ಸುಧಾ ಪಾಟೀಲ್ ರವರ ಕವಿತೆ-ಗಜಲ್

ಕಾವ್ಯ ಸಂಗಾತಿ

ಗಜಲ್

ಸುಧಾ ಪಾಟೀಲ್

ಜೀತದಾಳಂತೆ ಉಸಿರು ಬಿಗಿಹಿಡಿದು ದುಡಿದರೂ ಗಮನಿಸಲಿಲ್ಲ
ರಕ್ತಹೆಪ್ಪುಗಟ್ಟಿ ಮನದ ಮಾತು ನುಂಗಿಕೊಂಡರೂ ಗಮನಿಸಲಿಲ್ಲ

ಏನಿಲ್ಲದೆ ಹಮ್ಮಿನಿಂದ ಬೀಗಿ ಪ್ರತಿಸಲ ಅವಮಾನಿಸುತ್ತ ಬಂದೆ
ಒಳಗಣ ಕುದಿಯುವ ಜ್ವಾಲಾಮುಖಿ ಕಾವಿದ್ದರೂ ಗಮನಿಸಲಿಲ್ಲ

ಒಂದೊಂದು ಗುಟುಕಿನಲ್ಲೂ ವಿಷ ಉಣಿಸಲು ನೀ ಪ್ರಯತ್ನಿಸಿದೆ
ಮತ್ತೆ ಮತ್ತೆ ಕೊಡವಿಕೊಂಡು ಜೀವ ಉಳಿಸಿಕೊಂಡರೂ ಗಮನಿಸಲಿಲ್ಲ

ಅದುಮಿಟ್ಟ ದುಃಖ ರಭಸದಿ ಸ್ಫೋಟಗೊಂಡರೆ ನೀ ಭರಿಸಲಾರೆ
ದಿನವೂ ಇಂಚಿಂಚು ಸವೆದ ದೇಹದ ಯೌವ್ವನವನ್ನಾದರೂ ಗಮನಿಸಲಿಲ್ಲ

ಧಗಧಗಿಸುವ ಈ ಆತ್ಮದ ದನಿಯ ಒಂದಿನಿತೂ ನೀ ಆಲಿಸಲಿಲ್ಲ
ಕ್ಷಣಕ್ಷಣವೂ ನಡೆವ ಅಂತರ್ಯುದ್ಧದ ಅವಶೇಷಗಳನ್ನಾದರೂ ಗಮನಿಸಲಿಲ್ಲ


ಸುಧಾ ಪಾಟೀಲ್

One thought on “ಸುಧಾ ಪಾಟೀಲ್ ರವರ ಕವಿತೆ-ಗಜಲ್

Leave a Reply

Back To Top