ಕಾವ್ಯ ಸಂಗಾತಿ
ಗಜಲ್..
ಈಶ್ವರ ಜಿ ಸಂಪಗಾವಿ
ಜೀವಚ್ಛವವಾದ ಮನುಷ್ಯನಲಿ ಆಸೆಗಳೆಂಬ ರಣಹದ್ದುಗಳು ಸುಳಿದು ಸುತ್ತುತಿವೆ
ಭಾವಶೂನ್ಯ ಮನಸುಗಳು ಮೋಸವೆಂಬ ಜಾಲ ಬೀಸುತ ಮುರಿದು ಮುತ್ತುತಿವೆ
ಕ್ಷಣಿಕ ಕಾಮನಬಿಲ್ಲಿನ ಸಪ್ತವರ್ಣಗಳ ಮೋಹಕ ಪಾಶದಲಿ ಬಲಿಯಾಗಿವೆ ಜೀವ
ಎಳಸು ಕನಸುಗಳಲಿ ಕಲ್ಲುಮಣ್ಣಗಳ ಒಟ್ಟಿ ಗಾಳಿಗೋಪುರಗಳು ಕತ್ತು ಎತ್ತುತಿವೆ
ಆಕಾಶಕೆ ಏಣಿ ಇಟ್ಟು ಬಾನು ಚುಂಬಿಸುವ ಭ್ರಮೆಯಲಿ ಭಾವಗಳು ಮೈಮರೆತಿವೆ
ಹೆಬ್ಬಯಕೆಯ ತುಳಿದು ಅಗಣಿತ ಆಸೆಯ ನೇಗಿಲು ಸೇರಿ ಬರಡುನೆಲ ಉತ್ತುತಿವೆ
ಅವಾಸ್ತವದ ಅರವಳಿಕೆ ನೀಡುತ ಭವರೋಗಿಯ ಶಸ್ತ್ರಚಿಕಿತ್ಸೆಯು ಮೌನ ತಾಳಿದೆ
ಚಿರಂತನ ಸುಖ ಭೋಗಿಸುವ ದಾವಂತದಿ ವಾಂಛೆಯ ಕಲೆಗಳು ಕೆಸರ ಮೆತ್ತುತಿವೆ
ವಾಸ್ತವ ಸತ್ಯದ ನಿಲುವು ಪಡೆದು ಸಾಹಸಕೆ ಕೈಹಾಕು ಹೊತ್ತಿ ಉರಿಯುವ ಮುನ್ನ
ಈಶ ಭಕ್ತಿಯ ಆಳಕಿಳಿದು ಮುಕ್ತಿಪಥ ತಿಳಿದು ಬಿಡುಗಡೆಯ ಬೀಜಗಳ ಬಿತ್ತುತಿವೆ