ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ ಅವರ ಲೇಖನಿಯಿಂದ

ನಿರ್ಮಲಾ ಪಾಟೀಲ ರವರ ಗಜಲ್ ಗಳಲ್ಲಿ

ಪ್ರೀತಿಯ ಸಿಂಚನ

ಹಾಯ್….
ಎಲ್ಲರೂ ಹೇಗಿದ್ದೀರಿ, ‘ಗುರುವಾರ’ ಬಂದರೂ ಈ ಗಜಲ್ ಪಾಗಲ್ ಇನ್ನೂ ಬರಲಿಲ್ವಲ್ಲಂತ ಕಾಯ್ತಾ ಇದ್ದೀರಾ… ಈಗೊ, ತಮ್ಮ ಮುಂದೆ ನಾನು ಹಾಜರ್, ಗಜಲ್ ಗೋ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ. ನಾನು ಯಾವತ್ತಾದರೂ ನಿಮಗೆ ನಿರಾಸೆಗೊಳಿಸಿದ್ದುಂಟಾ… ಖಂಡಿತ ಇಲ್ಲ. ನೀವು ಸುಖನವರ್ ಅವರ ಪರಿಚಯದೊಂದಿಗೆ ಚಲಿಸುತ್ತಿರುವುದನ್ನು ನೋಡೋದೇ ಒಂದು ಸಡಗರ‌. ಮತ್ತೇಕೆ ತಡ… ಏಕ್ ಷೇರ್ ಅರ್ಜ್ ಹೈ…!!

“ನಿನ್ನ ಹೆಸರನ್ನು ಬರೆಯುವ ಅನುಮತಿಯನ್ನು ಕಸಿದುಕೊಂಡಾಗಿನಿಂದ
ನಾನು ಯಾವುದೇ ಪದವನ್ನು ಬರೆದರೂ ನನ್ನ ಕಣ್ಣುಗಳು ತೇವವಾಗುತ್ತವೆ”
-ವಸೀ ಶಾಹ

    ಭಾವನೆಗಳ ಗುಲ್ದಸ್ತವಾದ ಮನುಷ್ಯ, ತನ್ನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು 'ಭಾಷೆ'ಯೆಂಬ ಸಾಧನವನ್ನು ಕಂಡು ಹಿಡಿದಿರುವುದು ಇಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಭಾಷೆಯೆಂಬ ಜ್ಯೋತಿಯ ಬೆಳಕಲ್ಲಿ ಬರವಣಿಗೆಯನ್ನು ರೂಢಿಸಿಕೊಂಡು, ಅಸಂಖ್ಯಾತ ರೂಪಗಳನ್ನು ಒಳಗೊಂಡ ಒಂದು ವಾಙ್ಮಯ ಲೋಕವನ್ನೇ ಸೃಷ್ಟಿಸಿದ್ದಾನೆ. ಅದು ಇಂದು ಮನುಕುಲದ ನೆಮ್ಮದಿ ತಾಣವಾಗಿದೆ. ಅಂತೆಯೇ ಕವಿ ಎಂದರೆ ಎಲ್ಲಕ್ಕಿಂತ ಮೊದಲು ಭಾಷೆಯನ್ನು ಉತ್ಕಟವಾಗಿ ಪ್ರೀತಿಸುವ ವ್ಯಕ್ತಿ ಎನ್ನಲಾಗುತ್ತದೆ. "ಸಾಹಿತ್ಯದ ಕಿರೀಟವು ಕಾವ್ಯವಾಗಿದೆ" ಎಂಬ ಆಂಗ್ಲ ಭಾಷೆಯ ಪ್ರಸಿದ್ಧ ಬರಹಗಾರರಾದ ಸೋಮರ್‌ಸೆಟ್ ಮೌಘಮ್ ರವರ ಈ ಮಾತು ಕಾವ್ಯದ ಜೀವಂತಿಕೆಯನ್ನು ಸಾರುತ್ತದೆ. ಅಂತೆಯೇ ಸಾಹಿತ್ಯ ಪ್ರಕಾರಗಳಲ್ಲಿ ಹಲವು ವೈವಿಧ್ಯಮಯ ಆಯಾಮಗಳಿದ್ದರೂ ಕಾವ್ಯದ ಜಿನುಗುವಿಕೆ ಕಡಿಮೆಯಾಗಿಲ್ಲ, ನಿರಂತರವಾಗಿದೆ!! ಇದಕ್ಕೆ ಇನ್ನೊಂದು ಕಾರಣವೂ ಇದೆ. ಅದೆಂದರೆ ಸರಳತೆ, ಸರಳವಾಗಿ ಸಹೃದಯ ಓದುಗರ ಹೃದಯದ ಕದವನ್ನು ತಟ್ಟುವ ಗುಣ. ಇದು ಯಾವತ್ತೂ ಪಾಂಡಿತ್ಯ ಪ್ರದರ್ಶನಕ್ಕೆ ವೇದಿಕೆಯಾಗಲು ಬಯಸುವುದಿಲ್ಲ. ವಿದ್ವಾಂಸರ ವಾತಾವರಣದಲ್ಲಿ ಕಾವ್ಯ ಉಸಿರಾಡಲಾರದು‌‌. ಇದರೊಂದಿಗೆ ಕಾವ್ಯವು ಕಾಲ್ಪನಿಕತೆಯ ತೊಟ್ಟಿಲಲ್ಲಿ ಬೆಳೆದರೂ ವಾಸ್ತವತೆಯಿಂದ ದೂರವಾಗುವುದಿಲ್ಲ. ಕಾವ್ಯದ ಕಿರಣದಿಂದ ಪ್ರಕಾಶಿಸಿದಾಗ ಮಾತ್ರ ವಾಸ್ತವವು ತನ್ನನ್ನು ತಾನು ಬಹಿರಂಗಪಡಿಸುತ್ತದೆ. ಇಲ್ಲಿ ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ರವರ ಈ ಮಾತುಗಳು ಅಗತ್ಯವೆನಿಸುತ್ತವೆ. “ಕಾವ್ಯವು ಇತಿಹಾಸಕ್ಕಿಂತ ಸೂಕ್ಷ್ಮವಾಗಿದೆ ಮತ್ತು ಹೆಚ್ಚು ತಾತ್ವಿಕವಾಗಿದೆ; ಏಕೆಂದರೆ ಕಾವ್ಯವು ಸಾರ್ವತ್ರಿಕತೆಯನ್ನು ವ್ಯಕ್ತಪಡಿಸುತ್ತದೆ ಮತ್ತು ಇತಿಹಾಸವು ನಿರ್ದಿಷ್ಟವಾದುದನ್ನು ಮಾತ್ರ ವ್ಯಕ್ತಪಡಿಸುತ್ತದೆ". ಇಂಥಹ ಕಾವ್ಯವು ಹಕ್ಕಿಯಂತೆ, ಎಲ್ಲಾ ಗಡಿಗಳನ್ನು ನಿರ್ಲಕ್ಷಿಸುತ್ತದೆ. ಇದಕ್ಕೆ ಕಾಲ, ದೇಶ, ಭಾಷೆಯ ಹಂಗು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಅನ್ಯ ಭಾಷೆಯ, ದೂರ ದೇಶದ ಹಲವು ಕಾವ್ಯ ಪ್ರಕಾರಗಳು ಕನ್ನಡದ ಮಣ್ಣಿನಲ್ಲಿ, ಕನ್ನಡಿಗರ ಹೃದಯದಲ್ಲಿ ಬೆರೆತು ಹೋಗಿವೆ. ಅವುಗಳಲ್ಲಿ ಮುಂಚೂಣಿಯಲ್ಲಿರುವ ಕಾವ್ಯ ಪ್ರಕಾರವೆಂದರೆ 'ಗಜಲ್'. ಇಂದು ಕನ್ನಡ ಸಾರಸ್ವತ ಲೋಕದಲ್ಲಿ ಅಸಂಖ್ಯಾತ ಬರಹಗಾರರು ಗಜಲ್ ಮಧುಬಾಲೆಯ ಸೆಳೆತಕ್ಕೆ ಸಿಲುಕಿ ನಿರಂತರವಾಗಿ ಗಜಲ್ ಗಳನ್ನು ರಚಿಸುತ್ತಿದ್ದಾರೆ. ಅವರುಗಳಲ್ಲಿ ಶ್ರೀಮತಿ ನಿರ್ಮಲಾ ರಾ. ಪಾಟೀಲ ಅವರೂ ಒಬ್ಬರು. 

     ಶ್ರೀಮತಿ ನಿರ್ಮಲಾ ರಾವಸಾಹೇಬ ಪಾಟೀಲ ರವರು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶ್ರೀಮತಿ ಬೌರವ್ವಾ ಮತ್ತು ಶ್ರೀ ಭೀಮಪ್ಪಾ ಬಣಜಿಗೇರ ದಂಪತಿಗಳ ನಾಲ್ಕನೇ ಸುಪುತ್ರಿಯಾಗಿ ೧೯೭೫ ರ ಜುಲೈ ತಿಂಗಳ ಒಂದರಂದು ಜನಿಸಿದರು. ಇವರು ತಮ್ಮ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಶಿಕ್ಷಣ ಹಾಗೂ ೧೯೯೪ ರಲ್ಲಿ ತಮ್ಮ ಬಿ.ಕಾಂ ಪದವಿಯನ್ನು ಹುಟ್ಟೂರಾದ ಅಥಣಿಯಲ್ಲಿ ಮುಗಿಸಿ ಮುಂದೆ ೧೯೯೪ ರಿಂದ ೧೯೯೭ ರವರೆಗೆ ಕಾನೂನು ಪದವಿಯನ್ನು ಬೆಳಗಾವಿಯ ಕೆಎಲ್ಇ ಸಂಸ್ಥೆಯ ಬಿ.ವಿ ಬೆಲ್ಲದ ಕಾನೂನು ಮಹಾವಿದ್ಯಾಲಯ ದಲ್ಲಿ ಪೂರೈಸಿದ್ದಾರೆ. ನಂತರ ೧೯೯೭-೧೯೯೯ ರವರೆಗೆ ಅಥಣಿಯಲ್ಲಿ ವಕೀಲ ವೃತ್ತಿ ಪ್ರ್ಯಾಕ್ಟಿಸ್ ಮಾಡುತ್ತ, ೧೯೯೯ರಲ್ಲಿ ಶ್ರೀ ರಾವಸಾಹೇಬ ಪಾಟೀಲ ಎಂಬ ನ್ಯಾಯವಾದಿಗಳೊಂದಿಗೆ ವಿವಾಹವಾಗಿ; ಕ್ರಿ.ಶ ೨೦೦೦ದಿಂದ ಬೆಳಗಾವಿಯಲ್ಲಿ ವಕೀಲ ವೃತ್ತಿಯಲ್ಲಿ ಸಕ್ರಿಯವಾಗಿದ್ದಾರೆ. 

 ವಕೀಲ ವೃತ್ತಿಯಲ್ಲಿ ಸಿವಿಲ್, ಕ್ರಿಮಿನಲ್, ಮೋಟಾರ ವಾಹನ ಅಪಘಾತ ಪ್ರಕರಣಗಳು, ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು ಹೀಗೆ ಹತ್ತು ಹಲವಾರು ಪ್ರಕರಣಗಳಿಗೆ ನ್ಯಾಯ ಒದಗಿಸುತ್ತ, 'ಅಬ್ಜೇಕ್ಸನ್ ಮೈ ಲಾರ್ಡ್' ಎನ್ನುತ್ತಲೇ ತಮ್ಮ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುತ್ತ ಸಾಹಿತ್ಯ ನಂಟನ್ನು ಬೆಳೆಸಿಕೊಂಡಿರುವ ಶ್ರೀಮತಿ ನಿರ್ಮಲಾ ಪಾಟೀಲ ರವರು ಕಾವ್ಯ, ಹನಿಗವನ, ನ್ಯಾನೋ ಕಥೆ, ಲೇಖನ, ಗಜಲ್... ಎಂಬ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ. "ನಿರಾ ಗಜಲ್" ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಗಜಲ್ ದುನಿಯಾದಲ್ಲಿ ಸಕ್ರಿಯವಾಗಿದ್ದಾರೆ. 

ತಮ್ಮ ಬಿಡುವಿಲ್ಲದ ಸಮಯದಲ್ಲೂ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಶ್ರೀಮತಿ ನಿರ್ಮಲಾ ಪಾಟೀಲ ರವರ ಹಲವಾರು ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಅನೇಕ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ಸಾರಿದ್ದಾರೆ. ಇವರಿಗೆ ನಾಡಿನ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ, ಗೌರವಿಸಿ ಸತ್ಕರಿಸಿವೆ.  

   ಬದುಕು ಬವಣೆಗಳ ತವರೂರು. ಆ ಬವಣೆಗಳಲ್ಲಿಯೆ ನೆಮ್ಮದಿಯ ನಿಟ್ಟುಸಿರನ್ನು ಕಂಡುಕೊಳ್ಳುವುದೆ ನಮ್ಮ ಮುಂದಿರುವ ಸವಾಲು. ನಾವು ಜೀವನದಲ್ಲಿ ಸತ್ತಿಲ್ಲ ಎಂದರೆ ಜೀವಂತವಾಗಿರುವುದಿಲ್ಲ. ಈ ನೆಲೆಯಲ್ಲಿ ಯೋಚಿಸಿದಾಗ ನಾವು ನಮ್ಮ ಜೀವನದುದ್ದಕ್ಕೂ ಎರಡು ಬಾರಿ ಮಾತ್ರ ಬದುಕಿರುತ್ತೇವೆ. ಒಮ್ಮೆ ನಾವು ಹುಟ್ಟಿದಾಗ

ಮತ್ತೊಮ್ಮೆ ನಾವು ಸಾವಿನ ಮುಖವನ್ನು ನೋಡಿದಾಗ!! ಶಾಂತಿ ಯಾವಾಗಲೂ ಸುಂದರವಾಗಿರುತ್ತದೆ ಎಂಬುದನ್ನು ಬದುಕು ನಮಗೆ ಕಲಿಸಿಕೊಡುತ್ತದೆ. ಇದರಲ್ಲಿ ಗಜಲ್ ನ ಪಾತ್ರ ಅನೂಹ್ಯವಾದದ್ದು. ಇದು ಕಂಬನಿಯ ಕಡಲಲ್ಲಿ ತೇಲುವ, ಮುಳುಗದಂತೆ ಎಚ್ಚರಿಕೆ ವಹಿಸುವ, ಕಡಲನ್ನು ದಾಟಿಸುವ ಪ್ರಕ್ರಿಯೆ ತನ್ನ ಅಶಅರ್ ಮೂಲಕ ಮಾಡುತ್ತ ಬಂದಿದೆ. ನಾವು ಭೂಮಿಯ ಬುದ್ದಿವಂತಿಕೆಗೆ ಶರಣಾದರೆ
ಮರಗಳಂತೆ ಬೇರು ಬಿಟ್ಟು ಮೇಲೇಳಬಹುದು ಎಂಬುದನ್ನು ನಮ್ಮ ಹೃದಯಕ್ಕೆ ಇಳಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಗೋ ನಿರ್ಮಲಾ ಪಾಟೀಲ ರವರ ಗಜಲ್ ಗಳನ್ನು ಅವಲೋಕಿಸಿದಾಗ ಜೀವನ ಶ್ರದ್ಧೆ, ಜೀವನ ಪ್ರೀತಿ ಇದೆ. ಪ್ರೀತಿ, ಪ್ರೇಮ, ಶೃಂಗಾರ, ಸೌಂದರ್ಯ ಆರಾಧನೆ, ಮುನಿಸು, ರಮಿಸುವಿಕೆ, ವಿರಹ… ಎಲ್ಲವೂ ಪ್ರೀತಿಯ ಕಾಮನಬಿಲ್ಲು ಎಂಬಂತೆ ಸುಂದರವಾಗಿ ಚಿತ್ರಿಸಿದ್ದಾರೆ. ಇವುಗಳೊಂದಿಗೆ ಬದಲಾದ ಕಾಲದೊಂದಿಗೆ ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ನಾಗರಿಕತೆಯ ನೆಲೆಯಲ್ಲಿ ಅನಾಗರಿಕತೆಯ ತಾಂಡವ, ಸ್ತ್ರೀ ಸಂವೇದನೆಯ ಮೆಲುಮಾತುಗಳು, ಮಾನವೀಯ ಮೌಲ್ಯಗಳ ಸಿಂಚನ, ಮನುಷ್ಯ ಸಂಬಂಧಗಳ ಕಣ್ಣಾಮುಚ್ಚಾಲೆ, ಪುರುಷ ಪ್ರಧಾನ ಸಮಾಜದ ಅಟ್ಟಹಾಸ, ಮನಸ್ಸಿನ ಹೊಯ್ದಾಟ, ಬಡತನದ ಬೇಗುದಿ… ಎಲ್ಲವೂ ಇಲ್ಲಿ ಮುಪ್ಪರಿಗೊಂಡಿವೆ.

ನಿನ್ನವರಿಗೆ ನೀನಿರುವುದು ತೊಂದರೆಯಾದರೆ ದೂರ ಸರಿದುಬಿಡು
ಮಾತನಾಡುವುದರಿಂದ ಮನಕೆ ಅಡಚಣೆಯಾದರೆ ದೂರ ಸರಿದುಬಿಡು”

ಮನುಷ್ಯ ಇಂದು ಹತ್ತು ಹಲವಾರು ವಿದ್ಯೆಗಳನ್ನು ಕಲಿತು ಪದವಿಗಳನ್ನು ಪಡೆಯುತಿದ್ದಾನೆ, ಬಿರುದು ಬಾವಲಿಗಳಿಂದ ಕುಣಿದಾಡುತಿದ್ದಾನೆ. ಮನುಷ್ಯ ಏನೆಲ್ಲಾ ಕಲಿಯುತಿದ್ದಾನೆಯಾದರೂ ಮನುಷ್ಯನಾಗುವುದನ್ನು ಮಾತ್ರ ಕಲಿಯುತಿಲ್ಲ. ಈ ಹಿನ್ನೆಲೆಯಲ್ಲಿ ಗಜಲ್ ಗೋ ಶ್ರೀಮತಿ ನಿರ್ಮಲಾ ಪಾಟೀಲ ರವರು ಈ ಮೇಲಿನ ಷೇರ್ ನಲ್ಲಿ ಬದುಕಿನ ರೀತಿಯನ್ನು ದಾಖಲಿಸಿದ್ದಾರೆ. ಮಾತು ಹೇಗಿರಬೇಕು ಎಂದು ಸೂಚ್ಯವಾಗಿ ಹೇಳುತ್ತ, ನಾವು ಯಾರಿಗೂ ಹೊರೆಯಾಗಬಾರದು ಎಂಬ ಸಂದೇಶವನ್ನು ನೀಡಿದ್ದಾರೆ.

 ಪ್ರೀತಿ ಎನ್ನುವುದು ಸರ್ವಾಂತರ್ಯಾಮಿ. ಪ್ರೀತಿಯಲ್ಲಿ ಮುಳುಗಿದವರಿಗೆ ಎಲ್ಲೆಡೆಯೂ ತಮ್ಮ ಪ್ರೇಮಿ, ಪ್ರಿಯತಮೆಯೆ ಕಾಣಿಸುತ್ತಾರೆ. ಇದನ್ನು ಗಜಲ್ ಗೋ ಶ್ರೀಮತಿ ನಿರ್ಮಲಾ ಪಾಟೀಲ ರವರ ಈ ಜುಲ್ ಕಾಫಿಯ ಗಜಲ್ ನಲ್ಲಿ ಗಮನಿಸಬಹುದು. ಬರವಣಿಗೆಯ ಪ್ರತಿ ಅಕ್ಷರಕ್ಕೂ ಪ್ರೀತಿಯೇ ಜೀವಾಳ. ಅಂತೆಯೇ ಪ್ರೀತಿಯ ನೆನಪುಗಳೇ ನಮ್ಮ ಜೀವನದಲ್ಲಿ ಭವ್ಯವಾದ ತಾಜಮಹಲ್ ಅನ್ನು ನಿರ್ಮಿಸುತ್ತದೆ. ನಮ್ಮ ಅಕ್ಷಿಪಟಲದ ತುಂಬೆಲ್ಲ ಪ್ರೀತಿಯ ಪ್ರತಿಬಿಂಬವೇ ಆವರಿಸಿರುತ್ತದೆ ಎಂಬುದನ್ನು ತುಂಬಾ ಸರಳವಾಗಿ ಹಾಗೂ ತೀಕ್ಷ್ಣವಾಗಿ ಪ್ರತಿಪಾದಿಸಿದ್ದಾರೆ.  

ನಾ ಬರೆಯುವ ಕವನಗಳಲ್ಲಿ ನಿನ್ನ ನೆನಪುಗಳದೆ ಕಾರುಬಾರು ಗೆಳೆಯಾ
ನೋಡಿ ಕಾಡುವ ಕಂಗಳಲ್ಲಿ ನಿನ್ನ ಕನಸುಗಳದೆ ದರ್ಬಾರು ಗೆಳೆಯಾ”

‘ಬರಹ’ ಎನ್ನುವುದು ಮನೋರಂಜನೆಯ ಸಾಧನವಲ್ಲ. ಇದೊಂದು ಬದ್ಧತೆಯ ಹುಚ್ಚು! ತಪ್ಪುಗಳನ್ನು ಗುರುತಿಸುವ ತೀಕ್ಷ್ಣತೆಗಿಂತಲೂ, ಆ ತಪ್ಪುಗಳನ್ನು ತಿದ್ದುವ, ಅಳಸುವ ಬರಹ ಹೆಚ್ಚು ಪರಿಪಕ್ವ ಅನಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಸುಖನವರ್ ಶ್ರೀಮತಿ ನಿರ್ಮಲಾ ಪಾಟೀಲ ರವರ ಲೇಖನಿಯಿಂದ ಹತ್ತು ಹಲವಾರು ಗಜಲ್ ಗಳು ಸೃಷ್ಟಿಯಾಗಲಿ, ಇವರಿಂದ ಗಜಲ್ ಲೋಕವು ಮತ್ತಷ್ಟು ಮೊಗೆದಷ್ಟೂ ಶ್ರೀಮಂತವಾಗಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.

“ಸೌಂದರ್ಯ ಮತ್ತು ಪ್ರೀತಿ ಎರಡರಲ್ಲಿ ವ್ಯತ್ಯಾಸವಿದೆ, ಈ ಎರಡರಲ್ಲೂ ನನಗೆ ನಂಬಿಕೆಯಿದೆ
ದೇವರು ಕೋಪಗೊಂಡರೆ ನಾನು ಪೂಜೆ ಮಾಡುವೆ, ಪ್ರಿಯತಮೆ ಕೋಪಗೊಂಡರೆ ಏನು ಮಾಡಲಿ”
-ತಾಬಿಶ್ ಕಾನಪುರಿ

  ಕಾಲವನ್ನು ಶಪಿಸುವುದು ಬಿಟ್ಟು ನಮಗೆ ಇನ್ನಾವ ಆಯ್ಕೆ ಇದೆ ಹೇಳಿ, ಸಮಯದ ಮುಂದೆ ತೆರೆ ಎಳೆದು ನಿರ್ಗಮಿಸಲೆಬೇಕು ಅಲ್ಲವೇ!! ಸರಿ, ಇರಲಿ ಪರವಾಗಿಲ್ಲ; ಬೇಸರ ಬೇಡ. ಮತ್ತೆ ಮುಂದಿನವಾರ, ಇದೇ ಗುರುವಾರದಂದು ತಮ್ಮ ಮುಂದೆ ಬರುವೆ, ಅಲ್ಲಿಯವರೆಗೆ ಬಾಯ್, ಟೇಕ್ ಕೇರ್...!! 

.


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top