ಯುಗಾದಿ ವಿಶೇಷ

ಅನಾರ್ಕಲಿ ಸಲೀಂ ಮಂಡ್ಯ

“ಹಬ್ಬ- ಜುಬ್ಬಾ”

ಗೊತ್ತಾಗಿದೆ
ನನ್ನ ಬಂಡವಾಳ
ಮುದ್ದಿನ ಮಡದಿಗೆ!
ನೇತು ಹಾಕಲು
ಸುಲಭವೆಂದು
ಜುಬ್ಬಾವನ್ನೇ ತರುತ್ತಾಳೆ
ಪ್ರತೀ ಉಗಾದಿಗೆ!!

“ತೋರಣ- ಹೂರಣ”

ಯುಗಾದಿ ಎಂದರೇನೆ
ಮಾವು ಬೇವು
ಬಗೆ ಬಗೆಯ
ಹೂವಿನ ತೋರಣ!
ನೋವು ಮರೆವ
ಸಂತಸದಿ ಬೆರೆವ
ಸವಿ ಸವಿ
ಒಬ್ಬಟ್ಟಿನ ಹೂರಣ!!

“ಹೊಸ ಹಾದಿ”

ಜಡ ಕಳೆದು
ಚಿಗುರು ಕೊನರಿ
ವಸಂತ ಸಿರಿಯಲ್ಲಿ
ಘಮ ಘಮಿಸುತ
ಬರುವ ಹಾದಿ!
ಬದುಕಿನ ಬೇಗುದಿಗೆ
ದಿವ್ಯೌಷಧವಾಗಿ
ಸಮರಸದಿ ಹೊಸತನ
ತೋರುವ ಹೊಸ ಹಾದಿ!!

“ತಿವಿತ”

ಯಾಕೋ ಸ್ವಲ್ಲ ಕಹಿ
ಹೆಚ್ಚಾಯ್ತಲ್ಲ ಎಂದೆ
ಬೇವು ಬೆಲ್ಲ ಸವಿಯುತ್ತಾ!
ನಿಮ್ಮ ಮೇಲೆ ” ಮಧು”
ಮೋಹಗೊಂಡಿದೆ ಎಂದು ವೈದ್ಯರು
ಹೇಳಿದ್ದು ಮರೆತೇ ಬಿಟ್ರಾ
ಎಂದಳು ಮಡದಿ ತಿವಿಯುತ್ತಾ!!

 "ಸಮಯ"

ಹಬ್ಬ ಅಂದ್ರೇನೆ
ಎಣ್ಣೆ ಸ್ನಾನದ ಘಮ್ಮತ್ತು!
ಎಣ್ಣೆ ಹಚ್ಚಿ ಒಬ್ಬಟ್ಟು ತಟ್ಟಿದಂತೆ
ತಲೆ ಮೇಲೆ ಕುಟ್ಟಿ
ಹಳೇ ಬಾಕಿಯೆಲ್ಲ
ತೀರಿಸಿಕೊಳ್ಳೋದಿಕ್ಕೆ
ಮಡದಿಗೆ ಸಿಗೋದು
ಇದೊಂದೇ ನೋಡಿ
ಒಳ್ಳೇ ಹೊತ್ತು!!

“ನವ ಪ್ರೇಮ ರಾಗ”

ದುಬಾರಿಯಾಗಿದೆ ನಲ್ಲ
ಈ ಯುಗಾದಿಗೆ ಬೆಲ್ಲ
ಬೇಕೆ ಬೇಕೆಂದರೆ ಸಿಹಿ
ಕಚ್ಚಿ ಬಿಡು ಒಮ್ಮೆ
ನನ್ನ ಸೇಬಿನ ಗಲ್ಲ!!

  "ಹಬ್ಬ"

ಹಬ್ಬಗಳು ಇರೋದೆ
ಕೂಡಿ ಬಾಳೋದಿಕ್ಕೆ
ಆಡಿ ನಲಿಯೋದಿಕ್ಕೆ
ಮತ್ಸರ ಮರೆಯೋದಿಕ್ಕೆ!

ನಿನ್ನೆ ಇಂದು ನಾಳೆಗಳ
ನಡುವಿನ ಮೂರು ದಿನದ
ಅಲ್ಪ ಬದುಕನ್ನ
ಸಾರ್ಥಕಗೊಳಿಸೋದಿಕ್ಕೆ!!

"ಲಟ್ಟಣಿಗೆ"

ಸಾಮಾನ್ಯವಾಗಿ
ಯುಗಾದಿ ದಿನದಂದು
ನಾನು ಹೋಗುವುದೇ ಇಲ್ಲ
ಅಡುಗೆ ಮನೆಯತ್ತ!
ಅಕಸ್ಮಾತ್ ಗೃಹ ಮಂತ್ರಿಗಳ
ಕರೆ ಮನ್ನಿಸಬೇಕಾದಲ್ಲಿ
ಚಿತ್ತ ನೆಟ್ಟಿರುತ್ತೇನೆ ಅವಳ
ಕೈಯಲ್ಲಿರುವ ಲಟ್ಟಣಿಗೆಯತ್ತ


Leave a Reply

Back To Top