ನಯನ- ಜಿ. ಎಸ್.ರವರ ಕವಿತೆ- ಪ್ರಸವ

ಕಾವ್ಯ ಸಂಗಾತಿ

ನಯನ. ಜಿ. ಎಸ್.

ಪ್ರಸವ

ನಾನೂ ನೋಡುತ್ತಲೇ ಇದ್ದೇನೆ ,
ದಿನಗಳು ಸಂದು ಋತುಗಳು ತುಂಬುತ್ತಾ ಬಂತು ?
ಎಣಿಕೆಯ ಆಚೆಗೂ ಒಂದು ವಿಸ್ಮಯದ ಭಾವ,
ಕೊನೆಗೂ ಪ್ರಸವ ಆಗಲೇ ಇಲ್ಲ.

ತುಂಬಿದೊಡಲ ಸಿಂಗರಿಸಿದ್ದವು ಘನ ಭಾವಗಳು ,
ಬಿಡಾರ ಹೂಡಿದ್ದ ವಾಂಛೆಗಳಿಗೂ ಅಸ್ತಿತ್ವಕ್ಕೆ ವಾಂಛೆ,
ಒಡಲ ತುಂಬಿದರೂ ಹೃದಯಕ್ಕೆ ದಕ್ಕಲಿಲ್ಲ ಬಯಕೆ
ಕೊನೆಗೂ ಪ್ರಸವ ಆಗಲೇ ಇಲ್ಲ.

ಎದೆಯ ನೆಲವ ಇರಿಯುತ್ತಿದ್ದವು ಸ್ವಾರ್ಥಿ ನಖಗಳು,
ಅಲಗಿನಂತೆ ಹಿಂಸಿಸಿ , ಬಿರುಕುಗಳನಷ್ಟೇ ಕೆತ್ತಿ
ಮೌನದೊಳಗನ ಜೀವಂತಿಕೆಯನು ಅರಿಯುವವರಿಲ್ಲ ,
ಕೊನೆಗೂ ಪ್ರಸವ ಆಗಲೇ ಇಲ್ಲ.

ಹಲುಬುತ್ತಿತ್ತು ಬಡ ಜೀವ , ನಗುವಿನ ಪೋಷಣೆಗಾಗಿ..
ಗೋಗರೆದು ಚೀರಿದರೂ ನಿರ್ಭಾವದಲಿ ಶೋಷಣೆ,
ದಮನಿಸುವ ಹೆಜ್ಜೆಗಳಲಿ ನಲುಗಿ ಬಳಲಿದ್ದೇ ಬಂತು ,
ಕೊನೆಗೂ ಪ್ರಸವ ಆಗಲೇ ಇಲ್ಲ.

ಬಣ್ಣ ಬಣ್ಣದ ಭಿನ್ನಾಣದಿ ಸಿಂಗರಿಸಲಾರೆ ಸೊಲ್ಲುಗಳನು ,
ನೈಜತೆಯ ಅಪ್ಪಿ ಮೆಚ್ಚುವವರೇ ವಿರಳ..
ಸ್ವಾಭಿಮಾನದ ಕುಂಭಕೆ ಲುಪ್ತತೆಯಲಿ ಘಾಯ,
ಕೊನೆಗೂ ಪ್ರಸವ ಆಗಲೇ ಇಲ್ಲ.

ನೇಕಾರನ ನೇಯ್ಗೆಗೂ, ಓಘಿಸಿದ ಬೆವರಿಗೂ ಬೆಲೆ ಕೊಡುತ್ತೇನೆ,
ಬೆಲೆ ಇತ್ತು ವ್ಯವಹರಿಸಲಾರೆ ಸಾಲಂಕಿಗಳಲಿ..
ನೆಲೆಯೀಯದೇ ನೆಲೆಗಾಣಿಸುವ ಹುಸಿ ವಾದಕ್ಕೆಲಿದೆ ಸಾರ ?
ಕೊನೆಗೂ ಪ್ರಸವ ಆಗಲೇ ಇಲ್ಲ.

ಬದುಕಿನ ಸಂತೆಯಲ್ಲಿ ಒಂಟಿಯಷ್ಟೇ ಜೀವ ,
ಚಿಂತೆಗಳ ಚಿತೆಗೆ ನೆಚ್ಚಿಕೊಳ್ಳುವುದೇ ಬಂತು..
ಸ್ಪುರಿಸುವ ಕಾಮನೆಗಳಿಗೆ ಬಿಸುಪಿನ ಸ್ಪರುಶವಿಲ್ಲ ..
ಕೊನೆಗೂ ಪ್ರಸವ ಆಗಲೇ ಇಲ್ಲ.

ನಿರೀಕ್ಷೆಗಳ ಹೊಸೆಯಲು ಶಬರಿಯಷ್ಟು ಸಹನೆ ಅವಳಲ್ಲಿಲ್ಲ ಈಗ,
ದಿಟ್ಟತನಕೆ ಪ್ರೇರೇಪಿಸುವ ಹೆಜ್ಜೆಗಳ ಸದ್ದೂ ಈಗೀಗ ಮರೀಚಿಕೆ ..
ಹೆಣಗಾಡಿ ಸಾಕಾಗಿತ್ತು ಅವಳಿಗೂ ಕೂಡ,
ಕೊನೆಗೂ ಪ್ರಸವ ಆಗಲೇ ಇಲ್ಲ.

ಬಾನಂಚಿನ ಚುಕ್ಕಿ ಮಿನು ಮಿನುಗಿ ನಕ್ಕಿತ್ತು,
ಚೋದ್ಯಕೋ ? ಚೆಲುವಿಗೋ ? ಚರಮಕೋ ? ಉತ್ತರಾತೀತ ಪ್ರಶ್ನೆ ..
ಪ್ರಸವಗಾಣದೇ ಪವಡಿಸಿತ್ತು ಅಂತರಾತ್ಮ,
ಪ್ರಸವದ ಕನಸನಷ್ಟೇ ಹೊತ್ತು, ಉಂಡು ಖೇದದ ತುತ್ತು.

—————————————-

———————————————

2 thoughts on “ನಯನ- ಜಿ. ಎಸ್.ರವರ ಕವಿತೆ- ಪ್ರಸವ

Leave a Reply

Back To Top