ವ್ಯಾಲಂಟೈನ್ ವಿಶೇಷ
ವಾಣಿ ಭಂಡಾರಿ
ಮನದಾಳದ ಪ್ರೀತಿಗೆ ದಿನವೂ ಪ್ರೇಮಿಗಳ ದಿನವೇ”
ಅಬ್ಬಾ!! ಅದ್ಯಾವ ಧೈರ್ಯದಿಂದ “ಐ ಲವ್ ಯು” ಅಂತ ಹೇಳಿದ್ದೆ ನೀನು.ನಿನ್ನ ಪರಿಚಯವಾಗಿ ಕೇವಲ ಒಂದು ತಿಂಗಳು ಕೂಡ ಆಗಿರಲಿಲ್ಲ.ಅದಕ್ಕೂ ಹೆಚ್ಚಾಗಿ ನಿನ್ನನ್ನು ಮೂಖತಃ ನಾನು ನೋಡಿಯೇ ಇರಲಿಲ್ಲ. ಕೇವಲ ಪೋನ್ ನ ಮೂಲಕ ಮಾತುಕತೆ ನಡೆಯುತ್ತಿದ್ದ ಆ ಸಮಯದಲ್ಲೆ ನನ್ನೊಳಗಿನ ಭಾವಪರಧಿಯನ್ನು ಲೆಕ್ಕಿಸದೆ ನಿನ್ನಂತರಂಗದ ಭಾವಕೋಶಗಳನ್ನು ನನ್ನೊಳಗೆ ಬಿತ್ತಲು ನಿವೇದಿಸಿಕೊಂಡಿದ್ದು ನನಗೆ ಭಯ ಹುಟ್ಟಿಸಿತ್ತು ಮಾರಾಯ.ನಾನು ನಿನ್ನನ್ನು ನೋಡಿರಲಿಲ್ಲ ನಿಜ ಆದರೆ ನೀನು ನನ್ನ ಪ್ರತಿಯೊಂದು ಚಲನವಲನಗಳನ್ನು ನಿನ್ನ ಹದ್ದಿನ ಕಣ್ಣಿನೊಳಗೆ ಸೆರೆಹಿಡಿಯುತ್ತಿರುವ ವಿಚಾರ ಪೆದ್ದಿಯಾದ ನನಗೆ ತಿಳಿಯದೆ ಇರುವುದು ಅಚ್ಚರಿ ಆದ್ರು ಸತ್ಯ.ತಿಂಗಳು ವರ್ಷಗಳೆನ್ನದೆ ಭಗೀರಥನಂತೆ ನನ್ನದೊಂದು ಕಿರುನೋಟಕ್ಕಾಗಿ ಕಾದುಕುಳಿತ ಅಮರಪ್ರೇಮಿ ನೀನು.
ಬಹುಶಃ ನಿನಗೆ ನಾನು ಮಾತಿಗೆ ಸಿಕ್ಕಾಗಲೆ ಸ್ವರ್ಗಕ್ಕೆ ಮೂರೆಗೇಣು ಎಂದು ಕೊಂಡಿರಬಹುದು. ಹಾಗಾಗಿ ನನ್ನ ಬಗ್ಗೆ ಎಲ್ಲ ತಿಳಿದ ನಿನಗೆ ಐ ಲವ್ ಯು ಎಂದು ಹೇಳುವುದು ಕಷ್ಟವೇನಿಸಲಿಲ್ಲ ಬಿಡು.ಅಷ್ಟು ವರ್ಷದ ನಿನ್ನ ಪ್ರೀತಿಯ ಹುಡುಕಾಟಕ್ಕೆ ದೇವರು ಕೊಟ್ಟ ವರ ಪ್ರಸಾದವೆಂಬಂತೆ ಕಣ್ಣಿಗೊತ್ತಿಕೊಂಡು ಮನದೊಳಗೆ ಮಂದಿರ ಕಟ್ಟಿ ನಿತ್ಯ ಪೂಜಿಸುತ್ತಿದ್ದ ಪ್ರೇಮ ಪೂಜಾರಿ ನೀನಾಗಿದ್ದ ಕಾರಣದಿಂದ ನಿನಗೆ ನನ್ನ ಹತ್ತಿರ ಸಲುಗೆಯಿಂದ ಮಾತಾಡಲು ಮುಜುಗರ ಆಗಲಿಲ್ಲ ಅನಿಸುತ್ತದೆ.ಯಾರೆ ನೀನು ಚಲುವೆಯಂತೆ ಕಣ್ಣಿಗೆ ಕಾಣದೆ ಇದ್ದರೂ ನೂರೊಂದು ನೆನಪುಗಳನ್ನು ಚಿತ್ರಿಸಿ ಬದುಕಿನ ಪಯಣದಲ್ಲಿ ಜೊತೆಯಾಗಬೇಕೆಂದು ಬಯಸಿದವನು ನೀನಲ್ಲವೇ.ಆದರೆ ನಿನ್ನ ವಿಚಾರವೇನೆಂದು ತಿಳಿಯದ ನಾನು ಹೇಗೆ ತಾನೆ ಒಪ್ಪಿ ಕೊಳ್ಳಲು ಸಾಧ್ಯವಿತ್ತು ಹೇಳು ನೋಡೋಣ.ನಾನು ನಿಜಕ್ಕೂ ಆ ದಿನ ಭಯ ಆತಂಕ ದಿಗಿಲಿನಿಂದ ಕಂಗಲಾಗಿದ್ದೆ. ಆ ಕಾರಣದಿಂದಲೇ ಐ ಹೆಟ್ ಯು ಅಂದಿದ್ದೆ. ಬಹುಶಃ ನಿನ್ನೊಳಗಿನ ಭಾವತೀವ್ರತೆಗೆ ಅದೆಷ್ಟು ಘಾಸಿಯಾಗಿತ್ತೊ ನಾ ಅರಿಯದಾದೆ.”ಈ ಪುರುಷರೇ ಹೀಗೆ” ಎಂಬ ಹಣೆಪಟ್ಟಿ ಕೊಟ್ಟು ಕೊಂಡೆಯಾದರೂ ಒಳಮನಸ್ಸು ನೀನು ಅಂತವನಲ್ಲ ಎಂದೆ ಸಾರಿ ಸಾರಿ ಹೇಳುತ್ತಿತ್ತು. ನಮ್ಮಿಬ್ಬರ ನಡುವಿನ ಕಂದಕ ದೂರವಾದ ಮೇಲಂತು ಮೊದಲ ಭೇಟಿ ಮೊದಲ ನಗು ಮೊದಲ ಕಣ್ಣೋಟ ನಿನ್ನ ಹತ್ತಿರಕ್ಕೆ ಸೆಳೆಯುವಂತೆ ಮಾಡಿದ್ದು ಸುಳ್ಳಲ್ಲ ಹುಡುಗ.ಹಾಗಂತ ನಾನು ಅಷ್ಟು ಸುಲಭಕ್ಕೆ ಪ್ರೀತಿಸುವ ಮಾತು ನೀಡದಾದೆ. ನಾವು ಹೆಣ್ಮಕ್ಳೆ ಹಾಗೆ ಅಲ್ವಾ, ಎಲ್ಲ ಕೋನಗಳಿಂದನೂ ಅಳೆದು ಸುರಿದು ದೃಷ್ಟಿ ಹರಿಸುವುದು ಸಹಜ ತಾನೆ.
ಒಪ್ಪಿಗೆ ಸೂಚಿಸಲೆಂದೆ ವರ್ಷಾನುಗಟ್ಟಲೆ ಕಾಯಿಸಿದ ಪರಮಪಾಪಿ ಅನಿಸುತ್ತದೆ ಒಮ್ಮೊಮ್ಮೆ. ಆದರೂ ಪ್ರೀತಿಯ ಪಕ್ವತೆಯನ್ನು ಅಳೆಯದೆ ಅಮರ ಪ್ರೇಮಿಗಳಾಗುವುದಾದರೂ ಹೇಗೆ ಅಂತಿಯಾ?.ನಾನು ಮೊದಲೆ ಕೋಪಿಷ್ಟೆ,ನೀನು ನನಗಿಂತ ಕೋಪಿಷ್ಟನಾದ್ರು ನಿನ್ನ ಜೀವದ ಒಂದು ಭಾಗವಾಗಿ ನನ್ನ ಕೋಪವನ್ನೆಲ್ಲ ಕರಗಿಸಿ ಬಿಟ್ಟು ಇಬ್ಬನಿಯ ಹನಿಬಿಂದುವಂತೆ ಮೆಲ್ಲಗೆ ಅಪೋಷನ ಮಾಡುತ್ತಾ ಲಲ್ಲೆಗರೆಯುವಾಗಲೇ ನಾ ಸಂಪೂರ್ಣ ಸೋತು ಶರಣಾಗಿದ್ದು ಕೂಡ ನನಗೆ ತಿಳಿಯದಂತಾಯ್ತು ಹುಡ್ಗ. ಆ ದಿನ ನನ್ನ ಅಭಿಮತ ನಿನಗೆ ತಿಳಿಸಿದಾಗ ನೀ ಅದೆಷ್ಟು ಸಂತಸ ಖುಷಿಯಿಂದ ಕುಣಿದು ಕುಪ್ಪಳಿಸಿದ್ದೆ.ಆಗಸವೆ ಧರೆಗಿಳಿದು ಬಂದಂತೆ ಮೇಘದೂತರು ಸಂದೇಶ ತಂದಂತೆ,ಅದುವರೆಗೂ ಹಬ್ಬಿದ ಕಾರ್ಮೋಡ ಹರಿದಂತೆ,ನನ್ನಂತರಂಗದ ಮನದರಸಿ ಎಂದೆ ಉಬ್ಬಿಹೋಗಿದ್ದು ಕಂಡಾಗ ಪ್ರೀತಿಗೆ ಇಷ್ಟೊಂದು ಶಕ್ತಿಯಿದೆಯಾ ಎಂದು ವಿಸ್ಮಯ ಅನಿಸುತ್ತಿತ್ತು.”ನೀ ಇರದ ಜಾಗವೆಲ್ಲಿ ಹೇಳು ಪೆದ್ದು ಪೆದ್ದು ಮಾತನಾಡೊ ನನ್ನ ಮುದ್ದು ಜಾಣೆ, ಭಾವದಲ್ಲಿ ಬೆರತ ಗಂಧವಾಗಿದ್ದಿ” ಎಂದಾಗಲೆಲ್ಲ ಮನವು ರಾಧ-ಮಾಧವರ ನೆನಪಾಗುತ್ತಿತ್ತು.ಜಗಕ್ಕೆ ಸಾರಿದ ರಾಧ-ಕೃಷ್ಣರ ಪ್ರೇಮ ಅದೆಷ್ಟು ಪವಿತ್ರ ಎನಿಸುತ್ತಿತ್ತು.
ನಮ್ಮಿಬ್ಬಿರ ಪ್ರೀತಿಯ ನಡುವೆ ಸಾಸಿವೆ ಕಾಳಿನಷ್ಟು ಗೊಜಲು ಗೊಂದಲ ಅನುಮಾನ ಬರಬಾರದು.ಸಣ್ಣ ಮರಳಕಾಳು ಕೂಡ ಸೋಕದಂತೆ ಜತನ ಮಾಡಿ ಮುಂದಿನ ಜನ್ಮಕ್ಕೂ ಕಾಯ್ದಿರಿಸೋಣ ಸಖಿ,
“ನೀನು ನನ್ನ ಮನಸಿನಿಂದ ಸಿಕ್ಕ ಪ್ರೀತಿ,ಮನಸಾರೆ ಹೃದಯದಿಂದ ಪ್ರೀತಿಸಿದ ಪ್ರೀತಿ”.
ಬೆಳಕಿನ ಮೇಲೆ ಹೂ ನಗೆ ನಕ್ಕವಳು ನೀನು
ಹೊಂಗೂದಲು ಹರವಿ ಕಣ್ಣು ಮಿಟಕಿಸಿದವಳು
ಮುಂಜಾವಿನ ಹೊಂಬಿಸಿಲಲಿ ತಣ್ಣನೆಯ ಹೆಜ್ಜೆ ಹಾಕುತ್ತ ಬಾಗಿಲ ತೆರೆದು ಸುಳಿಗಾಳಿಯಂತೆ
ಮೆಲ್ಲಗೆ ಮಕಮಲ್ಲಿನ ಮುಖದಾರತೀಯ
ಹೊತ್ತು ಒಳ ಬಂದವಳು ನೀನು.
ಎಂದೆನುತ್ತಲೇ,,, ನನ್ನ ಹೃದಯ ಕದ್ದ ಚೋರ ನೀನಾಗಿ ಬಿಟ್ಟೆಯಲ್ಲ ಹುಡ್ಗ. ನಿನ್ನ ಕುರಿತು ಏನೆಂದು ಹೇಳಲಿ, ಎಷ್ಟೆಂದು ಹೇಳಲಿ ಏನೇ ಹೇಳಿದರೂ ಕಡಿಮೆಯೆ.ಧ್ಯಾನಸ್ಥವಾದ ನಿನ್ನ ಮನದ ತುಂಬಾ ತುಂಬಿದ ಆ ಪಾರ್ವತಿ ನಾನೇ ಎಂದಾದ ಮೇಲೆ ಏನೆಂದು ಹೇಳಲಿ ಕೇವಲ ಮಾತಿನ ಮೂಲಕ.ಮಾತಿಗೆ ನಿಲುಕದ ಅಪರಿಮಿತ ಅನಂತ ನಿರಾಕಾರವಾದ ಸ್ವರೂಪದಲ್ಲಿ ಎಲ್ಲವೂ ಐಕ್ಯವಾಗಿರುವಾಗ ನೀನೊಂದು ವಿಸ್ಮಯ ಅಚ್ಚರಿಯ ಬೆಳಕು.
ಪಂಪನ ಕೃತಿಯಲ್ಲಿ ಕಾಣುವ ಸಜ್ಜೆ ಕೋಣೆಯಲ್ಲಿ ದಂಪತಿಗಳ ಬಲಿ ತೆಗೆದುಕೊಂಡ ಧೂಪ ಅವರಿಬ್ಬರನ್ನು ಅಗಲಿಸದೆ ಕೊಂಡೋಯ್ದಿರುವುದು ಇಂದಿಗೂ ಲೋಕಮಾನ್ಯವಾದಂತೆ ನಾಳೆ ನಮಗೆ ಯಾವುದೇ ಆಗಲಿಕೆಯ ನೋವು ಬಾರದಂತಿರಲಿ. ಬಂದರೂ ಅಂತಹ ವಿರಹ ವೇದನೆಯ ನೋವು ತಟ್ಟದಂತೆ ಒಟ್ಟಿಗೆ ಸೆಳೆದೋಯ್ಯಲಿ ವಿದಿ ಎಂಬ ಅಚಲವಾದ ನಿನ್ನ ನಿಲುವು ಕಂಡಾಗಲೆಲ್ಲ ನಮ್ಮ ಪ್ರೀತಿಯ ಶುಭ್ರತೆಯ ತಿಳಿಯಾಗಸದಲ್ಲಿ ಸದಾ ಮಿಂಚುವ ತಾರೆಗಳಂತೆ ಬೆಳಗಬೇಕೆನಿಸುತ್ತದೆ ಕಣೋ.
ನಿನ್ನೆದೆಯಗಲದ ತುಂಬಾ ಮಕಮಲ್ಲಿಗೆ ಚೆಲ್ಲಿ ಸದಾ ಘಮಿಸಿ ಬೆಳಕ ನೀಡುವ ದೀಪದಂತೆ ಪ್ರಜ್ವಲಿಸಬೇಕೆಂಬ ಉಮೇದು ನನ್ನದು.ನಿನ್ನ ನುಡಿಗಳು ಕರ್ಣಾನಂದವನ್ನು ಮಾಡುವುದು ಹೊಸತೇನಲ್ಲವಾದರೂ ನಿನ್ನ ಕೀಟಲೆ ತುಂಟಾಟಗಳು ಸಿಹಿಸಾಗರದ ತುಂಬ ಹರಡಿರುವ ಮುತ್ತಂತ ಮಾತುಗಳು ಮತ್ತೆ ಮತ್ತೆ ಬೇಕೆನಿಸುತ್ತವೆ.ನಿ ದಕ್ಕಿದ ಆ ಕ್ಷಣದಿಂದಲೇ ನನ್ನ ಹೃದಯ ಸಾಮ್ರಾಜ್ಯದಲ್ಲಿ ಮನೆ ಮಾಡಿದ ಚಕ್ರವರ್ತಿ ನೀನಾಗಿಬಿಟ್ಟೆ. ನಿನಗೆ ಯಾವುದರ ಹಂಗಿರದೆ ನನ್ನೆಲ್ಲ ಸಾರ್ವಭೌಮತ್ವವನ್ನು ನಿನಗೆ ನೀಡಿರುವೆ.
ನಿನ್ನ ನೆನಪಿನ ಗಂಗೋತ್ರಿಯಲ್ಲಿ ದಿನವೂ ಮೀಯುತ್ತಿರುವ ನನಗೆ ಸದಾ ಪರಿಶುದ್ಧ ಪ್ರೇಮಜಲದ ಪ್ರೋಕ್ಷಣೆಯೇ ಆಗುತ್ತಿದೆ.ನಿನ್ನ ನೆನಪಗಳು ಸಮುದ್ರದಾಳದಲ್ಲಿ ಅಡಗಿ ಕುಳಿತಿರುವ ಮುತ್ತುಗಳಂತೆ.ಆ ಮುತ್ತುಗಳನ್ನೆತ್ತಿ ನನ್ನ ಹೃದಯದಲ್ಲಿ ಪೊಣಿಸುತ್ತಾ ಪೂಜಿಸಿ ಆರಾಧಿಸುತ್ತಿರುವಾಗಲೇ ನನ್ನನ್ನು ಅನಾಮತ್ತಾಗಿ ಎತ್ತಿ ನಿನ್ನ ಮನದ ಕೋಣೆಯ ಬೆಳಕಿನಲ್ಲಿ ಬಂಧಿಸಿರುವ ನಂದಾದೀಪ ನೀನು.ಸದಾ ನನ್ನ ಪ್ರೀತಿಯ ನಂದಾದೀಪ ದೇದಿಪ್ಯಮಾನವಾಗಿ ಉರಿದು ಜಗಕ್ಕೆ ಬೆಳಕ ನೀಡಲಿ.ನಮ್ಮ ಪ್ರೀತಿಯ ಬೆಳಕು ಜನ್ಮ ಜನ್ಮಾಂತರಕೂ ಅಮರಪ್ರೇಮವಾಗಿ ಪ್ರಭೆಯ ಹಬ್ಬುತ್ತಲೇ ಇರುತ್ತದೆ. ನಿತ್ಯವು ಪ್ರೇಮದ ಬೆಳಕನುಂಡು ಕಂಗೊಳಿಸುವ ನಮಗೆ ಪ್ರೇಮಿಗಳ ದಿನದ ಆಚರಣೆಯ ಅಗತ್ಯವೆ ಇಲ್ಲ ಅಲ್ಲವೆ ಸಖ.
ಚೆಂದದ ಬರೆಹ
ಚೆನ್ನಾಗಿದೆ
Nice