ಹೊಸ ಕವಿತೆ-ಪುಟ್ಟ ದೇಹದ ಹಕ್ಕಿ

ಕಾವ್ಯ ಸಂಗಾತಿ

ಪುಟ್ಟ ದೇಹದ ಹಕ್ಕಿ

ಡಾ. ಪುಷ್ಪಾ ಶಲವಡಿಮಠ

ಎಲೆ ಪುಟ್ಟ ದೇಹದ ಹಕ್ಕಿ
ನಿನ್ನಂತೆ ನನಗೆ
ಬರಿ ಹೊಟ್ಟೆ ತುಂಬಿಕೊಳ್ಳುವುದೊಂದೇ
ಚಿಂತಿಯಾಗಿದ್ದರೇ!
ನಾನಿಷ್ಟೊಂದು ದುಃಖಿಯಾಗುತ್ತಿರಲಿಲ್ಲ.
ನಾನು ಮನುಷ್ಯ
ಬಗೆಬಗೆಯ ಭಕ್ಷ ಮಾಡಿ
ಭಕ್ಷಿಸುವುದರಲ್ಲೇ ಸವೆದು ಹೋಗುತ್ತಿದ್ದೇನೆ.
ದಿನಸಿ ಹೊಂದಿಸುವ ಚಿಂತೆ
ಬೇಯಿಸುವ ಚಿಂತೆ
ಬೇಯಿಸಲು ಒಲೆಯ ಚಿಂತೆ
ಒಲೆಯುರಿಯಲು ಕಟ್ಟಿಗೆಯ ಚಿಂತೆ
ಒಂದೇ ಎರಡೇ ನೂರಾರು ಚಿಂತೆ.

ಎಲೆ ಪುಟ್ಟ ದೇಹದ ಹಕ್ಕಿ
ನಿನ್ನಂತೆ ನನಗೆ ಎರಡು ರೆಕ್ಕೆಗಳಿದಿದ್ದರೇ….
ಎಲ್ಲೆಂದರಲ್ಲಲ್ಲಿ ಸುತ್ತಿ ಸುಖಿಸುತ್ತಿದ್ದೆ.
ನಾನು ಮನುಷ್ಯ
ಬಸ್ಸು, ರೈಲು, ವಿಮಾನಗಳಲ್ಲೇ ಸುತ್ತಬೇಕು
ಟಿಕೆಟಿಗೆ ಹಣ ತೆರಬೇಕು
ಪಾಸ್ ಪೋರ್ಟ್ ವೀಸಾಕ್ಕೆ ಪರದಾಡಬೇಕು
ನಿನ್ನಂತೆ ನನಗಿಲ್ಲ ಗಡಿರೇಖೆಗಳ
ಹದ್ದು ಮೀರಿ ಹಾರಿ ಹೋಗುವ ಸ್ವಾತಂತ್ರ.

ಎಲೆ ಪುಟ್ಟ ದೇಹದ ಹಕ್ಕಿ
ನಿನಗಿಲ್ಲ ನನ್ನಂತೆ ದೇವರ ಚಿಂತೆ
ಮಠ -ಮಂದಿರ -ಮಸೀದಿ -ಇಗರ್ಜಿ
ಎಲ್ಲವೂ ನಿನ್ನವೇ.
ಎಲ್ಲೆಂದರಲ್ಲಿ ಕುಳಿತುಕೊಳ್ಳುವ ನಿನಗೆ
ಎಲ್ಲಾ ದೇವರೂ ಒಂದೇ
ನಾನು ಮನುಷ್ಯ
ನನ್ನ ಸುತ್ತ ಜಾತಿ -ಧರ್ಮ -ಮತ -ಪಂಥಗಳ
ಬೇಲಿ ಕಟ್ಟಿಕೊಂಡಿದ್ದೇನೆ.
ಬೇಲಿ ದಾಟಿ ನನ್ನ ಹತ್ತಿರ ಬರಲು
ಆ ದೇವರೇ ಹೆದರುತ್ತಿದ್ದಾನೆ.

ಎಲೆ ಪುಟ್ಟ ದೇಹದ ಹಕ್ಕಿ
ನಿನ್ನಂತೆ ನನಗೆ ಬದುಕಲಾಗದು
ಎಲೆಯ ಮರೆಯಲ್ಲಿಯೂ
ಕಸಕಡ್ಡಿಗಳಿಂದ ಕಟ್ಟಿದ
ಸುಂದರ ಮನೆ ನಿನ್ನದು
ಪುಟ್ಟ ಗೂಡಿನಲ್ಲೂ ನೆಮ್ಮದಿಯ ಬದುಕು
ನಾನು ಮನುಷ್ಯ
ನನಗೆ ಮನೆಕಟ್ಟಲು ಬೇಕು
ಸೈಟು -ಗಾರೆ -ಗಚ್ಚು -ನೀಲನಕ್ಷೆ
ಮೇಲೊಂದಿಷ್ಟು ಬ್ಯಾಂಕ್ ಲೋನ್
ಮನೆ ಕಟ್ಟಿ ಸಾಲದ ಭಾರ ಹೊತ್ತು ಸಾಗಬೇಕು
ಮಹಡಿಯ ಮೇಲೆ ಮಹಡಿ ಕಟ್ಟಿದರೂ
ನನ್ನದು ನೆಮ್ಮದಿ ಕಾಣದ ಬದುಕು.

ಎಲೆ ಪುಟ್ಟ ದೇಹದ ಹಕ್ಕಿ
ನಿಸರ್ಗದ ಮಡಿಲಲ್ಲಿ ಹುಟ್ಟಿ
ನಿಸರ್ಗದ ನಿಯಮದಂತೆ ಬದುಕಿ
ಬದುಕಿಗೆ ಸಾರ್ಥಕತೆ ಕಂಡುಕೊಂಡ
ನಿಸರ್ಗ ಜೀವಿ ನೀನು ನಿಗರ್ವಿ.
ನಾನು ಮನುಷ್ಯ
ಬುದ್ಧಿ ಜೀವಿ, ವಿಪರೀತ ಬುದ್ದಿಯವ
ದುರಾಸೆಗೆ ನಿಸರ್ಗ ಬಳಿಸಿಕೊಂಡು
ಸ್ವಾರ್ಥಕ್ಕೆ ನಿಸರ್ಗವನ್ನು ಬಲಿಕೊಟ್ಟ
ಮಹಾಕ್ರೂರಿ……..

ನಾನು ಮನುಷ್ಯ! ದೈತ್ಯ ಪ್ರತಿಭೆ….
ನೀನು ಪುಟ್ಟ ದೇಹದ ಹಕ್ಕಿ….


ಡಾ. ಪುಷ್ಪಾ ಶಲವಡಿಮಠ

5 thoughts on “ಹೊಸ ಕವಿತೆ-ಪುಟ್ಟ ದೇಹದ ಹಕ್ಕಿ

  1. ಸುಂದರ, ಸರಳ, ಸ್ವಾರಸ್ಯಕರವಾಗಿದೆ.
    ಬೇಲಿ ದಾಟಿ ಬರಲು ದೇವರು ಸಹ ಹೆದರುತ್ತಾನೆ ಸತ್ಯವಾದ ಮಾತು

  2. ಜಾತಿ ಮತ ಪಂಥ ಗಳ ಬೇಲಿ ದಾಟಿ ಬರಲು ದೇವರೂ ಹೆದರುತ್ತಾನೆ ಸತ್ಯವಾದ ಮಾತು

Leave a Reply

Back To Top