ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ

ಶಿಕ್ಷಣ ಮತ್ತು ಸಬಲೀಕರಣ

ಬಡವರ ಮುಖ್ಯವಾಗಿ ಮಹಿಳೆಯರ ಚಾರಿತ್ರಿಕ, ಸಮಾಜೋ-ಆರ್ಥಿಕ ಮತ್ತು ರಾಜಕೀಯ ಅಂಶಗಳಿಗೆ ಉತ್ತರ ನೀಡುವ ಸಾಮರ್ಥ್ಯವನ್ನು ಶಿಕ್ಷಣ ನೀಡುತ್ತದೆ. ಮಹಿಳೆಗೆ ಮಾಹಿತಿ ಪಡೆಯುವ, ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ, ತಮ್ಮ ಭೌತಿಕ ಮತ್ತು ಸಾಮಾಜಿಕ ಸ್ಥಿತಿಗಳ ಬಗ್ಗೆ ಅಮೂಲಾಗ್ರ ಪರಿವರ್ತನೆಯನ್ನು ಪಡೆದುಕೊಳ್ಳಲು ಹಾಗೂ ವ್ಯಕ್ತಿ ಮತ್ತು ಸಮಾಜಕ್ಕೆ ಹೆಚ್ಚು ಜವಾಬ್ದಾರಿಗಳನ್ನು ನೀಡುತ್ತದೆ. ಶಿಕ್ಷಣವು ಮಹಿಳೆಗೆ ತನ್ನ ಆರೋಗ್ಯ, ತನ್ನ ಸ್ವಂತಕ್ಕೆ ಹಣ ಖರ್ಚುಮಾಡುವ ಸಂಗತಿಗಳಲ್ಲಿ ನಿರ್ಣಯ ಕೈಗೊಳ್ಳುವ ಶಕ್ತಿ ನೀಡುತ್ತದೆ. ಮಹಿಳೆಯರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವು ಅವರ ನಿರ್ಣಯ ಸಾಮರ್ಥ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು ದೃಢಪಟ್ಟಿದೆ. ಬ್ಲೂಮ್ ಮತ್ತು ಹೋಲೋಸ್ ರವರ ಅಧ್ಯಯಯನಗಳು ಹೇಳುವ ಪ್ರಕಾರ ಮಹಿಳೆಗೆ ಶಿಕ್ಷಣವು ಚಲನಾ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯ ಅಧಿಕಾರವನ್ನು ನೀಡುತ್ತದೆ. ಆರ್ಥಿಕ ಸ್ವಾಯತ್ತತೆಯನ್ನು ನೀಡುವ ಮೂಲಕ ಪಿತೃ ಪ್ರಧಾನ ಕುಟುಂಬ ರಚನೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದಿದೆ. ಮಹಿಳೆಯರಿಗೆ ಆರ್ಥಿಕ ಸ್ವಾಯತ್ತತೆ ಇಲ್ಲದೆ ಇರುವುದರಿಂದ ಅವಳು ಪುರುಷರಿಗಿಂತ ಕಡಿಮೆ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಮರ್ತ್ಯಸೇನ್ ಹೇಳುವ ಪ್ರಕಾರ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳೇ ಪೋಷಕರಿಗೆ ಹೆಚ್ಚು ಭದ್ರತೆ ನೀಡುತ್ತಾರೆಂದು ಭಾವಿಸಲಾಗುತ್ತದೆ. ಗಂಡು ಮಕ್ಕಳನ್ನು ಬಯಸುವ ಸಂಗತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮಹಿಳೆಯರಿಗಿಂತ ಉನ್ನತ ಶಿಕ್ಷಣ ಪಡೆದ ಮಹಿಳೆಯರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಅಂದರೆ ಮಹಿಳೆಯರು ಉನ್ನತ ಶಿಕ್ಷಣ ಪಡೆದಂತೆ ಅವರಲ್ಲಿನ ಲಿಂಗ ಸಂಬಂಧಿ ಗೊಂದಲಗಳು ಮಾಯವಾಗುತ್ತವೆ. ಎಂದು ವಿವಿಧ ಅಧ್ಯಯನಗಳು ತಿಳಿಸುತ್ತವೆ.
ಅಮರ್ತ್ಯಸೇನ್ ಹೇಳುವಂತೆ, ಭಾರತದಲ್ಲಿ ಉನ್ನತ ಶಿಕ್ಷಣವನ್ನು ಉತ್ತಮಗೊಳಿಸಬೇಕಾದರೆ ಮೊದಲು ಶಾಲಾ ಶಿಕ್ಷಣವನ್ನು ಸಮಗ್ರವಾಗಿ ಸುಧಾರಣೆ ಮಾಡುವ ಅಗತ್ಯವಿದೆ. ಬಹುಪಾಲು ಮುಸ್ಲಿಂ ಮಹಿಳೆಯರು, ದಲಿತ ಮಹಿಳೆಯರು, ಬಡಮಹಿಳೆಯರು ಇಂದಿಗೂ ಅಶಕ್ತರಾಗಿರಲು ಸಾಕ್ಷರತೆಯಿಂದ ದೂರ ಉಳಿದಿರುವುದೇ ಕಾರಣವಾಗಿದೆ. ಅಲ್ಲದೇ ಇವರೆಲ್ಲ ಅಧಿಕಾರದಿಂದ ವಂಚಿತರಾಗಲು ಕಾರಣವೆಂದರೆ ಅವರ ಕನಿಷ್ಟ ಶಿಕ್ಷಣ ಮಟ್ಟವೆಂದು ಹೇಳಲಾಗುತ್ತಿದೆ. ಜೊತೆಗೆ ಶಾಲೆಗಳು ಗುಣಮಟ್ಟದ ಜನಸಂಖ್ಯಾ ಬೆಳವಣಿಗೆಗೆ ಪೂರಕವಾಗಿಲ್ಲ. ಇದರ ಜೊತೆಗೆ ಮೂಲ ಸೌಲಭ್ಯಗಳ ಕೊರತೆ ಹಾಗೂ ಬಡತನ, ನಿರಾಸಕ್ತಿ ಹಾಗೂ ಪೂರಕವಲ್ಲದ ವಾತಾವರಣದಿಂದಾಗಿ ಅವರ ಶಿಕ್ಷಣದ ಮಟ್ಟ ಕುಂಠಿತಗೊಳ್ಳುತ್ತಿದೆ. ಅಮರ್ತ್ಯಸೇನ್ ಹೇಳುವಂತೆ ಲಿಂಗಸಂಬಂಧಿ ಅಸಮಾನತೆಯು ಅಂತಿಮವಾಗಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಲಿಂಗಸಂಬಂಧಿ ಅಸಮಾನತೆಗಳು ಅಧಿಕಾರ, ಬಲ, ವರ್ಗ, ಜಾತಿ ಶ್ರೇಣಿಗಳು ಮತ್ತು ಸಮಾಜೋ-ಆರ್ಥಿಕ ಸಂಪ್ರದಾಯಗಳು ನಡಾವಳಿಗಳ ಮೂಲದಿಂದ ಹುಟ್ಟಿಕೊಳ್ಳತ್ತವೆ. ಸಂರಚನೆಗಳನ್ನು ಮತ್ತು ಸಂಸ್ಥೆಗಳನ್ನು ಅಮೂಲಾಗ್ರವಾಗಿ ರೂಪಿಸುವುದರ ಮೂಲಕ ತರುವ ಬದಲಾವಣೆಯನ್ನು ಸಬಲೀಕರಣವೆಂದು ಪರಿಭಾವಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಭಾರತದ ಸಂವಿಧಾನವು ಮಹಿಳಾ ಅಭಿವೃದ್ಧಿಯ ಅಶೋತ್ತರಗಳನ್ನು ಅಳವಡಿಸಿಕೊಂಡಿದೆ.


ಭಾರತದ ಸಂವಿಧಾನ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಅಶೋತ್ತರಗಳು

ಭಾರತದ ಸಂವಿಧಾನದ ೩೯ನೇ ವಿಧಿಯು ಹೇಳುವ ಪ್ರಕಾರ ರಾಜ್ಯವು ಪುರುಷರಿಗೂ ಮತ್ತು ಮಹಿಳೆಯರಿಗೆ ಜೀವನಾವಶ್ಯಕ ಅಗತ್ಯಗಳನ್ನು ಪೂರೈಸಬೇಕು. ವಿದ್ಯಾಭ್ಯಾಸದ ಹಕ್ಕುಗಳಿಗೆ ಬೇಕಾದ ನಿಯಮಗಳನ್ನು ರೂಪಿಸಬೇಕೆಂದು ೪೧ನೇ ವಿಧಿ ಪ್ರಸ್ತಾಪಿಸಿದೆ. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಕೆಲಸಕ್ಕೆ ಬೇಕಾಗುವ ಅಗತ್ಯ ಮತ್ತು ಮಾನವೀಯ ಪರಿಸ್ಥಿತಿಗಳನ್ನು ಮತ್ತು ಹೆರಿಗೆ ಸೌಲಭ್ಯಗಳನ್ನು ಒದಗಿಸಬೇಕೆಂದು ೪೨ನೇ ವಿಧಿ ತಿಳಿಸುತ್ತದೆ. ಪ್ರಜೆಗಳ ಪೌಷ್ಠಿಕ ಆಹಾರ ಪದಾರ್ಥಗಳ ಮತ್ತು ಜೀವನ ಮಟ್ಟವನ್ನು ಹೆಚ್ಚಿಸುವುದು ಹಾಗೂ ಸಾರ್ವಜನಿಕ ನೈರ್ಮಲ್ಯವನ್ನು ಕಾಪಾಡುವುದು ತನ್ನ ಆದ್ಯ ಕರ್ತವ್ಯವೆಂದು ರಾಜ್ಯವು ಭಾವಿಸಿ, ಆರೋಗ್ಯಕ್ಕೆ ಮಾರಕವಾದ ಮಧ್ಯಪಾನವನ್ನು ನಿಷೇಧಿಸಿ ಜಾರಿಗೊಳಿಸಬೇಕೆಂದು ೪೭ನೇ ವಿಧಿ ಹೇಳುತ್ತದೆ. ೨೩ನೇ ವಿಧಿಯನ್ವಯ, ೧೪ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸುವಂತಿಲ್ಲ ಹಾಗೂ ಅನೈತಿಕ ಅಥವಾ ಇತರೆ ಉದ್ದೇಶಗಳಿಗಾಗಿ ಮಹಿಳೆಯರು, ಮಕ್ಕಳು ಅಥವಾ ಬಲಹೀನರನ್ನು ಶೋಷಣೆ ಮಾಡಬಾರದೆಂದು ಸಂವಿಧಾನ ಸ್ಪಷ್ಟಪಡಿಸಿದೆ. ಸಂವಿಧಾನ ಮಹಿಳೆಯರನ್ನು ಶೋಷಣೆಯಿಂದ ಮುಕ್ತಗೊಳಿಸಿ, ಸಬಲೀಕರಣಗೊಳಿಸುವ ಆಶಯವನ್ನು ಈಡೇರಿಸಲು ಕೇಂದ್ರ ಮತ್ತು ರಾಜ್ಯಸರ್ಕಾರಗಳು ಕಾಯಿದೆಗಳನ್ನು ಜಾರಿಗೊಳಿಸಿವೆ. ೧೯೫೬ ರ ಅನೈತಿಕ ವ್ಯವಹಾರ ತಡೆ ಕಾಯಿದೆ ವೇಶ್ಯಾ ವೃತ್ತಿಯನ್ನು ನಿಷೇಧಿಸಿದೆ. ೧೯೭೮ ಮತ್ತು ೧೯೮೬ ರಲ್ಲಿ ತಿದ್ದುಪಡಿಗೊಂಡ ಕಾಯಿದೆಯು, ಮಕ್ಕಳನ್ನು ವೇಶ್ಯಾವೃತ್ತಿಗೆ ತರುವವರನ್ನು ಜೀವಾವಧಿ ಅಥವಾ ಏಳು ವರ್ಷ ಜೈಲುವಾಸ ವಿಧಿಸುತ್ತದೆ. ೧೯೬೧ ರ ವರದಕ್ಷಿಣೆ ನಿಷೇಧ ಕಾಯಿದೆಯು ೧೯೮೪, ೧೯೮೫ ಮತ್ತು ೧೯೮೬ ರಲ್ಲಿ ತಿದ್ದುಪಡಿಗೊಂಡಿದ್ದು, ಈ ಕಾಯಿದೆಯು ವರದಕ್ಷಿಣೆ ಸಾವಿಗೆ ಕಾರಣರಾದವರನ್ನು ಏಳುವರ್ಷಗಳ ಶಿಕ್ಷಗೆ ಗುರಿಪಡಿಸುತ್ತದೆ. ೧೯೭೬ ರ ಸಮಾನ ವೇತನ ಕಾಯಿದೆಯು ಮಹಿಳೆಯರ ಶೊಷಣೆಯನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಿದೆ. ಒಂದೇ ಕೆಲಸಕ್ಕೆ ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡಬೇಕೆಂಬುದು ಇದರ ಆಶಯ.
೧೯೮೭ ರಲ್ಲಿ ರೂಪ ಕನ್ವರ್ ನಿಧನದಿಂದ ಉಂಟಾದ ಸಾಮಾಜಿಕ ತಲ್ಲಣದ ಹಿನ್ನಲೆಯಲ್ಲಿ ೧೯೮೭ ರ ಸತಿ ನಿಷೇಧ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಈ ಕಾಯಿದೆಯ ಪ್ರಕಾರ ಸತಿ ಪದ್ದತಿಯನ್ನು ಪ್ರೇರಿಪಿಸುವವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮತ್ತು ಜುಲ್ಮಾನೆಯನ್ನು ವಿಧಿಸಲು ಅವಕಾಶವಿದೆ. ೧೯೯೦ ರಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಮಹಿಳಾ ಆಯೋಗ ಕಾಯಿದೆಯನ್ನು ಜಾರಿಗೊಳಿಸಿತು. ಮಹಿಳೆಯರಿಗೆ ಸಂಬಂಧಿಸಿದ ಸಂವಿಧಾನಾತ್ಮಕ ಮತ್ತು ಕಾನೂನು ರಕ್ಷಣೆಗಳನ್ನು ಅಧ್ಯಯನ ಮಾಡುವುದು, ಜಾರಿಯಲ್ಲಿರುವ ಕಾನೂನುಗಳನ್ನು ಪರಿಶೀಲಿಸಿ, ಅವರ ರಕ್ಷಣೆಗೆ ಬೆಂಬಲ ನೀಡುವುದು ಮತ್ತು ಮಹಿಳೆಯರಿಗೆ ಸಂಬAಧಪಟ್ಟAತೆ ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳುವಾಗ ಮಹಿಳಾ ಆಯೋಗದ ಜೊತೆ ಚರ್ಚಿಸುವುದು, ಇಂತಹ ಮಹಿಳಾ ಪರವಾದ ಮತ್ತು ಮಹಿಳಾ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಮಹಿಳಾ ಆಯೋಗ ನಿರ್ವಹಿಸುತ್ತಿದೆ. ಕರ್ನಾಟಕ ಸರ್ಕಾರವು ಮಹಿಳಾ ಆಯೋಗವನ್ನು ರಚಿಸಿದೆ. ಇದರೊಂದಿಗೆ ದೇವದಾಸಿ ಪದ್ದತಿಯನ್ನು ನಿಷೇಧಿಸಿ, ಕಾನೂನನ್ನು ಉಲ್ಲಂಘಿಸಿದವರಿಗೆ ೨,೦೦೦ ರೂ. ರಿಂದ ೫,೦೦೦ ರೂ. ಜುಲ್ಮಾನ ವಿಧಿಸುವ ಕಾನೂನನ್ನು ಕರ್ನಾಟಕ ಸರ್ಕಾರ ೧೯೮೨ ರಲ್ಲಿ ಜಾರಿಗೊಳಿಸಿದೆ.
ಭ್ರೂಣಲಿಂಗ ಪತ್ತೆ ನಿಷೇಧ ಕಾಯಿದೆಯು ೧೯೯೪ ರಲ್ಲಿ ಜಾರಿಗೊಂಡು, ೨೦೧೧ ರಲ್ಲಿ ತಿದ್ದುಪಡಿಗೊಂಡಿತು. ಈ ಕಾಯಿದೆಯು ಭ್ರೂಣ ಲಿಂಗಪತ್ತೆ ಮಾಡುವುದನ್ನು ನಿಷೇದಿಸಿದ್ದು, ಕಾನೂನು ಉಲ್ಲಂಘಿಸಿದವರಿಗೆ ೫೦,೦೦೦ ರೂ. ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆಯನ್ನು ೨೦೦೫ ರಲ್ಲಿ ಜಾರಿಗೊಳಿಸಿದೆ. ಈ ಕಾಯ್ದೆಯನ್ವಯ ದೈಹಿಕ ಅಥವಾ ಮಾನಸಿಕ ಹಿಂಸೆ ಮತ್ತು ವರದಕ್ಷಿಣೆ ಅಥವಾ ಆಸ್ತಿಗಾಗಿ ಕಿರುಕುಳ ನೀಡುವುದು ಕೌಟುಂಬಿಕ ದೌರ್ಜನ್ಯವಾಗುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆಗೆ ಉಚಿತ ನ್ಯಾಯ ಸೇವೆಯನ್ನು ಒದಗಿಸುವುದು ರಾಜ್ಯದ ಜವಾಬ್ದಾರಿ ಎಂದು ಕಡ್ಡಾಯಗೊಳಿಸಲಾಗಿದೆ. ಇವೆಲ್ಲವುಗಳ ಜೊತೆಗೆ ಮೊಹಮದನ್ ಕಾನೂನುಗಳು ಇಂದು ದೇಶದಲ್ಲಿ ಜಾರಿಯಲ್ಲಿದೆ. ಮುಸ್ಲಿಮರ ವಿವಾಹ, ವಿಚ್ಛೇದನ, ದತ್ತು ಮತ್ತು ಉತ್ತರಾಧಿಕಾರತ್ವಕ್ಕೆ ಸಂಬಂಧಿಸಿದ ವಿಷಯಗಳನ್ನು ಈ ಕಾನೂನುಗಳ ಅನ್ವಯ ಇತ್ಯರ್ಥಪಡಿಸಿಕೊಳ್ಳಲಾಗುತ್ತದೆ. ಇಂದಿಗೂ ಮುಸ್ಲಿಂ ಮಹಿಳೆಯರ ವಿಚ್ಛೇದನ ಪ್ರಕ್ರಿಯೆ ಚರ್ಚಾಸ್ಪದ ವಿಷಯವಾಗಿದೆ. ಮೂರು ಬಾರಿ ತಲಾಖ್ ಉಚ್ಛರಿಸುವ ಮೂಲಕ ವಿಚ್ಛೇಧನ ನೀಡುವ ವಿಧಾನವನ್ನು ಖಂಡಿಸಲಾಗುತ್ತಿದೆ. ಇದು ಸರಿ. ಆದರೆ, ತಲಾಖ್ ವಿಧಾನದ ಪರಿಷ್ಕರಣೆ, ಏಕರೂಪ ನಾಗರೀಕ ಸಂಹಿತೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಚರ್ಚೆಯಾಗುವುದು ಮತ್ತು ಇದನ್ನು ಪುರುಷರ ಮಂಡಳಿಗಳು ಮಾತ್ರ ವಿರೋಧಿಸುವುದು ಮಹಿಳಾ ಪರವಾದ ಕಾಳಜಿಗಳಾಗಿ ಗೋಚರಿಸುವುದಿಲ್ಲ. ಶಿಕ್ಷಣವು ಮಹಿಳೆಯನ್ನು ಸಬಲೀಕರಿಸುತ್ತದೆ ಎಂಬುದನ್ನು ಸಂವಿಧಾನದ ಕತೃಗಳು ಹಿಂದೆಯೇ ಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಶಿಕ್ಷಣ ಮತ್ತು ಸಾಂಸ್ಕೃತಿಕ ಹಕ್ಕನ್ನು ಸಂವಿಧಾನಬದ್ಧಗೊಳಿಸಲಾಗಿದೆ. ಇದರ ಜೊತೆಗೆ ಸಂವಿಧಾನದ ಪೂರ್ವದಲ್ಲೇ ಶಿಕ್ಷಣವನ್ನು ಹಕ್ಕಾಗಿ ರೂಪಿಸುವ ಯತ್ನಗಳು ಕಂಡುಬರುತ್ತವೆ.
—————————————

ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

2 thoughts on “

Leave a Reply

Back To Top