ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಸ್ಮಿತಾ ರಾಘವೇಂದ್ರ

ಪ್ರೇಮ ಪತ್ರ

ಕಣ್ಣಿಗೊಂದು ಕನ್ನಡಕ ಏರಿಸಿಕೊಂಡು
ಅದರ ಪ್ರೇಮ್ ಹಿಡಿದು
ಮೇಲೆ ಕೆಳಗೆ ಮಾಡುತ್ತ
ಹಳೆಯ ಟ್ರಂಕಿನ ಬಂಗಾರದ
ಭದ್ರತೆಯಿಂದ ಹೊರಬಂದ
ಓಲೆ.
ಕೊರಳ ಸುತ್ತಿ ಎದೆಯ ಮಿದುವಿನಲಿ
ಮಿಸುಕಾಡಿ
ಆಗಾಗ ಚುಚ್ಚಿದಂತಾಗುವ ಹಾರ
ಕಣ್ಣಿಗೊತ್ತಿ ಅಡಗಿಸಿಕೊಳ್ಳುವಾಗ
ಮತ್ತೆ,,
ಜೊತೆಯಾದ ಪ್ರೇಮ,
ಕೆಲವೊಮ್ಮೆ ಅನ್ನಿಸುವ ಭಾವ
ಸ್ವಲ್ಪ ಭಾರ ಭಾರ..

ಎಂದೋ ಸಿಕ್ಕ ಮತ್ತೀಗ
ಸಿಗಬೇಕಾದ ಪ್ರತೀಕ್ಷೆ
ಸಿಗದ ಪ್ರೇಮ ಭಿಕ್ಷೆ.
ಹಿಡಿದ ಹಿಡಿ ಪ್ರೀತಿ
ಹದವರಿಯದೇ ಸೋರಿ
ಚದುರಿತ್ತಾ ಮುತ್ತಿನ ಹಾರ

ಜಿಗಿಯುತ್ತಿರುವ,
ಆಗ ತಾನೇ ಕಣ್ ಬಿಟ್ಟ ಕರು
ಅದುರುವ ಕಾಲುಗಳು
ಜಾರಿ ಮುಗ್ಗರಿಸಿ,
ಏನು ಬೇಕಾದರೂ ಘಟಿಸಬಹುದು,
ಕ್ಷಣದ ಕವಲಿನಲಿ
ಹಾಲು ಹಾಲಾಹಲ.

ಕೇರಿ ಕೆರೆ ಕುಂಟೆಗಳಲಿ
ಸುಳಿದಾಡಿದ ಒಲವ ಘಮ,
ಊರ ಕೊನೆಯ ಬಸ್ಸಿನಲಿ
ಬಂದಿಳಿದ ನೆನಪು,
ತುಂಬಿಕೊಂಡ ಜೋಳಿಗೆಯ
ತುದಿಗೊಂದು ತೂತು.
ಕೊರೆದಿದ್ದು ಯಾರು!
ಆರೋಪ ಪ್ರತ್ಯಾರೋಪ,
ಹೆಕ್ಕಿಕೊಂಡರು ಯಾರೋ
ಉಳಿದದ್ದು ಮೌನ.

ಅದೆಂತಹ ವಿಧಾಯ ಹೇಳು
ಮತ್ತೆ ಮತ್ತೆ ಸೇರಿಕೊಳ್ಳುವ
ಶರಧಿ,ನದಿ ನಡುವೆ.
ಕೈಲಿಟ್ಟ ಕೊನೆಯ ಓಲೆಯಲಿ
ಏನಿತ್ತು!
ತುರುಕಿ ನಡೆದಾಗ ಎದುರಾಗಿದ್ದು
ಯಾರದ್ದೋ ಶಾಪ,
ಒಲವಿನೋಲೆಯಂತೆ ಮನಸೂ ಮುದುಡಿ,
ಅದೇ ತಿರುವಿನ-
ಹರಿವ ತೊರೆಯಲಿ ಎಸೆದ
ಪ್ರೇಮ ಪತ್ರ,
ಖಾತ್ರಿಯಿಲ್ಲ ಕಡಲು ಸೇರಿದ್ದಕ್ಕೆ.

ಇಂದು ನೀನೇ ಇದ್ದಿದ್ದರೆ!
ಇರಬೇಕಿತ್ತು ನೀನೇ,,
ಎಂದು ಕೊನೆಯಾಗುವ
ಪ್ರತಿಕ್ಷಣದ ಭಾವ
ಕಾಡುವ ಅಭಾವ.

ನವಿಲು ಗರಿ ಸವರಿ ಕೊಟ್ಟ ಪತ್ರಕ್ಕೆ
ಆಗಾಗ ಗರಿ ಬಿಚ್ಚುವಗಳಿಗೆ
ಭಯದ ನೆರಳಿನಲಿ,
ಕೊಚ್ಚಿ ಹೋದ ಅಕ್ಷರಗಳ
ಹುಡುಕಾಟದಲಿ,
ವಯಸ್ಸಾಗಿದೆ ಈಗ ಪ್ರೇಮಕ್ಕೂ-
ಪ್ರೇಮ ಪತ್ರಕ್ಕೂ
ಆದರೇನಂತೆ?
ದೂರ ತೀರವ ಮರೆತು
ನಡುವೆ ಹರಿವ ನದಿಯ ಶಾಂತ
“ಅದಿನ್ನೂ ಜೀವಂತ”..


About The Author

2 thoughts on “ಸ್ಮಿತಾ ರಾಘವೇಂದ್ರ”

Leave a Reply

You cannot copy content of this page