ಎಂ. ಆರ್. ಅನಸೂಯ-ಹಂಗು

ಲೇಖನ ಸಂಗಾತಿ

ಎಂ. ಆರ್. ಅನಸೂಯ

ಹಂಗು

‘ ಹಂಗು ‘ ಎನ್ನುವ ಪದ ನಮ್ಮ ಕಿವಿಗೆ ಬಿದ್ದಾಗ ತಟ್ಟನೆ ನೆನಪಿಗೆ ಬರುವುದು ಕೆಳಗಿನ ಸರ್ವಜ್ಞನ ವಚನ .

ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು

ಭಂಗಪಟ್ಟುಂಬ ಬಿಸಿ ಆನ್ನಕ್ಕಿಂತಲು

ತಂಗುಳವೇ ಲೇಸು ಸರ್ವಜ್ಞ  

ಈ ಹಂಗು ಅನ್ನುವ ಪದವು ಎಂದಿಗೂ ಹಿತವೆನ್ನಿಸುವುದಿಲ್ಲ. ದಾಕ್ಷಿಣ್ಯ , ಅಭಾರ, ಋಣ, ಉಪಕಾರ, ಸಹಾಯ, ಆಶ್ರಯ, ಅವಲಂಬನೆ ಇವೆಲ್ಲವೂ ಹಂಗಿಗೆ ಸಮಾನಾರ್ಥಕ ಪದಗಳೇ. ಹಂಗಿನ ಉರುಳಲ್ಲಿ ಸಿಲುಕಿದವರಿಗೆ ಮಾತ್ರ ಈ ಮನಸ್ಥಿತಿಯ ಅರಿವಾಗುವುದು. ಹಂಗಿನ ಸ್ಥಿತಿ ಒಂದು ರೀತಿಯಲ್ಲಿ ಬಿಸಿತುಪ್ಪ ಉಗುಳಲಾರೆ ನುಂಗಲಾರೆ ಎನ್ನುವ ಇಕ್ಕಟ್ಟಿನ ಸ್ಥಿತಿ.

ಎಲ್ಲರೂ ಒಂದಲ್ಲ ಒಂದು ರೀತಿಯ ಹಂಗಿನಲ್ಲಿರುವವರೇ. ಈ  ಪ್ರಪಂಚವೇ ಪಂಚಭೂತಗಳ ಹಂಗಿನಲ್ಲಿದೆ. ಅವುಗಳಿಲ್ಲದೇ  ನಮ್ಮ ಅಸ್ತಿತ್ವವೇ ಶೂನ್ಯ. ಪಂಚಭೂತಗಳನ್ನು ಮಲಿನಮಾಡಿ ಹಾಳು ಮಾಡುತ್ತಿರುವ ನಾವೆಲ್ಲರೂ ಕೃತಜ್ಞರೇ ಎಂಬುದರಲ್ಲಿ ಎರಡು ಮಾತಿಲ್ಲ. ಕೇವಲ 2% ಮನುಷ್ಯರಿಗೆ ಮಾತ್ರ ಈ ಪಾಪ ಪ್ರಜ್ಞೆಯಿದ್ದು ಅದನ್ನು ಕೃತಿಗಿಳಿಸುತ್ತಿದ್ದಾರೆ. ಉದ್ದೇಶವಾಗಿಯೇ ನಾನು ಇಲ್ಲಿ ಜನರು ಎಂಬ ಪದಕ್ಕೆ ಬದಲಾಗಿ ಮನುಷ್ಯರೆಂಬ ಪದವನ್ನು ಬಳಸಿದ್ದೇನೆ. ಮಾನವೀಯತೆಯುಳ್ಳವರು ಮಾತ್ರ ಮನುಷ್ಯರಲ್ಲವೇ ? ಸಮಾನತೆಯ ತತ್ವವನ್ನು ಅನುಸರಿಸುವ ಪಂಚಭೂತಗಳು ಯಾರೊಬ್ಬರಿಗೂ ಸೇರದ ಹಾಗು ಎಲ್ಲರಿಗು ಸೇರಿರುವ ಕಾರಣದಿಂದಲೇ ಅವುಗಳಿಗೆ ಯಾರ ಹಂಗೂ ಇಲ್ಲ ಅಲ್ಲಿ ನಿಷ್ಪಕ್ಷಪಾತ ನ್ಯಾಯವಿದೆ. ಎಲ್ಲಿ ಹಂಗಿರುವುದಿಲ್ಲವೋ ಅಲ್ಲಿ ಸ್ವಾತಂತ್ರ್ಯ ಹಾಗೂ ಸಮಾನತೆಯಿರುತ್ತದೆ. ಸಕಲ ಜೀವ ರಾಶಿಗೂ ಚೈತನ್ಯದಾಯಿಯಾದ ಸೂರ್ಯನು ತನ್ನಿಂದ ಬೆಳಕು ಹಾಗೂ ಬಿಸಿಲನ್ನು ಪಡೆಯುತ್ತಿದ್ದೀರಾ ಎಂದು ಯಾರ ಕಡೆಗೂ ಬೆರಳನ್ನು ತೋರಿಸಿಲ್ಲ. ಏಕೆಂದರೆ ಸೂರ್ಯನಿಗೆ ನಾವೆಲ್ಲರೂ  ಅನಾಮಿಕರೇ. ಅಲ್ಲಿ ಕೃತಜ್ಞತೆಯ ನಿರೀಕ್ಷೆಯಿಲ್ಲ. ಕೃತಜ್ಞತೆಯ  ನಿರೀಕ್ಷೆಯಿರುವಲ್ಲಿ ಹಂಗಿಗೆ ಅವಕಾಶವಾಗುತ್ತದೆ.ಕೊಟ್ಟವರು ಕೊಟ್ಟ ಅಹಮಿಕೆಯಲ್ಲಿದ್ದರೆ ಪಡೆದವನು ದೈನ್ಯತೆಯ ಹಂಗಿಗೆ ಒಳಗಾಗುತ್ತಾನೆ. ಕೊಟ್ಟವರಿಗೆ ಕೊಟ್ಟ ತೃಪ್ತಿಯ ಹೊರತಾಗಿ ಪ್ರತಿಫಲಾಪೇಕ್ಷೆಯಿರಬಾರದು. ಆದರೆ ಹಾಗಿರುವುದು ಅಷ್ಟು ಸುಲಭಸಾಧ್ಯವಲ್ಲ. ನಮ್ಮಲ್ಲಿರುವ ಸ್ವಾರ್ಥವೇ ಅದಕ್ಕೆ ಕಾರಣ  ಅದು ಸಹಜ ಕೂಡಾ. ಅದನ್ನು ಮೆಟ್ಟಿ ನಿಲ್ಲಲು ನಮ್ಮಮನಸ್ಸು ಪಕ್ವತೆಯಿಂದ ಕೂಡಿರಬೇಕು. ಆಗ ಮಾತ್ರವೆ ಸಹೃದಯತೆಯ ಉದಾರವಂತರಾಗಲು ಸಾಧ್ಯ.    

ಸಹೃದಯಿ  ಶ್ರೀಮಂತರು ಶಾಲಾ ಕಟ್ಟಡ  ಒಂದನ್ನೊ ಅಥವಾ ಶಾಲೆಗಾಗಿ  ಜಾಗವನ್ನು ದಾನವಾಗಿ ನೀಡಿದಾಗ ಇಲ್ಲಿ  ಹಂಗಿನ ಪ್ರಶ್ನೆಯೇ ಇಲ್ಲ. ಕೊಟ್ಟವರು ತಮ್ಮ ತೃಪ್ತಿಗಾಗಿ ಮಾಡಿದ್ದಾರೆ ಹಾಗೂ ಯಾವ ಒಬ್ಬ ನಿರ್ದಿಷ್ಟ ವ್ಯಕ್ತಿಗಾಗಿ ಮಾಡದೆ ಎಲ್ಲರ ಪ್ರಯೋಜನಕ್ಕಾಗಿ ಮಾಡಿರುತ್ತಾರೆ. ಸಾಮಾನ್ಯವಾಗಿ ಹಂಗಿನ ಪ್ರಶ್ನೆ ಏಳುವುದೇ ವೈಯಕ್ತಿಕ ಸಹಾಯದ ಋಣದಲ್ಲಿ ಮಾತ್ರ.  ಆದ್ದರಿಂದಲೇ ಸಹಾಯವನ್ನು ಪಡೆಯಬೇಕಾದರೆ ಹತ್ತು ಬಾರಿ ಯೋಚಿಸಬೇಕು.

ಹಂಗಿನ ಜೀವನಕ್ಕೊಳಪಡುವುದನ್ನು ಯಾರೂ ಸಹ ಬಯಸ ಲಾರರು .ಆದರೆ ಅಂತಹ ಪ್ರಸಂಗಗಳು ನಮ್ಮನ್ನು ಕೇಳಿ ಹೇಳಿ ಬರುವುದಿಲ್ಲ. ಅಸಹಾಯಕತೆ ಹಾಗೂ ಅನಿವಾರ್ಯತೆಗಳು ನಮ್ಮನ್ನು ಹಂಗಿನ ಸುಳಿಗೆ ಸಿಲುಕಿಸುತ್ತವೆ.ಇಂದಿನ ದಿನಗಳಲ್ಲಿ ಇಂತಹ ಸಂದರ್ಭಗಳನ್ನು ಬಳಸಿಕೊಂಡು ಪರಿಸ್ಥಿತಿಯ ಲಾಭ ಪಡೆಯುವವರೇ ಹೆಚ್ಚು. ಆ ನಂತರವೇ ಹಂಗಿನರಮನೆಯ ಸುಖ ನಮ್ಮ ಅರಿವಿಗೆ ಬರುವುದು. ಹಣಕಾಸಿನ ಹಂಗಾದರೆ ವಾಪಸು ಕೊಡಬಹುದು. ಅನ್ನದಾನ, ವಿದ್ಯಾದಾನ, ರಕ್ತದಾನ ಪಡೆದ ಸಂದರ್ಭಗಳಲ್ಲಿ ಕೊಟ್ಟವರು ಪದೇ ಪದೇ ಹಂಗಿಸುವ ಸ್ಥಿತಿಯಿದ್ದಲ್ಲಿ ಬದುಕು ಅಸಹನೀಯವಾಗುತ್ತದೆ. ಕೆಲವೊಮ್ಮೆ ಹಂಗಿನ ಪರಿಸ್ಥಿತಿ ನಮ್ಮನ್ನು ಕಣ್ಣೀರಿಡಿಸುತ್ತದೆ. ಹಂಗೆನ್ನುವುದು ಸಾರ್ವತ್ರಿಕ ಸಾರ್ವಕಾಲಿಕ ಸಂಗತಿಯಾಗಿದೆ. ಪಕ್ಷದ ಹಂಗಿಗೆ ಒಳಪಟ್ಟ ರಾಜಕಾರಣಿ ಸತ್ಯವನ್ನು ಹೇಳಲಾರ, ಚುನಾವಣಾ ವೇಳೆಯಲ್ಲಿ ಹಣ ಸಹಾಯ ಪಡೆದ ಅಭ್ಯರ್ಥಿಯು ಮುಂದೆ  ಅಧಿಕಾರಸ್ಥನಾದಾಗ ಅವರ ಋಣ ತೀರಿಸಲು ಅಕ್ರಮಗಳಲ್ಲಿ ಭಾಗಿಯಾಗಬಹುದು. ಲಂಚ ಪಡೆದವನು ಲಂಚ ಕೊಟ್ಟವನ ಹಂಗಿನಲ್ಲಿರುತ್ತಾನೆ. ಮತವನ್ನು ಮಾರಾಟ ಮಾಡಿಕೊಂಡಂಥ ಮತದಾರರು ಹಣದ ಹಂಗಿನಿಂದಾಗಿಯೇ ದೇಶದ ದುರಂತಕ್ಕೆ  ಪರೋಕ್ಷವಾಗಿ ಕಾರಣವಾಗುತ್ತಾರೆ. ತಂದೆತಾಯಿಗಳ ಹಂಗಿನ  ಋಣ ಮಕ್ಕಳ ಬದುಕಿಗೆ ಮಾರಕವಾಗಬಹುದು. ಆದ್ದರಿಂದಲೆ ಕೊಟ್ಟವರಿಗೆ ಪಡೆದವರು ಮತ್ತು ಪಡೆದವರಿಗೆ ಕೊಟ್ಟವರು ಇಬ್ಬರೂ ಅನಾಮಿಕರಾಗಿರಬೇಕು. ಇಂತಹ ಪ್ರಸಂಗಗಳಲ್ಲಿ ಕೊಟ್ಟವರ ತೃಪ್ತಿ, ಪಡೆದವರ ಕೃತಜ್ಞತೆಯಷ್ಟೆ ಮುಖ್ಯ.

ಇನ್ನು ಪುರಾಣ ಕಾಲದತ್ತ ನೋಡಿದರೆ  ಈ ಹಂಗಿನಿಂದಾಗಿಯೆ ಅನೇಕ ದುರಂತಗಳು ಸಂಭವಿಸಿವೆ. ದೊರೆ ದುರ್ಯೋಧನನ ಸ್ನೇಹದ ಹಂಗು ಸೂತಪುತ್ರ  ಕರ್ಣನನ್ನು ದುರ್ಯೋಧನನ ಅಧರ್ಮದ ಕೃತ್ಯಗಳಲ್ಲಿ ಮೌನ  ಪ್ರೇಕ್ಷಕನಾಗಿ ಪರೋಕ್ಷವಾಗಿ  ಭಾಗಿಯಾಗುವಂತೆ ಮಾಡಿತು.ತಾಯಿ ಋಣದ ಹಂಗು ನಮ್ಮ  ಧೀರೋದಾತ್ತ ಕರ್ಣನನ್ನು ದುರಂತಕ್ಕೆಳೆಯಿತಲ್ಲವೇ ? ರಾಜ ಪ್ರಭುತ್ವದ ಹಂಗು ಮನೆತನದ ಹಿರಿಯನಾಗಿದ್ದ ಭೀಷ್ಮನನ್ನು ಮಾತನಾಡಲೇ ಬೇಕಾದಂಥ ಸಂದರ್ಭಗಳಲ್ಲೂ ಮಾತಾಡದ ಹಾಗೆ ಬಾಯಿ ಮುಚ್ಚಿಸಿತಲ್ಲವೆ ? ಅವಮಾನಿಸಿದ ತನ್ನ ಗೆಳೆಯ ದ್ರುಪದನನ್ನು ಸೋಲಿಸಿ ವಿಜಯಕ್ಕೆ ಕಾರಣ ಕರ್ತೃನಾದ ಶಿಷ್ಯ ಅರ್ಜುನನಿಗೆ ಕೊಟ್ಟ ವಚನದ ಹಂಗು ಮತ್ತು ಕುರುವಂಶದ ಅರಸರ ಲವಣದ ಋಣ ಗುರುಗಳಾದ ದ್ರೋಣಾಚಾರ್ಯರು ತನ್ನ ಗುರುಪಟ್ಟಕ್ಕೆ ದ್ರೋಹ ಬಗೆಯುವ ರೀತಿಯಲ್ಲಿ ನಿಷಾದ ಪುತ್ರ ಶಿಷ್ಯ ಏಕಲವ್ಯನ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ಕೇಳಿ ಪಡೆಯುವಂತಾಯಿತಲ್ಲವೇ ? ಕೈಕೇಯಿಯು ರಣರಂಗದಲ್ಲಿ  ಮಾಡಿದ ಸಹಾಯಕ್ಕೆ ಪ್ರತಿಫಲವಾಗಿ ದಶರಥನು ನೀಡಿದಂಥ ವಚನದ ಹಂಗು ಇಡೀ ರಾಮಾಯಣದ ಕಥೆಗೆ ಬುನಾದಿಯೇ ಆಗಿದ್ದು ಸರ್ವ ವೇದ್ಯ.

ಹಾಗಾದರೆ ಹಂಗಿನ ಉರುಳಿನಿಂದ ಪಾರಾಗುವುದು ಹೇಗೆ ? ಇದು ಕೊಟ್ಟವನ ಮನಸ್ಥಿತಿಯ ಮೇಲೆ ನಿರ್ಧಾರವಾಗುತ್ತದೆ. “ಬಲಗೈಲಿ ಕೊಟ್ಟ ದಾನ ಎಡಗೈಗೆ ಗೊತ್ತಾಗಬಾರದು ” ಎಂಬ ಮಾತು ನಿಜಕ್ಕೂ ಅರ್ಥಗರ್ಭಿತವಾಗಿದೆ. ನಾವು ಕೊಟ್ಟ ದಾನ ಗುಪ್ತವಾಗಿರಬೇಕು. ಪಡೆದವನಿಗೂ ಗೊತ್ತಾಗದಂತಿರಬೇಕು ಕೊಟ್ಟವರಿಗೆ ತೃಪ್ತಿಯೇ ಮುಖ್ಯವಾಗಬೇಕು. ಪಡೆದವರಿಗೆ ಕೊಟ್ಟವರ ಬಗ್ಗೆ ತಿಳಿದರೆ  ತನ್ನ ಕೈಲಾದ ರೀತಿಯಲ್ಲಿ ಅದನ್ನು ಹಿಂತಿರುಗಿಸಿದರೆ ಋಣಮುಕ್ತರಾಗಬಹುದು. ಕೆಲವೊಮ್ಮೆ ಅದಕ್ಕೆ ಅವಕಾಶಗಳೇ ಇರುವುದಿಲ್ಲ. ಕೃತಜ್ಞತಾಭಾವವಿದ್ದರೆ  ಸಾಕು. ಕೊಟ್ಟಂಥವರು ನಿರಪೇಕ್ಷ ಸಹೃದಯಿಗಳಾಗಿರಬೇಕು ಕೊಡುಗೈಲಿ ಕೊಟ್ಟವರು ಪಡೆದವರ ಬದುಕಿಗೆ ಔದಾರ್ಯದ ಉರುಳಾಗದೆ ಪಡೆದವರ ಪಾಲಿಗೆ ಪ್ರಾತಃಸ್ಮರಣೀಯರಂತೆ ಮನದಲ್ಲಿ ನೆಲೆಸಬೇಕು. 


Leave a Reply

Back To Top