ಮಧುರಾ ಮೂರ್ತಿ ಕವಿತೆ/ನೀನಿರದ ಮೇಲೆ

ಕಾವ್ಯ ಸಂಗಾತಿ

ನೀನಿರದ ಮೇಲೆ

ಮಧುರಾ ಮೂರ್ತಿ

ಅಂಗಳದ ತುಂಬೆಲ್ಲ ನೀನೆಟ್ಟ ಗಿಡದಲ್ಲಿ
ಮಲ್ಲಿಗೆಯು ಘಮಿಸುತಿದೆ ಕಂಪ ಸೂಸಿ
ನೂರಾರು ನೆನಪುಗಳು ಮನವ ಕದಡುತ್ತ
ನಿನ್ನನೇ ಕರೆಯುತಿದೆ ಬಾನತ್ತ ಕೈ ಬೀಸಿ

ಹೃದಯದ ತುಂಬ ರಂಗುರಂಗಿನ ಚಿತ್ತಾರ
ಬಿಡಿಸಿರುವೆ ನೀನಂದು ಓಕುಳಿಯನಾಡುತ್ತ
ಬಣ್ಣಗಳು ಮಾಸದೆಯೆ ಹಾಗೆ ಉಳಿದರೂ
ಮರೆಯಾದೆ ನೀನು ನೆನಪಾಗಿ ಉಳಿಯುತ್ತ

ನುಚ್ಚು ನೂರಾದ ಕನಸಿನಾ ಗೋಪುರದಿ
ಹೇಗಿರಲಿ ನಾನಿಂದು ಒಬ್ಬಂಟಿಯಾಗಿ
ವಂಚನೆ ನಿನಗೋ ನನಗೋ ಅರಿಯದೇ
ಬಿಕ್ಕುತಿರುವೆ ಹಗಲಿರುಳು ಬೆಪ್ಪನಂತಾಗಿ

ಸಿದ್ಧತೆ ನಡೆದಿಹುದು ವಧುವನ್ನು ಹುಡುಕಲು
ಹೆತ್ತವರ ಆಸೆಗಳಿಗೆ ಮಣಿಯಬೇಕೇ
ಒಲ್ಲದ ಮನದಿಂದ ಸಪ್ತಪದಿ ತುಳಿಯುತ್ತ
ಜೀವಂತ ಶವದಂತೆ ಬದುಕಬೇಕೇ

ಹೃದಯದಲಿ ನೀನಿಟ್ಟ ಹೆಜ್ಜೆ ಗುರುತುಗಳು
ಕೀವಾಗಿ ಸುಡಬಹುದು ನೆಮ್ಮದಿಯನು
ವಾಸ್ತವ ಅರಿಯುತ್ತ ನಿನ್ನ ಮರೆಯುತ್ತ
ಕಟ್ಟಬೇಕಿದೆ ನಾನು ಹೊಸ ಬದುಕನು..!!


ಮಧುರಾ ಮೂರ್ತಿ

2 thoughts on “ಮಧುರಾ ಮೂರ್ತಿ ಕವಿತೆ/ನೀನಿರದ ಮೇಲೆ

  1. ವಚನದ ಮೇಲೆ ಗಮನ ಕೊಡಬೇಕು. ಇಲ್ಲಿ ನೆನಪುಗಳು ಎಂದು ಬಳಸಿದ್ದೀರ. ಆಗ ಕರೆಯುತಿವೆ ಆಗಬೇಕು . ಆಗ ಕಾಫಿಯ ವ್ಯತ್ಯಾಸವಾಗಿ ಬಿಡುತ್ತದೆ. ಇಲ್ಲಿ ಮನವ ಕದಡುವುದು ನೂರಾರು ನೆನಪುಗಳು ಒಂದೇ ನೆನಪಲ್ಲ ಕರ್ತೃ ಕ್ರಿಯಾ ಕರ್ಮ ಇವು ಒಂದಕ್ಕೊಂದು ಅವಲಂಬಿತ . ಅನ್ಯಥಾ ಭಾವಿಸಬೇಡಿ. ….. ಗಜಲ್ ಚೆನ್ನಾಗಿದೆ

    ನಾನು ಗಮನಿಸಿದಂತೆ ಈ ವಿಷಯದಲ್ಲಿ ನಿಮಗೆ ಗೊಂದಲವಿದೆ

  2. ಸಾರಿ, ಇದು ಗಜಲ್ ಅಲ್ಲ. ಆದರೆ ವಚನ ಸರಿ ಹೋಗಬೇಕು

Leave a Reply

Back To Top