ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ರಾಧೆಯವಳು ಕಾದಿರುವಳು..

ಹಸನಾದ ಹಾಲ್ಜೇನು ಹಸುವಿನ ನೊರೆಹಾಲು
ರಸದಾಳೆ ಹೊಸಬೆಲ್ಲ ಬಿಸಿಯಾದ ಹೊಸಬೆಣ್ಣೆ
ನಿನಗಾಗಿ ಮೀಸಲಿಟ್ಟು ಕಾದಿಹಳು.
.
ಯುಗಯುಗಗಳೇ ಕಳೆದರೂ ಹೆಣ್ಣಿನೊಳಗಿನ ರಾಧೆ ಬದಲಾಗಳು. ಅವಳ ರೀತಿ ಬದಲಾಗಬಹುದು ಆದರೆ ಪ್ರೀತಿ..ಊಹೂಂ..ಆ ಪ್ರೇಮದ ತೀವ್ರತೆ, ತುಡಿತ, ಕಾಯುವಿಕೆ, ವಿರಹ, ಅನುಮಾನ, ಚಿಂತೆ, ಹುಸಿಮುನಿಸು, ಸಮರ್ಪಣಾಭಾವ ಮುಗಿಯುವುದೇ ಇಲ್ಲ. ಆದರೆ ಅದು‌ ಶುರುವಾಗಬೇಕಾದರೂ ಅಥವಾ ಮುಂದುವರೆಯಬೇಕಾದರೂ ಕೃಷ್ಣನಂಥ ಪ್ರೇಮಿಯ ಪ್ರವೇಶ ಅವಳ ಜೀವನದಲ್ಲಾಗಬೇಕು ಅಷ್ಟೇ..

ಬಿರಹಾ ಕಿ ಮಾರಿ ಪ್ರೇಮ್ ದಿವಾನೀ
ತನ್ ಮನ್ ಪ್ಯಾಸಾ ಅಖಿಯೋಮೆ ಪಾನೀ
ನಿಂದಿಯಾನಾ ಆಯೆ..

ಅವನಿಗಾಗಿ ಅವಳ ಕಾಯುವಿಕೆ ಮುಗಿಯುವುದೇ ಇಲ್ಲ. ಹಗಲಲ್ಲಿ ನೆಮ್ಮದಿಯಿಲ್ಲ, ಇರುಳಲ್ಲಿ ನಿದ್ರೆಯಿಲ್ಲ. ವಿರಹದ ತಾಪಕ್ಕೆ, ತನುಮನದ ದಾಹಕ್ಕೆ, ಕಾದು ಕುದ್ದಿದ್ದಕ್ಕೆ ಹನಿದ ಕಣ್ಣನೀರು ಕೂಡಾ ಅವಳನ್ನು ಶಾಂತಗೊಳಿಸುವುದಿಲ್ಲ..
ಕಾದಿರುವಳು ಕೃಷ್ಣಾ ರಾಧೆ
ಬೃಂದಾವನದಾ ನಂದನದಲ್ಲಿ..

ಈ ಅನುರಾಗದ ಕರೆಯಲು ತಿಳಿಸೇ
ವೀಣೆಯ ನಾದಕೆ ನೀ ದನಿ ಬೆರೆಸಿ
ಆಡಿ ಹಾಡಿ ಒಲವಿರಿಸಿ
ವಿರಹಿ ರಾಧೆಯ ಮನ ತಣಿಸೆ..

ಅವನೆಲ್ಲಿರುವನೋ, ತನ್ನ ಮನದ ಮಾತು ಅವನಿಗೆ ತಿಳಿಯುತ್ತದೆಯೋ ಇಲ್ಲವೋ? ಬರುವನಾ, ಜೊತೆಗೆ ಆಡಿ, ಹಾಡಿ ನಲಿಯುವನಾ? ವಿರಹಿಣಿಯ ಸಂತೈಸಿ, ಪ್ರೀತಿ ಸುರಿಸುವನಾ? ಏನು ಮಾಡಲೂ ತೋಚದ ರಾಧೆಯಂಥ ಪ್ರೇಮಿ ಕೋಗಿಲೆಯನ್ನೂ ಬೇಡುತ್ತಾಳೆ. ಅದರ ಕರೆಗಾದರೂ ಮರುಳಾಗಿ ತನ್ನವ ಬರಬಹುದಾ ಎಂಬ ಸಣ್ಣ‌ ಆಸೆಯಿಂದ..
ಕರೆಯೇ ಕೋಗಿಲೆ ಮಾಧವನಾ
ಕಾತರ ತುಂಬಿದ ಈ ನಯನಾ
ಕಾಣಲು ಕಾದಿದೆ ಪ್ರಯತಮನಾ..

ಪನ್ನೀರ ಕಾರಂಜಿ ಅಂಗಳದಲ್ಲಿ
ಪೊನ್ನಗ ಸಂಪಿಗೆ ಮರದಡಿಯಲ್ಲಿ
ಕಣ್ಣಾರೆ ಕಂಡಂತೆ ಆಡುವಳು
ಚಿತ್ತದೆ ಚಿತ್ರವ ಬರೆದಿಹಳು..
ಅದೇನು ಮರುಳು! ಎಲ್ಲೆಲ್ಲೂ ಅವಳಿಗೆ ಅವನದೇ ನೆರಳು!! ಆ ಅಂಗಳದಲ್ಲೂ ಅವನೇ, ಸಂಪಿಗೆ ಮರದಡಿಯಲ್ಲೂ ಅವನೇ ಕಾಣುತ್ತಾನೆ. ಇನ್ನೇನು ಬರುತ್ತಾನಲ್ಲ ಎಂಬ ಕನಸಿನಲ್ಲಿ ಅವನ ಚಿತ್ರವೇ ತುಂಬಿಕೊಳ್ಳುವಳು ಮನಸ್ಸಿನಲ್ಲಿ..

ಕಿಸ್ ಸೌತನ್ ನೆ ರೋಕಿ ಡಗರಿಯಾ
ಕಿಸ್ ಬೈರನ್ ಕೀ ಲಾಗಿ ನಜರಿಯಾ

ಅವನು ತನ್ನ ಬಳಿ ಬರುವವನಿದ್ದ ಬಹುಶಃ. ಆದರೆ ಅದ್ಯಾವ ಸವತಿಯು ಅವನು ಬರುತ್ತಿದ್ದ ಆ ಕಡಿದಾದ ಮಾರ್ಗದಲ್ಲಿ ಅಡ್ಡಹಾಕಿ ನಿಂತಳೋ? ಇನ್ಯಾವ ವೈರಿಣಿಯು ತನ್ನವನಿಗೆ ದೃಷ್ಟಿ ಹಾಕಿ ನಿಲ್ಲಿಸಿಬಿಟ್ಟಳೋ? ಇನ್ಯಾರು ತಮ್ಮ ಹಾದಿಗೆ ಮುಳ್ಳು ಹಾಸುತ್ತಿರುವರೋ ಎಂದೆಲ್ಲಾ ಯೋಚನೆಯಿಂದ ಕಂಗೆಡುವಳು ರಾಧಿಕೆ..

ಮುನಿದಿಹನೇನೆ ನೀ ಹೇಳೆ
ಮನಸಿನ ಚಿಂತೆ ನಾ ತಾಳೆ
ಏಕೋ ಏನೋ ಭಯವಿಂದೇ
ಇನಿಯನ ಕಾಣದೆ ನಾ ನೊಂದೆ.
.
ಇನ್ನೂ ಬರಲಿಲ್ಲ ಅವ ಎಂದಾಗ ಹೆದರುತ್ತಾಳೆ. ಅವನಿಗೇಕೆ ತನ್ನ ಮೇಲೆ ಕೋಪ? ತಾನೇನು ಮಾಡಿದೆ ಅಂಥದ್ದು? ಎಲ್ಲಿ ಏನು ತಪ್ಪಾಯಿತು? ತನ್ನ ಪ್ರೀತಿಯಲ್ಲಿ ಯಾವ ಕೊರತೆ ಕಂಡ? ಎಂದೆಲ್ಲಾ ಚಿಂತಿಸಿ ಕೊರಗುತ್ತಾಳೆ. ಬಾರದಿರೆ? ಎಂದು ಹೆದರುತ್ತಾಳೆ. ಪ್ರೀತಿಯ ಹಾಡೇ ಹೀಗಲ್ಲವಾ? ಪ್ರೀತಿಸುವವರ ಪಾಡೇ ಇಂತಲ್ಲವಾ?

ಶಾಮ್ ತೋ ಭೂಲಾ ಶಾಮ್ ಕಾ ವಾದ
ಸಂಗ್ ದಿಯೇಕೆ ಜಾಗಿ ರಾಧಾ..

ಅವ ತನ್ನ ಮರೆತ ಎಂಬ ನೋವೇನು ಸಾಧಾರಣದ್ದಾ? ಆಣೆ ಪ್ರಮಾಣಗಳನ್ನು ಮಾಡಿದ ಕೇಶವ ತನ್ನನ್ನು ಮರೆತದ್ದಾದರೂ ಹೇಗೆ ಎಂಬುದೇ ಅವಳ ನೋವು. ಆ ಕತ್ತಲ ರಾತ್ರಿಯಲ್ಲಿ ಅವಳ ಜೊತೆಗಿರುವುದು ಕೇವಲ ಕುಟುಕು ಜೀವ ಹಿಡಿದು ಬದುಕುತ್ತಿರುವ ಸಣ್ಣ ದೀಪ. ಆ ದೀಪವೂ ಇನ್ನೇನು ಆರುತ್ತಿದೆ, ಈ ರಾತ್ರಿಯೂ ಮುಗಿಯುತ್ತಿದೆ. ಅವಳ ನಿರೀಕ್ಷೆಯೂ ಕರಗುತ್ತಿದೆ. ಆದರೆ ಶಾಮನು ಇನ್ನೂ ಬಂದಿಲ್ಲ. ಯಾಕೋ..
ರೈನಾ ಬೀತಿ ಜಾಯೆ
ಶಾಮ್ ನ ಆಯೆ..


ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

Leave a Reply

Back To Top