ಈಶ್ವರ ಜಿ ಸಂಪಗಾವಿ-ಗಜಲ್

ಕಾವ್ಯ ಸಂಗಾತಿ

ಈಶ್ವರ ಜಿ ಸಂಪಗಾವಿ

ಸುಟ್ಟು ಸುಣ್ಣವಾಗಿ ಮಣ್ಣಲ್ಲಿ ಮಣ್ಣಾಗಿರುವ ಜೀವಗಳ ಕಡೆಗಣಿಸಿದರಲ್ಲ
ಕಾಡು ಮೇಡಗಳ ಅಲೆದು ಬದುಕ ಕಟ್ಟಿರುವ ಚಣಗಳ ಮಣ್ಣಾಗಿಸಿದರಲ್ಲ

ಬೆವರ ಹನಿಗಳ ಕುಡಿದು ಬಿಸಿಲು ಹಣ್ಣ ತಿಂದು ಬಡಕಲಾದುದ ಮರೆತರಲ್ಲ
ಕರುಳ ಕುಡಿಗಳು ಕೊರಗದಿರಲೆಂದು ತಮ್ಮಯ ಸುಖದ ಬಲಿಕೊಡಿಸಿದರಲ್ಲ

ಬಾಳಸಂಜೆಯ ಆಸರಿಕೆ ಬೇಸರಿಕೆಗೆ ಆಸರೆ ಬಯಸಿದ್ದು ನಿಜ ಅಪರಾಧವೇ
ಅರುಣೋದಯದ ಬಾಳಚಿಗುರ ಸಂಭ್ರಮಿಸಿದ ಕನಸುಗಳ ಕಮರಿಸಿದರಲ್ಲ

ಕನಸುಗಳ ಬಲಿಕೊಟ್ಟು ತಮ್ಮ ವಂಶದ ಕುಡಿಗಳಿಗೆ ನೀರುಗೊಬ್ಬರ ಹಾಕಿದ್ದರು
ಬೇಡಿದ ಹಣ ಹೊಂದಿಸಿ ಹೊಳೆ ಹರಸಿದವರಿಗೆ ಕೈಚಾಚುವ ಗತಿ ತರಿಸಿದರಲ್ಲ

ದಾರಕೆ ಗಂಟು ಹಾಕದೆ ಈಶನ ನೆನೆಯದೆ ಬಾಳೆಂಬ ಕೌದಿ ಹೊಲೆಯುತಿಹರಲ್ಲ
ಸತಿಪತಿ ಮಕ್ಕಳ ಕಾಳಜಿಗೆ ಮಹಾಪೂರವಾಗಿ ಬೆಲೆಕೊಡದೆ ಕೊಚ್ಚಿಹೋದರಲ್ಲ


Leave a Reply

Back To Top