ಪ್ರೊ ವಿಜಯಲಕ್ಷ್ಮಿ ಪುಟ್ಟಿ ಕವಿತೆ-ಮೊಳಕೆ ಪಡಿಲೊಡೆದು

ಕಾವ್ಯ ಸಂಗಾತಿ

ಪ್ರೊ ವಿಜಯಲಕ್ಷ್ಮಿ ಪುಟ್ಟಿ

ಮೊಳಕೆ ಪಡಿಲೊಡೆದು

ಅಗಲುವ ಮೊದಲು ನಾನು ನೀನು,
ತಿಳಿಯಲೇ ಇಲ್ಲ ನನಗೆ,
ನಿನಗಾಗಿ ನಾನು ಪರಿತಪಿಸುತ್ತಿದ್ದೇನೆ ಎಂದು..

ಮೊಳಕೆ ಪಡಿಲೊಡೆದು ನೇರ ನೆಲದ ಗರ್ಭದಿಂದ,
ಚಿಗುರು ಕಿತ್ತು ಬಂದದ್ದ ತಿಳಿಯಲೇ ಇಲ್ಲ ಮರ-ಗಿಡಗಳು, ಹೂವು ಹಣ್ಣು ಒಣಗಿ ನೆಲ ಸೇರುವವರೆಗೂ…

ರಾತ್ರಿ ಒಡಲಲ್ಲಿಯೇ ಚಂದ್ರ ಇಣುಕಿದ್ದು ಎಂದು,
ಬೆಳಗ ತಬ್ಬಿ ಕುಳಿತ ನನಗೆ
ಅರಿವಾಗಲೇ ಇಲ್ಲ ಮೊನ್ನೆಯವರೆಗೂ,
ಚಂದ್ರ ಮುಳುಗುವವರೆಗೂ…

ನಿನ್ನ ಜೀವದ ಉಸಿರಲೇ,
ಎನ್ನಡೆಗೆ ಗಾಳಿ ಬೀಸಿದೆಂದು
ತಿಳಿಯಲೇ ಇಲ್ಲ ನಾನು,
ನಿನ್ನ ಅಗಲುವವರೆಗೂ…

ಗೊಣಗುತ್ತ ಅಲ್ಲೇ ಕುಳಿತಿದ್ದೆ ನಾನು,
ಎದ್ದು ಹೋದಳು ಎಂದರು ಯಾರೋ, ಇಲ್ಲವಾಗುವುದು ಇಷ್ಟೊಂದು ಸುಲಭವೆಂದು ಅರಿತಿರಲಿಲ್ಲ ನಾನು…

ನೋವು ಎದೆಯಿಂದಲೇ ಕಿತ್ತು ಬಂದದ್ದೆಂದು,
ಭಾವಗಳು ಬಸರಾದದ್ದು ಎದೆಯ
ಕಾವಿಂದಲೇ ಎಂಬುದು,
ಗಮನಿಸಲಿಲ್ಲ ನಾನು ಭಾವಗಳ
ಗರ್ಭಪಾತ ಆಗುವವರೆಗೂ…


One thought on “ಪ್ರೊ ವಿಜಯಲಕ್ಷ್ಮಿ ಪುಟ್ಟಿ ಕವಿತೆ-ಮೊಳಕೆ ಪಡಿಲೊಡೆದು

Leave a Reply

Back To Top