ಯುಗಾದಿ ವಿಶೇಷ

ಸುಲೋಚನಾ ಮಾಲಿಪಾಟೀಲ

ಯುಗಾದಿಯ ಹೊಸ ಪರ್ವಾರಂಭ

ಪ್ರಕೃತಿಯಲ್ಲಿ ಸುಂದರವಾದ ಬದಲಾವಣೆಯ ನಿಯಮಕ್ಕೆ ನಮ್ಮ ಪೂರ್ವಜರು, ಸೃಷ್ಟಿಯಿಂದ ತಮ್ಮ ಅನುಭವಕ್ಕೆ ಬರುವ ಹೊಸ ಪರ್ವ ಅದುವೇ ಯುಗಾದಿ ಹಬ್ಬವೆಂದು ಆಚರಣೆಯಲ್ಲಿ ತಂದರು. ಈ ಹಬ್ಬ ಶುಭ ಸಂದೇಶವನ್ನು ಸಾರುತ್ತ ಶುಭ ಕಾರ್ಯಗಳನ್ನು ಮಾಡಲು ಸೂಚಿಸುವ ಶುಭದಿನವು ಕೂಡವಾಗಿದೆ. ಬದುಕಿನ ಅರ್ಥವನ್ನೇ ತಿಳಿಸಿ ಮನದಟ್ಟು ಮಾಡಿಸುವ ಹಬ್ಬವಾಗಿದೆ. ಜೀವನ ಬರೀ ಆನಂದದ ಕೂಟವಲ್ಲದೇ ಹಾಗೇ ದುಃಖದ ಕೂಟವು ಅಲ್ಲ. ಜೀವನದಲ್ಲಿ ಸುಖ ದುಖಃ, ನೋವು ನಲಿವು, ಏರು ಇಳಿವು, ಬೆಳಕು ಕತ್ತಲೆ, ಮೇಲು ಕೀಳು ಇವೆಲ್ಲವುಗಳನ್ನ ತಿಳಿದು, ಅರಿತು ಬದುಕುವ ಜೀವನವನ್ನ ಯುಗಾದಿ ಹಬ್ಬ ಕಲ್ಪಿಸುತ್ತದೆ. ಉದುರುವಿಕೆ; ಅರಳುವಿಕೆ; ಅಗಲುವಿಕೆ; ಚಿಗುರುವಿಕೆಯ ಪರಿಪೂರ್ಣ ಕಾರ್ಯಚಕ್ರದ ಗತಿಯನ್ನು ಸೂಚಿಸಿ ನವನವಿನತೆಯಲ್ಲಿ ಕಂಗೊಳಿಸುವ ಪರಿಸರವನ್ನ, ಹಸಿರು ಚಿಗುರು ಮೊಗ್ಗುಗಳಿಂದ ತುಂಬಿದ ಕಾನನವನ್ನ ಹೊಸ ಪರ್ವವೆಂದು ಕರೆಯುತ್ತೇವೆ. ಅದನ್ನೆ ಹೊಸವರ್ಷವನ್ನು ನಮ್ಮ ಭಾರತೀಯರು ವೈವಿಧ್ಯತೆಯ ಮೆರಗಿನಲ್ಲಿ ಆಚರಿಸುವ

ಯುಗಾದಿ ಹಬ್ಬವಾಗಿದೆ. ದೇಶದ ರೈತರು ಈ ಹಬ್ಬವನ್ನು ಗೌರವಿಸುವ ಮತ್ತು ಹೊಸ ಬೆಳೆಯನ್ನು ಸಂಭ್ರಮಿಸುವ ಹಬ್ಬವಾಗಿದೆ. ಹೊಸ ಪರ್ವದ ಸೃಷ್ಟಿಯಲ್ಲಿ ಕೋಗಿಲೆಗಳು ತಮ್ಮ  ಧ್ವನಿ ಮಾಧುರ್ಯ ಕೇಳಿಸುತ್ತ ವಸಂತ ಋತುವಿನ ಆಗಮನವನ್ನ ತಮ್ಮ ಮೂಲಕ ಹರಿಬಿಡುತ್ತವೆ. ಅಂದರೆ ಯುಗಾದಿಯ ಮುನ್ಸೂಚನೆ ನೀಡುತ್ತಾ ಹಬ್ಬವನ್ನ ಸ್ವಾಗತಿಸುತ್ತದೆ. ಯುಗಾದಿಯಿಂದ ಸೃಷ್ಟಿಯಲ್ಲಿ ನವ ಚೈತನ್ಯದ ಕ್ರಿಯಾಶಿಲತೆಯ ವಾತಾವರಣ ಎಲ್ಲೆಡೆಯೂ ಬಿಂಬಿತವಾಗಿದೆ. ಯುಗಾದಿ ನಾಡಿನಲ್ಲೆಯಲ್ಲ ವಿಶ್ವಕ್ಕೂ ಅದರದೇಯಾದ ಗಾಢತೆ ಬೀರುವ, ಸುಖ ಶಾಂತಿಯನ್ನ ನೀಡುವ ವಜ್ರ ಸಮಾನ ಕಾಲವಾಗಿದೆ. ಹೃದಯ ವೈಶಾಲ್ಯತೆ ಹೊಂದಿದ ಶಿವಶರಣರಿಗೆ, ಮುಕ್ತಿ ಬಯಸುವ ಆರಾಧಕನಿಗೆ,  ತಮ್ಮ ಕಾಯಕದಲ್ಲಿಯೇ ತೃಪ್ತಿ ಕಾಣಬಯಸುವವರಿಗೆ, ಪರಿಸರದ ಬಯಲೊಳಗೆ ಬಯಲಾಗಿನಿಂತ  ಶಿವ ಅವರ ಭಕ್ತಿಯ ಫಲವನ್ನು ನೀಡಲು ಧರೆಗೆ ಬಂದಿದ್ದಾನೆ ಎಂಬ ಸಂದೇಶ ನೀಡುವ ಮಹಾಪರ್ವವೇ ಯುಗಾದಿ ಹಬ್ಬವಾಗಿದೆ.

‘ಶತಾಯುರ್ವಜ್ರ ದೇಸಾಯಿ ಸರ್ವಸಂಪತ್ಕರಾಯಚ
ಸರ್ವಾರಿಷ್ಟವಿನಾಶಾಯ ನಿಂಬಕಂ ದಳ ಭಕ್ಷಣಂ’.

ಶತಾಯುಷಿಯಾಗಿ ಬದುಕಲು ವಜ್ರದಂತಹ ದೇಹದಲ್ಲಿ ಶಾಂತಿ, ಶಕ್ತಿ ಸಾಮಾರ್ಥ್ಯ, ನೆಮ್ಮದಿಯನ್ನ ಬೇವು ಬೆಲ್ಲ ಸವಿಯುದರಿಂದ ಆ ದೇವರು ವಿಶ್ವದಲ್ಲಿ ಸಿಹಿಕಹಿಯ ಮರ್ಮವನ್ನು ತಿಳಿಸಿದ್ದಾನೆ. ಹಬ್ಬದಲ್ಲಿ ಉಪಯೋಗಿಸುವ ಮಾವು ಬೇವಿನ ಮಹಿಮೆಯನ್ನು ಸಾರಿದ್ದಾನೆ.

ಸುಂದರವಾಗಿ ಅಲಂಕೃತಗೊಂಡ ಬಣ್ಣಬಣ್ಣದ ರಂಗೋಲಿಯಿಂದ ಯುಗಾದಿ ಹಬ್ಬ ಪ್ರಾರಂಭವಾಗುತ್ತದೆ. ಬಾಗಿಲಿಗೆ ಮಾವಿನ ತೊಳಲಿನ ತೋರಣ ಕಟ್ಟುವುದರಿಂದ ಶುದ್ಧವಾದ ಆಮ್ಲಜನಕ ನೀಡುವದಲ್ಲದೆ. ಧನಾತ್ಮಕ ಶಕ್ತಿಯನ್ನು ಮನೆಯಲ್ಲಿ, ವ್ಯಾಪಾರದಲ್ಲಿ ದೊರಕಿಸಿಕೊಡುತ್ತದೆ. ನಕಾರಾತ್ಮಕ ಶಕ್ತಿಯನ್ನು ದೂಡಿ ಸಕಾರಾತ್ಮಕ ವಾತಾವರಣ ನಿರ್ಮಾಣ ಮಾಡುತ್ತದೆ. ಮಾವಿನ ಜೊತೆ ಬೇವಿನ ಎಲೆಗಳನ್ನು ಕಟ್ಟುವುದರಿಂದ ರೋಗನಿರೋಧಕ ಶಕ್ತಿಯು ಗಾಳಿಯ ಜೊತೆಗೆ ಮನೆಯೊಳಗೂ ಪ್ರವೇಶಿಸಿ ಉತ್ತಮ ವಾತಾವರಣ ನಿರ್ಮಾಣ ಮಾಡುತ್ತದೆ. ಯುಗಾದಿ ಹಬ್ಬದಲ್ಲಿ ಎಣ್ಣೆಸ್ನಾನ ಮಾಡುವ ಪ್ರಯೋಜನಗಳು ಅದೆಷ್ಟೋ ಜನರಿಗೆ ತಿಳಿದೆ ಇರುವುದಿಲ್ಲ. ದೇಹದಲ್ಲಿನ ಉಷ್ಣಾಂಶವನ್ನ ನಿಯಂತ್ರಿಸುತ್ತದೆ. ದೆಹದಲ್ಲಿನ ಕುಂಡಲಿನಿ ಚಕ್ರಗಳು ಜಾಗೃತವಾಗಿ ಕ್ರಿಯಾಶಿಲವಾಗುತ್ತವೆ. 

ಇನ್ನು ಮಾವು ಬೇವು ಬೆಲ್ಲದ ಜೊತೆ ತಿನ್ನುವುದರಿಂದ ಸರ್ವ ಅನಿಷ್ಟಗಳು ನಾಶಹೊಂದುತ್ತವೆ. ಬೆಲ್ಲ -ಸಂತೋಷ,  ಉಪ್ಪು- ಆಸಕ್ತಿ, ಬೆವು- ಕಹಿಯನ್ನು, ಹುಸಿ ಮಾವು- ಹೊಸ ಹೊಸ ಸವಾಲುಗಳನ್ನ ಎದುರಿಸುವ ಶಕ್ತಿಯನ್ನು ಮಾವು ಬೇವಿನ ಪಚ್ಚಡಿಯ ಸೇವನೆಯಿಂದ ಈ ಎಲ್ಲ ಶಕ್ತಿಸಾಮರ್ಥ್ಯಗಳನ್ನಗಳಿಸುತ್ತೆವೆ. ಒಟ್ಟಾರೆ ಸಿಹಿಕಹಿಯ ಸ್ವಾದ ಅನುಭವಿಸಿ ಬದುಕಿನಲ್ಲಿ ಎಲ್ಲವನ್ನು ಸಮತೋಲನದಿಂದ ಕಾಪಾಡಿಕೊಳ್ಳುವುದನ್ನು ಸೂಚಿಸುತ್ತದೆ. ಮನೆಯಲ್ಲಿ ಸಿಹಿ ಅಡುಗೆಮಾಡಿ ಕುಟುಂಬದವರೆಲ್ಲ ಸವಿದು ನೆರೆಹೊರೆಯವರ ಜೊತೆಗೂ ಸಿಹಿಯನ್ನು ಹಂಚಿಕೊಳ್ಳುವದಾಗಿದೆ. ಮುಂದಿನ ಹೊಸ ಪರ್ವ ಬರುವವರೆಗೂ ದೇವರ ಕೃಪಾಕಟಾಕ್ಷ ನಮ್ಮಮೇಲೆಯಿರಲೆಂದು ಪ್ರಾರ್ಥಿಸುವ ಹಬ್ಬವಾಗಿದೆ. ಹೊಸ ಉಡುಪುಗಳನ್ನು ಧರಿಸಿ ಕುಟುಂಬದವರೆಲ್ಲ ಹೊಸ ಆಲೋಚನೆಗಳಲ್ಲಿ ಕ್ರಿಯಾಶೀಲತೆಯಲ್ಲಿ ತೊಡಗುವ ಹಬ್ಬವಾಗಿದೆ.
ಹೊಸತವನ್ನು ಆಹ್ವಾನಿಸುವ ವಸಂತ ಋತುವಿನಲ್ಲಿ ಪ್ರಕತಿಯ ರಮ್ಯ ಸೊಬಗನ್ನು ಆಸ್ವಾದಿಸುವುದೇ ಒಂದು ಖುಷಿ. ಹಬ್ಬದ ಹಿನ್ನೆಲೆ ಏನೇ ಇದ್ದರೂ, ವೃಕ್ಷ ರಕ್ಷಣೆಯಲ್ಲಿ ಸೃಷ್ಟಿಯ ಸಂರಕ್ಷಣೆಯನ್ನು ಬೆಳೆಸುತ್ತ ಯುಗಾದಿಯ ಹಬ್ಬ ಆಚರಿಸೋಣ.


Leave a Reply

Back To Top