ಯುಗಾದಿ ವಿಶೇಷದ ಬರಹಗಳು

ಕಾವ್ಯ ಯುಗಾದಿ

ಸುಜಾತಾ ರವೀಶ್

ಚೈತ್ರ ಮಾಸ ಬಂದಿತೆಂದರೆ ಇಡೀ ವಾತಾವರಣವೇ ಬದಲಾಗಿ ಹೊಸತನ ತುಂಬಿ ತುಳುಕುತ್ತದೆ. ತಾಪದ ಧಗೆ ಹೆಚ್ಚಾದರೂ ಬೀಸುವ ತಂಬೆಲರು ಹಾಯೆನಿಸುವಂತೆ ಮಾಡುತ್ತದೆ . ಬೇವಿನ ಹೂವಿನ ಕಂಪು, ಹೊಂಗೆಯ ಹೂಗಳ ಪರಿಮಳ, ಮಾವಿನ
ಕೆಂದಳಿರು, ಘಮ್ಮನೆ ಅರಳುವ ಮಲ್ಲಿಗೆ, ಬಾಯಿಗೆ ರುಚಿ ಎನಿಸುವ ಮಾವಿನ ಹುಳಿ ಅಬ್ಬಾ! ಚೈತ್ರದ ಕಾಣಿಕೆಗಳು ಒಂದೇ ಎರಡೇ ! ಎಲ್ಲಕ್ಕಿಂತ ಕಣ್ಣಿಗೆ ತಂಪೆರೆಯುವ ಹಸಿರು ಸಾಮಾನ್ಯರನ್ನೇ ಕವಿಯಾಗಿಸುವ ಪ್ರಕೃತಿ ಕವಿ ಮನಗಳನ್ನು ಬಿಟ್ಟೀತೆ? ಹೊಸ ಸಂವತ್ಸರದ ಪ್ರಥಮ ದಿನ ಹಿಂದೂಗಳಿಗೆ ತುಂಬ ಮಹತ್ವದ್ದು . ಆಚರಣೆಯ ವಿಧಗಳು ಪ್ರಕಾರಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾಗುತ್ತವೆ . ಅದರ ಬಗ್ಗೆ ಹೇಳುವುದು ಈ ಲೇಖನದ ಉದ್ದೇಶವಲ್ಲ . ಆದರೆ ಕನ್ನಡ ಕವಿ ಮನಗಳು ಚೈತ್ರದ ಆಹ್ಲಾದತೆಯ ಬಗ್ಗೆ ಯುಗಾದಿಯ ಆಪ್ಯಾಯತೆಯ ಬಗ್ಗೆ ಕಟ್ಟಿರುವ ಕಾವ್ಯವನ್ನು ನೆನೆಸಿಕೊಳ್ಳುವ ಪ್ರಯತ್ನ ಅಷ್ಟೆ. ಕೆಲವೊಂದು ಕವನಗಳ ಬಗ್ಗೆ ತಿಳಿದುಕೊಳ್ಳೋಣ ಅಲ್ಲವೇ? ಇದು ಬರೀ ಪ್ರಾತಿನಿಧಿಕ. ನನ್ನ ತಿಳಿವಿಗೆ ಬಾರದಿರುವುದು ಮತ್ತೂ ಅನೇಕ, ಪಟ್ಟಿ ಅನಂತ. ಕೆಲವು ಕವನಗಳು ಯುಗಾದಿಯ, ತನ್ನಿಮಿತ್ತದ ಪ್ರಕೃತಿ, ಮಾನವರ ಸಂಭ್ರಮದ ಬಗ್ಗೆ ಹೇಳಿದರೆ ಮತ್ತೆ ಕೆಲವು ಯುಗಾದಿಯನ್ನು ಬದುಕಿಗೆ ಸಮೀಕರಿಸುತ್ತಾ ಸಮ್ಯಗ್ದರ್ಶನವನ್ನು
ಮಾಡಿಸುತ್ತವೆ. ಯುಗಾದಿಯ ಒಬ್ಬಟ್ಟಿನ ಸವಿಯಂತೆ ಈ ಕಾವ್ಯ ಸಂಭ್ರಮವನ್ನು ಸವಿಯೋಣ ಬನ್ನಿ .

ವರಕವಿ ಬೇಂದ್ರೆಯವರ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಯುಗಾದಿ ಎಂದರೆ ಸಮಾನಾಂತರವಾಗಿ ನೆನಪಿಗೆ ಬರುವ ಈ ಗೀತೆ ಕೇಳದೆ ಹಬ್ಬ ಸಂಪನ್ನ ವೇ ಆಗುವುದಿಲ್ಲವೇನೋ ಎನ್ನುವಷ್ಟು ಜನಜನಿತ. ಮೊದಲ ಸಾಲುಗಳಲ್ಲಿ ನಿಸರ್ಗ ವೈಭವದ ಸೊಗಸು ವರ್ಣಿಸುವ ಕವಿ ವರ್ಷಕೊಮ್ಮೆ ಹೊಸಜನ್ಮ ಪಡೆಯುವ ನವನವೋನ್ಮೇಷಶಾಲಿನಿ ಪ್ರಕೃತಿಯಂತೆ ನಮಗೂ ವರುಷಕೊಂದು ಹೊಸತು ಜನ್ಮ ಕೊಡಬಾರದೇ ಎಂದು ಪ್ರಶ್ನಿಸುವ ಈ ಸಾಲುಗಳು ಮನದಲ್ಲಿ ಅನುರಣಿತ ಗೊಳ್ಳುತ್ತಲೇ ಇರುತ್ತವೆ .

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ
ಎಲೆ ಸನತ್ಕುಮಾರದೇವ
ಸಲೆ ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ ?

ಸಋಷಿ ಕುವೆಂಪು ಅವರ ಯುಗಾದಿ

ನವ ಸಂವತ್ಸರ ಸುರನದಿಯಲಿ ಮಿಂದು ಸುರಲೋಕದ ಸಂಪದವನು ತಂದು ನಮ್ಮನ್ನು ಕರೆಯುತ್ತಿವೆ ಎನ್ನುವ ಕವಿ ನವಜೀವನದ ಕರೆಯನಾಲಿಸೆ ಹೃದಯ ದ್ವಾರವನಗಲಕೆ ತೆರೆ ಎನ್ನುತ್ತಾರೆ .ಬೇವು ಬೆಲ್ಲ ತಿನ್ನುತ್ತಾ ಧನಾತ್ಮಕ ಗುಣಗಳನ್ನು ಹೊರಗೆ ತಳ್ಳಿ ಹಳೆ ಪೊರೆ ಕಳಚಿ ನವ್ಯತೆಯನ್ನು ತೊಡು ಎನ್ನುವ ಸದಾಶಯದ ಕವಿತೆಯಲ್ಲಿ ಪ್ರಕೃತಿಯ ಸೌಂದರ್ಯವನ್ನು “ಜೀವನವೆಂಬುದು ಹೂವಿನ ಬೀಡು ಕವಿಯೆದೆ ಹೆಜ್ಜೇನಿನ ಬೀಡು” ಎಂದು ಬಣ್ಣಿಸುತ್ತಾರೆ ಹಳತನ್ನು ಮರೆತು ಹೊಸದನ್ನು ನಮ್ಮದಾಗಿಸಿಕೊಳ್ಳುತ್ತಾ ಸಾಗು ಎಂದು ಸಾರುವ ಈ ಸಾಲುಗಳು ಎಷ್ಟು ಸುಂದರ ನೋಡಿ

ಗತವರ್ಷದ ಮೃತಪಾಪವ ಸುಡು ತೊರೆ
ಅಪಜಯ ಅವಮಾನಗಳನು ಬಿಡು ಮರೆ
ಕಳಚಲಿ ಬೀಳಲಿ ಬಾಳಿನ ಹಳೆಪೊರೆ
ನವ ವತ್ಸರವನು ಕೂಗಿ ಕರೆ

ಪುತಿನ ಅವರ ಹೊಸ ವರ್ಷ ಬಹುದೆಂದಿಗೆ

ಹೊಸ ವರ್ಷ ಹೇಗೆ ಬರುವುದು ಯಾವುದಾದರೂ ಮಹಾಪುರುಷ ಕರೆದುತಂದಾಗ ತಾನೆ? ಅದು ಯಾವಾಗ? ಮನುಜ ಮತಿಯ ಅಲ್ಪಾಹಂಕಾರಗಳನ್ನು ಆಪೋಶಿಸುವ ಆ ದೈವಿಕ ಮಹಾ ಅಹಂಕಾರದ ನಿರೀಕ್ಷೆ ಕವಿಗಳಿಗೆ. ಮತ್ತೆ ಅವರೇ ನುಡಿಯುತ್ತಾರೆ ಜಿತೇಂದ್ರಿಯನಾದ ಜಾಣ ಚಾಣಕ್ಯನ ತರಹದ ದಿವ್ಯಮತಿ ಮಾತ್ರ ಹೊಸ ವರುಷ ತರಬಲ್ಲನು ಮಿಕ್ಕವರಿಂದ ಬರೀ ಕಲುಷ ಅಷ್ಟೇ ಮತ್ತೇನಿಲ್ಲ ಎಂದು. ಈ ಕರೋನದ ದುಸ್ವಪ್ನವನ್ನು ಆ ದಿವ್ಯಮತಿ ಈ ವರುಷದ ನವಯುಗಾದಿಯೊಂದಿಗೆ ಕಳೆಯಲಿ ಎಂಬುದೇ ನಮ್ಮೆಲ್ಲರ ಅಪೇಕ್ಷೆಯೂ ಸಹ ಅಲ್ಲವೇ?

ಹೊಸವರುಷವು ಬಹುದೆಂದಿಗೆ
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ ಮಹಾಹಂಕಾರದೊಂದಿಗೆ

ಶಿವರುದ್ರಪ್ಪನವರ ಯುಗಾದಿಯ ಹಾಡು ಯುಗಾದಿಯ ಹಾಡು ಕವಿತೆಯಲ್ಲಿ ಕೊಂಬೆ ಕೊಂಬೆಯ ಚಿಗುರನ್ನು ಅಂತರಂಗದ ನಂಬಿಕೆ ಚಿಗುರು ಹೂವಿನ ಬಣ್ಣದಾರತಿ ಯಾವುದೋ ಆನಂದಕೆ ಎಂದು ವರ್ಣಿಸುವ ಕವಿ ಒಳಿತು ಕೆಡಕು ಎಲ್ಲದಕ್ಕೂ ಸ್ವಾಗತ ಎನ್ನುತ್ತಾರೆ ಈ ಸಾಲುಗಳು ಮನಸೆಳೆಯುತ್ತವೆ

ಯುಗ ಯುಗಾದಿಗೆ ಹೊಸತು ಹರ್ಷವು
ಬರಲಿ ಬಾರದೆ ಹೋಗಲಿ
ಬಂದ ಚೈತ್ರ ಚಿಗುರಿನಂದದ
ಮಂದಹಾಸವೇ ಉಳಿಯಲಿ

ಶಿವರುದ್ರಪ್ಪನವರ ಯುಗಾದಿಯ ಪ್ರಶ್ನೆಗಳು

ಯುಗಾದಿಯ ಪ್ರಶ್ನೆಗಳು ಕವನದಲ್ಲಿ ಕವಿಗಳು ಈ ಭವಚಕ್ರದ ಪರಿಭ್ರಮಣದಲ್ಲಿ ಅಂತ್ಯ ಯಾವುದು ಎಂಬ ಪ್ರಶ್ನೆಯನ್ನು ಎತ್ತುತ್ತಾರೆ

ನಾನು ನನ್ನಪ್ಪ ಅವರಪ್ಪನ ಅಪ್ಪ
ಮಗ ಮೊಮ್ಮಗ ಮರಿಮಗ ಗಿರಿಮಗ
ಈ ಗಿರಿಗಿರಿ ತಿರುಗುವ ಪುನರಪಿ
ಜನನಂ ಪುನರಪಿ ಮರಣಂ ಚಕ್ರ
ಗತಿಯೊಳಗೆ ದಿನಾ ಬೆಳಕಿಗೆ ಎದ್ದು
ಕತ್ತಲೆಗೆ ಬಿದ್ದು ಸುತ್ತುತ್ತಲೇ ಇರುವ
ಈ ಭವ ಭವದ ಮಧ್ಯೆ ಪ್ರಭವ
ನಾಮ ಸಂವತ್ಸರದಲ್ಲಿ ನಿಂತಿರುವ ಈ ನನಗೆ ಯಾವುದು ಮೊದಲು? ಯಾವುದು ಕೊನೆ?

ಮಲ್ಲಿಗೆಯ ಕವಿ ಕೆ ಎಸ್ ನರಸಿಂಹಸ್ವಾಮಿಯವರ ಯುಗಾದಿ

ನಾವೇ ಮಾವು ಬೇವು ಹೂವು ಹಸಿರು ಆದರೆ ಬೇವು ಬೆಲ್ಲ ನಮ್ಮವು . ಹೊಸತು ತಳಿರು ತುಂಬಿ ತರುವ ಆಸೆಗಳು ನಮ್ಮವೇ ಎನ್ನುತ್ತಾ ಪ್ರಕೃತಿಯ ಪ್ರೀತಿಯೇ ನಮಗೆ ದೀಪ ಬಿಸಿಲ ತಾಪವೇ ಆಗಲಿ ಮಳೆಯ ಕೋಪವೇ ಆಗಲಿ ಎಲ್ಲವೂ ಸಂತೋಷವೇ ಎನ್ನುತ್ತಾರೆ. ಬಾಳಿಗೆ ಹೊಸ ಅರ್ಥ ಕೊಟ್ಟು ಹೊಸ ಹಾದಿ ತೋರುವ ಯುಗಾದಿಯಿಂದ ಅನಂತದ ಈ ಹಾದಿ ಪಾವನ ಎನ್ನುವ ಈ ಸಾಲು ಎಷ್ಟು ಚೇತೋಹಾರಿ .

ಹೆಜ್ಜೆಗೊಂದು ಹೊಸ ಯುಗಾದಿ
ಚೆಲುವು ನಮ್ಮ ಜೀವನ
ನಮ್ಮ ಹಾದಿಯೇ ಅನಾದಿ
ಪಯಣವವೆಲ್ಲ ಪಾವನ

ಗೋಪಾಲಕೃಷ್ಣ ಅಡಿಗರ ಯುಗಾದಿ ಪ್ರತಿವರ್ಷ ಯುಗಾದಿ ಬರುತ್ತದೆ ಹೋಗುತ್ತದೆ ಹೊಸತನ ತರುತ್ತದೆ ಆದರೆ ಜಗನ್ನಾಟಕದ ರಂಗಮಂದಿರದಲ್ಲಿ ಮಾತ್ರ ಚೆಲುವಿನ ನಲಿವಿರದ ಕೊಳೆಯ ಬೆಳೆಯೆಂಬ ನೈರಾಶ್ಯದಲ್ಲಿ ಆರಂಭಿಸುವ ಕವಿ ಮತ್ತೆ ಆಶಾವಾದದತ್ತ ಹೊರಳಿ ಈ ಹೊಸತನದ ಪಯಣದಲ್ಲಿ ನರಗೆ ಸೊಬಗು ಎಂಬ ಸದಾಶಯದ ನುಡಿಗಳನ್ನಾಡುತ್ತಾರೆ

ಈ ಯುಗಾದಿಯ ಮಾತು ಕೇಳುತಿದೆ ಮರಮರಳಿ
ಮೊದಲಾಗುತಿದೆ ಯುಗವು ನರನ ಜಗವು ವರುಷ ವರುಷವೂ ನಮ್ಮ ಪಯಣ ಮೊದಲಾಗುತ್ತಿದೆ
ಇದಕು ಮಿಗಿಲಿಲ್ಲ ಹಾ ನರಗೆ ಸೊಗವು

ಕನ್ನಡದ ಕಬ್ಬಿಗರ ಚೈತ್ರ ಚಿದ್ವಿಲಾಸದ ದ್ಯೋತಕದ ಪ್ರತೀಕಗಳು ಇವು . ಸಮೃದ್ಧ ಕನ್ನಡ ಸಾಹಿತ್ಯ ಕಣಜದಲ್ಲಿ ಹೆಕ್ಕಿರುವ ಕೆಲವೇ ಮುತ್ತುಗಳು. ಯುಗಾದಿ ಕವನಗಳ ಸಂಖ್ಯೆ ಅಪರಿಮಿತ ಅಗಣಿತ . ಎಲ್ಲವನ್ನು ನಿಮ್ಮ ಮುಂದೆ ತರಲು ತರಲು ಸಾಧ್ಯವಾಗಿಲ್ಲ ಆದರೂ ನನ್ನ ಈ ಸಣ್ಣ ಪ್ರಯತ್ನ “ಕಾವ್ಯಯುಗಾದಿ” ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಕಿಂಚಿತ್ತಾದರೂ ನೆರವಾದಲ್ಲಿ ಈ ಬರಹ ಸಾರ್ಥಕ.


ಸುಜಾತಾ ರವೀಶ್

Leave a Reply

Back To Top