ನಯನ. ಜಿ. ಎಸ್ ರವರ ಗಜಲ್

ಕಾವ್ಯ ಸಂಗಾತಿ

ಗಜಲ್

ನಯನ. ಜಿ. ಎಸ್

ನಡೆವ ಹೆಜ್ಜೆಗಳು ಸ್ವಪ್ನಗಳ ಸಾರುತ್ತಿವೆ ಗೆಳೆಯ
ಮಿಡಿವ ನುಡಿಗಳು ಭಾವಗಳ ಬಿತ್ತುತ್ತಿವೆ ಗೆಳೆಯ

ಉಸಿರು ಉಸಿರಿನೊಳು ಬೆರೆತಿದೆ ಸಹ್ಯತೆಯೊಳು
ತುಸು ಮೌನ ಮಾತುಗಳ ಆಲಿಸುತ್ತಿವೆ ಗೆಳೆಯ

ಕಂಗಳೊಳು ಠಿಕಾಣಿ ಹೂಡಿವೆ ಹತ್ತಾರು ಬಯಕೆ
ರಮ್ಯಕನಸು ಸ್ಪಂದನೆಗಳ ನಿರೀಕ್ಷಿಸುತ್ತಿವೆ ಗೆಳೆಯ

ಭಾರವಾದ ಮನವೇಕೋ ಹಗುರಾದಂತೆ ಭಾಸ
ಬದುಕು ಸಾಂಗತ್ಯ ಕ್ಷಣಗಳ ಬೇಡುತ್ತಿವೆ ಗೆಳೆಯ

ಕೌಮುದಿಯ ಚೆಲ್ವಿಗೆ ಮೈಮರೆತಿವೆ ನಯನಗಳು
ತಾರಾವಳಿ ಪ್ರೇಮಸ್ವರಗಳ ನುಡಿಸುತ್ತಿವೆ ಗೆಳೆಯ.


ನಯನ. ಜಿ. ಎಸ್

Leave a Reply

Back To Top