ಕಾವ್ಯ ಸಂಗಾತಿ
ಗಜಲ್
ಅರುಣಾ ನರೇಂದ್ರ
ಹೂವನು ಅರಸುತ ದುಂಬಿಯ ಹಿಂಡು ಬಂದಿದೆ ನಂದನಕೆ
ವಿಧ ವಿಧ ಬಣ್ಣದ ಬಟ್ಟೆಯ ತೊಟ್ಟಿವೆ ನಾಚಿಕೆ ಮೈ ಮನಕ್ಕೆ
ಗಿಡ ಮರ ಬಳ್ಳಿ ಹಸಿರನು ಉಟ್ಟು ನಲಿದಿವೆ ನಳನಳಿಸಿ
ಚಿಗುರಿನ ತೇರಲಿ ರಾಜ ವಸಂತನು ಬಂದನು ಹೂ ಬನಕೆ
ಮಾವಿನ ಮರದಲಿ ಗಿಳಿವಿಂಡಿಗೆ ಹಬ್ಬದ ಸಡಗರವು
ಕುಹೂ ಕುಹೂ ನಲ್ಲನ ಕರೆಯಲು ಮೋದವು ಕೂಜನಕೆ
ಮಾವು ಬೇವು ಹೊಂಗೆ ಹುಣಸೆ ಗಾಳಿ ಗಂಧ ಹರಡಿದೆ
ಮೇವು ಮರೆತವು ಹಸುವು ಮುದದಿ ಕೊಳಲ ಸವಿ ಗಾನಕೆ
ಬೇವು ಬೆಲ್ಲ ನಮ್ಮ ಬದುಕು ಸಿಹಿ ಒಗರಿನ ಹೂರಣ
ಅರುಣಾಳ ಮನ ತೆರೆದಿದೆ ಯುಗಾದಿಯ ಹೊಸತನಕೆ