ಮಹಿಳಾ ದಿನದ ವಿಶೇಷ

ಉದ್ಯೋಗಸ್ಥ ಮಹಿಳೆ ಸಮಾನಳೇ?

ಸುಜಾತಾ ರವೀಶ್

ಇಪ್ಪತ್ತು ಇಪ್ಪತ್ತೊಂದನೆಯ ಶತಮಾನಗಳು ಹೆಣ್ಣು ಹೊರಗೆ ಹೋಗಿ ದುಡಿಯುವ ದೃಶ್ಯಕ್ಕೆ ಸಾಕ್ಷಿಯಾಗಿವೆ. ಅದಕ್ಕೆ ಮುಂಚೆಯೂ ಕುಟುಂಬದ ವ್ಯಾಪಾರ ವ್ಯವಹಾರಗಳಲ್ಲಿ ವ್ಯವಸಾಯ ವಿಧಿವಿಧಾನಗಳಲ್ಲಿ ಅವಳ ಕೊಡುಗೆ ಇದ್ದಿತಾದರೂ ಅದಕ್ಕೆ ಸಂಭಾವನೆಯ ಮೌಲ್ಯ ನಿಗದಿಯಾಗಿರುತ್ತಿರಲಿಲ್ಲ. ಸ್ವತಂತ್ರವಾಗಿ ಬೇರೆಡೆ ದುಡಿದು ಹಣ ಸಂಪಾದಿಸುವ ಈ ಪ್ರಕ್ರಿಯೆ ಹೆಣ್ಣಿನ ಸ್ವಾತಂತ್ರ್ಯಕ್ಕೆ ಒಂದು ಹೊಸ ಆಯಾಮ ತಂದಿತಾದರೂ ಅದರ ಉಪಭೋಗಕ್ಕೆ ಅವಳು ಪೂರ್ಣ ಅರ್ಹಳಾಗಿದ್ದಾಳೆಯೇ ಎಂಬುದು ಇಂದಿಗೂ ಸಂದೇಹಾರ್ಹ.
ಇಪ್ಪತ್ತನೆಯ ಶತಮಾನದ ಕೊನೆಕೊನೆಗೆ ಹೆಣ್ಣು ಹೊರಗೆ ದುಡಿಯುವುದು ಮದುವೆಯ ಮಾರುಕಟ್ಟೆಯಲ್ಲಿ ಅವಳ ಅರ್ಹತೆಗೆ ಮತ್ತೊಂದು ಧನಾತ್ಮಕ ಅಂಶವಾಗಿ ಬಿಟ್ಟಿತ್ತು . ಒಂದು ರೀತಿಯಲ್ಲಿ ಕಂತುಗಳಲ್ಲಿ ವರದಕ್ಷಿಣೆ ಎಂಬಂತೆ . ಆದರೆ ಒಳಗೂ ಹೊರಗೂ ದುಡಿಯುವ ಹೆಣ್ಣಿನ ತೊಳಲಾಟ ಕಷ್ಟಸುಖಗಳನ್ನು ಸಮಾಜ ಅರ್ಥ ಮಾಡಿಕೊಂಡು ಸಹಾನುಭೂತಿಯಿಂದ ವರ್ತಿಸಿದೆಯೇ ಎಂಬುದನ್ನು ಅಷ್ಟೇ ಖಡಕ್ಕಾಗಿ ನಿರ್ಧರಿಸಲಾಗದು .
ಸಾಮಾಜಿಕವಾಗಿ ನೋಡಿದರೆ ಹೊರಹೋಗಿ ಅವಳು ದುಡಿಯುತ್ತಾಳೆ ಎಂಬ ಅನುಭೂತಿ ಖಂಡಿತ ತಾಯಿಯ ಮನೆಯಲ್ಲಿ ಇರಬಹುದಾದರೂ ಅತ್ತೆಯ ಮನೆಯಲ್ಲಿ ಇರುವುದಿಲ್ಲ . ತಂದ ಹಣವನ್ನೆಲ್ಲಾ ಇಲ್ಲಿಗೇ ಸುರಿದರೂ ಶೋಕಿಗಾಗಿ ಹೊರಗೆ ಹೋಗುವುದು ಎನ್ನುವಂತಹ ಮನೋಭಾವ . “ಎಷ್ಟು ಹೊತ್ತು ಮನೆಯ ಹೊರಗೇ ಇದ್ದು ಕೆಲಸ ತಪ್ಪಿಸಿಕೊಳ್ಳುತ್ತಾಳೆ” ಎಂದು ಹೇಳಿ ಮನೆಯಲ್ಲಿರುವ ಸಮಯವೆಲ್ಲ ಗಾಣದೆತ್ತಿನಂತೆ ದುಡಿತಕ್ಕೆ ಹಚ್ಚುವ ಮನೆಗಳೂ ಇರುತ್ತವೆ . ಹೊರಗೂ ದುಡಿಯುತ್ತಾಳೆ ಮನೆಯಲ್ಲಿ ಅವಳಿಗೆ ಸ್ವಲ್ಪಮಟ್ಟಿನ ವಿಶ್ರಾಂತಿ ಬೇಕು ಎಂಬುದು ಖಂಡಿತ ಯಾರೊಬ್ಬರಿಗೂ ಅರಿವಾಗುವುದಿಲ್ಲ . ಅಲ್ಲದೆ ಆ ನಿಟ್ಟಿನಲ್ಲಿ ಸಹಕಾರ ನೀಡುವ ಮನೋಭಾವವು ಇರುವುದಿಲ್ಲ . ಇವರಿಗೆ ಬೇಕಾದಾಗ ಚಿಕ್ಕಪುಟ್ಟ ಕಾರಣಗಳಿಗೆ ರಜಾ ಹಾಕದಿದ್ದಾಗ ಭರ್ತ್ಸನೆ ಬೇರೆ. ಇರುವ ಊರಿನಲ್ಲಿ ಕೆಲಸವಾದರೆ ಎಷ್ಟೋ ಪರವಾಗಿಲ್ಲ ಪರಸ್ಥಳಕ್ಕೆ ಓಡಿಯಾಡಿಕೊಂಡು ಬರುವ ಹೆಣ್ಣುಮಕ್ಕಳಿಗಂತೂ ಜೀವನವೆಂದರೆ ಸತತ ಸುತ್ತುವ ಗಾಣ ತಾನು ಅದನೆಳೆಯಲು ಎತ್ತು ಎಂಬ ಭಾವನೆ.
ಎರಡೂ ಕಡೆ ದುಡಿದು ಕಷ್ಟಪಟ್ಟು ಸಂಪಾದಿಸಿದ ಹಣದ ಮೇಲೆ ಅವಳಿಗೆ ಪೂರ್ತಿ ಹಕ್ಕಾದರೂ ಇರುತ್ತದೆಯೇ ಎಂದರೆ ಖಂಡಿತಾ ಇಲ್ಲ . ಕೆಲವು ಮನೆಗಳಲ್ಲಂತೂ ಚಿಕ್ಕ ಮಕ್ಕಳಿಗೆ ಪಾಕೆಟ್ ಮನಿ ಕೊಡುವ ಹಾಗೆ ಅವರು ಸಂಪಾದಿಸಿದ ಹಣವನ್ನೆಲ್ಲಾ ಪತಿಯ ಕೈಯಲ್ಲಿಟ್ಟು ತಮಗೆ ಬೇಕಾದದ್ದನ್ನು ಬೇಡಿ ತೆಗೆದುಕೊಳ್ಳುವ ಪರಿಸ್ಥಿತಿ . ಇನ್ನು ತನಗೆ ತನ್ನ ತವರಿಗೆ ಅಥವಾ ಬೇಕಾದುದಕ್ಕೆ ಖರ್ಚು ಮಾಡುವ ಸ್ವಾತಂತ್ರ್ಯವಂತೂ ಕನಸೇ..ಓದಿಸಿ ಬೆಳಸಿ ಕೆಲಸ ಸಿಗುವಲ್ಲಿ ಸಹಕಾರಿಯಾದ ತವರುಮನೆ ಕಷ್ಟದಲ್ಲಿ ಅನ್ನಕ್ಕೆ ಪರದಾಡುತ್ತಿದ್ದರು ಸಹ 1 ಕಾಸು ನೀಡಲೂ ಬಿಡದ ಕಟುಕ ಸೇರಿದ ಮನೆಗಳು ಇರುತ್ತವೆ . ಅಂದ ಮೇಲೆ ತವರಿನ ಸಂಕಟ ಕಷ್ಟಗಳಿಗೆ ಅನುವು ಆಪತ್ತುಗಳಿಗೆ ಸಹಾಯ ಮಾಡುವುದಂತೂ ಗಗನ ಕುಸುಮವೇ . ಎಷ್ಟೋ ವೇಳೆ ಅವಳು ದುಡಿದ ಹಣ ಗಂಡನ ಅಥವಾ ಅತ್ತೆ ಮನೆಯವರ ಶೋಕಿಗೆ ಖರ್ಚಾದರೂ ಮೂಕಪಶುವಿನಂತೆ ಇರುವ ಎಷ್ಟೋ ಹೆಣ್ಣು ಮಕ್ಕಳನ್ನು ಕಂಡಿದ್ದೇನೆ . ಸಮಾಜದ ಬೇಲಿ ಮುರಿದು ಹೊರಬರುವ ಧೈರ್ಯವಿರದ ಹೆಣ್ಣು ಮಕ್ಕಳು ಹೀಗೆ ದಿನ ನಿತ್ಯವೂ ನಲುಗುವ ಪರಿಪಾಠ . ಬರೀ ಮನೆಯೊಳಗಿನ ಶೋಷಣೆಯಲ್ಲದೆ ದುಡಿದ ಹಣದ ಮೇಲಿನ ಹಿಡಿತವು ಸೇರಿ 2 ಕಡೆ ದುಡಿಯುವ ಆಳು ಎಂಬಂತೆ ಅವಳನ್ನು ನೋಡಲಾಗುತ್ತದೆ. ಈ ಅಂದಕ್ಕೆ ಹೊರಗೆ ದುಡಿಯುವ ಕಷ್ಟವೂ ಬೇಕಿತ್ತೇ ಎಂದು ಅನಿಸದೆ ಇರುವುದಿಲ್ಲ .

ಉದ್ಯೋಗ ರಂಗದಲ್ಲಿ ಸಹ ಎಷ್ಟೋ ಸಮಸ್ಯೆಗಳನ್ನು ಎದುರಿಸಬೇಕಾದರೂ ಅದಕ್ಕೆ ಕೆಲವೊಮ್ಮೆ ಕಾನೂನಿನ ಹಾಗೂ ಕಾರ್ಮಿಕ ಸಂಘಗಳ ಸಹಾಯ ಸಿಗಬಹುದು. ಅವುಗಳನ್ನು ಇಲ್ಲಿ ನಾನು ಪ್ರಸ್ತಾಪಿಸಿಲ್ಲ. ಮನೆಯಲ್ಲಿ ನಡೆಯುವ ಕೆಲವೊಂದು ವಿದ್ಯಮಾನಗಳ ಬಗ್ಗೆ ಮಾತ್ರ ಚರ್ಚಿಸಿದ್ದೇನೆ ಹಾಗೆಂದು ಇದು ಸಮಗ್ರವೇನಲ್ಲ .ಒಬ್ಬೊಬ್ಬರ ಮನೆಯ ಕಥೆ ಒಂದೊಂದು ತರಹ .ಆದರೆ ಎಲ್ಲರ ಮನೆಯ ಕಾವಲಿಯೂ ತೂತೇ.

ಹೂವಂತ ಮನಸನ್ನು ಹಿಂಡುವಿರೇಕೆ ?

ನನ್ನ ಸಹೋದ್ಯೋಗಿ ಅಮಿತಾ…..ಕೆಲಸಕ್ಕೆ
ಒಟ್ಟಿಗೆ ಒಂದೇ ಬ್ಯಾಚ್ನಲ್ಲಿ ಒಂದೇ ಶಾಖೆಗೆ ಸೇರಿದವರು. ಆಗ ತಾನೇ ಕಾಲೇಜಿನಿಂದ ಹೊರ ಬಂದವರು ಹುಮ್ಮಸ್ಸು ಎಲ್ಲದರಲ್ಲೂ ಆಸಕ್ತಿ . ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲದರಲ್ಲೂ ಅವಳೇ ಮುಂದಾಳು . ಚೈತನ್ಯ ಲವಲವಿಕೆಗೆ ಇನ್ನೊಂದು ಹೆಸರು. ಯಾವುದೇ ಕಾರ್ಯಕ್ರಮವನ್ನಾಗಲಿ ಲೀಲಾಜಾಲವಾಗಿ ನಿಭಾಯಿಸಿ ಅವಳಿದ್ದರೆ ಹತ್ತಾನೆಯ ಬಲ ಎನ್ನುವಂತೆ ಆಗಿತ್ತು . ನಂತರ ನಾನು ಮದುವೆಯಾಗಿ ಬೇರೆ ಊರಿಗೆ ಹೋಗಿ ಮಧ್ಯೆ ಸಂಪರ್ಕವೇ ಇರದೆ ೧೨ ವರ್ಷಗಳ ನಂತರ ಮತ್ತೆ ಒಂದೇ ಶಾಖೆಗೆ ವರ್ಗಾವಣೆ ಹೊಂದಿದ್ದೆವು. ಆದರೆ ಅಮಿತಾ ಮೊದಲಿನ ಅಮಿತಾ ಆಗಿ ಉಳಿದಿರಲಿಲ್ಲ. ೨
ಗಂಡು ಮಕ್ಕಳ ತಾಯಿ. ಎಲ್ಲದರಲ್ಲೂ ನಿರುತ್ಸಾಹ. ಕಛೇರಿ ಮುಗಿಯುತ್ತಿದ್ದಂತೆಯೇ ಮನೆಯ ಕಡೆ ಓಟ. ಸಾಂಸ್ಕ್ರತಿಕ ಕಾರ್ಯಕ್ರಮವಿರಲಿ, ಕಚೇರಿಯ ಕೆಲಸಕ್ಕೂ ಉಳಿಯುತ್ತಿರಲಿಲ್ಲ. ಯಾವೊಂದು ಸಮಾರಂಭಕ್ಕೂ ಬಾರದ ಬದಲಾದ ಅವಳ
ವ್ಯಕ್ತಿತ್ವದ ಕಾರಣ ಕೇಳಿದಾಗ……ಎಲ್ಲದಕ್ಕೂ ಅಂಕೆ, ಕಾರಣ ಕೇಳುವ ಪತಿ ಅತ್ತೆ ಮಾವ. ತಾಯಿಯ ಮನೆಯದಕ್ಕಿಂತ ತುಂಬಾ ವ್ಯತಿರಿಕ್ತ ವಾತಾವರಣ ಸಂಕುಚಿತ ಮನೋಭಾವ. ಕೇಳಿದರೆ, ಎದುರು ವಾದಿಸಿದರೆ ದೈಹಿಕ ಹಿಂಸೆ. ಚುಚ್ಚುಮಾತಾಡ ದೇ ಇರದ ದಿನವೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇವಳು ನಗುನಗುತ್ತಿದ್ದರೇ ಅವರಿಗೆ ಆಗದು.
ಮಾತೆತ್ತಿದರೆ ಹಂಗಣೆ, ಕೇಳೀ ಕೇಳಿ ಅದೇ ನಿಜವೆನಿಸತೊಡಗಿತ್ತು. ಕೈ ತುಂಬಾ ಸಂಬಳ ಇದ್ದುದರಿಂದ ಕೆಲಸಕ್ಕೆ ಕಳಿಸುತ್ತಿದ್ದುದು. ಅಲ್ಲಿಯೂ ಯಾರೊಡನೆಯಾದರೂ ಸಲಿಗೆಯಿಂದ ನಗುನಗುತ್ತಾ ಮಾತಾಡಿದ್ದು ತಿಳಿದರೆ ಹಗರಣ. ರೋಸಿದ ಅವಳಿಗೆ ೨ನೇ ಬಾಣಂತನದಲ್ಲಿ ಖಿನ್ನತೆ …..ಅದಕ್ಕೂ ಹುಚ್ಚಿ ಪಟ್ಟ…ಒಟ್ಟಿನಲ್ಲಿ ಅಂದೂ ಆಡಿ ಅವಹೇಳನ ಮಾಡಿ ಆತ್ಮಸ್ಥೈರ್ಯವೇ ಮಾಯವಾಗಿತ್ತು ಬರೀ ಅವರಾಡಿಸುವ ಕೀಲುಗೊಂಬೆಯಂತಾಗಿದ್ದಳು. ತವರಲ್ಲೂ ಅಪ್ಪ ಇರದೆ ಅಮ್ಮನೂ ಅಣ್ಣನ ಕೈ ಕೆಳಗೆ.
“ಧೈರ್ಯವಾಗಿ ಬಿಟ್ಟು ಬಾ ಏಕೆ ಸುಮ್ಮನೆ ಹೀಗೆಲ್ಲಾ ಸಹಿಸುತ್ತೀಯ” ಎಂದರೆ ಅಮ್ಮನ ಕಣ್ಣೀರು “ಸ್ವಲ್ಪ ದಿನ ಸಹನೆಯಿಂದ ಇರು ಎಲ್ಲಾ ಸರಿಹೋಗುತ್ತದೆ” ಎನ್ನುವ ಅವಳ
ಬೇಡಿಕೆ. ಅಲ್ಲದೆ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಅತ್ತೆ ಮಾವ ಗಂಡ. “ಮಕ್ಕಳಿಗೆ ತಂದೆ ಇರದಂತೆ ಏಕೆ ಮಾಡಲಿ ನನ್ನ ಹಣೆಬರಹ. ಹೀಗೇ ಇದ್ದು ದಿನ ದೂಡ್ತೀನಿ” ಯಾಕೋ ಅವಳಲ್ಲಿ ಎದುರಾಡುವ ಹೋರಾಡುವ ಶಕ್ತಿಯೇ ಇಲ್ಲದ ನಿಸ್ಸಹಾಯಕಳಾಗಿದ್ದಾಳೆ ಎಂದೆನಿಸಿತ್ತು. ಪುರುಷನೆಂಬ ಅಹಂ, ಅತ್ತೆಯ ದಬ್ಬಾಳಿಕೆ ಹೂವಿನಂತಹ ಮನ ಮುದುಡಿಸಿ ಬಾಳನ್ನೇ ನಲುಗಿಸಿತ್ತು. ಜೀತದಾಳಿಗಿಂತ ಕಡೆಯಾದ ಬದುಕು. ಅಮಿತಾಳಂತ ಅದೆಷ್ಟೋ ಜನ ಸಮಾಜಕ್ಕೆ ಹೆದರಿ ಹೀಗೆ ಹಿಂಡಿ ಹಿಪ್ಪೆಯಾಗ್ತಿದಾರೆ. ಮದುವೆ ಎಂದರೆ ಹೊಂದಾಣಿಕೆ ಬೇಕು ನಿಜ.ಆದರೆ ವ್ಯಕ್ತಿತ್ವವೇ ಇರದಂತಾಗಬೇಕಾ?
ಕೆಲಸಕ್ಕೆ ಹೋಗುವವರದೇ ಈ ಪಾಡಾದ್ರೆ ಇನ್ನು ಪೂರಾ ಅವಲಂಬಿತರ ಕಥೆ ಏನು? ಈ ಸುಖಕ್ಕೆ ಮದುವೆ ಏಕೆ ಬೇಕು ಅನ್ನೋ ಪ್ರಶ್ನೇನು ಹುಟ್ಟಿತು.

ಆದರೂ ತನ್ನ ಕಾಲ ಮೇಲೆ ನಿಂತ ಉದ್ಯೋಗಸ್ಥ ಹೆಣ್ಣೂ ಸಹ ಈ ರೀತಿಯ ಕಷ್ಟಪಟ್ಟು ವಿವಾಹದ ವ್ಯವಸ್ಥೆಯೊಳಗೆ ಉಳಿಯುತ್ತಾಳೆ ಎಂದರೆ ಡೈವೋರ್ಸ್ ಪಡೆದ ಹೆಣ್ಣಿನ ಬಗೆಗಿನ ಸಮಾಜದ ವರ್ತನೆ ದೃಷ್ಟಿಕೋನವೇ ಕಾರಣ ತಾನೇ? ಇತ್ತೀಚೆಗೆ ಈ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ ಅದಕ್ಕೆ ಪೋಷಕರ ಬೆಂಬಲ ಇದ್ದರೆ ಮಾತ್ರ ಸಾಧ್ಯ . ಇಲ್ಲವೆಂದರೆ ಅಪರಿಮಿತ ಧೈರ್ಯ ಬೇಕು ಹೊರಬಂದು ತನ್ನ ಮತ್ತು ಮಕ್ಕಳ ಬದುಕು ಕಟ್ಟಿಕೊಳ್ಳಲು.
ಹೆಣ್ನಿನ ಈ ತರಹದ ಶೋಷಣೆ ನಿಲ್ಲುವುದು ಯಾವಾಗ?
ಅನುಮಾನಂ ಪೆದ್ದ ರೋಗಂ”

“ಅನುಮಾನಂ ಪೆದ್ದ ರೋಗಂ” ಎಂಬುದೊಂದು ತೆಲುಗು ಗಾದೆ. ಆದರೆ ಈ ರೋಗ ತಗುಲಿಕೊಂಡವರಿಗೆ ಏನೂ ಕೇಡು ಮಾಡದು. ಗುರಿಯಾದವರ ಮಾನಸಿಕ ಸ್ವಾಸ್ಥ್ಯ ಕೆಡಿಸಿ ಮನೋಬಲ ಕುಗ್ಗಿಸುವಂತಹುದು. ನೆಮ್ಮದಿ, ಶಾಂತಿ ದೂರ ಮಾಡುವಂತದ್ದು.

ಅತ್ತೂ ಅತ್ತೂ ಕೆಂಪಾದ ಕಣ್ಣು, ದದ್ದರಿಸಿದ
ಮುಖದೊಂದಿಗೆ ರಮಾ ಸೀಟಿನಲ್ಲಿ ಧೊಪ್ಪೆಂದು ಕುಕ್ಕರಿಸಿದಳು. ಮಾತನಾಡಿಸಲು ಆಗದಷ್ಟು ರಶ್ ಆವತ್ತು. ಆದರೂ ಆಫೀಸ್ ಬಾಯ್ಗೆ ಹೇಳಿ ಟೀ ತರಿಸಿ ಬಿಸ್ಕೆಟ್ ಪೊಟ್ಟಣ ಪೇನ್ ಕಿಲ್ಲರ್ ಕೊಟ್ಟು ಮತ್ತೆ ಕೆಲಸದಲ್ಲಿ ಮುಳುಗಿದೆ. ಅವಳೂ ತಿಂದು ಟೀ ಕುಡಿದು ಕೆಲಸಕ್ಕೆ ತೊಡಗಿದಳು. ಲಂಚ್ ಟೈಮಲ್ಲಿ ಅಳುತ್ತಾ ನುಡಿದದ್ದು. ಹಿಂದಿನ ದಿನ ಹೆಡ್ ಆಫೀಸಿಗೆ ಅರ್ಜೆಂಟಾಗಿ
ವಿವರ ಕಳಿಸಬೇಕಿತ್ತು.ರಾತ್ರಿ ಎಂಟಾಗಿತ್ತು ನಾವು ಆಫೀಸ್ ಬಿಡುವ ವೇಳೆಗೆ. ಮಳೆ ಬರುತ್ತಿದ್ದರಿಂದ ಮಾನೇಜರ್ ನಮ್ಮನ್ನು ನಮ್ಮ ದ್ವಿಚಕ್ರ ವಾಹನದಲ್ಲಿ ಹೋಗಲು ಬಿಡದೆ ತಮ್ಮ ಮನೆಯ ಬಳಿಯಿದ್ದ ಅವಳಿಗೆ ತಾವೇ ಡ್ರಾಪ್ ಕೊಟ್ಟರು. ಮತ್ತೊಂದು ದಿಕ್ಕಿನಲ್ಲಿದ್ದ ನಮ್ಮ ಮನೆಗೆ ಬೇರೊಬ್ಬ ಆಫೀಸರ್ ಬಂದು ಬಿಟ್ಟರು. ಅಷ್ಟಕ್ಕೇ ಅವಳ ಗಂಡನ ರಂಪಾಟ. ಬರೀ ಅನುಮಾನದ ಪಿಶಾಚಿಯಾದ ಅವನಿಗೆ ರಮಾ ತನ್ನ ಬಾಸ್ ನೊಡನೆ ಎಲ್ಲೋ ಸುತ್ತಿಕೊಂಡು ಬಂದಿದ್ದಾಳೆ ಅನ್ನೋ ಶಂಕೆ. ತಡವಾಗಿ ನಿನ್ನನ್ನೇ ಏಕೆ ಇರಿಸಿಕೊಳ್ಳೋದು? ನೀನೇ ಕುಣಿದುಕೊಂಡು ಕುಣಿದುಕೊಂಡು ಹೋಗಿರ್ತೀಯ ಅನ್ನೋ ಆರೋಪ. ಹೋಗಿ ಪಾಪ ಅಡಿಗೆ ರೆಡಿ ಮಾಡಿ ಬಡಿಸುವಷ್ಟರಲ್ಲಿ
ಏನೆಲ್ಲಾ ಮಾತನಾಡಿದ್ದಕ್ಕೂ ಸುಮ್ಮನಿದ್ದಾಳೆ.
ಮಕ್ಕಳು ಮಲಗಿದ ಮೇಲೆ ಕಸಮುಸುರೆ
ಮುಗಿಸಿ ಬಂದವಳು ಸುಸ್ತಾಗಿದ್ದಕ್ಕೆ ಮಲಗಿ ದಾಂಪತ್ಯ ಸುಖಕ್ಕೆ ಸಹಕರಿಸದಾಗ ” ಎಲ್ಲಾ ಅಲ್ಲೇ ಮುಗಿಸಿಕೊಂಡು ಬಂದಿರಬೇಕು” ಎಂದು ಚುಚ್ಚಿದಾಗ ಸಹಿಸಲಾಗದೆ ಕೋಪದಿಂದ ಎದುರಾಡಿದಾಗ ಪೌರುಷ ತೋರಿಸಲು ಚೆನ್ನಾಗಿ ಹೊಡೆದಿದ್ದಾನೆ. ಮಕ್ಕಳಿಗೆ ಗೊತ್ತಾಗಬಾರದೆಂದು ಮೌನವಾಗಿ ಅತ್ತೂ ಅತ್ತೂ ರಾತ್ರಿ ಕಳೆದಿದ್ದಾಳೆ. ಯಾವ ತಪ್ಪೂ ಮಾಡದಿದ್ದರೂ ನಿರಾಧಾರವಾಗಿ ಶಂಕಿಸುವ ಇಂತಹ ಪತಿ ಇದ್ದರೆ ಗತಿಯೇನು? ಮನೆಗೆ ಬಂದ ಪತಿಯ ಗೆಳೆಯರಿಗೆ ಅವನು ಹೇಳದಿದ್ದರೂ ಟೀ ಸ್ನ್ಯಾಕ್ಸ್ ತಂದು ಕೊಟ್ಟರೆ
“ಅವನಿಗೂ ನಿನಗೂ ಏನು ಸಂಬಂಧ” ಎಂದು ಕೇಳುವ ನೀಚ ಮನಸ್ಸು. ಇಂತಹವರಿಗೆ ಪತ್ನಿ ರೂಪವಂತೆಯಾಗಿರುವುದೇ ದೊಡ್ಡ ತಪ್ಪು.
“ಭಾರ್ಯಾ ರೂಪವತೀ ಶತ್ರುಃ” ಎಂಬಂತೆ ನೋಡುತ್ತಾರೆ. ಕುರೂಪಿಯನ್ನೇ ಕಟ್ಟಿಕೊಳ್ಳಬೇಕಿತ್ತು ತಾನೇ?

ಏನೇ ಸಮಝಾಯಿಷಿಯೂ ಅವನ ತಲೆಗೆ ಹೋಗಲ್ಲ. ಕೆಲಸ ಬಿಡಿಸಲೂ ತಯಾರಿಲ್ಲ. ಅದರಿಂದ ಸಿಗುವ ಸೌಲಭ್ಯ ಬೇಕು.
ಕೆಲವೊಮ್ಮೆ ಅವಳಿಗೆ ಕಾಣದ ಹಾಗೆ ಕುಳಿತು ಯಾರೊಂದಿಗೆ ಮಾತಾಡ್ತಾಳೆ ಯಾಕೆ ನಗುತ್ತಿದ್ದಳು ಎಂದೆಲ್ಲಾ ಗಮನಿಸಿಕೊಂಡು ಹೋಗಿ ಮನೆಯಲ್ಲಿ ಕೋರ್ಟ್ಮಾರ್ಷಲ್. ಮೊಬೈಲನ್ನಂತೂ ಆಗಾಗ ಚೆಕ್ ಮಾಡ್ತಿರೋದೇ. ಅಲಂಕರಿಸಿಕೊಂಡು ಹೋದರೆ ಒಂಥರಾ ನೋಟ ನಗೆ ಚುಚ್ಚುಮಾತು…ಕೊಂಕುನುಡಿ.
ಅವಳ ಹಲಬುವಿಕೆಗೆ ಚಿಂತೆಗೆ ಪರಿಹಾರ ಕೊಡಲಂತೂ ಆಗಲಿಲ್ಲ. ಇದು ಸಾಮಾನ್ಯ ಕೀಳರಿಮೆ, ಅಭದ್ರತೆಯಿಂದ ಉಂಟಾಗುವ ಒಂದು ಮಾನಸಿಕ ಕಾಯಿಲೆ.

ನಂಬಿಕೆ ಎಂದರೆ ದಾಂಪತ್ಯದ ತಳಹದಿ. ಅದೇ ಗಟ್ಟಿಯಿಲ್ಲದಿದ್ದಾಗ ದಾಂಪತ್ಯದ ಕಟ್ಟಡ ನಿಲ್ಲಲು ಸಾಧ್ಯವೇ? ಪತಿಯ ನಂಬಿಕೆಯ ಪ್ರಶ್ನೆ ಬಂದಾಗ ಧುರ್ಯೋಧನ ನೆನಪಾಗುತ್ತಾನೆ. ಪಗಡೆಯಾಡುವ ಸಮಯದಲ್ಲಿ ಪತ್ನಿ ಭಾನುಮತಿಯ ಮುತ್ತಿನ ಸರವನ್ನು ಗೆಳೆಯ ಕರ್ಣ ಹಿಡಿದೆಳೆದಾಗ ಅದು ಕಿತ್ತುಹೋಗಿ ಮುತ್ತುಗಳು ಚೆಲ್ಲಾಪಿಲ್ಲಿಯಾಗುತ್ತವೆ. ಆಗ ಅಲ್ಲಿಗೆ ಬಂದ ಧುರ್ಯೋಧನ ಕಿಂಚಿತ್ತೂ ತಪ್ಪು ತಿಳಿಯದೆ ಮುತ್ತು ಆರಿಸಲು ಮುಂದಾಗುತ್ತಾನೆ. ಮಿತ್ರ ಹಾಗೂ ಪತ್ನಿಯ ಮೇಲಿನ ನಂಬಿಕೆಯ ಪರಾಕಾಷ್ಠೆ. ಈ ತೆರನ ಪರಸ್ಪರ ನಂಬಿಕೆ ಪತಿಪತ್ನಿಯರಲ್ಲಿದ್ದರೆ
ಬಾಳು ಅದೆಷ್ಟು ಸೊಗಸು ಅಲ್ಲವೇ?

ನೆಮ್ಮದಿ ಎಂಬ ಮರೀಚಿಕೆ :

ಎದುರುಮನೆಗೆ ಹೊಸದಾಗಿ ಬಾಡಿಗೆಗೆ ಬಂದಿದ್ದ ಕುಟುಂಬ. ಗಂಡ ಹೆಂಡತಿ ಎರಡು ಗಂಡುಮಕ್ಕಳು. ಆಕೆಯೂ ಶಾಲಾ ಉಪಾಧ್ಯಾಯಿನಿ. ೫ ಗಂಟೆಗೆ ಎದ್ದು ಕೆಲಸ ಆರಂಭಿಸಿದರೆ ರಾತ್ರಿ ೧೧ ರ ವರೆಗೂ ಕೆಲಸವೇ ಮೂಗಿಗೆ ಕವಡೆ ಕಟ್ಟಿಕೊಂಡು ದುಡಿಯುವ ಹಾಗೆ. ಗಂಡ ಮಕ್ಕಳು ತಿಂದ
ತಟ್ಟೆಯಲ್ಲೇ ಕೈ ತೊಳೆಯುವಷ್ಟು ಸೋಮಾರಿಗಳು. ಬೆಳಿಗ್ಗೆ ಅಡಿಗೆ ತಿಂಡಿ ಮುಗಿಸಿ ಡಬ್ಬಿ ಕಟ್ಟಿಕೊಡುವ ಅವಾಂತರದಲ್ಲಿ ವಾರದಲ್ಲಿ ನಾಲ್ಕು ದಿನ ತಿಂಡಿಯೇ ತಿನ್ನಲ್ಲ. ಸಂಜೆ ಬಂದು ಅಡಿಗೆ ತಯಾರಿ ಮಕ್ಕಳ ಓದಿನ ಕಡೆ ಗಮನ ಮತ್ತೇನಾದರೂ ಶಾಲೆಯ ಕೆಲಸ ತಂದಿದ್ದರೆ ರಾತ್ರಿ ನಿದ್ದೆ ಗೆಟ್ಟಾದರೂ ಮಾಡುವ ಅನಿವಾರ್ಯತೆ.
ಸ್ವಾರ್ಥಿ ಗಂಡನ ಶೋಕಿಗಳು ಯಾವುದಕ್ಕೂ ಕಡಿತವಿಲ್ಲ ಚಿಕ್ಕ ಮಕ್ಕಳ ಆಸೆ ಪೂರೈಸಬೇಕು. ಇವುಗಳ ನಡುವೆ ಯಾವ ಸಹಾಯಕರನ್ನೂ ಇಟ್ಟುಕೊಳ್ಳದೆ ಹಣ ಉಳಿಸುವ ಆದೇಶ ಪತಿಯಿಂದ. …..ಎರಡೆರಡು ಬಸ್ ಬದಲಾಯಿಸಿ ಹೋಗಬೇಕಾದ ಆಕೆ ಅಷ್ಟು ಕೆಲಸ ಮಾಡುತ್ತಿದ್ದರೂ ಆತ ವಾಕಿಂಗ್ ಮುಗಿಸಿ ಪೇಪರ್ ಓದುತ್ತಾ ಕುಳಿತರೆ ಕುಳಿತ ಕಡೆಗೆ ಕಾಫಿ ತಂದಿಡಬೇಕು. ಸಂಜೆಯೂ ಅಷ್ಟೇ ಆಯಾಸದಿಂದ ಬಂದ ಆಕೆ ಮಕ್ಕಳಿಗೆ ಓದಿಸಿ ರಾತ್ರಿ ಊಟಕ್ಕೆ ತಯಾರಿ ಮಾಡುತ್ತಿದ್ದರೆ ಆತ ಟಿವಿಯ ಮುಂದೆ ವಿರಾಜಮಾನ. ಅದೇನು ಮನೆಕೆಲಸಕ್ಕೆ ಕೈ ಜೋಡಿಸಲೇ ಬಾರದೇನೋ ಎಂಬ ಪ್ರತಿಜ್ಞೆ ಕೈಗೊಂಡವರ ಹಾಗೆ. ತಂದೆಯನ್ನ ನೋಡಿ ನೋಡಿ ಮಕ್ಕಳೂ ಹಾಗೇ….ಇವುಗಳ ಮಧ್ಯೆ ಊರಿನಿಂದ ಬರುವ ಅತಿಥಿಗಳ ಸೇವೆ ಬೇರೆ.
ಪರೀಕ್ಷೆ ವಾರ್ಷಿಕೋತ್ಸವಗಳ ಸಮಯದಲ್ಲಿ
ಶಾಲೆಯಲ್ಲೂ ಹೆಚ್ಚಿನ ಜವಾಬ್ದಾರಿ. ಒಂದೇ ಸಮ ಕೆಲಸಗಳ ಸುಳಿಯಲ್ಲಿ ಸಿಲುಕಿ ಸುತ್ತುತ್ತಲೇ ಇದ್ದರು. ಒಂದು ದಿನ ತೀವ್ರ ಕಡಿಮೆ ರಕ್ತದ ಒತ್ತಡದಿಂದ ಕುಸಿದು ಬಿದ್ದಾಗಲೇ ಅವರ ಒತ್ತಡದ ಆಳ ಮನೆಯವರಿಗೆ ತಿಳಿದದ್ದು. ಜೊತೆಗೆ ಅನಿಮೀಯಾ ಬೇರೆ. ಒಂದಷ್ಟು ದಿನ ಆಸ್ಪತ್ರೆ ವಾಸ. ಮುಂದೆ ಸುಧಾರಿಸಿಕೊಂಡ ಮೇಲೆ ಪರಿಸ್ಥಿತಿಯೂ ಬದಲಾಯಿತು. ಕೆಲಸದವರು ಬಂದರು. ಗಂಡ ಮಕ್ಕಳು ಸ್ವಲ್ಪ ಸಹಾಯ ಮಾಡತೊಡಗಿದರು. ಶಾಲೆಯ ಕೆಲಸ ಹೆಚ್ಚಿದ್ದಾಗ ಹೊರಗಿನಿಂದ ಆಹಾರ ತರಿಸುವ ಅಭ್ಯಾಸ ಆರಂಭವಾಯಿತು. ಒಂದು ಬಸ್ ಸಂಚಾರ ತಪ್ಪಿ ವರ್ತನೆಯ ಆಟೋ ಹಿಡಿದು ಸಮಯ ಉಳಿಯಿತು. ಇದೇನೋ ಸಧ್ಯ ಸುಖಾಂತ.

ಆದರೆ ಇಷ್ಟರ ಮಟ್ಟಿಗಿನ ಶಿಕ್ಷೆ ನಾವು ಹೆಂಗಸರು ಕೆಲವೊಮ್ಮೆ ನಮಗೆ ನಾವೇ ವಿಧಿಸಿಕೊಳ್ಳುವುದು ತರವೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಎಲ್ಲ ಕಡೆ ದಕ್ಷತೆಯಿಂದ ನಿರ್ವಹಿಸ ಬಲ್ಲೆವು ಎನ್ನುವ ಶ್ರೇಷ್ಠತೆಯ ವ್ಯಸನ ಇಂದಿನ ಮಹಿಳೆಯನ್ನು ಒತ್ತಡಕ್ಕೆ ತನ್ಮೂನಕ ಅನಾರೋಗ್ಯದ ಮಡಿಲಿಗೆ ನೂಕುತ್ತಿರುವುದಂತೂ ನಿಜ. ನಾವು ಎಚ್ಚೆತ್ತುಕೊಂಡು ಒಂದು ಮಿತಿ ಹಾಕಿಕೊಳ್ಳದಿದ್ದರೆ ನಮ್ಮೊಂದಿಗೆ ನಮ್ಮ ಕುಟುಂಬದವರಿಗೂ ತೊಂದರೆ. ಪೂರ್ತಿ ಹಾಸಿಗೆ ಹಿಡಿದರೆ ನಮ್ಮನ್ನು ನೋಡಿಕೊಳ್ಳುವ ಕೆಲಸವೂ ಅವರಿಗೇ ಬೀಳುತ್ತದೆ. ಇದೆಲ್ಲದರ ಜೊತೆಗೆ ಆರ್ಥಿಕ ಖರ್ಚೂ ಸಹ. ಮಾನಸಿಕವಾಗಿಯೂ ಹೊಡೆತ. ಹಂಚಿಕೊಂಡು ಕೆಲಸ ಮಾಡುವ ಮಾಡಿಸುವ ಪ್ರವೃತ್ತಿ ಬೆಳೆಸಿಕೊಂಡು ಆಗದಿದ್ದಾಗ ಬಾಯಿ ಬಿಟ್ಟು ಹೇಳುವಷ್ಟಾದರೂ ಮನೋಧರ್ಮ ರೂಢಿಸಿಕೊಳ್ಳಲೇ ಬೇಕಾಗಿದೆ. ನಮಗೆ ನಾವೇ ತೊಡಿಸಿಕೊಂಡ ಶೃಂಖಲೆಗಳನ್ನು ಬಿಚ್ಚಿಡಲೇ ಬೇಕಿದೆ. ನಾವು ಚೆನ್ನಾಗಿದ್ದಲ್ಲಿ ಕುಟುಂಬದ ಸೌಖ್ಯ ಎಂಬುದನ್ನು ಮನಗಂಡು “ತ್ಯಾಗಮೂರ್ತಿ” ಆಗುವ ದೌರ್ಬಲ್ಯ ಹತ್ತಿಕ್ಕಬೇಕಿದೆ.

ಇಲ್ಲಿಯವರೆಗೆ ಮನೆಯ ನಿರ್ವಹಣೆ ಅಡುಗೆ ಬರಿಯ ಹೆಂಡತಿಯ ಕೆಲಸ ಮಾತ್ರ ಎಂಬಂತಿದ್ದು, ಈಗ ಹೊರಗೆ ಹೋಗಿ ಅವಳು ದುಡಿಯುವಾಗ ಮನೆಯ ಕೆಲಸದಲ್ಲಿ ಗಂಡನೂ ಸಮಭಾಗಿಯಾಗಬೇಕು ಎನ್ನುವ ಅರಿವು ಮೂಡುವ ತನಕ ದುಡಿಯುವ ಹೆಣ್ಣುಮಕ್ಕಳ ಶಾಪ ಬಗೆ ಹರಿಯುವುದಿಲ್ಲ. ಮಾರ್ಚ್ ೮ ರಂದು ಮಾತ್ರ ಹೊಗಳಿ ಅಟ್ಟಕ್ಕೇರಿಸುವ ಬೂಟಾಟಿಕೆಯ ಮಹಿಳಾ ದಿನಾಚರಣೆಯ ವೈಭವ ಬರಿ ಕ್ಲೀಷೆ ಎನ್ನಿಸುವುದೂ ತಪ್ಪುವುದಿಲ್ಲ.


ಸುಜಾತಾ ರವೀಶ್

Leave a Reply

Back To Top