ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಮಾತೃಭಾಷೆಯ ನಂಟಸ್ತಿಕೆಗೆ

ಒಲವೇ ಮುಖ್ಯ..

ತರಗತಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಿಗೆ ತಮ್ಮ ಸುಂದರವಾದ ಕವಿತೆಯನ್ನು ಬರೆದು ತೋರಿಸಿದಾಗ ಆಶ್ಚರ್ಯಗೊಂಡು,

“ವ್ಹಾ..!! ಅದ್ಬುತ ಕವಿತೆ” ಎಂದು ಆ ವಿದ್ಯಾರ್ಥಿ ಕವಿಯನ್ನು ಪ್ರಾಧ್ಯಾಪಕರು ಹೊಗಳಿದರು. “ಆದರೆ ನನ್ನದೊಂದು ಸಲಹೆ ನೀನು ಕವಿತೆ, ಕಥೆ, ಕವನ ಏನೇ ಬರೆಯುವದಾದರೆ ಅದನ್ನು ನಿನ್ನ ಮಾತೃಭಾಷೆಯಾದ ಕನ್ನಡದಲ್ಲಿ ಬರೆದರೆ ತುಂಬಾ ಸೂಕ್ತವಾದೀತು” ಎಂದು ಪ್ರಾಧ್ಯಾಪಕರು ಸಲಹೆ ನೀಡುತ್ತಾರೆ.

ಇಂತಹ ಅಮೂಲ್ಯವಾದ ಸಲಹೆಯನ್ನು ಸ್ವೀಕರಿಸಿದಂತಹ ವಿದ್ಯಾರ್ಥಿ ಕವಿ ಬೇರೆ ಯಾರು ಅಲ್ಲ ಅವರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಕುವೆಂಪುರವರು..!!

ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಅದ್ಭುತ ಕೊಡುಗೆಯನ್ನು ನೀಡಿ, ಕನ್ನಡಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯವನ್ನು ಎತ್ತರಕ್ಕೆರಿಸಿದ ಹಲವಾರು ಕನ್ನಡ ಕವಿಗಳ ಕೊಡುಗೆ ಅನನ್ಯ.

ಭಾರತೀಯ ಸಾಹಿತ್ಯ ಲೋಕದಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡ ಮೊದಲನೇಯ ಸ್ಥಾನದಲ್ಲಿ ನಿಲ್ಲುತ್ತದೆ. ಇಂತಹ ಕನ್ನಡದ ನೆಲದಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ. ಮಾತೃಭಾಷೆ ಎಂದರೆ ತಾಯಿ ಭಾಷೆ. ಅದು ಎದೆಯ ಭಾಷೆ. ಹೃದಯ ಭಾಷೆ, ಪ್ರೀತಿಯ ಭಾಷೆಯ ಸಂಬಂಧ ಮಧುರವಾದುದು.

ಪರಕೀಯ ಭಾಷೆಗಳ ಒತ್ತಡ, ದಬ್ಬಾಳಿಕೆಯಾದಾಗ ಕನ್ನಡದ ನೆಲ, ಜಲ ಭಾಷೆಯ ಸಂಸ್ಕೃತಿಗೆ ಅದರ ಏಳಿಗೆಗೆ ಸದಾ ದುಡಿಯುವ ಒಂದು ವರ್ಗವೇ ಹುಟ್ಟಿಕೊಂಡಿರುವುದು ನಾವು ಹೆಮ್ಮೆಪಡಬೇಕಾದ ಅತ್ಯಂತ ಸಂತಸದ ಸಂಗತಿ. ನಮ್ಮ ನೆರೆಹೊರೆಯ ರಾಜ್ಯಗಳು ಕನ್ನಡದ ಅಸ್ಮತೀಯನ್ನು ಪ್ರಶ್ನಿಸಿದಾಗ ಕನ್ನಡಪರ ಹೋರಾಟಗಾರರು ತಮ್ಮ ಕುಟುಂಬವನ್ನು ಲೆಕ್ಕಿಸದೆ ಕನ್ನಡಕ್ಕಾಗಿ ಸದಾ ಹೋರಾಡಲು ಸಿದ್ದರಾಗಿರುತ್ತಾರೆ. ಅವರಿಗೆ ನಾವು ಸದಾ ಬೆಂಬಲವಾಗಿರಬೇಕು. “ಕನ್ನಡವೆಂದರೆ ನಮ್ಮುಸಿರು, ಕನ್ನಡವೇ ನಮ್ಮ ಬದುಕು” ಎಂದು ಎಷ್ಟೋ ಜನ ಸದಾ ಪೊಲೀಸ್ ಕಚೇರಿ, ನ್ಯಾಯಾಲಯಕ್ಕೆ ಅಲೆದಾಡುವುದನ್ನು ನಾವು ಕಾಣುತ್ತೇವೆ. ಇದು ಕನ್ನಡ ಭಾಷೆ ಮಾತೃಭಾಷೆಗೆ ಇರುವ ಅನನ್ಯತೆಯ ಸಂಕೇತವೆಂದೆ ಹೇಳಬಹುದು.

ಮಾತೃಭಾಷೆಗಾಗಿ ಕೆಲವರು ಹೋರಾಟಕ್ಕಿಳಿದರೆ, ಇನ್ನೂ ಕೆಲವರು ಸಾಹಿತ್ಯದ ಮೂಲಕ ಕನ್ನಡವನ್ನು ಕಟ್ಟಿದ್ದಾರೆ. ಚಳುವಳಿಗಳು, ಸಾಹಿತ್ಯದ ಕಮ್ಮಟಗಳು, ಸಮ್ಮೇಳನಗಳು, ಕನ್ನಡದ ನೆಲ,ಜಲ,ಭಾಷೆಯ ಕುರಿತ ಗೋಷ್ಠಿಗಳು, ಸಾಹಿತ್ಯದ ಕಾರ್ಯಕ್ರಮಗಳು ಕನ್ನಡದ ಏಳಿಗೆಯನ್ನು, ಅಭಿವೃದ್ಧಿಯನ್ನು ಬಯಸುವ ವಿನೂತನವಾದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ನಾವು ನೋಡುತ್ತೇವೆ.

ಇಂದು ಯಾಂತ್ರಿಕೃತವಾದ ಬದುಕಿನಲ್ಲಿ ಮಾತೃಭಾಷೆಯ ಅನನ್ಯತೆಯನ್ನು ಗುರುತಿಸದೇ ನಾವು ತಪ್ಪು ಮಾಡುತ್ತಿದ್ದೇವೆ. ಮಾತೃಭಾಷೆಗೆ ತನ್ನದೇ ಆದ ಮಹತ್ವವಿದ್ದರೂ ‘ಪ್ರಾಥಮಿಕ ಶಿಕ್ಷಣ’ದಲ್ಲಿ ಒಂದರಿಂದ ಐದನೆಯ ತರಗತಿಯವರಿಗೆ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕಡ್ಡಾಯಗೊಳಿಸದಿರುವುದು ವಿಷಾದನೀಯ.

ಕನ್ನಡವನ್ನು ಒಂದು ಮುಖ್ಯ ಭಾಷೆಯನ್ನಾಗಿ ಇತರ ಆಂಗ್ಲ ಮಾಧ್ಯಮ, ಹಿಂದಿ ಮಾಧ್ಯಮ ಮತ್ತು ಬೇರೆ ಬೇರೆ ಮಾಧ್ಯಮಗಳಲ್ಲಿ ಓದುತ್ತಿರುವ ಮಕ್ಕಳಿಗೆ ಕನ್ನಡದ ಅಗತ್ಯತೆಯನ್ನು ಮನದಟ್ಟು ಮಾಡಬೇಕಾಗಿರುವುದು ಇಂದಿನ ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ. ‘ಕರ್ನಾಟಕದಲ್ಲಿ ಕನ್ನಡವೇ ಮುಖ್ಯ’ ನಮ್ಮ ರಾಜ್ಯದಲ್ಲಿ ಓಡಾಡುವ ಪ್ರತಿಯೊಬ್ಬ ಅನ್ಯ ಭಾಷಿಕರು, ವಾಸಿಸುವ ಪ್ರತಿಯೊಬ್ಬ ಅನ್ಯ ಭಾಷೆಯ ಸೋದರ ಸೋದರಿಯರು ಕನ್ನಡವನ್ನು ಕಲಿಯಬೇಕಾದ ಅಗತ್ಯತೆಯ ವಾತಾವರಣವನ್ನು ಸೃಷ್ಟಿ ಮಾಡುವದು ಕನ್ನಡಿಗರ ಪ್ರಮುಖ ಕೆಲಸವಾಗಿದೆ. ಆದರೆ ಇವತ್ತು ಅನ್ಯಭಾಷಿಕರು ಕನ್ನಡವನ್ನು ಕಲಿಯಲು ಮುಂದಾಗಿದ್ದರೂ ನಾವು ಅವರಿಗಿಂತಲೂ ಮುಂಚಿತವಾಗಿ ಅವರ ಮಾತೃಭಾಷೆಯಲ್ಲಿ ವ್ಯವಹರಿಸುವುದನ್ನು ಕಾಣುತ್ತೇವೆ. ಕೆಲವು ಗಡಿ ಜಿಲ್ಲೆಗಳಲ್ಲಿ ತೆಲುಗು ಭಾಷೆಯ ಪ್ರಭಾವ, ಇನ್ನೂ ಕೆಲವು ಗಡಿ ಜಿಲ್ಲೆಗಳಲ್ಲಿ ಮರಾಠಿ ಭಾಷೆಯ ಪ್ರಭಾವ ಅಲ್ಲದೆ ಕೊಂಕಣಿ, ತಮಿಳು, ಮಲಯಾಳಿ ಇನ್ನೂ ಮುಂತಾದ ಈ ಸಹೋದರ ಭಾಷೆಗಳು ನಮ್ಮ ರಾಜ್ಯವನ್ನು ಸುತ್ತುವರಿದು ವಿವಿಧ ಜಿಲ್ಲೆಗಳಿಗೆ ಲಗ್ಗೆಯಿಟ್ಟಿವೆ. ಇವುಗಳಲ್ಲದೆ ಹಿಂದಿ ಭಾಷೆಯು ಬೇರೆ ಬೇರೆ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿರುವುದಲ್ಲದೆ, ರಾಜಸ್ಥಾನ, ಉತ್ತರ ಪ್ರದೇಶದ ಅನ್ಯ ಭಾಷೆಯ ಸಹೋದರರು ಕನ್ನಡದ ನೆಲದಲ್ಲಿ ಇರುವಿಕೆಯನ್ನು ಗುರುತಿಸುವುದರ ಜೊತೆ ಜೊತೆಗೆ ಅವರನ್ನು ಕನ್ನಡದ ಕಾರ್ಯಕ್ಕೆ ಸಿದ್ಧ ಮಾಡಬೇಕಾಗಿರುವುದು ಕನ್ನಡಿಗರ ಪ್ರಥಮ ಆದ್ಯತೆ ಎಂದೇ ನಾವು ತಿಳಿಯಬೇಕು.

ಮಾತೃಭಾಷೆಯಲ್ಲಿ ಈ ಮೊದಲು ಶಿಕ್ಷಣ ನೀಡುವುದು ವ್ಯಾಪಕವಾಗಿತ್ತು. ಆದರೆ ಕಾಲ ಕ್ರಮೇಣ ಯಾಂತ್ರಿಕರಣ, ಜಾಗತೀಕರಣ ಮತ್ತು ಸಮೂಹ ಮಾಧ್ಯಮಗಳ ವಿಪರೀತವಾದ ಬಳಕೆಯಿಂದಾಗಿ ಇಂಗ್ಲಿಷ್ ಮತ್ತು ಹಿಂದಿಯ ಬಳಕೆ ತುಂಬಾ ಮಹತ್ವವಾದದ್ದೆಂದು ಭಾವಿಸಿಕೊಂಡು ನಮ್ಮ ಮಕ್ಕಳನ್ನು ಅನ್ಯ ಭಾಷೆಯ ಮಾಧ್ಯಮದಲ್ಲಿ ಶಿಕ್ಷಣವನ್ನು ಕೊಡಿಸುತ್ತಿರುವುದು ಅವರ ಮನೋವಿಕಾಸಕ್ಕೆ ಪಾಲಕರಾದ ನಾವೇ ಮಾರಕವಾಗಿರುವುದು ವಿಷಾದನೀಯ.

ಕನ್ನಡ ಶಾಲೆಗಳ ಮುಚ್ಚುವುದು, ಕನ್ನಡ ಮತ್ತು ಕನ್ನಡಿಗರ ಮೇಲೆ ಆಗುವ ದೌರ್ಜನ್ಯಗಳನ್ನು ಖಂಡಿಸುವುದು, ಕನ್ನಡ ನೆಲದ ಅಸ್ಮಿತಿಯನ್ನು ಪ್ರಶ್ನಿಸಿ ಕೆಲವು ಅನ್ಯ ಭಾಷಿಕರು ದಬ್ಬಾಳಿಕೆಯನ್ನು ಮಾಡಿದಾಗ ಅವರ ವಿರುದ್ಧ ಹೋರಾಟ ಮಾಡುವ ಛಲಗಾರರು ನಮ್ಮ ಕನ್ನಡದ ಹೋರಾಟಗಾರರು..!! ಕನ್ನಡದ ನೆಲದಲ್ಲಿಯೇ ಅನ್ಯ ಭಾಷೆಯ ಕೆಲವು ಪ್ರದೇಶಗಳನ್ನು ಅಕ್ರಮಣ ಮಾಡಿಕೊಳ್ಳಲು ಪ್ರಯತ್ನಪಡುತ್ತಲೇ ತಮ್ಮ ಇಷ್ಟ ಪ್ರದೇಶದ ಧ್ವಜವನ್ನು ಹಾರಿಸುವುದನ್ನು ನಾವು ಆಗಾಗ ಕಾಣುತ್ತೇವೆ. ಇಲ್ಲಿಯ ಅನ್ನ, ನೀರು, ಗಾಳಿಯನುಂಡು ಅನ್ಯ ಭಾಷೆಯ ಪ್ರೀತಿಯನ್ನು ಮೆರೆಯುವುದು, ಪರಕೀಯ ನೆಲದ ಸಂಕೇತಗಳನ್ನು ನೆಡುವುದರ ಮೂಲಕ ಭಾಷಾ ಸಾಮರಸ್ಯಕ್ಕೆ ಆಗಾಗ ಕೊಡಲಿ ಪೆಟ್ಟು ಬೀಳುತ್ತಿರುವುದು ವಿಷಾದನೀಯ. ಇಂತಹ ಸಮಯದಲ್ಲಿ ಪ್ರತಿಯೊಬ್ಬ ಕನ್ನಡಿಗನು ತಮ್ಮದೇ ಆಗಿರತಕ್ಕಂತಹ ಕರ್ತವ್ಯಗಳ ಮೂಲಕ, ಕಾರ್ಯಗಳ ಮೂಲಕ, ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದು ಮಾತೃಭಾಷೆಯ ಉಳಿವಿಗಾಗಿ ಕೊಡುಗೆಯನ್ನು ನೀಡಬೇಕಾಗಿದೆ.

ಆಯಾ ರಾಜ್ಯಗಳಲ್ಲಿ ಆಯಾ ಮಾತೃಭಾಷೆ ಪ್ರಧಾನವಾಗಿರಬೇಕೆನ್ನುವುದೇ ನಮ್ಮ ಒತ್ತಾಯ. ಕರ್ನಾಟಕದಲ್ಲಿ ಕನ್ನಡ, ಮಹಾರಾಷ್ಟ್ರದಲ್ಲಿ ಮರಾಠಿ, ಆಂಧ್ರಪ್ರದೇಶದಲ್ಲಿ ತೆಲುಗು,ತಮಿಳುನಾಡಿನಲ್ಲಿ ಮಲಯಾಳಿ… ಹೀಗೆ ಆಯಾ ಪ್ರದೇಶದ ಮಾತೃಭಾಷೆ ಬೆಳೆಯಬೇಕಾಗಿರುವುದು ಭಾರತದ ಒಕ್ಕೂಟದ ವ್ಯವಸ್ಥೆಗೆ ಪೂರಕವಾಗಿರುತ್ತದೆ. ಭಾಷೆಯ ಸಾಮರಸ್ಯ ಕೇರಳಿಸುವವರ ವಿರುದ್ಧ ಸದಾ ಧ್ವನಿ ಎತ್ತಬೇಕಾಗುತ್ತದೆ. ಕನ್ನಡದಲ್ಲಿ ವಾಸಿಸುವವರೆಲ್ಲರೂ ಕನ್ನಡಿಗರು..!! ಅವರೆಲ್ಲರೂ ಕನ್ನಡಕ್ಕಾಗಿ ಕೈಯೆತ್ತಬೇಕು. ಕನ್ನಡದ ಏಳಿಗೆಗಾಗಿ ಸದಾ ತುಡಿಯಬೇಕು. ಮಾತೃಭಾಷೆಯ ಒಲವು ಇಲ್ಲದೆ ಒಂದು ಭಾಷೆಯನ್ನು ಬೆಳೆಸಲು ಸಾಧ್ಯವಿಲ್ಲ.

“ಒಂದು ಭಾಷೆ ನಶಿಸಿದರೆ ಆ ಸಂಸ್ಕೃತಿಯೇ ನಾಶ” ಹಾಗಾಗಿ ವೈವಿಧ್ಯಮಯ ಭಾರತ ದೇಶದಲ್ಲಿ ಹಲವಾರು ಭಾಷಿಕರಿದ್ದೇವೆ. ಪ್ರತಿಯೊಂದು ಭಾಷೆಯೂ ಬೆಳೆಯಬೇಕಾಗಿರುವುದು ಆದ್ಯ ಕರ್ತವ್ಯ. ಆಗ ಭಾರತ ಸಂಪತ್ತು,ಸವಲತ್ತುಗಳನ್ನು ತುಂಬಿಕೊಂಡು ಸುಂದರ ಐಕ್ಯತೆಯ ನಾಡಾಗಬಲ್ಲದು.

ಭಾಷೆಯ ಹೆಸರಿನಲ್ಲಿ ಕೆಸರೆರಚ್ಚುವ ಆಟಕ್ಕೆ ನಾವು ಎಂದೂ ಮನ್ನಣೆ ನೀಡಬಾರದು.

ನಮ್ಮ ಮಾತೃಭಾಷೆ ಕನ್ನಡಕ್ಕೆ ಎರಡುವರೆ ಸಾವಿರ ವರ್ಷಗಳ ಇತಿಹಾಸವಿದೆ. ಪರಂಪರಾಗತವಾಗಿ ಬಂದಿರುವ ಭಾಷೆಯ ಸೊಗಸು, ನಾವಿನ್ಯತೆ, ಕನ್ನಡ ಭಾಷೆಯ ವಿವಿಧ ಸ್ಥಳಿಯ ಪ್ರಾದೇಶಿಕ ವೈವಿಧ್ಯಮಯ ಆಡುಭಾಷೆಯ ಉಚ್ಚಾರಣೆ, ಅಭಿವ್ಯಕ್ತಿ, ಸಾಹಿತ್ಯದ ವಿವಿಧ ಮಗ್ಗಲುಗಳು ಸದಾ ಜೀವಂತವಾಗಿರಿಸೋಣ. ನಮ್ಮ ಭಾಷೆಯನ್ನು ಇನ್ನೂ ಎತ್ತರಕ್ಕೆ ಬೆಳೆಸಬೇಕಾಗಿರುವುದು ನಮ್ಮ ಪ್ರಮುಖ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯ ಹೋರಾಟಗಾರರನ್ನು, ಸಾಹಿತಿಗಳನ್ನು, ಕನ್ನಡ ನೆಲ ಜಲದ ಉಳಿವಿಗಾಗಿ ಶ್ರಮಿಸುವವರನ್ನು ನಾವು ಗೌರವದಿಂದ ಕಾಣಬೇಕಾಗಿದೆ. ಎಲ್ಲಾ ಅಡ್ಡಗೋಡೆಗಳನ್ನು ಕೆಡವಿ ‘ಕನ್ನಡ ಒಂದೇ ಮುಖ್ಯ’, ‘ಕರ್ನಾಟಕದಲ್ಲಿ ಕನ್ನಡವೇ ಆದ್ಯ’ ಎನ್ನುವ ದಿವ್ಯ ಮಂತ್ರ ನಮ್ಮದಾಗಬೇಕು. ಕನ್ನಡದ ಒಲವು ನಮ್ಮ ಎಲ್ಲರೆದೆಯೊಳಗೆ ಇಳಿಯಬೇಕು. ಆಗ ಕನ್ನಡದ ಕಂಪು ಜಗತ್ತಿನಾದ್ಯಂತ ಇನ್ನೂ ಹೆಚ್ಚು ಹೆಚ್ಚಾಗಿ ಹರಡಬಲ್ಲದು.

“ಎಲ್ಲಾದರೂ ಇರು ಎಂತಾದರು ಇರು ನೀ ಎಂದೆಂದಿಗೂ ಕನ್ನಡಿಗವಾಗಿರು..” ಎನ್ನುವ ಕವಿವಾಣಿಯನ್ನು ಎದೆಯೊಳಗಿರಿಸಿಕೊಂಡು ಮಾತೃಭಾಷೆ ಕನ್ನಡವನ್ನು ನಾವೇಲ್ಲರೂ ಬೆಳೆಸೋಣವೆಂದು ಆಶಿಸೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ

Leave a Reply

Back To Top