ಚಂದ್ರಾವತಿ ಬಡ್ಡಡ್ಕ

ವ್ಯಾಲಂಟೈನ್ ವಿಶೇಷ

ಚಂದ್ರಾವತಿ ಬಡ್ಡಡ್ಕ

ಪ್ರೀತಿಗೊಂದು ಎಲ್ಲೆ ಎಲ್ಲಿದೆ…..?

ಎಲ್ಲರೆದೆಯೊಳು ಸ್ಫುರಿಸೋ ಪ್ರೀತಿಗೊಂದು ಎಲ್ಲೆ ಎಲ್ಲಿದೆ…..?
ಬುದ್ಧಿಯ ಪ್ರಶ್ನೆ
ನಿಂಗೇನು
ಹದಿನೆಂಟೇ?
ಭಾವದ ತರ್ಕ
ಪ್ರೀತಿಗೆ
ವಯಸ್ಸುಂಟೇ?

ಪ್ರೀತಿ ಮೂಡುವ ಹೊತ್ತು, ಅಲ್ಲಿ ಭಾವನೆಗಳದ್ದೇ ಗತ್ತು. ಯಾರಿಗೆ ಗೊತ್ತು; ಇದು ಯಾವಾಗ, ಯಾರೊಳಗೆ, ಎಲ್ಲಿ ಹುಟ್ಟುತ್ತೆ ಎಂಬುದು. ಜೀವನದಲ್ಲಿ ಒಮ್ಮೆಯಾದರೂ ಮನದೊಳಗೆ ಹರ್ಷದ ಚಿಲುಮೆಯುಕ್ಕಿಸುವ ಒಂದು ಸುಮಧುರ ಅನುಭೂತಿಯ ಆವಾಹನೆಗೆ ಒಳಗಾಗದವರು ಯಾರಾದರೂ ಇದ್ದಾರೆಯೇ? ಅದು ವ್ಯಕ್ತವಾಗಿರಬಹುದು ಇಲ್ಲ ಅವ್ಯಕ್ತವಾಗಿರಬಹುದು.

ಈ ಪ್ರೀತಿಯ ಶಕ್ತಿಯಾದರೂ ಎಂತತ್ತು? ಮನ-ಮನಗಳನ್ನು ಹುರುಪಿನಿಂದ ಹುರಿಗೊಳಿಸುವ, ಹರಿತಗೊಳಿಸುವ ಶಕ್ತಿ ಅದಕ್ಕಿದೆ. ಮನದಲ್ಲಿ ಮೊಳಕೆಯೊಡದ ಪ್ರೀತಿ ಮನದೊಡೆಯ ಅಥವಾ ಮನದೊಡತಿಗೆ ಅಗಾಧ ಶಕ್ತಿಯನ್ನು ತುಂಬುತ್ತದೆ. ಸಾಹಸಕ್ಕೆ ಪ್ರೇರಣೆ ನೀಡುತ್ತದೆ. ಪ್ರೀಗಾಗಿ ರಾಜ್ಯ ಕಟ್ಟಿದವರಿದ್ದಾರೆ, ಕಳಕೊಂಡವರಿದ್ದಾರೆ. ಯುದ್ಧಗಳು ನಡೆದುಹೋಗಿವೆ. ಪುರಣಾಗಳು ಸೃಷ್ಟಿಯಾಗಿವೆ…. ಅಲ್ಲದೆ ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ಉಚಿತವೇ ಎಂಬ ಗಾದೆಯೂ ಹುಟ್ಟಿಕೊಂಡಿದೆ.

ಆರಂಭದಲ್ಲೇ ಹೇಳಿರುವಂತೆ ಪ್ರೀತಿಗೆ ಯಾವ ಹಂಗೂ ಇಲ್ಲ (ಪ್ರೀತಿಸಿದವರಿಗೆ ಇರಬಹುದು). ಜಾತಿ, ಧರ್ಮ, ಪ್ರಾಂತ್ಯ, ಬಣ್ಣವನ್ನು ಮೀರಿ ನಿಂತ ಆಕಾರವಿಲ್ಲದ, ಬಣ್ಣವಿಲ್ಲದ, ಪರಿಮಳವಿಲ್ಲದ, ಕಣ್ಣಿಗೆ ಕಾಣದ, ಹೃದಯವನ್ನು ತಟ್ಟುವ, ಕಲಕುವ, ಮೀಟುವ, ಕಾಡುವ, ಅದೊಂದು ಮಾತಿಗೆ ನಿಲುಕದ ಭಾವ-ಅನುಭೂತಿ ಮಾತ್ರ. ಈ ಪ್ರೀತಿ ಬರಿಯ ಹದಿಹರಯದವರನ್ನು ಮಾತ್ರ ಕಾಡುವುದಲ್ಲ; ಅದು ಮುದಿ ಹರೆಯದವರನ್ನು ಬಿಟ್ಟಿಲ್ಲ!

ಅಹಿಂಸಾ ತತ್ವವನ್ನೇ ಅನುಸರಿಸಿ, ಸಾರಿ, ಈ ಮೂಲಕ ಹೋರಾಟ ಸಾಧ್ಯ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಗಾಂಧೀಜಿ. ಸುದೀರ್ಘ ಕಾಲದ ಹೋರಾಟಕ್ಕೆ ವ್ಯೂಹ, ಕಾರ್ಯತಂತ್ರಗಳನ್ನು ರೂಪಿಸಿದವರು. ಅಸಂಖ್ಯ ಅನುಯಾಯಿಗಳನ್ನು ತನ್ನ ನಡೆ-ನುಡಿ, ಜೀವನ ಶೈಲಿಯ ಮೂಲಕವೇ ಸೆಳೆದ ಗಾಂಧೀಜಿಯವರೂ ಪ್ರೀತಿಯ ಸೆಳತಕ್ಕೆ ಶರಣಾದವರು.

ಅವರ ಕುಟುಂಬದ ಸದಸ್ಯರಿಗೆ ಮುಜುಗರವಾಗಿರುವಂತಹ ಪ್ರೇಮ ಸಂಬಂಧವೊಂದನ್ನು ಅವರು ಹೊಂದಿದ್ದರು ಎಂಬುದಾಗಿ ಅವರ ಮೊಮ್ಮಗ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ‘ಮೋಹನ್ ದಾಸ್: ಎ ಟ್ರೂ ಸ್ಟೋರಿ ಆಫ್ ಎ ಮ್ಯಾನ್’ ಎಂಬ ಪುಸ್ತಕದಲ್ಲಿ ಅವರು ಈ ಆಸಕ್ತಿಯ, ಕುತೂಹಲದ ಅಂಶವನ್ನು ತೆರೆದಿರಿಸಿದ್ದಾರೆ. ಅದೂ ಸಹ ಅವರು 50ರ ಹರೆಯದಲ್ಲಿ ಪ್ರೇಮದ ಬಲೆಗೆ ಬಿದ್ದಿದ್ದರು, 29ರ ಹರೆಯದ ಕವಯತ್ರಿಯೊಬ್ಬರಿಗೆ ಮನ ಸೋತಿದ್ದರು ಮತ್ತು ತಮ್ಮ ಪ್ರೀತಿಯನ್ನು ‘ಕಾಣಲು’ ಪದೇಪದೇ ಲಾಹೋರಿಗೆ ಭೇಟಿ ನೀಡುತ್ತಿದ್ದರಂತೆ. ಅಲ್ಲದೆ ಗಾಂಧೀಜಿಯವರ ದಿನಚರಿ ಪುಸ್ತಕದಲ್ಲೂ ಈ ಕವಯತ್ರಿಯ ಬಗ್ಗೆ ಮೆಚ್ಚುಗೆಯ ಸಾಲುಗಳು ಮೂಡಿಬಂದಿವೆ ಎನ್ನಲಾಗಿದೆ.

ಪ್ರೀತಿಯ ಬಗ್ಗೆ ಮಾತನಾಡುವಾಗ ಕೃಷ್ಣ-ರಾಧೆಯರ ಉದಾಹರಣೆ ಬಂದೇಬರುತ್ತದೆ. ಲೋಕೋದ್ಧಾರಕ, ಭಗವದ್ಗೀತೆಯನ್ನು ಬೋಧಿಸಿದ ಶ್ರೀಕೃಷ್ಣ ಪರಮಾತ್ಮನ ಪ್ರೀತಿ ಆರಾಧಿಸಲ್ಪಡುತ್ತದೆ. ಪ್ರೀತಿ-ಪ್ರೇಮ-ಪ್ರಣಯ ಅಂದಾಗ ಪುರಾಣದ ದುಶ್ಯಂತ –  ಶಾಕುಂತಲೆ ಗೋಚರಿಸುತ್ತಾರೆ. ತನ್ನ ಪ್ರೀತಿಯ ಕುರುಹಾಗಿ ಶಹಜಹಾನ್ ಕಟ್ಟಿಸಿದ ಜಗತ್ತಿನ ಅಚ್ಚರಿಯಾಗಿ ನಿಂತಿರುವ ಭವ್ಯವಾದ ಅತಿ ಸುಂದರವಾದ ಅಮೃತಶಿಲೆಯ ತಾಜ್‌ಮಹಲ್ ಶಹಜಹಾನ್-ಮುಮ್ತಾಜ್ ಪ್ರೇಮವನ್ನು ಸಾರುತ್ತದೆ.

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಪ್ರೀತಿಯ ಬಲೆಗೆ ಬಿದ್ದಿದ್ದರು. ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್‍ಬ್ಯಾಟನ್ ಅವರ ಪತ್ನಿ ಎಡ್ವಿನಾ ಬ್ಯಾಟನ್ ಮತ್ತು ನೆಹರೂ ನಡುವಣ ಪ್ರೀತಿ ಒಂಥರಾ ಓಪನ್ ಸೀಕ್ರೆಟ್! ಈ ಜೋಡಿಯ ಪ್ರೇಮಪ್ರಕರಣ ಹಲವಾರು ಪುಸ್ತಕಗಳಲ್ಲಿ ದಾಖಲಾಗಿದೆ. ಇವರಿಬ್ಬರ ನಡುವೆ ಓಡಾಡಿದ ನೂರಾರು ಪ್ರೇಮಪತ್ರಗಳನ್ನು ‘ಎಡ್ವಿನಾ ಮೌಂಟ್‌ಬ್ಯಾಟನ್: ಎ ಲೈಫ್ ಆಫ್ ಹರ್ ಓನ್ (Edwina Mountbatten: A Life of Her Own) ಪುಸ್ತಕ ಓದುತ್ತದೆ.

ಪ್ರೀತಿ-ಪ್ರೇಮದ ವಿಷಯಕ್ಕೆ ಬಂದರೆ ನೆಹರೂ ಕುಟುಂಬದ ಪ್ರೇಮಗಾಥೆಗಳು ಮುಂದುವರಿಯುತ್ತಲೇ ಹೋಗಿವೆ. ನೆಹರೂ ಪುತ್ರಿ ಇಂದಿರಾ ಗಾಂಧಿಯವರೂ ಅವರು ವರಿಸಿದ ಫಿರೋಜ್ ಖಾನ್ ಅವರ ಪ್ರೇಮಪಾಶಕ್ಕೆ ಬಿದ್ದಿದ್ದರು ಎಂದು ಹೇಳಲಾಗುತ್ತದೆ. ವ್ಯಾಪಾರ ವೃತ್ತಿಯನ್ನು ಹೊಂದಿದ್ದ ಫಿರೋಜ್ ಕುಟುಂಬ ನೆಹರೂ ಕುಟುಂಬಕ್ಕೆ ಹತ್ತಿರವಾಗಿತ್ತು. ನವಾಬ್ ಖಾನ್ ಪುತ್ರ ಫಿರೋಜ್ ಖಾನ್ ವಿವಾಹದ ನಂತರ ಫಿರೋಜ್ ಗಾಂಧಿ ಆಗಿ ಹೆಸರು ಬದಲಿಸಿಕೊಂಡರು ಎಂಬುದಾಗಿ ಪುಸ್ತಕ ಒಂದರಲ್ಲಿ ಉಲ್ಲೇಖಿಸಲಾಗಿದೆ.

ಇಂದಿರಾ ಪುತ್ರರಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಅವರದ್ದೂ ಸಹ ಪ್ರೇಮವಿವಾಹವೇ. ರಾಜೀವ್ ಗಾಂಧಿಯೆಡೆಗಿನ ಸೋನಿಯಾ ಗಾಂಧಿಯವರ ಪ್ರೇಮ ಅವರನ್ನು ಈ ರಾಷ್ಟ್ರದ ಅತ್ಯುನ್ನದ ಪದವಿಯ ಅತ್ಯಂತ ಸನಿಹಕ್ಕೆ ತಂದು ನಿಲ್ಲಿಸಿದೆ. ರಾಜೀವ್ ಪುತ್ರಿ ಪ್ರಿಯಾಂಕ ಗಾಂಧಿ ಸಹ ತಾನು ಪ್ರೀತಿಸಿದ ರಾಬರ್ಟ್ ವಾದ್ರಾರನ್ನು ವರಿಸಿ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ರಾಹುಲ್ ಗಾಂಧಿ ಅವರೂ ಪ್ರೀತಿಯಲ್ಲಿ ಬಿದ್ದವರೇ ಆದರೂ, ಅವರ ಪ್ರಿಯತಮೆ ವಿದೇಶದವರಾಗಿದ್ದು ಅವರ ಪೌರತ್ವ ಇವರ ರಾಜಕೀಯ ಜೀವನಕ್ಕೆ ಅಡ್ಡಿಯಾಗಬಹುದೆಂದು ಪ್ರೇಮ ಸಾಫಲ್ಯಕ್ಕೆ ಅಡ್ಡಿಯಾಗುತ್ತಿದೆ ಎಂಬುದಾಗಿ ಕೆಲವು ವರ್ಷಗಳ ಹಿಂದೆ ಕೆಲವು ಪತ್ರಿಕೆಗಳು ಗುಸುಗುಸು ಸುದ್ದಿಮಾಡಿದ್ದವು.

ಹೀಗೆ ಸಾರ್ವಕಾಲಿಕವಾದ, ಸಾರ್ವತ್ರಿಕವಾದ, ಚಿರಂತನವಾಗಿರುವ ಪ್ರೀತಿ ಸೋಕದ ತಾಕದ ಹೃದಯಗಳು ಇವೆಯಾ? ಸಾಫಲ್ಯ, ವೈಫಲ್ಯ, ಏಕಮುಖ, ದ್ವಿಮುಖ ಇವುಗಳನ್ನೆಲ್ಲ ಬದಿಗಿಟ್ಟು ಬರಿಯ ಪ್ರೀತಿಯ ಬಗ್ಗೆ ಮಾತ್ರ ಯೋಚಿಸಿದರೆ ಈ ಸುಂದರ ಅನುಭೂತಿಯನ್ನು ಅನುಭವಿಸದ ಮನುಜರೇ ಎಲ್ಲ ಎಂದು ಒಂದೇ ಏಟಿಗೆ ಹೇಳಬಹುದು. ಪ್ರೀತಿಗೆ ಘಟಾನುಘಟಿಗಳು, ಅಥವಾ ಹುಲುಮಾನವರು, ಬಡವ ಬಲ್ಲಿದನೆಂಬ ಭೇದ ಇಲ್ಲವೇ ಇಲ್ಲ!

ಒಲಿದ ಜೀವ ಜತೆಯಲಿರಲು ಬಾಳು ಸುಂದರ ಎಂಬುದಾಗಿ ಬೆಂಕಿಯ ಬಲೆ ಚಿತ್ರಕ್ಕಾಗಿ ಎಸ್ಪಿ ಬಾಲಸುಬ್ರಹ್ಮಣ್ಯನ್ ಹಾಗೂ ಎಸ್ ಜಾನಕಿಯವರು ಹಾಡಿದ ಗೀತೆಯನ್ನು ಚಿ ಉದಯ ಶಂಕರ್ ರಚಿಸಿದ್ದಾರೆ. ಎಷ್ಟು ಚೆಂದದ ಗೀತೆ! ಅದೇನೇ ಇರಲಿ, ಒಲಿದ ಜೀವ ಜತೆಯಲಿ ಇರುವ ಆ ಕ್ಷಣ ನಿಜಕ್ಕೂ ಸುಂದರ ಅತಿ ಮಧುರ!


2 thoughts on “ಚಂದ್ರಾವತಿ ಬಡ್ಡಡ್ಕ

  1. ರಾಷ್ಟ್ರ ನಾಯಕರ ಪ್ರೀತಿಯ ಒಳಗುಟ್ಟಿನ ಜತೆ ಗುಡಿಸಿಲಿನ ಅಮರಪ್ರೇಮದ ಕಥೆ ಅಳಿದು ಹೋಗದೆ ಇರಲಿ.ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಗಟ್ಟಿತನದಿಂದ ಜಂಟಿಯಾಗಿ ಬಾಳ್ವೆ ನಡೆಸುವ ಪರಿ ಯಾವ ಷಹಜಹಾನ್ ಮುಮ್ತಾಜ್ ಗೂ ಕಡಿಮೆ ಅಲ್ಲ.ಚೆನ್ನಾಗಿ ನಿರೂಪಿಸಿರುವಿರಿ.ವಂದನೆಗಳು.

Leave a Reply

Back To Top