ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಒಲವಧಾರೆ ಅಂಕಣ ಬರಹ

ಬೇರೆಯವರ ಬದುಕನ್ನು

ಸೆರೆಹಿಡಿಯುತ್ತಲೇ

ಬಾಳಿಗೆ ಫ್ರೇಮ್ ಆದವರು..

ಹೌದು…!!

ಅವನು..ಚಕ್ ಚಕ್ ನೆ ಕ್ಯಾಮಾರ ಹಿಡಿದು ಬೇಗ ಬೇಗ ಬ್ಯಾಗ್ ರೆಡಿ ಮಾಡಿಕೊಂಡು ಫೋಟೋ ತೆಗೆಯಲು ಸಿದ್ದನಾಗುತ್ತಾನೆ…

ತಮ್ಮವರನ್ನು ಕಳೆದುಕೊಂಡ ನೋವಿನಲ್ಲಿ ಬಂದ ವ್ಯಕ್ತಿಯ ಕೈಯಲ್ಲಿರುವ ಹಳೆಯ ಕಾಲದ ಮಾಸಿದ ಭಾವಚಿತ್ರಕ್ಕೆ ಹೊಸ ರೀತಿಯ ಗೆಟ್ ಪ್ ನೀಡುತ್ತಲೇ, ಅವರ ಹಿರಿಯರ ಭಾವಚಿತ್ರಕ್ಕೆ ಜೀವ ತುಂಬುತ್ತಾರೆ. ನೆನಪುಗಳು ಮಾಸದ ಹಾಗೇ ಕಾಪಾಡುತ್ತಾರೆ…!!

ಮದುವೆ ಇರಲಿ, ನಿಶ್ಚಿತ ಕಾರ್ಯಕ್ರಮವಿರಲಿ,ಸಾವಿನ ನಂತರದ ತಿಥಿ ಕಾರ್ಯವಿರಲಿ, ಪ್ರವಾಸದಲ್ಲಿ ತೆಗೆಸಿಕೊಂಡ ಬಗೆ ಬಗೆಯ ಭಾವಚಿತ್ರಗಳನ್ನು ಕಾಪಾಡಿ,ಅವುಗಳಿಗೆ ಸುಂದರವಾದ ಮೆರಗು ನೀಡುವ ವ್ಯಕ್ತಿ ಎಂದರೆ ಆತ ಬೇರಾರೂ ಅಲ್ಲ… ಆತ ಕ್ಯಾಮರಾ ಮ್ಯಾನ್..!! ಅರ್ಥಾತ ಛಾಯಾಗ್ರಾಹಕ..!!

ಇಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಅನೇಕ ಭಾವಚಿತ್ರಗಳು, ವಿಡಿಯೋಗಳು, ಸಿನಿಮಾ, ಸಾಕ್ಷ್ಯಚಿತ್ರಗಳಿವೆ ಎಂದರೆ ಅದಕ್ಕೆ ಇವರ ಶ್ರಮವೇ ಕಾರಣ.


ಪ್ರಾಕೃತಿಕ ಸೌಂದರ್ಯ, ಐತಿಹಾಸಿಕ ಸ್ಥಳಗಳ ನೈಜತೆಯನ್ನು, ವೈದ್ಯಕೀಯ ಕ್ಷೇತ್ರದಲ್ಲಿಯ ಸಂಶೋಧನೆ ಚಿತ್ರಗಳು, ಭಾಷೆಯ ಉಚ್ಚಾರಣೆಯ ಭಾವಚಿತ್ರಗಳು,ವ್ಯಕ್ತಿಗತ ನೆನಪುಗಳು, ವಿವಿಧ ಕಾರ್ಯಕ್ರಮಗಳ ಸಾಕ್ಷೀಕರಿಸುವ ಭಾವಚಿತ್ರಗಳು, ಇವುಗಳನ್ನು ಸಾಮಾನ್ಯವಾಗಿ ಸೆರೆಹಿಡಿಯುವಾಗ ಸಾಕಷ್ಟು ಶ್ರಮಪಡುತ್ತಾರೆ. ಯಾವ ಭಂಗಿಯಲ್ಲಿ ನಿಲ್ಲುವುದು..? ಯಾವ ರೀತಿಯಲ್ಲಿ ಕುಳಿತುಕೊಳ್ಳುವ, ಮುಖದ ಭಾವಗಳ ನೋಟ ಇವೆಲ್ಲವನ್ನೂ ಶಾಂತ ರೀತಿಯಲ್ಲಿ ಗ್ರಾಹಕರಿಗೆ ಹೇಳಿ ಅವರ ಸುಂದರವಾದ ಭಾವಚಿತ್ರ ಸೆರೆಹಿಡಿದಾಗ ಎಂತಹದೋ ಸಂಭ್ರಮ…!!

ಪೋಲಿಸ್ ಠಾಣೆಗಳ ಕಾರ್ಯಗಳಲ್ಲಿ, ನ್ಯಾಯಾಲಯದ ಸಾಕ್ಷಿಗಾಗಿ, ಆಸ್ತಿ ನೋಂದಣಿಯಲ್ಲಿ, ಆಧಾರ ಕಾರ್ಡ,ಮತದಾನದ ಚೀಟಿ….ಎಲ್ಲಲ್ಲಿಯೂ ಭಾಚಿತ್ರ ಬೇಕೆ ಬೇಕು. ಇಂದಿನ ಯಾಂತ್ರಿಕ ಯುಗದಲ್ಲಿ ಭಾವಚಿತ್ರವಿಲ್ಲದ ಬದುಕನ್ನು ಊಹಿಸಲು ಸಾಧ್ಯವಿಲ್ಲ. ಪ್ರತಿಯೊಂದು ರಂಗವೂ ಭಾವಚಿತ್ರಮಯ..!!

ಇಂದು ಫೋಟೋ ಸ್ಟುಡಿಯೋ ಇಟ್ಟುಕೊಂಡು ಉದ್ಯೋಗ ಮಾಡುವುದು ಸುಲಭದ ಮಾತಲ್ಲ..! ಈಗೀಗ ಪ್ರತಿಯೊಬ್ಬರ ಕೈಯಲ್ಲಿ ಆ್ಯಂಡ್ರೈಡ್ ಮೊಬೈಲ್ ಇರುವುದರಿಂದ ಹಲವಾರು ಆ್ಯಫ್ ಮೂಲಕ ಫೋಟೋಗಳನ್ನು ತೆಗೆದುಕೊಳ್ಳುವುದರಿಂದ ಛಾಯಾಗ್ರಾಹಕರಿಗೆ ಕೆಲಸವಿಲ್ಲದಂತಾಗಿದೆ ಎಂದರೆ ತಪ್ಪಾಗಲಾರದು. ಕಷ್ಟಪಟ್ಟು ಹಾಕಿದ ಬಂಡವಾಳ ಮರಳಿ ಬಾರದಂತಾಗಿದೆ. ಲಕ್ಷ ಲಕ್ಷ ರೂಪಾಯಿ ವೆಚ್ಚದ ಕ್ಯಾಮರಾ, ಅಂಗಡಿ, ಪರಿಕರಗಳನ್ನು ತಂದು ಕೈಸುಟ್ಟುಕೊಂಡವರು ಹಲವರು..!!

ಸಮಾರಂಭಗಳಿಗೆ ಕರೆಯಿಸಿ, ತೆಗೆಸಿದ ಫೋಟೋಗಳನ್ನು ಖರೀದಿಸದೆ ಹಾಗೇ ಅಂಗಡಿಯಲ್ಲಿ ಬಿದ್ದ ರಾಶಿ ರಾಶಿ ಫೋಟೋಗಳು..!! ಹಗಲು ರಾತ್ರಿ ಎನ್ನದೆ ತೆಗೆದ ವಿಡಿಯೋಗಳನ್ನು ಮಿಕ್ಸಿಂಗ್ ಮಾಡಿದರೇ ಒಯ್ಯದೆ ಹಾಗೆ ಬಿಟ್ಟ ಉದಾಹರಣೆಗಳಿಗೆ ಕೊನೆಯಿಲ್ಲ..!! ಗ್ರಾಹಕರ ಜೊತೆಗೆ ಮಾತನಾಡಿದರೆ ಜಗಳದ ಮಾತು ಎನ್ನುತ್ತಾರೆ. ಕೆಲವು ಸಲ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇವರು ತೆಗೆದ ಭಾವಚಿತ್ರಗಳ ಅಗತ್ಯ ಬಿದ್ದಾಗ ಇವರನ್ನು ನಾವೆಲ್ಲರೂ ಹುಡುಕುತ್ತೇವೆ.

ಬದುಕಿನಲ್ಲಿ ನಮ್ಮ ನೆನಪುಗಳನ್ನು ಬೆಚ್ಚಗೆ ಕಾಪಿಡುವ ಇವರ ಔದಾರ್ಯಕ್ಕೆ ಕೊನೆಯಿಲ್ಲ. ಯಾವುದೇ ವ್ಯಕ್ತಿ ಇಲ್ಲದ್ದಿದ್ದಾಗಲೂ ನಮ್ಮ ನಡುವೆ ಇರುವುಂತೆ ಸಹಜವಾಗಿ ಸೆರೆಹಿಡಿದು ನಿಲ್ಲಿಸುವ ಇವರ ತಾಕತ್ತಿಗೆ ನಮ್ಮದೊಂದು ಸೆಲ್ಯೊಟ್ ಹೇಳಲೇಬೇಕು.

ಅವಳ ಸುಂದರ ನೋಟಗಳನ್ನು ಹಾಗೇ ಸೆರೆಹಿಡಿದ ಕ್ಷಣಗಳನ್ನು, ಅನುಕ್ಷಣದ ಒಲವಿನ ಆ ಚೆಲುವನ ನೋಟಗಳು…ತುಂಬು ಕುಟುಂಬದ ಸದಸ್ಯರನ್ನೊಳಗೊಂಡ ಸಂತಸದ ಕ್ಷಣಗಳನ್ನು ಒಂದೇಡೆ ಕೂಡಿಸುವುದು, ಎಲ್ಲರ ಸಂಬಂಧಗಳನ್ನು ಬದುಕೆಂಬ ಫ್ರೇಮ್ ನಲ್ಲಿ ಬಂಧಿಸಿ, ನಗು ನಗುತ್ತಾ “ಸ್ಮೈಲ್ ಪ್ಲೀಸ್‌” ಎನ್ನುವ ಅವರ ಕಾಳಜಿಯ ಧ್ವನಿಯನ್ನು ಮರೆಯಲಾದೀತೆ..??

Id.

ಹಾಂ..!
ಅದೇನೆ ಇರಲಿ, ಛಾಯಾಗ್ರಹಣದ ಕೆಲಸ ಸುಲಭವಾದುದಲ್ಲ…ಸುಂದರ ಇರುವವರನ್ನು ಇನ್ನೂ ಹೆಚ್ಚಿನ ಸುಂದರ ಇದ್ದಂತೆ, ಸುಂದರ ಇಲ್ಲದವರನ್ನು ಸುಂದರ ಇರುವಂತೆ ಭಾವಚಿತ್ರದಲ್ಲಿ ತೋರಿಸುವ, ಸದಾಕಾಲ ಇನ್ನೊಬ್ಬರ ಸುಂದರತೆಯನ್ನು ಬಯಸುವ ಇವರ ಬದುಕು ಕೂಡ ಸುಂದರವಾಗಿರಲಿ…
ಅವರ ಒಲವಿನ ಬದುಕು ಹಸನಾಗಲಿ ಎಂದು ಹಾರೈಸೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ

Leave a Reply

Back To Top