ಯುಗಾದಿ ವಿಶೇಷದ ಬರಹಗಳು
ಅರುಣಾ ರಾವ್
ನಾ ಕಂಡ ಯುಗಾದಿ
[9:35 pm, 19/03/2023] ARUNA RAO: ಇಡೀ ಜಗತ್ತಿಗೆ ಜಗತ್ತೇ ಜನವರಿ ಒಂದನೇ ತಾರೀಖಿನಂದು ಹೊಸ ವರ್ಷವನ್ನು ಸಂಭ್ರಮ, ಸಡಗರಗಳಿಂದ ಆಚರಿಸಿದರೂ ಹಿಂದುಗಳಿಗೆ ಮಾತ್ರ ನಿಜವಾದ ಅರ್ಥದಲ್ಲಿ ಹೊಸ ವರ್ಷ ಪ್ರಾರಂಭವಾಗುವುದು ಚೈತ್ರ ಶುದ್ಧ ಪಾಡ್ಯಮಿಯ ಯುಗಾದಿಯಂದು. ‘ಯುಗದ ಆದಿ’ ಈ ಹೆಸರೇ ಎಷ್ಟೊಂದು ಅರ್ಥಪೂರ್ಣ ಅಲ್ಲವೇ! ಯುಗಾದಿ ಹಬ್ಬ ತನ್ನೊಡನೆ ಬೇಸಿಗೆ ರಜೆಯನ್ನು ಕರೆತಂದು, ಮಕ್ಕಳ ಪಾಲಿಗೆ ಕಾಮಧೇನು ಕಲ್ಪವೃಕ್ಷವೇ ಆಗಿಬಿಡುತ್ತದೆ. ಏಕೆಂದರೆ ಆಗಷ್ಟೇ ವಾರ್ಷಿಕ ಪರೀಕ್ಷೆಗಳ ಆತಂಕವನ್ನು ಮುಗಿಸಿಕೊಂಡು ಉಸ್ಸಪ್ಪ ಎಂದು ನಿರಾಳವಾಗಿ ನಿಟ್ಟುಸಿರು ಬಿಡುವಷ್ಟರಲ್ಲಿ ಯುಗಾದಿ ಹಬ್ಬ ‘ನಾ ಬಂದೆ’ ಎನ್ನುತ್ತಾ ಭಾವಿಸಿ ಬರುತ್ತದೆ.
ನಾನು ತಂದೆಯನ್ನು ಕಳೆದುಕೊಂಡಾಗ ನನಗೆ ಕೇವಲ ಐದು ವರ್ಷ. ಮನೆಯ ಸಂಪೂರ್ಣ ಜವಾಬ್ದಾರಿ ತಾಯಿಯ ಹೆಗಲ ಮೇಲೆ ಬಿತ್ತು. ನಮ್ಮ ಪಾಲಿಗೆ ತಂದೆ-ತಾಯಿ ಎರಡೂ ಆಗಿ ನಿಂತ ಅವಳಿಗೆ, ಕೂಲಿ ನಾಲಿ ಮಾಡಿ, ಮಕ್ಕಳಿಗೆ ಮೂರು ಹೊತ್ತಿನ ಗಂಜಿಯನ್ನು ಒದಗಿಸುವುದೇ ಬಹಳ ಕಷ್ಟವಾಗಿತ್ತು. ಅಂತದ್ದರಲ್ಲಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸುವುದೆಂದರೆ ಕನಸಿನ ಮಾತಾಗಿತ್ತು.
ಆದರೆ ಯುಗಾದಿ ಹಬ್ಬಕ್ಕೆ ಮಾತ್ರ ಅಮ್ಮ ಸಾಲ ಸೋಲ ಮಾಡಿಯಾದರೂ ಹೊಸ ಬಟ್ಟೆಯನ್ನು ಕೊಡಿಸುತ್ತಿದ್ದಳು. ಆದ್ದರಿಂದಲೇ ಬೇರೆ ಎಲ್ಲಾ ಹಬ್ಬಗಳಿಗಿಂತ ಬಾಲ್ಯದಿಂದಲೂ ನನಗೆ ಯುಗಾದಿ ಹಬ್ಬವೆಂದರೆ ಬಹಳ ಫೇವರೇಟ್. ಯುಗಾದಿಗೆ ಒಂದು ವಾರ ಇರುವಾಗಲೇ ಅಮ್ಮ ನಮ್ಮನ್ನೆಲ್ಲ ಬಿಎಂಟಿಸಿ ಬಸ್ಸಿನಲ್ಲಿ ಅಟ್ಟಿಕೊಂಡು ಮೆಜೆಸ್ಟಿಕ್ ಗೆ ಕರೆದುಕೊಂಡು ಹೋಗುತ್ತಿದ್ದಳು.
ಬಟ್ಟೆ ಅಂಗಡಿಗಳ ಮುಂದೆ ತೂಗು ಹಾಕಿರುತ್ತಿದ್ದ ವೆರೈಟಿ ವೆರೈಟಿಯಾದ ಲೇಟೆಸ್ಟ್ ಉಡುಪುಗಳನ್ನು ಕಣ್ಣರಳಿಸಿಕೊಂಡು ಬಾಯಿ ಬಿಟ್ಟುಕೊಂಡು ಅಂಗಡಿಯ ಮುಂದೆ ನೋಡುತ್ತಾ ನಿಲ್ಲುತ್ತಿದ್ದೆ. ಒಂದೈದಾರು ಅಂಗಡಿಗಳನ್ನು ಸುತ್ತಿ, ತನ್ನ ಬಜೆಟ್ಟಿಗೆ ಸರಿಹೊಂದುವ ಬಟ್ಟೆಗಳನ್ನು ತೆಗೆಸಿ, ಅದರಲ್ಲೆಲ್ಲಾ ಚಂದವಾಗಿರುವ ಬಟ್ಟೆಯನ್ನು ನಮಗಾಗಿ ಆರಿಸುತ್ತಿದ್ದಳು. ಉಡುಪಿನ ಬಣ್ಣ, ಅದರ ಅಂದ ಚಂದಕ್ಕಿಂತ ಅದು ಬಾಳಿಕೆ ಬರುತ್ತದೆಯೇ? ಎಂಬುದೇ ಅವಳಿಗೆ ಮುಖ್ಯವಾಗಿರುತ್ತಿತ್ತು. ಬಟ್ಟೆಯನ್ನು ಹಿಂಜಿ ಪರೀಕ್ಷಿಸುತ್ತಿದ್ದಳು. ಜೊತೆಗೆ ಆ ಬಟ್ಟೆ ಕನಿಷ್ಠ ಅಂದರೆ ಐದಾರು ವರ್ಷವಾದರೂ ಹಾಕಿಕೊಳ್ಳುವಷ್ಟು ದೊಡ್ಡದಾಗಿರಬೇಕಾಗಿತ್ತು. “ಬೆಳೆಯುವ ಮಕ್ಕಳಿಗೆ ಚಿಕ್ಕದಾಗಿ ಉಡುಪುಗಳನ್ನು ತೆಗೆದುಕೊಂಡುಬಿಟ್ಟರೆ ಎರಡೇ ದಿನಕ್ಕೆ ವೇಸ್ಟ್ ಆಗುತ್ತದೆ” ಎನ್ನುವುದು ಅವಳ ಸಿದ್ಧಾಂತ. ಇದರ ಪರಿಣಾಮವಾಗಿ ಆ ದೊಗಲೆ ದೊಗಲೆ ಬಟ್ಟೆಗಳಲ್ಲಿ ನಾವು ಬಫೂನುಗಳಂತೆ ಕಾಣುತ್ತಿದ್ದೇವೇನೋ ಗೊತ್ತಿಲ್ಲ. ಆ ಬಟ್ಟೆಗಳ ಪಾಕೆಟ್ ಹಿಡಿದು ಮನೆಗೆ ಹಿಂತಿರುಗುವಾಗ ಸಾವಿರ ಯುದ್ಧಗಳನ್ನು ಗೆದ್ದ ವಿಜಯೋತ್ಸಾಹ ನನ್ನ ಮುಖದ ಮೇಲೆ ರಾರಾಜಿಸುತ್ತಿತ್ತು. ಅಂದಿನಿಂದ ಪ್ರತಿದಿನವೂ “ಎಂದಿಗೆ ಹಬ್ಬ ಬಂದಿತೋ, ಹೊಸ ಉಡುಪನ್ನು ಎಂದಿಗೆ ಧರಿಸೇನೋ…….” ಎಂಬ ಕನವರಿಕೆ ಸದಾ ನನ್ನನ್ನಾವರಿಸಿರುತ್ತಿತ್ತು.
ಹಬ್ಬದಂದು ಅಮ್ಮ ದೇವರ ಮನೆಯಲ್ಲಿ ಆ ಬಟ್ಟೆಗಳಿಗೆ ಅರಿಶಿನದ ಬೊಟ್ಟನಿಟ್ಟು, “ಮಕ್ಕಳಿಗೆ ಆಯಸ್ಸು ಆರೋಗ್ಯ ಕೊಡು ದೇವರೇ….” ಎಂದು ಪ್ರಾರ್ಥಿಸಿ, ನಮಗೆ ನೀಡುತ್ತಿದ್ದಳು. ಹಂಚಿ ಕಡ್ಡಿಯಷ್ಟು ಸಣ್ಣಗಿದ್ದ ನಾನಂತೂ ಆ ಬಟ್ಟೆ ಒಳಗೆ ತೂರಿ ಹೋಗಿರುತ್ತಿದ್ದೆ. ಆದರೂ ಹೊಸ ಬಟ್ಟೆ ಧರಿಸಿದಾಗ ನನ್ನಷ್ಟು ಪರಮ ಸುಖಿ ಇನ್ನಾರು ಇಲ್ಲವೆಂದೇ ನನಗೆ ಭಾಸವಾಗುತ್ತಿತ್ತು.
ಆ ದಿನ ಬೆಳಗ್ಗೆ ಕಣ್ಣು ಬಿಟ್ಟ ಕೂಡಲೆ “ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ ಎಂಬ ಗೀತೆ ರೇಡಿಯೋಗಳಲ್ಲಿ, ಕಪ್ಪು ಬೆಳಕಿನ ದೊಡ್ಡ ಡಬ್ಬದಂತಹ ಟಿವಿಗಳಲ್ಲಿ ಎಲ್ಲರ ಮನೆಯಲ್ಲೂ ಏಕಕಾಲಕ್ಕೆ ಮೊಳಗುತ್ತಿತ್ತು. ಆ ಹಾಡಿಲ್ಲದೆ ಯುಗಾದಿ ಹಬ್ಬವೇ ಇಲ್ಲ ಎನ್ನುವಂತ ಸ್ಥಿತಿ ನಿರ್ಮಾಣವಾಗಿತ್ತು ಎಂದರೆ ತಪ್ಪಾಗಲಾರದು. ಹಬ್ಬದ ದಿನ ಎಲ್ಲರಿಗೂ ‘ಎಣ್ಣೆ ಸ್ನಾನ’ ಕಡ್ಡಾಯವಾಗಿರುತ್ತಿತ್ತು. ಹಿಂದಿನ ದಿನವೇ ದೂರದ ಬೋರ್ವೆಲ್ನಿಂದ ಹೊತ್ತು ತಂದು, ನೀರಿನ ತೊಟ್ಟಿಯನ್ನು ತುಂಬಿಸಿರುತ್ತಿದ್ದೆವು. ನನ್ನ ಉದ್ದನೆಯ ದಟ್ಟವಾದ ಕೂದಲನ್ನು ಉಜ್ಜುವಷ್ಟರಲ್ಲಿ ಅಮ್ಮನ ಸೊಂಟ ಬಿದ್ದು ಹೋಗುತ್ತಿತ್ತು. ಅಪರೂಪಕ್ಕೆ ಎಣ್ಣೆ ಸ್ನಾನ ಮಾಡಿ ಕೊಂಡು ಮಿರಿ ಮಿರಿ ಮಿಂಚುತ್ತಿರುವ ಕೂದಲನ್ನು ಮೃದುವಾಗಿ ನೇವರಿಸುತ್ತಾ ಹೆಮ್ಮೆ ಪಡುತ್ತಿದ್ದೆ. ಮನೆಯ ಮುಂಭಾಗಿಲಿನಲ್ಲಿ, ದೇವರ ಕೋಣೆಗೆ ಮಾವಿನ ತಳಿರು ತೋರಣದ ಜೊತೆಜೊತೆಗೆ ಬೇವಿನ ಸೊಪ್ಪಿನ ದೊಡ್ಡ ದೊಡ್ಡ ಗೊಂಚಲುಗಳು ಸೆಕ್ಕಿರುತ್ತಿದ್ದವು. ದೇವರ ಪೂಜೆ, ಮಂಗಳಾರತಿ ಆದ ನಂತರ ಅಮ್ಮ,
“ಶತಾಯುರ್ ವಜ್ರ ದೇಹಾಯ
ಸರ್ವ ಸಂಪತ್ ಕರಾಯಚ
ಸರ್ವಾರಿಷ್ಟ ವಿನಾಶಾಯ
ನಿಂಬಕಂ ದಳ ಭಕ್ಷಣಂ”
ಎಂಬ ಶ್ಲೋಕವನ್ನು ಹೇಳಿಕೊಡುತ್ತಾ ಪ್ರಸಾದವೆಂದು ಬೇವು ಬೆಲ್ಲವನ್ನು ಹಂಚುತ್ತಿದ್ದಳು. ಪ್ರಸಾದವನ್ನು ಕೈಯೊಡ್ಡಿ ತೆಗೆದುಕೊಂಡು ಭಕ್ತಿಯಿಂದ ಕಣ್ಣಿಗೆ ಹೊತ್ತುಕೊಂಡು ಗಂಭೀರವಾಗಿ ಶ್ಲೋಕವನ್ನು ಹೇಳುತ್ತಲೇ ಅವಳಿಗೆ ಕಾಣದಂತೆ ಬೇವನ್ನು ಪಕ್ಕಕ್ಕೆಸೆದು, ಬೆಲ್ಲವನ್ನು ಮಾತ್ರ ಬಾಯಿಗೆ ಹಾಕಿ ಕೊಂಡದ್ದು ಅದಾವ ಮಾಯದಲ್ಲೋ ತಮ್ಮನ ಕಣ್ಣಿಗೆ ಬಿದ್ದು, ಅಮ್ಮನ ಕಿವಿಗೆ ಮುಟ್ಟುವುದು ತಡವಾಗುತ್ತಿರಲಿಲ್ಲ. ಶಿಸ್ತಿನ ಸಿಪಾಯಿಯಾಗಿದ್ದ ಅಮ್ಮ ನನ್ನನ್ನು ಗುರುಗುಟ್ಟಿಕೊಂಡು ನೋಡಿ,
ಬೇವಿನ ಎಲೆಯಲ್ಲಿ ಎಷ್ಟೆಲ್ಲಾ ಒಳ್ಳೆಯ ಗುಣಗಳಿವೆ ಎಂಬುದರ ಬಗ್ಗೆ ಸಣ್ಣ ಉಪನ್ಯಾಸವನ್ನೇ ಕೊಟ್ಟು, ತನ್ನೆದುರಿಗೆ ಅದನ್ನು ಜಗಿದು ತಿನ್ನುವವರೆಗೂ ಬಿಡುತ್ತಿರಲಿಲ್ಲ. ನಾನು ಬೇವಿನಷ್ಟೇ ಕಹಿ ಮುಖವನ್ನು ಮಾಡಿಕೊಂಡು ಒಲ್ಲದ ಮನಸ್ಸಿನಿಂದಲೇ ಅದನ್ನು ಅರೆಬರೆ ಜಗಿದು ನುಂಗಿ, ತಕ್ಷಣ ಅಡುಗೆ ಮನೆಗೆ ಓಡಿ ಹೋಗಿ, ಒಂದು ಚಮಚ ಸಕ್ಕರೆಯನ್ನು ಬಾಯಿಗೆ ಸುರಿದುಕೊಳ್ಳುತ್ತಿದ್ದೆ. ನನ್ನಕ್ಕ ಕೂಡ ನಿನ್ನಂತೆಯೇ ಬೇವಿನ ಸೊಪ್ಪು ಎಸೆದಿದ್ದರೂ ಯಾವತ್ತಿಗೂ ಸಿಕ್ಕಿಹಾಕಿಕೊಂಡಿಲ್ಲ. ಈಗಲೂ ಸಹ ಅಮ್ಮನಿಂದ ಜಾಸ್ತಿ ಲೆಕ್ಚರ್ ಕೇಳುವುದು ನಾನೇ!!!! ನೆನಪು ಈಗಲೂ ಅಚ್ಚ ಹಸಿರಾಗಿದೆ. ಆದರೂ ಯುಗಾದಿಯಂದು ಹೊಸ ಬಟ್ಟೆ ಧರಿಸುವ ಸಂತೋಷದ ಮುಂದೆ ಬೇವಿನ ಎಲೆಯ ಕಹಿ ಗೌಣವಾಗಿ ಕಾಣುತ್ತಿತ್ತು.
ಯುಗಾದಿ ನಮ್ಮ ಪಾಲಿಗೆ ಬಹಳ ದೊಡ್ಡ ಹಬ್ಬವೇ ಸರಿ. ಆದ್ದರಿಂದ ಪ್ರತಿನಿತ್ಯ ರೇಷನ್ ಡಿಪೋದ ದಪ್ಪಕ್ಕಿಯ ಅನ್ನವೋ, ಗಂಜಿಯೋ, ಇಲ್ಲದಿದ್ದರೆ ರಾಗಿ ಮುದ್ದೆಯೋ ತಿನ್ನುತ್ತಿದ್ದ ನಮಗೆ, ಆ ದಿನ ಹಬ್ಬದ ಊಟ. ಪಲ್ಯಗಳು ಕೋಸಂಬರಿಗಳು, ಪಾಯಸ, ಚಿತ್ರಾನ್ನ, ತವ್ವೆ, ಹಪ್ಪಳ ಸಂಡಿಗೆಗಳು. ಬೇಳೆ ಹೋಳಿಗೆಯ ಜೊತೆಗೆ ನನ್ನ ಫೇವರಿಟ್ ಒಬ್ಬಟ್ಟಿನ ಸಾರು ಕೂಡ ಇರುತ್ತಿತ್ತು. ಬಾಳೆ ಎಲೆಯಲ್ಲಿ ಎಲ್ಲವನ್ನು ಬಡಿಸಿ, ತುಪ್ಪದ ಅಬಗಾರ ಆದಮೇಲೆ ಊಟದ ಪ್ರಾರಂಭ. ಊಟ ಬಡಿಸುವಾಗ, “ಇದು ನಮ್ಮ ಪಾಲಿಗೆ ಬಹಳ ದೊಡ್ಡ ಹಬ್ಬ. ಈ ವರ್ಷ ಯುಗಾದಿಯನ್ನು ಕಂಡವರು ಮುಂದಿನ ವರ್ಷ ಕಾಣುವರೋ ಇಲ್ಲವೋ….. ಹೋದ ವರ್ಷದ ಎಲ್ಲಾ ನೋವು ದುಃಖ, ಕಷ್ಟಗಳು ಕಳೆದು ಈ ವರ್ಷವಾದರೂ ಸುಖ, ಶಾಂತಿ ಸಿಗಲಿ ಅಂತ ಈ ಹಬ್ಬವನ್ನು ಆಚರಿಸೋದು…….. ದುಡ್ಡಿಲ್ಲದಿದ್ದರೆ ಒಂದು ಬನಿಯನ್, ಒಂದು ಟವಲ್ಲಾದರೂ ಪರವಾಗಿಲ್ಲ, ಹೊಸ ಬಟ್ಟೆ ಹಾಕಿಕೊಳ್ಳಲೇ ಬೇಕು, ಎಷ್ಟೇ ಬಡತನವಿದ್ದರೂ ಹಬ್ಬದ ಅಡುಗೆ ಮಾಡಲೇಬೇಕು……” ಎನ್ನುವ ಮಾತನ್ನು ತಪ್ಪದೇ ಹೇಳುತ್ತಿದ್ದಳು.ಯುಗಾದಿ ಹಬ್ಬ ಕಷ್ಟಕೋಟಲೆಗಳನ್ನು ಕಳೆಯುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ಅದರ ಹಿಂದಿರುವ ಆಶಯ ಮಾತ್ರ ನನಗೆ ಬಹಳ ಹಿಡಿಸಿತು. “ನಂಬಿಕೆ ಹಾಗೂ ಕನಸುಗಳೇ ಜೀವನವಲ್ಲವೇ! ಆದ್ದರಿಂದ ಈಗಲೂ ಪ್ರತಿ ವರ್ಷ ನಾನು ಯುಗಾದಿ ಹಬ್ಬಕ್ಕೆ ಮನೆಯಲ್ಲಿ ಎಲ್ಲರಿಗೂ ಹೊಸ ಉಡುಪುಗಳನ್ನು ಕೊಂಡು, ( ಉಳಿದ ಹಬ್ಬಕ್ಕೂ ಕೊಳ್ಳುವುದು ತಪ್ಪಿಸಲ್ಲ ಎಂದಿಟ್ಟುಕೊಳ್ಳಿ) ಹಬ್ಬದ ವಿಶೇಷ ಅಡುಗೆಯನ್ನು ಮಾಡಿ, ಬಾಳೆ ಎಲೆಯ ಊಟವನ್ನು ಸೇವಿಸುವುದನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಮುಂದೆ ನನ್ನ ಮಗಳೂ ಈ ಆಚರಣೆಯನ್ನು ಮುಂದುವರೆಸಿಕೊಂಡು ಹೋಗಲಿ ಎಂಬ ಆಸೆ ಇಲ್ಲದಿಲ್ಲ.
ಮನೆಯಲ್ಲಿ ಗಂಡಸರಿಲ್ಲದಿದ್ದರೂ ಶಾಸ್ತ್ರಿಗಳಾಗಿದ್ದುದ್ದರಿಂದಲೋ ಏನೋ ಮನೆಯ ವಾಡಿಕೆಯನ್ನು ತಪ್ಪಿಸದೆ ಪೈಸೆ ಪೈಸೆಗೂ ಕಷ್ಟ ಪಡುತ್ತಿದ್ದರೂ, ತಪ್ಪದೇ ‘ಒಂಟಿಕೊಪ್ಪಲ್ ಪಂಚಾಂಗ’ವನ್ನು ಕೊಂಡು ತರುತ್ತಿದ್ದಳು. ಹಬ್ಬದ ದಿನ ಸಂಜೆ ದೇವರ ದೀಪ ಹಚ್ಚಿದ ಮೇಲೆ ಮೂರು ಜನ ಮಕ್ಕಳನ್ನು ಕೂಡಿಸಿಕೊಂಡು, ರಾಶಿ ಫಲಗಳನ್ನು ಆದಾಯ-ವ್ಯಯಗಳನ್ನೂ, ಸಂಕ್ರಾಂತಿ ಪುರುಷನ ಆಕಾರವನ್ನೂ ಜೊತೆಗೆ ಆರೋಗ್ಯ-ಅನಾರೋಗ್ಯವನ್ನು ಓದಿ ಹೇಳುತ್ತಿದ್ದಳು. ನಾವೆಲ್ಲ ನಮ್ಮ ನಮ್ಮ ಪಾಲಿಗೆ ಎಷ್ಟೆಷ್ಟು ಲಾಭ ನಷ್ಟಗಳಿವೆ ಎಂಬುದನ್ನು ಆಸಕ್ತಿಯಿಂದ ಕೇಳುತ್ತಿದ್ದೆವು. ಮಕ್ಕಳಾಗಿದ್ದ ನಮಗೆ ಯಾವ ಆದಾಯವು ಇರಲಿಲ್ಲ, ನಷ್ಟವಂತೂ ಮೊದಲೇ ಇಲ್ಲಾ. ಆದರೂ ಬಡತನದಲ್ಲಿ ಬೈಯುತ್ತಿದ್ದ ನಮಗೆ ಪಂಚಾಂಗದ ಲಾಭದ ಸಂಖ್ಯೆ ಸ್ವಲ್ಪ ಮಟ್ಟಿಗೆ ಸಂತೋಷ ಕೊಡುತ್ತಿತ್ತು. ನಮ್ಮ ಮೂವರಲ್ಲಿ ಯಾರಿಗಾದರೂ ಆದಾಯ ಕಡಿಮೆ ಬಂದಿದ್ದರೆ ಉಳಿದಿಬ್ಬರು ಅವರನ್ನು ಗೇಲಿ ಮಾಡುತ್ತಿದ್ದ ರೀತಿಯನ್ನು ನೆನಪಿಸಿಕೊಂಡರೆ ಈಗಲೂ ನಗು ತಡೆಯಲಾಗದು.
ಹಬ್ಬದ ಮಾರನೆಯ ದಿನ ‘ವರ್ಷದ ತೊಡಕು’ ವರ್ಷದ ಸಂಕಷ್ಟವನ್ನೂ ತೊಡಕನ್ನೂ ಕಳೆದುಕೊಳ್ಳಲು ಆ ದಿನ ‘ಮಾಂಸಾಹಾರ ಭಕ್ಷಣೆ’ ಮಾಡಬೇಕೆನ್ನುವುದು ರೂಢಿ. ನಾವು ವಾಸವಿದ್ದ ಏರಿಯಾದಲ್ಲಿ ನಮ್ಮನ್ನು ಬಿಟ್ಟು ಉಳಿದವರೆಲ್ಲರೂ ಮಾಂಸಾಹಾರಿಗಳೇ. ಚಿಕ್ಕಂದಿನಿಂದಲೂ ನನಗೆ ಅದರ ವಾಸನೆಯೇ ಸರಿ ಬೀಳದು. ನನ್ನಮ್ಮನಿಗೂ ಹಾಗೇ ಇತ್ತೇನೋ ಕಾಣೆ. ಆದ್ದರಿಂದಲೇ ಅವಳು ಆ ದಿನ ಬೆಳಗ್ಗೆ ತಿಂಡಿ ತಿಂದ ತಕ್ಷಣ ನಮ್ಮನ್ನೆಲ್ಲಾ ಹೊರಡಿಸಿಕೊಂಡು ಮೆಜೆಸ್ಟಿಕ್ಗೆ ಕರೆದೊಯ್ಯುತ್ತಿದ್ದಳು. ಗಾಂಧಿನಗರದ ಅಣ್ಣಮ್ಮನ ದೇವಸ್ಥಾನಕ್ಕೆ ಹೋಗಿ, ಪೂಜೆ ಮಾಡಿಸಿಕೊಂಡು ನಂತರ ಕೆ.ಜಿ ರಸ್ತೆಯಲ್ಲಿರುವ ಸಂತೋಷ್, ಊರ್ವಶಿ, ಅಪರ್ಣಾ ಯಾವುದಾದರೂ ಚಿತ್ರಮಂದಿರದಲ್ಲಿ ಸಿನಿಮಾ ತೋರಿಸಿಕೊಂಡು, ಜನತಾ ಹೋಟೆಲ್ಲಿನಲ್ಲಿ ಮಸಾಲೆ ದೋಸೆ, ಉದ್ದಿನ ವಡೆಗಳನ್ನು ಕೊಡಿಸುತ್ತಿದ್ದಳು. ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಸೀಟು ಸಿಕ್ಕರೆ ಸಿಕ್ಕೀತು ಇಲ್ಲದಿದ್ದರೆ ನಿಂತುಕೊಂಡೇ ಮನೆ ತಲುಪುವಷ್ಟರಲ್ಲಿ ಸಂಜೆ ಕಳೆದು ಸೂರ್ಯ ಪಡುವ ನಡೆದಿಕ್ಕಿನತ್ತ ಓಡತೊಡಗುತ್ತಿದ್ದ. ರಾತ್ರಿ ಏನಾದರೂ ಸ್ವಲ್ಪ ಹೊಟ್ಟೆಗೆ ಹಾಕಿಕೊಂಡು ಮಲಗಿದ ಮೇಲೆ ಬೆಳಗ್ಗೆ ನೋಡಿದ್ದ ಸಿನಿಮಾ ಮತ್ತೊಮ್ಮೆ ತಲೆಯಲ್ಲಿ ನೈಟ್ ಶೋ ಓಡುತ್ತಿತ್ತು.
ಈಗ ನಮಗೇನು ಬೇಕಾದರೂ, ಬೇಕೆಂದಾಗ ತೆಗೆದುಕೊಳ್ಳುವ ಸಾಮರ್ಥ್ಯವಿದ್ದರೂ ಯುಗಾದಿ ಹಬ್ಬದ ಹಬ್ಬಕ್ಕೆಂದು ಅಮ್ಮ ಕೊಡಿಸುತ್ತಿದ್ದ ಹೊಸ ಬಟ್ಟೆಯ ನೆನಪು ಪ್ರತಿವರ್ಷ ಬಂದೇ ಬರುತ್ತದೆ. ಬಟ್ಟೆಗಳು ಅಷ್ಟು ದುಬಾರಿಯಲ್ಲದಿದ್ದರೂ, ಸರಿಯಾದ ಫಿಟ್ಟಿಂಗ್ ಇಲ್ಲದಿದ್ದರೂ ಅಮ್ಮನ ಪ್ರೀತಿಯ ಫಿಟ್ಟಿಂಗ್ ಅಂತೂ ಅದಕ್ಕೆ ಇದ್ದೆ ಇರುತ್ತಿತ್ತು. ಈಗಲೂ ಯುಗಾದಿ ಹಬ್ಬದಂದು ಹಬ್ಬದ ಅಡಿಗೆ ಮಾಡುವಾಗ ನಾನು ಕೂಡ ನನ್ನ ಮಗಳಿಗೆ, “ಇದು ನಮ್ಮ ಪಾಲಿಗೆ ಬಹಳ ದೊಡ್ಡ ಹಬ್ಬ. ಈ ವರ್ಷ ಯುಗಾದಿಯನ್ನು ಕಂಡವರು ಮುಂದಿನ ವರ್ಷ ಕಾಣುವರೋ ಇಲ್ಲವೋ….. ಹೋದ ವರ್ಷದ ಎಲ್ಲಾ ನೋವು ದುಃಖ, ಕಷ್ಟಗಳು ಕಳೆದು ಸುಖ ಶಾಂತಿ ಸಿಗಲಿ ಅಂತ ಒಂದು ಬನಿಯನ್ ಆದರೂ ಚಿಂತೆ ಇಲ್ಲ ಹೊಸ ಬಟ್ಟೆ ಹಾಕಿಕೊಳ್ಳಲೇ ಬೇಕು, ಎಷ್ಟೇ ಬಡತನವಿದ್ದರೂ ಹಬ್ಬದ ಅಡುಗೆ ಮಾಡಲೇಬೇಕು……” ಎಂಬ ಮಾತುಗಳನ್ನು ಹೇಳುವುದನ್ನು ಮರೆಯುವುದಿಲ್ಲ.
ಅರುಣಾ ರಾವ್