ಪ್ರಭುರಾಜ ಅರಣಕಲ್ ಮಕ್ಕಳ ಕವಿತೆ-ಹೋಳಿ ಹಬ್ಬ

ಮಕ್ಕಳ ಸಂಗಾತಿ

ಹೋಳಿ ಹಬ್ಬ

ಪ್ರಭುರಾಜ ಅರಣಕಲ್

ಶಾಲೆಯ ಜಂಜಡ ಮರೆಸಲು
ಬಂತು ಹೋಳಿ ಹಬ್ಬವು
ಬೀದಿಯಲ್ಲಿ ಗುಂಡಿ ತೋಡಿ
ಕಾಮಣ್ಣನ ಪೂಜೆಯು

ಹುಣ್ಣಿಮೆಯಾs ರಾತ್ರಿಯಲ್ಲಿ
ನಡೆವ ಕಾಮ ದಹನವು
ಮರುದಿನವದೆ ಕೆಂಡ, ಒಯ್ದು
ಮನೆಯೊಲೆಯಲಿ ಅಡುಗೆಯು

ಬಣ್ಣಬಳಿದ ಮುಸುಡಿಗಳವು
ಮಂಗನಂತೆ ಕಾಣ್ವವು
ಲಬೋ ಲಬೋ ಬೊಬ್ಬೆಹೊಡೆದು
ಹಾಡಿ ನಲಿವ ಹಬ್ಬವು

ಸಕ್ಕರೆ ಸರಗಳ ವಿನಿಮಯ
ಮಕ್ಕಳಿರುವ ಮನೆಯಲಿ
ಸರಗಳ ಬತ್ತಾಸು ತಿಂದು
ಮಕ್ಕಳ ಜಿಗಿದಾಟವು..

ಬನ್ನಿ ಬನ್ನಿ ಮಕ್ಕಳಿರಾs
ಹೋಳಿಹಬ್ಬ ಮಾಡುವಾ
ವರುಷ ದೊಂದುದಿನವಾದರು
ಹಾಡಿ ಕುಣಿದು ನಲಿಯುವಾ…


Leave a Reply

Back To Top