ಕಾವ್ಯ ಸಂಗಾತಿ
ರಾತ್ರಿ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ರಾತ್ರಿ ನಿಗೂಢ
ಕತ್ತಲೆಯೊಳಗೆ ನಾವು ಸಹ ಮಾಯ
ಆದ ಕತ್ತಲೆ…ನಿಗೂಢ!
ರಾತ್ರಿ ಮೂಲೆಗಳು ಕಳೆದು
ಕೋನಗಳ ದಿಕ್ಕಿಲ್ಲದೆ
ಎಲ್ಲೆಲ್ಲು
ವರ್ತುಲ ವಲಯ
ಅಥವ
ಬಿಂದು ರೇಖೆ ಗೋಟುಗಳಳಿದ
ಜ್ಯಾಮಿತಿ!
ರಾತ್ರಿ ಭಯಂಕರ
ಸೊನ್ನೆ ಸೊನ್ನೆಗಳ ಮಹಾಪೂರ
ಮುಖದಿಂದ ಎದ್ದು ಎತ್ತಲೋ ನಡೆದ
ಕಣ್ಣು!
ರಾತ್ರಿಗೆ
ಯಾರಿಗೂ ಏತಕ್ಕೂ ಯಾವುದೆ
ಉತ್ತರದಾಯಿತ್ವ ಇಲ್ಲ
ಸೂಜಿಮೊನೆಯಷ್ಟು!
ರಾತ್ರಿ
ತನ್ನ ದೃಷ್ಟಿ
ಎತ್ತ ಯಾರತ್ತ
ಯಾವ ದಿಕ್ಕಿನತ್ತ
ಆಕಾಶ ಪಾತಾಳ
ಎತ್ತ ನೆಟ್ಟಿರಬಹುದು
ಯಾರು ಬಲ್ಲರು?
ರಾತ್ರಿ
ನಿಗೂಢ
ಇದ್ದೂ ಇಲ್ಲದಂತೆ
ಕಳೆದುಹೋದಂಥ
ದಿಗ್ಭ್ರಮಾನಂದಕ್ಕೆ
ರಾತ್ರಿಯೆ
ಪ್ರಶಸ್ತ!
ಮೂರ್ತಿ ,ರಾತ್ರಿ ನಿಗೂಢ ಮತ್ತು ಅನಂತ.
ಸ್ವಲ್ಪ ಎತ್ತರಕ್ಕೆ ಹೋದರೆ ರಾತ್ರಿ ಇರುವಿಕೆಗೆ, ಇಲ್ಲದಿರುವಿಕೆಗೆ ಕಾರಣ.
ವಿಷಯ ಮತ್ತು ನಿರೂಪಣೆ ಭವ್ಯ!
Congrats Murthy!
ಸೊಗಸಾಗಿದೆ
ಧನ್ಯವಾದ ಪ್ರಿಯ ವೆಂಕಟೇಶ್
ಸೊಗಸಾಗಿದೆ
ಧನ್ಯವಾದ ಪ್ರಿಯ ಚಂದ್ರು