ದೇವರಾಜ್ ಹುಣಸಿಕಟ್ಟಿ-ನಿರ್ವಿರ್ಯರ ಪರಾಕ್ರಮ..!!

ಕಾವ್ಯ ಸಂಗಾತಿ

ನಿರ್ವಿರ್ಯರ ಪರಾಕ್ರಮ..!!

ದೇವರಾಜ್ ಹುಣಸಿಕಟ್ಟಿ

ಹೆಬ್ಬಟ್ಟಿನಿಂದ ಆರಿಸಿ ಬಂದವರು….
ಕಿಬ್ಬೊಟ್ಟೆಯ ನೋವಿನ ಅರಿವಿರದವರು….
ಹಣೆ ಬೊಟ್ಟಿನ ಬಗ್ಗೆ ಬೊಬ್ಬೆ ಇಡುತ್ತೀರಾ..?

ಹೊಟ್ಟೆಯ ಹಿಡಿ ಹಿಟ್ಟಿನ ಬಗ್ಗೆ
ಬೆವರ ಸುರಿಸದವರು…
ಹೆಂಚಿನ ರೊಟ್ಟಿಗಿಂತ ಮೊದಲು
ಕಿಚ್ಚಿನ ಕಾವಿಗೆ ಬೆಂದು ಕೊಳ್ಳದ
ನಿರ್ವಿರ್ಯರು..
ಬೊಟ್ಟಿನ ಬಗ್ಗೆ ಬೊಬ್ಬೆ ಇಡುತ್ತೀರಾ..?

ಕಾದ ಬಿಗಿ ಮುದ್ರೆ ಒತ್ತಿಸಿಕೊಂಡು
ಅವಳ ಅಡಿಯಾಳೆಂದು ಬೀಗಿದವರು..
ಗುಡಿ ಗುಂಡಾರಗಳ ಬೀಗ ಮುದ್ರೆ
ಒಡೆದು ಲೂಟಿ ಮಾಡಿದವರು…
ದೃಷ್ಟಿ ಬೊಟ್ಟಿನ ಬಗ್ಗೆ ಕೂಡ ತಿಳಿಯದವರು…
ಬೊಟ್ಟಿನ ಬಗ್ಗೆ ಬೊಬ್ಬೆ ಇಡುತ್ತೀರಾ…?

ನಿಶಾನೆಯಿಲ್ಲದ ಊರಿಂದ
ಬಂದವಳ ಮಡಿದಿ ಎಂದವರು..
ನೀರ ಕನ್ನಡಿಯಲ್ಲಿ
ಮುಖಕೆ ಮುಖ ಕೊಟ್ಟು
ನೋಡಿದವಳ ಅರ್ಧಾoಗಿ ಎಂದವರು…
ಮಡದಿ ಎಂದೂ ಮಡಿದ ಮರುದಿನವೇ
ಮರು ಮದುವೆ ಯಾದವರು…
ಬೊಟ್ಟಿನ ಬಗ್ಗೆ ಬೊಬ್ಬೆ ಇಡುತ್ತೀರಾ..?

ಏಳು ಹೆಡೆಯ ಸುತ್ತಿ ಹುತ್ತದಿ
ನೇತಾಡುವ ಘಟ ಸರ್ಪದಂತೆ ಕೊರಳಲ್ಲಿ ಬಿಗಿದವರು..
ಕಾಲಲ್ಲಿ ಬಂಧನದ ಸುತ್ತು ಕೋಟೆಯ ಬೆರಳಿಗಿಡಿಸಿದವರು…
ಬಾಗಿ ಬಾವಿಗೆ ಬಿಟ್ಟ ಬಾಗಿನದಂತೆ ಮೂಗಿನ ತುದಿಗೆ ನತ್ತಿಟ್ಟವರು…
ಕತ್ತಲಲ್ಲಿ ಕಚ್ಚೆ ಹರಕರಾದವರೇ…
ಹಗಲಲ್ಲಿ ಸಭ್ಯ ರಾದವರೇ…
ಬೊಟ್ಟಿನ ಬಗ್ಗೆ ಬೊಬ್ಬೆ ಇಡುತ್ತೀರಾ…?

ಎದೆ ಮುಟ್ಟಿ ಹೇಳಿ ಬಿಡಿ..
ಅವಳ ಇಲ್ಲದಿರುವಿಕೆಗೆ
ಏನಿಟ್ಟೀರಿ ಕುರುಹು…
ಅವನ ಪೀಳಿಗೆಗೆ ಪಿಂಡ ದಾನಕ್ಕೂ
ಹೆತ್ತೂ ಗುರುತಿಲ್ಲದವಳು…
ಅಬ್ಬಾ ಅವಳು ನಿಶಾನೆ ಇಲ್ಲದವಳು…!
ಅಷ್ಟೇ..!
ಕತ್ತಲನೇ ಉಂಡು ಬೆಳಕ ಬಿಕ್ಕಿದವಳವಳು…!

ನೀವೋ….

ಕತ್ತಲಲ್ಲಿ ಕಂಡ ಗ್ರಹಕ್ಕೆರಗಿದವರು..
ಮಿಂಡನೆಂದು ಮೆರೆದವರು…!
ಉಂಡ ಮನೆಗೆ ಎರಡು ಬಗೆದವರು…
ಬೊಟ್ಟಿನ ಬಗೆಗೆ ಮಾತನಾಡುತ್ತೀರಾ…
!!
ಹೆಚ್ಚೇನಿಲ್ಲ……

ನಿಮ್ಮ ತೊಗಲಿಗಂಟಿದ ಕಿಟ್ಟನ್ನಾದರೂ ತೊಳೆದುಕೊಳ್ಳಿ…
ಅವಳಿಲ್ಲದೆ…ಅಷ್ಟೇ..!


Leave a Reply

Back To Top