ಕಾವ್ಯಸಂಗಾತಿ
ಹೋಳಿ ಹುಣ್ಣಿಮೆ
ವಿನಯಚಂದ್ರ
ಗೆಳತೀ,
ಮೊನ್ನೆ ಹೋಳಿ ಹುಣ್ಣಿಮೆಯಂದು
ಎಲ್ಲಿ ನೋಡಿದರಲ್ಲಿ ಬಣ್ಣ ಬಣ್ಣಗಳ ಚಿತ್ತಾರ
ಗುರುತೇ ಸಿಗದಷ್ಟು ವಿವಿಧ ವರ್ಣಗಳ
ಪೂಸಿಕೊಂಡ ಮುಖಗಳು
ಪಿಚಕಾರಿಯಿಂದ ಉಗಿಸಿಕೊಂಡು
ಬಲೂನಿನಿಂದ ಹೊಡೆಸಿಕೊಂಡು
ಓಕುಳಿಯಲಿ ಮಿಂದೆದ್ದು
ಅ-ಪಾರದರ್ಶಕವಾದ ಮೈ ಮನ
ಬೀದಿಗಳಿಗೂ ಬಣ್ಣದ ಬಾಗಿನ
ಹರೆಯದ ಹುಡುಗರಿಗೋ ಹುಚ್ಚುಕೇಳಿ
ಇಳಿವಯದವರಿಗೂ ಮರಳಿದ ಜವ್ವನ
ಸಂಜೆ ವೇಳೆಗೆಲ್ಲ ಬೃಹದಾಕಾರವಾಗಿ ನಿಂತಿದ್ದ ಕಾಮ
ಉರಿಹೊತ್ತಿಸಿಕೊಂಡು ಧಗಧಗನುರಿದು
ಭಸ್ಮವಾಗಿ ಅನಂಗನಾಗಿ
ಎಲ್ಲರೆದೆಯಲೂ ಉರಿಹೊತ್ತಿಸಿ
ತಾನಳಿದು ಗೆದ್ದುಬಿಟ್ಟ
ರಾತ್ರಿ ಎಲ್ಲೆಡೆಯೂ ತುಸು
ಬೇಗನೇ ಆರಿದವು ದೀಪ!
ಗೆಳತೀ, ಕಾಮವೇ ನಮ್ಮನು ದಹಿಸಬಾರದು
ನಾವೇ ಕಾಮವನು ದಹಿಸಬೇಕು ಅಲ್ಲವೇನೇ
–ವಿನಯಚಂದ್ರ
Sir, very nice poem.
Thank you