ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ತರಹಿ ಗಝಲ್
(ಸಾನಿ ಮಿಸ್ರಾ ಅಲಿ ಸರ್ ಅವರದ್ದು)
ಈಗಲಾದರೂ ನನ್ನನು ತಡೆಯುವಳೆಂದು
ಯೋಚಿಸಿ ಅಲ್ಲಿಂದ ಹೊರ ನಡೆದಿದ್ದೆ
ಅದುಮಿಟ್ಟ ಆಸೆಗಳ ಹೊರಗೆಳೆವಳೆಂದು
ಅನಿಸಿ ಅಲ್ಲಿಂದ ಹೊರ ನಡೆದಿದ್ದೆ
ಒಲವಗೀತೆ ಗುನುಗುವ ಕಣ್ಣಲ್ಲಿಂದು
ಅದೇಕೊ ಲವಲವಿಕೆಯಿರಲಿಲ್ಲ
ಕಣ್ಣಾಲಿಗಳ ಕಳವಳ ಅರಿವಳೆಂದು
ಭಾವಿಸಿ ಅಲ್ಲಿಂದ ಹೊರ ನಡೆದಿದ್ದೆ
ನನ್ನೋಡಿ ನಸುನಗುತಿದ್ದ ತುಟಿಗಳಿಂದು
ತುಸುವೂ ಮಿಸುಕಾಡಲಿಲ್ಲ
ಕಳೆಗುಂದಿದ ಒಲವಿನೆಡೆ ಕೈ ಚಾಚುವಳೆಂದು
ಚಿಂತಿಸಿ ಅಲ್ಲಿಂದ ಹೊರ ನಡೆದಿದ್ದೆ
ಇಂದದೇಕೊ ಮನಸವಳದು
ಕರಗದ ಕಲ್ಲಿದ್ದಲಾದಂತಿತ್ತು
ಎಂದಾದರೊಂದಿನ ತಳಮಳಿಸಿ ತಿರುಗುವಳೆಂದು
ತರ್ಕಿಸಿ ಅಲ್ಲಿಂದ ಹೊರ ನಡೆದಿದ್ದೆ
ದಾರಿಯುದ್ದಕ್ಕೂ ಭರವಸೆಗಳ ಕಂಬನಿಯ
ಹಾಸಿ ಹೋಗುವೆ ‘ವಾಣಿ ‘
ಮುದ್ದಿಸಲು ನನ್ನೀ ಮನ ಬಂದೇಬರುವಳೆಂದು
ರಮಿಸಿ ಅಲ್ಲಿಂದ ಹೊರ ನಡೆದಿದ್ದೆ
ತುಂಬಾ ಚೆನ್ನಾಗಿದೆ
Thank you so much