ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಗುರಿ

ಹತ್ತನೇ ತರಗತಿಶೇಖಡ 70 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣನಾದ ಮೇಲೆ ರಮೇಶ ಸಹಪಾಠಿಗಳೊಂದಿಗೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ವರ್ಷಕ್ಕೆ ದಾಖಲಾದ. ಪ್ರಥಮ ವರ್ಷದ ಪಿ.ಯು.ಸಿಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದರಿಂದ ರಮೇಶನ ತಂದೆ ಮುಂದೆ ದ್ವಿತೀಯ ವರ್ಷದ ಫಲಿತಾಂಶದ ಬಗ್ಗೆ ವಿಚಾರ ಮಾಡಿ ಬೇಸರಗೊಂಡ.ಬೇಸರಗೊಳ್ಳಲು ಮತ್ತೊಂದು ಕಾರಣವೇನೆಂದರೆ ಮನೆಯಲ್ಲಿ ಮಿಕ್ಸಿ, ಫ್ಯಾನ್,ಮೊಬೈಲ್.ಟಿ.ವಿ ಹೀಗೆ ಚಿಕ್ಕ ಪುಟ್ಟ ರಿಪೇರಿಗಳನ್ನು ಮಾಡುವುದರಲ್ಲಿ ಸಿದ್ದಹಸ್ತನಾಗಿದ್ದ. ಆಯ್.ಟಿ.ಆಯ್ ಮಾಡೆಂದು ತಂದೆ ಎಷ್ಟೋ ಗೋಗರೆದರೂ ತನ್ನ ಸ್ನೇಹಿತರೊಡಗೂಡಿ ಅವರ ಮಾತಿನಂತೆ ತನ್ನ ಆಯ್ಕೆ, ಗುರಿಯನ್ನು ಕುರಿತು ಆಲೋಚಿಸದೇ ತನ್ನ ಗೆಳೆಯರೊಡಗೂಡಿ ಅವರ ಆಯ್ಕೆ ವಿಷಯವನ್ನು ತೆಗೆದುಕೊಂಡಿದ್ದ.ತದನಂತರ ಅವನ ಆಸಕ್ತಿ ಸಾಮರ್ಥ್ಯದ ಕುರಿತು ಅರಿವಾಗಿ ತಂದೆಯ ಮಾತೇ ಸರಿ ಎನಿಸಿ ದ್ವಿತೀಯ ಪಿ.ಯು.ಸಿಗೆ ಕಾಲೇಜಿಗೆ ಹೋಗದೇ ಆಯ್.ಟಿ.ಆಯ್ ಪ್ರವೇಶ ಪಡೆದು ಈಗ ಕಂಪನಿಯಲ್ಲಿ ಕೆಲಸ ಮಾಡುತ್ತ ಕೈತುಂಬ ಸಂಬಳ ತೆಗೆದುಕೊಳ್ಳುತ್ತಾನೆ.ಇದರರ್ಥ ಮಕ್ಕಳು ತಮಗೆ ಇಷ್ಟವಾದ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕೇ ವಿನಃ ತನ್ನ ಸಹಪಾಠಿಗಳಂತೆ ಗುರಿ ಇಲ್ಲದ ಸೂತ್ರವಿಲ್ಲದ ಗಾಳಿ ಪಟದಂತಾಗಬಾರದು. ಹೀಗೆ ಇಂದಿನ ಮಕ್ಕಳಲ್ಲಿ ತಮ್ಮ ಭವಿಷ್ಯದ ಬಗೆಗೆ ಒಂದು ನಿಶ್ಚಿತವಾದ ಗುರಿ ಎಂಬುದೇ ಇಲ್ಲ.
ಸ್ವಾಮಿ ವಿವೇಕಾನಂದರು ‘ಗುರಿಯಷ್ಟೇ ಅದನ್ನು ಹೊಂದಿರುವ ಮಾರ್ಗದ ಕಡೆಗೂ ಗಮನಕೊಡಬೇಕೆಂದು ನಾನು ಕಲಿತ ಅತ್ಯಂತ ಮಹತ್ವದ ಪಾಠಗಳಲ್ಲೊಂದು.ನಾನು ಯಾರಿಂದ ಈ ಪಾಠ ಕಲಿತೆನೊ ಆ ಮಹಾತ್ಮನ ಸ್ವಂತ ಜೀವನವೇ ಈ ಒಂದು ಪ್ರಮುಖ ತತ್ವಕ್ಕೆ ಒಂದು ಉದಾಹಲಣೆಯಂತಿತ್ತು.ಆ ಒಂದು ತತ್ವದಿಂದಲೇ ನಾನು ಅನೇಕ ಪಾಠಗಳನ್ನು ಕಲಿಯುತ್ತಿದ್ದೇನೆ.ವಿಜಯದ ರಹಸ್ಯವು ಆ ತತ್ವದಲ್ಲಡಗಿದೆ ಎಂದು ನನಗೆ ಭಾಸವಾಗುತ್ತಿದೆ.ಗುರಿಯ ಕಡೆಗೆ ನಮಗೆ ಹೆಚ್ಚು ಸೆಳೆತ.ಇದೇ ನಮ್ಮ ಜೀವನದ ಅತಿ ದೊಡ್ಡ ದೋಷ.ಗುರಿಯು ನಮಗೆ ಎಷ್ಟು ಹೆಚ್ಚು ಆಕರ್ಷಕವೂ,ಮೋಹಕವೂ.ಮನಸ್ಸಿನ ಪರಿಧಿಯಲ್ಲಿ ಬೃಹದಾಕಾರವಾಗಿಯೂ ಆಗುವದೆಂದರೆ ಸಣ್ಣ,ಪುಟ್ಟ ವಿಷಯಗಳನ್ನು ಕುರಿತು ನಾವುಅಲಕ್ಷ್ಯರಾಗುತ್ತೇವೆ’ಎಂದು ಹೇಳಿದ್ದಾರೆ.


ನಿಜ, ಜೀವನದಲ್ಲಿ ಪ್ರತಿಯೊಬ್ಬರು ಒಂದೊಂದು ಗುರಿನ್ನಿಟ್ಟುಕೊಂಡು ಬಂದ ಕನಸುಗಾರರೇ, ಕನಸನು ಹೊಸೆಯುವದು ಮುಖ್ಯವಿಲ್ಲ ಆ ಕನಸಿನ ನನಸಿಗೆ ಪಡುವ ಪ್ರಯತ್ನವೇ ಅತೀ ಮುಖ್ಯ.
ಸಂಪೂರ್ಣ ಸೋಲುಂಟಾದಾಗ ಅದನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿದರೆ ನೂರರಲ್ಲಿ 90 ಬಾರಿಯೂ ನಾವು ಗುರಿಯನ್ನು ಹೊಂದುವ ಮಾರ್ಗದೆಡೆಗಮನವಿತ್ತಿಲ್ಲ ಎಂಬುದು ತಿಳಿದು ಬರುತ್ತದೆ.
ಯಾವುದೇ ಪರಿಣಾಮ ತನ್ನಿಂದ ತಾನೇ ಉಂಟಾಗದು.ಕಾರಣವು ಸುಸ್ಪಷ್ಟವೂ,ನಿಶ್ಚಿತವೂ ಹಾಗೂ ಬಲಯುತವಾಗಿದ್ದರೆ ಮಾತ್ರ ಅದರ ಪರಿಣಾಮ ಉಂಟಾಗುತ್ತದೆ.ಒಮ್ಮೆ ಆದರ್ಶ ಗುರಿಯನ್ನು ಸಾಧಿಸಲು ತದೇಕ ಚಿತ್ತದಿಂದ ನಿಷ್ಠೆಯಿಂದ ಮುನ್ನಡೆಯುವದಷ್ಟೇ ನಮ್ಮ ಕರ್ತವ್ಯವಾಗಬೇಕು.ನಿಧಾನವಾದರೂ ಸರಿ ಸಮರ್ಪಕ ದಾರಿಯಲ್ಲಿಯೇ ಹೆಜ್ಜೆಯಿಟ್ಟು ಮುನ್ನಡೆದಾಗ ಮಾತ್ರ ಗುರಿ ಸಾಧನೆ ಖಂಡಿತ. ಮಹಾಭಾರತದಲ್ಲಿ ಕೌರವ ಪಾಂಡವ ರಾಜಕುಮಾರರಿಗೆ ಬಿಲ್ವಿದ್ಯೆಯನ್ನು ಕಲಿಸಿ ಅವರಿಗಾಗಿ ಒಂದು ಪರೀಕ್ಷೆಯನ್ನಿಡುತ್ತಾರೆ.ಒಂದು ಮರದ ತುದಿಯ ಮೇಲೆ ಕೃತಕ ಪಕ್ಷಿಯನಿಟ್ಟು ಒಬ್ಬೊಬ್ಬರನ್ನಾಗಿ ಕರೆದು ಮರದ ಮೇಲೆ ನಿಮಗೇನು? ಕಾಣುತ್ತಿದೆ ಎಂದಾಗ ಪಕ್ಷಿಯ ಮುಖ, ಸುತ್ತಮುತ್ತಲಿನ ಮರ, ಮರದಡಿಯ ರಾಜಕುಮಾರರು, ಹೀಗೆ ಪ್ರತಿಯೊಬ್ಬರು ಹೇಳಿದಾಗ ಗುರುಗಳಾದ ದ್ರೋಣಾಚಾರ್ಯರಿಗೆ ತೃಪ್ತಿಯಾಗುವುದಿಲ್ಲ.ಅರ್ಜುನನ್ನು ಕೇಳಿದಾಗ ಪಕ್ಷಿಯ ಅಕ್ಷಿಯಲ್ಲದೇ ಬೇರೇನೂ ಕಾಣದು ಗುರುದೇವ ಎಂದಾಗ ಅರ್ಜುನನ ಗುರಿಯನರಿತ ಗುರುಳಾದ ದ್ರೋಣಾಚಾರ್ಯರು ಸಂತೋಷದಿಂದ ಬಾಣ ಹೊಡೆಯಲು ತಿಳಿಸುತ್ತಾರೆ.ಹೀಗೆ ಗುರಿಯಿಲ್ಲದ ಶಿಕ್ಷಣ ನಿರರ್ಥಕ ಎಂಬಂತೆ’ ಮುಂದೆ ಗುರಿ ಇರಬೇಕು ಹಿಂದೆ ಗುರುವಿರಬೇಕು ‘ಎಂಬ ಮಾತಿನಂತೆ ಗುರುಗಳಿಂದ ಪಡೆದ ಜ್ಞಾನ ಅಪೂರ್ವವಾದ ವಿದ್ಯಾನಿಧಿಯಾಗಿದೆ.ಈ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿಗಳು ತಮ್ಮ ಬಾಳಿಗೆ ಒಂದು ಗುರಿಯನ್ನಿಟ್ಟುಕೊಂಡು ಅದನ್ನು ಸಾಧಿಸಲು ಹಗಲು ಇರುಳು ಶ್ರಮಿಸಬೇಕು ಅಂದರೆ ಅಧ್ಯಯನಶೀಲರಾಗಬೇಕು.ಪಾಲಕರು ಕೂಡ ತಮ್ಮ ಮಕ್ಕಳಲ್ಲಿ ಅಡಗಿರುವ ವಿಶೇಷ ಪ್ರತಿಭೆಯನ್ನು ಗುರ್ತಿಸಿ ಸೂಕ್ತ ಪ್ರೋತ್ಸಾಹ ನೀಡಬೇಕು.ಮಕ್ಕಳ ಸಹವಾಸ, ಅವರ ಹವ್ಯಾಸಗಳ ಕುರಿತು ಗಮನಹರಿಸಬೇಕಿದೆ
ಒಂದೊಮ್ಮೆ ಪಾಲಕರು ಮಕ್ಕಳ ಭವಿಷ್ಯದ ಗುರಿ ಸಾಧಿಸಲು ಹರಸಾಹಸ ಪಡುತ್ತಾರೆ.ಆದರೆ ಕೆಲವೊಮ್ಮೆ ಮಕ್ಕಹು ಹೆಚ್ಚು ಕಷ್ಟಪಡದೇ ಇದ್ದುದರಲ್ಲೆತೃಪ್ತಿ ಪಟ್ಟು ಬಾವಿಯ ಕಪ್ಪೆಗಳಂತಾಗುತ್ತಾರೆ.ಇಂದಿನ ಸ್ಪರ್ಧಾತ್ಮಕ ಯುಗದ ಭರಾಟೆಯಲ್ಲಿ ಪಾಲಕರು ತಮ್ಮ ಮಕ್ಕಳು ನೂರಕ್ಕೆ ನೂರು ಪಡೆಯುವಂತೆ ಒತ್ತಾಯ ಹೇರುತ್ತಾರೆ.ಹೆಚ್ಚು ಶ್ರಮ ಪಡಲು ಸಿದ್ಧವಿಲ್ಲದ, ಕಿರಿಕಿರಿ ಎಂದು ಮನದಿ ಉಲಿದು ಕೈಗೆಟುಕದ ದ್ರಾಕ್ಷಿ ಹುಳಿ ಎಂದು ತಮ್ಮಿಂದಾಗದ ಕೆಲಸಕ್ಕೆ ಸಬೂಬು ಹೇಳುತ್ತಾರೆ.ಅಂಕಗಳಿಕೆಗಿಂತ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವದು ಅವಶ್ಯಕ.ಅಂಕಗಳಿಕೆಯಲಿ ತುಸು ಏರುಪೇರಾದರೂ ಆತ್ಮ ಹತ್ಯೆ ಖಿನ್ನತೆ ಇಂದ ನರಳುವ ಮಕ್ಕಳಲ್ಲಿ ಗುರಿಯ ಅನಿಶ್ಚಿತ ನಂಬಿಕೆ, ಪರಿಶ್ರಮದ ಕೊರತೆ ಕಂಡುಬರುತ್ತದೆ.

ಡಾ.ಎ.ಪಿ.ಜೆ.ಅಬ್ದುಲ್ಲ ಕಲಾಂ ಹೇಳುವಂತೆ”ಕನಸುಗಳು ನಿದ್ದೆ ಮಾಡಲು ಬಿಡದಂತಿರಬೇಕು” ಎಂಬುದರಲ್ಲಿ ಗುರಿಯ ಪಾತ್ರದ ಕುರಿತು ನಮ್ಮನ್ನು ಸಾಧನೆಗೆ ಎಚ್ಚರಿಸಿದ್ದಾರೆ.
ಗುರಿಯನ್ನು ಹಳಿದು ಹಂಗಿಸುವುದಕ್ಕಿಂತ ಛಲದಿಂದ ಸಾಧಿಸುವಂತೆ ಮಕ್ಕಳಲ್ಲಿ ಸಂಸ್ಕಾರದ ಜೊತೆ ಸಹಾನುಭೂತಿ.ತಾಳ್ಮೆ, ಪರೋಪಕಾರದ ಮೌಲ್ಯವನ್ನು ಬೆಳೆಸೋಣ, ಗುರಿಯನ್ನು ಹಳಿಯುವುದಕ್ಕಿಂತ ಇನ್ನಾದರೂ ಸರಿದಾರಿ ತುಳಿಯಲು ಮಕ್ಕಳನ್ನು ನಮ್ಮ ನಡೆನುಡಿಯಿಂದ ಪ್ರೇರೇಪಿಸೋಣ ಅಲ್ಲವೇ?


ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

3 thoughts on “

Leave a Reply

Back To Top