ಮಕ್ಕಳ ಕವಿತೆ
ಅರುಣಾ ರಾವ್
ಗಡಿಯಾರ
ಅಯ್ಯೋ ಪಾಪ ಗಡಿಯಾರ
ಕಾಲಿಗೆ ಮುಳ್ಳು ಚುಚ್ಚಿದೆಯಾ?
ಕುಂಟುತ ಕುಂಟುತ ಸಾಗುತ್ತಿದ್ದರೆ
ಗಮ್ಯವ ಎಂದಿಗೆ ಸೇರುವೆಯಾ?
ಮುಳ್ಳು ತೆಗೆಯೋ ಚಿಮುಟಾ ಮರೆತು
ಬೇರೆಡೆ ಎಲ್ಲೋ ಇಟ್ಟಿಹೆಯಾ?
ನೋವಿನ ನೆಪವನು ಬದಿಯಲ್ಲಿಟ್ಟು
ಅವಿರತ ಕಾಯಕ ಮಾಡಿಹೆಯಾ?
ಹಗಲೂ ಇರುಳೂ ಒಂದೇ ಸಮನೆ
ಓಡುತ ಸುತ್ತುತ ಬಳಲಿಹೆಯೇ?
ಮ್ಯಾರಥಾನಿನ ಸ್ಪರ್ಧೆಗೆ ಹೋದರೆ
ಗೆಲುವು ಖಂಡಿತ ನಿನದಯ್ಯಾ!
ಏನೇ ಅಗಲಿ ಏನೇ ಹೋಗಲಿ
ತಡೆಯಿಲ್ಲದ ದುಡಿಮೆ ನಿನದಯ್ಯಾ
ಕಾಯಕವೇ ಕೈಲಾಸ ಎನ್ನುವ
ಛಲವಂತನು ನೀನೇ ನಿಜವಯ್ಯಾ!