ಇಮಾಮ್ ಮದ್ಗಾರ ಕವಿತೆ-ಕಣ್ಣಿನ ಶಕೆ

ಕಾವ್ಯ ಸಂಗಾತಿ

ಕಣ್ಣಿನ ಶಕೆ

ಇಮಾಮ್ ಮದ್ಗಾರ

ಮೋಡ ಬಸಿರಾದಾಗ
ಭೂಮಿ ಹಸಿರಾಗುತ್ತದೆ
ಮೋಡದ ಹೆರಿಗೆ ಯಾದಾಗ
ಬೀಳುವ ಹನಿ ಸದ್ದಾಗುತ್ತದೆ

ಹಸಿದ ನೆಲ ಸುರಿವ
ಸದ್ದಿನ ಹನಿಗಾಗಿಯೇ
ಕಾಯುತ್ತದೆ
ಕಣ್ಣು ಮಿಟುಕಿಸದೇ

ನನ್ನೆದೆಯ ಮಿಡಿತ
ನಿನ್ನೆದೆಯ ತುಡಿತ
ದೊಂದಿಗೆ ಕಷ್ಷ ಸುಖ
ಗಳ ಮಾತಾಡುತ್ತಿತ್ತು

ದಟ್ಟ ಮುಗಿಲಿನ
ಕೆಳಗಿನ ತೆರೆದ ಬಯಲಿನ
ನನ್ನೆದೆಯ ಹೂವಿಗೆ
ಜೇನಾಗುವಾಸೆ ಹೇಗೆ ಬಂತೋ ?

ನೀ ಸೇದಿದ
ಸಿಗರೇಟಿನ ಕೆಟ್ಟ
ವಾಸನೆ ನನ್ನ ಹೆಳಲ
ಮಲ್ಲಿಗೆಯ ಪರಿಮಳಕೆ
ಶರಣಾಯಿತು !

ಕರ್ಮದ ಕಲ್ಲು
ಎಡವಿಬಿದ್ದು
ಗಲ್ಲಕೆ ಗಾಯವಾದರೆ
ಹೊಣೆಯಾರು ?

ಕಣ್ಣುಗಳಿಗೆ
ಶಕೆ ಯಾದಾಗ
ಬೆವರಿಳಿಯುವದು
ಕೆನ್ನೆಯ ಮೇಲೆಯೇ !!!

-=========================

3 thoughts on “ಇಮಾಮ್ ಮದ್ಗಾರ ಕವಿತೆ-ಕಣ್ಣಿನ ಶಕೆ

Leave a Reply

Back To Top