರದ ಅದ್ಭುತ ಸಾಧನೆಯನ್ನು ಸಾಧಿಸಿದ್ದಾರ.

ಸತಿಪತಿಗಳಿಂದೊಂದಾದ ಭಕ್ತಿ ಹಿತವೊಪ್ಪುವದು
ನಮ್ಮ ಶಿವಂಗೆ, ಸತಿ ವಿಡಿದು ನಿರ್ವಾಣ ಸತಿ
ಕಾಣ್ವರು ಕೇಳಾ ಪ್ರಭುವೆ” ಎನ್ನುವ

ಅಣ್ಣನವರ ಮಾತುಗಳಲ್ಲಿ ಸಂಸಾರದ ಮಹತ್ವ ಹಾಗೂ ಸತಿಯ ಹೆಗ್ಗಳಿಕೆ ಕಾಣಬಹುದು. ಜಗತ್ತಿನಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಹಿಳೆಗೆ, ಸಾಮಾಜಿಕ ಆರ್ಥಿಕ, ಧಾರ್ಮಿಕ ವೈಚಾರಿಕ ಸ್ವಾತಂತ್ಯ್ರವನ್ನು ನೀಡಿ ಗೌರವಿಸಿದ ಕೀರ್ತಿ ಬಸವಣ್ಣನವರಿಗೆ ಹಾಗೂ ಇತರ ಶರಣರಿಗೆ ಸಲ್ಲುತ್ತದೆ. ಸ್ತ್ರೀ ಶಕ್ತಿಯು ಸಮಾಜದಲ್ಲಿ ಸಮಾನವೆಂದು ಮೊದಲು ತಿಳಿದುಕೊಂಡಿದ್ದು ಶರಣ ಸಂಸ್ಕೃತಿ.

ಶರಣರು ಮಹಿಳೆಯನ್ನು ತಾಯಿ, ಅಕ್ಕ ಎಂದು ಗೌರವಿಸಿದ್ದಾರೆ. ಬಸವಣ್ಣನವರು. “ಎನ್ನ ತಾಯಿ ನಿಂಬವ್ವೆ ನೀರನೆರೆದುಂಬಳು, ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು” ಎಂದು ದಲಿತ ಮಹೆಳೆ ನನ್ನ ತಾಯಿ. ಅಕ್ಕ ಎಂದು ಕರೆದಿದ್ದಾರ. “ಪರವಧುವನು ಮಹಾದೇವಿಯೆಂಬೆ ಎನ್ನುವ ಮಾತುಗಳಲ್ಲಿ ಮಹಿಳೆಗೆ ನೀಡಿದ ಗೌರವವನ್ನು ಕಾಣಬಹುದು. ಶರಣರ ವಚನಗಳಲ್ಲಿ “ಮಹಾದೇವಿಯಕ್ಕನ ಪಾದಕ್ಕೆ ನಮೊ: ನಮೊ: ಎನ್ನುತ್ತಿರ್ದೆನಯ್ಯಾ” ಎನ್ನುವ ಮಾತುಗಳ ಕಾಣಬಹುದು. ಹೆಣ್ಣು ಮಾಯೆಯೆಂಬದನ್ನು ಶರಣರು ಒಪ್ಪಲಿಲ್ಲ.

ಹೆಣ್ಣು ಮಾಯೆಯೆಂಬರು, ಮಣ್ಣು ಮಾಯೆಯಂಬರು,
ಹೊನ್ನು ಮಾಯೆಯಂಬರು,
ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ
ಮಣ್ಣು ಮಾಯೆಯಲ್ಲ; ಮನದ ಮುಂದಣ ಆಸೆಯೇ ಮಾಯೇ ಕಾಣಾ ಗುಹೇಶ್ವರಾ.
ಎನ್ನುವ ಪ್ರಭುದೇವರ ವಚನದಲ್ಲಿ ಹೆಣ್ಣು ಮಾಯೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರ.

ಆದ್ಯರ ಅರವತ್ತು ವಚನಕ್ಕೆ
ದಣ್ಣಾಯಕನ ಹತ್ತು ವಚನ,
ದಣ್ಣಾಯಕನ ಹತ್ತು ವಚನಕ್ಕೆ,
ಅಜಗಣ್ಣನ ಐದು ವಚನ
ಅಜಗಣ್ಣನ ಐದು ವಚನಕ್ಕೆ
ಅಕ್ಕಮಹಾದೇವಿಯ ಒಂದೇ ವಚನ ಸಮ ಕಾಣಾ
ಕೂಡಲ ಚೆನ್ನಸಂಗಮ ದೇವಾ.

ತನುವಿನೊಳಗಿದ್ದು ತನುವ ಗೆದ್ದಳು, ಮನದೊಳಗಿದ್ದು ಮನವ ಗೆದ್ದಳು, ಅಕ್ಕನ ಶ್ರೀ ಪಾದಕ್ಕೆ ನಮೋ: ಎನ್ನುತ್ತಾನೆ ಚೆನ್ನಬಸವಣ್ಣ.
ಕಲ್ಯಾಣ ಕ್ರಾಂತಿಯ ನಂತರ ಶರಣೆಯರ ವಚನಗಳ ಗಂಟನ್ನು ಬೆನ್ನಿಗೆ ಕಟ್ಟಿ -ಶರಣರೊಂದಿಗೆ ಬಿಜ್ಜಳನ ಸೈನಿಕರ ಜೊತೆ ಹೋರಾಡಿ, ಜಗತ್ತಿಗೆ ಒಂದು ಅಪೂರ್ವ ಸೈದ್ಧಾಂತಿಕ ಸಂಸ್ಕೃತಿ ನೀಡಿದ ಹೆಗ್ಗಳಿಕೆ ಮಹಿಳೆಯರಿಗೂ ಸೇರಿದೆ.

ವರ್ಗಭೇದ, ಲಿಂಗಭೇದ, ವರ್ಣಭೇದವನ್ನಳಿಸಿ ಸಮತಾವಾದದ ಸಮಾಜ ನಿರ್ಮಿಸಿದರು ಶರಣ ಶರಣೆಯರು ಇಂತಹ ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದನೆ ಜಗತ್ತಿನಲ್ಲಿ ಮೊದಲು, ಶರಣರಿಗೆ, ಬಸವಣ್ಣನಿಗೆ ಸಲ್ಲುತ್ತದೆ. ಶರಣ-ಶರಣೆಯರ ಸ್ತ್ರೀ ಸ್ವಾತಂತ್ರ್ಯ, ಸಮಾನತೆಯ ಕಲ್ಪನೆ, ಇಂದಿಗೂ ನಮಗೆ ಆದರ್ಶಪ್ರಾಯವಾಗಿದೆ.
ಅನುಭವ ಮಂಟಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವ ಮೂಲಕ ಚಿಂತನ ಮಂಥನಕ್ಕೆ ಅವಕಾಶ ನೀಡಿದರು,
ಹೆಣ್ಣು ಹೆಣ್ಣಲ್ಲ; ಹೆಣ್ಣು ರಕ್ಕಸಿಯಲ್ಲ
ಹೆಣ್ಣು ಸ್ವತ: ಕಪಿಲ ಸಿದ್ಧಮಲ್ಲಿಕಾರ್ಜುನ

ಎನ್ನುವ ಶರಣ ಸಿದ್ಧರಾಮನ ವಚನದಲ್ಲಿ ಹೆಣ್ಣಲ್ಲಿ ಅಡಗಿರುವ ಸುಪ್ತ ಪ್ರತಿಭೆ; ಸಾಧನೆಗಳ ಅಂಶವನ್ನು ಕಂಡುಕೊಂಡು ಮಹಿಳೆಯನ್ನು ಭಗವಂತನ ಎತ್ತರಕ್ಕೆ ಒಯ್ದರು. ಶರಣರ ಚಳುವಳಿಯಲ್ಲಿ ಮೂಲಭೂತ ಅಂಶಗಳೆಂದರೆ, ಮಹಿಳಾ ಸ್ವಾತಂತ್ಯ್ರ ಮತ್ತು ಅಸ್ಪೃಶ್ಯ ನಿರ್ಮೂಲನೆ ಮತ್ತು ಸಮತಾವಾದದ ಸಮಾಜ ನಿರ್ಮಾಣದ ಗುರಿ ಎಂದೆನ್ನಬಹುದು.
ಶರಣರು ಮಹಿಳೆಗೆ ದುಡಿದು ತಿನ್ನುವ ಹಕ್ಕನ್ನು ಕಲ್ಪಿಸಿ ಸಮಾಜದಲ್ಲಿ ಸಮಾನತೆಯನ್ನು ನೀಡಿದರು. ಸಾವಿರಾರು ವರ್ಷಗಳಿಂದ ಹಾಕಲ್ಪಟ್ಟ ಬಂಧನಗಳ ಸಂಕೋಲೆಯನ್ನು ಶರಣರು ಕಿತ್ತೆಸೆದರು. ಇನ್ನು ಅಧ್ಯಾತ್ಮಿಕ ಜೀವನದಲ್ಲಿ ಹೆಣ್ಣು-ಪುರಷನಷ್ಟೇ ಸಮಾನಳು. ಹೆಣ್ಣು ಶೂದ್ರಳೆನ್ನುವ ಸಂಪ್ರದಾಯಸ್ಥರ ವಾಕ್ಯವನ್ನು ಶರಣರು ಹುಸಿಗೊಳಿಸಿದರು. ಇದರ ಪರಿಣಾಮವಾಗಿ ಹೆಣ್ಣು-ಗಂಡು ಎಂಬ ಭೇದವನ್ನು ಮುಕ್ತವಾದ ಸಮಾಜ ನಿರ್ಮಾಣವಾಯಿತು.

ಶುಕ್ಲಶೋಣಿತಪಿಂಡೈಕ್ಯನ ಚಿತ್ತವಾಯು ಆರು ದಳದ ಪದ್ಮದಲ್ಲಿಹುದು.
ಮೊಲೆ, ಮುಡಿ ಬಂದರೆ ಆ ಪಿಂಡವನು ಹೆಣ್ಣೆಂಬರು.
ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು,
ಆ ಇಬ್ಬರ ನಡುವೆ ಸುಳಿದ ಆತ್ಮನು
ಹೆಣ್ಣು ಅಲ್ಲ, ಗಂಡು ಅಲ್ಲ ನೋಡಾ.
ಇದರಂತುವ ತಿಳಿದು ನೋಡಿಹೆನೆಂದರೆ ಶ್ರುತಿಗಳಿಗೋಚರೆಂದ
ನಮ್ಮ ಅಂಬಿಗರ ಚೌಡಯ್ಯ. -೬/೨೬೩ [1]

ಮೊಲೆ, ಮುಡಿ ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ ಗಂಡೆಂಬರು

ಒಳಗೆ ಸುಳಿವಾತ್ಮನು ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ
ಮೇಲಿನ ಎರಡು ವಚನಗಳಲ್ಲಿ ಶರಣರು ಸ್ತ್ರೀಯರೂ ಪುರುಷರೂ ಸಮಾನರು. ಅವರ ದೇಹಗಳಲ್ಲಿ ವ್ಯತ್ಯಾಸವಿದೆಯೇ ಹೊರತು, ಆತ್ಮಗಳಲ್ಲಿ ವ್ಯತ್ಯಾಸವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಭಾರತೀಯ ಧರ್ಮಗಳಲ್ಲಿ ಪುರುಷನಿಗಿರುವ ಧಾರ್ಮಿಕ ಹಕ್ಕು ಸ್ತ್ರೀಗಿಲ್ಲ. ಆಕೆ ರಜಸ್ವಲೆಯಾಗುವುದರಿಂದ, ಆಕೆ ಯಜ್ಞ, ಪೂಜೆ ಮುಂತಾದ ಧಾರ್ಮಿಕ ಕ್ರಿಯೆಗಳನ್ನು ಮಾಡಬಾರದೆಂಬ ನಿಷೇಧವಿದೆ. ಆದರೆ ಶರಣರ ಪ್ರಕಾರ ದೇವನ ದೃಷ್ಟಿಯಲ್ಲಿ ಸ್ತ್ರೀ ಪುರುಷನ ಸಮಾನ. ಶರಣರು ಎಲ್ಲರೂ ಹುಟ್ಟಿನಿಂದ ಸಮಾನರು ಎಂದು ಹೇಳಲು ಎರಡು ಕಾರಣಗಳನ್ನು ಕೊಡುತ್ತಾರೆ. ಮೊದಲನೆಯದಾಗಿ ಆತ್ಮಕ್ಕೆ ಜಾತಿಯಿಲ್ಲ. ಎಲ್ಲರ ಆತ್ಮಗಳೂ ದೇವನ ಅಂಶಗಳೇ ಆದುದರಿಂದ ಯಾವೊಬ್ಬನೂ ಶ್ರೇಷ್ಠನಲ್ಲ, ಯಾವೊಬ್ಬನು ಕನಿಷ್ಠನಲ್ಲ ಎಂದು ಗಟ್ಟಿಯಾಗಿ ಹೇಳುತ್ತಾರೆ.
ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ

ಎಂದು ಹೇಳುವ ಮೂಲಕ ಹೆಣ್ಣು ಮಾಯೆಯಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಹೀಗೆ
ಮಹಿಳೆಗೆ ಸಮಾನತೆಯನ್ನು,ಗೌರವವನ್ನು, ಸ್ವಾಭಿಮಾನವನ್ನು ತಂದುಕೊಟ್ಟರು ಅಷ್ಟೇ ಅಲ್ಲದೇ ಕೇವಲ ಪ್ರಾಬಲ್ಯ ವರ್ಗ ಹಾಗೂ ಪ್ರಬಲ ಜಾತಿಗೆ ಮಾತ್ರ ಅವಕಾಶಗಳನ್ನು ಮೀಸಲಿರಿಸದೇ, ಸಾಮಾನ್ಯ ಮಹಿಳೆಯರಾದ ಕಸಗೂಡಿಸುವ ಸತ್ಯಕ್ಕನಿಗೂ, ಸೂಳೆ ಸಂಕವ್ವೆಗೂ ಹೀಗೆ ಹಲವಾರು ಕೆಳಸ್ತರದ ಶರಣ ಶರಣೆಯರಿಗೆ ಶಿಕ್ಷಣ ನೀಡುವ ಮೂಲಕ ವಚನಗಳ ರಚನೆಗೆ ಪ್ರೇರಣೆಯಾದರು. ಹೀಗೆ ಸಮಾಜದಲ್ಲಿ ಶೈಕ್ಷಣಿಕ ಅವಕಾಶಗಳನ್ನು ತೆರೆದಿಟ್ಟು ಎಲ್ಲರನ್ನೂ ಸಾಕ್ಷರತೆಯೆಡಗೆ ಒಯ್ದರು ಹೀಗೆ ಸಮಾಜವನ್ನು ಪರಿವರ್ತನೆ ಮಾಡಿದ್ದನ್ನು ಕಾಣಬಹುದಾಗಿದೆ. ಅಂದರೆ 12 ನೇ ಶತಮಾನ ಮಹಿಳೆಗೆ ಶೈಕ್ಷಣಿಕ ಅರಿವನ್ನು ಮೂಡಿಸುವದರ ಮೂಲಕ ಕ್ರಾಂತಿಯನ್ನೇ ಮಾಡಿದ ಕಾಲ ಎನ್ನಬಹುದು.
ಒಟ್ಟಾರೆಯಾಗಿ ಶರಣರು ಸಮಸಮಾಜವನ್ನು ಕಟ್ಟುವ ಮೂಲಕ ಮಹಿಳೆಯರಿಗೆ ಅವಕಾಶಗಳನ್ನು ತೆರೆದಿಟ್ಟರು. ಆತ್ಮಕ್ಕೆ ಲಿಂಗಬೇಧವಿಲ್ಲ, ಹೆಣ್ಣು ಮಾಯೆಯಲ್ಲ, ಹೆಣ್ಣು ಅಸ್ಪೃಶಳಲ್ಲ, ಹೆಣ್ಣು ಪ್ರತ್ಯಕ್ಷ ದೇವತೆ ಎನ್ನುವ ಮೂಲಕ ಲಿಂಗಬೇಧ ತೊರೆದು, ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದರು. ಅನುಭವ ಮಂಟಪದಲ್ಲಿ ಮುಕ್ತ ಅವಕಾಶ ನೀಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲ್ಪಿಸಿದರು. ವಚನ ಬರೆಯಲು ಪ್ರೋತ್ಸಾಹಿಸಿದರು. ಇಷ್ಟಲಿಂಗ ನೀಡುವ ಮೂಲಕ ಧಾರ್ಮಿಕ ಸ್ವಾತಂತ್ರ್ಯ ನೀಡಿದರು. ಎಲ್ಲ ರಂಗಗಳಲ್ಲಿ ಸ್ವಾವಲಂಬಿ ಜೀವನಕ್ಕೆ ಪ್ರೇರಣೆ ಪ್ರೋತ್ಸಾಹ ನೀಡಿದರು. ಕಾಯಕ ಕಲ್ಪನೆಯ ಮೂಲಕ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆಯಾದರು. ಹೀಗೆ ಜಗತ್ತಿನಲ್ಲಿಯೇ ಮಹಿಳೆಯರಿಗೆ ಸ್ವಾವಲಂಬನೆಯ ಪಥದಲ್ಲಿ ಸಾಗಲು ಪ್ರೇರಣೆಯಾದವರು ಶರಣರೇ ಪ್ರಮಥರು.

ಚಿತ್ರಕೃಪೆ: ಗೂಗಲ್

ಆಧಾರ ಗ್ರಂಧಗಳು

  1. ಶಿವಶರಣೆಯರ ವಚನ ಸಂಪುಟ 5 – ಡಾ ವೀರಣ್ಣ ರಾಜೂರ
  2. ಎತ್ತ ಹೋದರು ಶರಣರು – ಡಾ ಶಶಿಕಾಂತ ಪಟ್ಟಣ
  3. https://lingayatreligion.com/K/VachanaSahitya/StreePurushaSamanathe
  4. https://www.lingayatreligion.com/K/VachanaSahitya/Sharana-Woman-Equality

ಡಾ.ದಾನಮ್ಮ ಝಳಕಿ

Leave a Reply

Back To Top